ಉಂಗುಟದ ತುದಿಗೆ ನವಿಲುಗರಿಯಿಂದ ನಯವಾಗಿ ಸ್ಪರ್ಶಿಸಿದ ಹಾಗೆ, ಅಲ್ಲಿ ಎದ್ದ ಚುಂಗುಗಳು ಉದುರು ಉದುರಾಗಿ ತೊಡೆಯ ಮಾಂಸಲವನ್ನು ಭೇದಿಸಿ, ಎದೆಯಲ್ಲೊಂದು ಉದ್ಗಾರ ಸೃಷ್ಟಿಸಿ ಅದು ಶಿರವನ್ನು ತಾಟಿದ ವೇಗಕ್ಕೆ ನಾಗವಂತಿಯ ಕಣ್ಣುಗಳು ಹನಿ ಹನಿ. ಬೆನ್ನಹುರಿಗಳಲ್ಲಿ ಥಟ್ಟಂತ ಜೀವಸಂಚಾರ. ಮೀಟಿದ ತಂತಿ ಕುಲುಕುಲು ಮೈಕುಲುಕಿಸಿಕೊಂಡು ತಟಸ್ಥವಾಗಲು ಅಂಜಿಕೊಂಡಂತೆ. ಇನ್ನೂ ಹಸಿಹಸಿಯಿದೆ ಈ ಅಂಗಣದ ಹಾಸು. ಆ ಹಸಿಗಾನಿಸಿಯೇ ನಿತಂಬವನ್ನಿಟ್ಟು ನಿಡಿದಾಗಿ ಕಾಲು ಚಾಚಿ ಮಧ್ಯಾಂಗಣದ ಕಂಬಕ್ಕೊರಗಿ ಕುಂತವಳಿಗೆ ಈ ಕ್ಷಣಗಳು ಬೊಗಸೆಯೊಳಗೆ ತುಳುಕಾಡುವ ಹನಿಗಳೆನಿಸಿಬಿಟ್ಟಿತು.

ಕ್ಷಣವೆರಡರ ದಾಸಿ ನಾನು ಅಂದುಕೊಂಡವಳ ನೆತ್ತಿಯ ಮೇಲೆ ನೀಲಾಕಾಶದಲ್ಲಿ ಅಗಣಿತ ತಾರೆಗಳ ಹಾಸು. ಅವೆಲ್ಲವನ್ನೂ ಒಮ್ಮೆಗೇ ಬಾಚಿಕೊಳ್ಳುವಷ್ಟು ತಹತಹಿಕೆ. ಬಲಗೈಯ ಕುಪ್ಪುಸದ ತೋಳನ್ನು ಕಿತ್ತೇ ಬರುವ ರೀತಿಯಲ್ಲಿ ಹಿಡಿದೆಳೆದು ಹಲ್ಲು ಕಡಿದು ಮುಚ್ಚಿದ ಕಣ್ಣರೆಪ್ಪೆಗಳಿಂದ ಉದುರಿದ ಬಿಸಿ ಹನಿಗಳು ಮೂಗಿನ ಹೊಳ್ಳೆಗಳಿಂದ ಬರುತ್ತಿದ್ದ ಉಸಿರಿಗೆ ಭರ್ರನೆ ಆರಿ ಹೋದವು. ಒಹ್! ಇದೆಂಥಾ ಕ್ಷಣ, ಒಂದಷ್ಟು ಹೊತ್ತು ಯಾರೂ ಬಾರದಿರಲಿ ನನ್ನ ಪರಿಧಿಯೊಳಗೆ, ಪೂರ್ತಿ ಅನುಭವಿಸಿ ಬಿಡುತ್ತೇನೆ ಈ ಕಾವಳದೊಳಗೆ ಕಂಡ ಬೆಳಕಿನ ಕಿಡಿಯನ್ನ, ಅಂತಂದುಕೊಂಡವಳ ಕೆನ್ನೆಯಲ್ಲಿ ಚಂದಿರನಂತಹ ಹೊಳಪು. ಚಂದನದಷ್ಟು ಕೆಂಪು.

ಬರುವ ಜೀವ ಧರಣಿಯೋ, ಸೂರ್ಯನೋ, ಆ ಜೀವದ ಜೊತೆ ಇನ್ನೊಂದಿಷ್ಟು ತಾವ ಮಾತಾಡತೀನಾ, ಜೋಗುಳ ಹಾಡ್ತೀನಾ, ಕೇಳ್ ನನಕಂದ ಅನ್ನೋ ತುಡಿತ ಒಳಗ. ಬರೋ ಕಂದ ನಿಗಿನಿಗಿ ಸೂರ್ಯನಾಗಿರಾದ್ ಬ್ಯಾಡಾ, ಆಕೀ ತಂಪೆಲರದಂತಿರುವ ಭೂಮಿಯೇ ಆಗಿರ್ಲಿ, ನಕ್ಷತ್ರಗಳನ್ನೆಲ್ಲ ಮುಡಿಸಿ ಅವಳೀಗೆ ಅವನಿ ಅಂತ ಹೆಸರಿಡುವೆ, ಇದು ಖರೆ ಮತ್ತಾ ಅನ್ನುತ್ತಾ ನಾಗವಂತಿ ಒಳಗೊಳಗೇ ಬೆಳಕಾದಳು, ಹರಳಾದಳು, ಮಲ್ಲಿಗೆ ಎಸಳಾದಳು. ಆ ಎಸಳ ಮೇಲಿನ ಹನಿಯಂತಾಗಿ ತನ್ನೊಳಗೆ ತಾನು ಕರಗಿ ಗಂಧವಾದಳು. ಅದರ ಘಮದಲ್ಲಿ ಮೈಮರೆತಳು.

ಹಟ್ಟಿಯೊಳಗೊಂದು ಜೀವ ಪುಟಿದಾಡಲಿ ಅಂತ ಆಸೆಯ ಮೂಟೆಯ ಹೊತ್ತು ಭೀಮಾ ನದಿ ತೀರದ ಪಾರ್ವತಿ ಮಂದಿರಕ್ಕೆ ಸೆರಗೊಡ್ಡಿದವಳು ನಾಗವಂತಿ. ನದಿಗೆ ಬಾಗಿನವ ಕೊಟ್ಟು, ನೀರು ಕಟ್ಟೋ ಉಡಿಯ ಬರಡು ಮಾಡಬೇಡ ಅಂದವಳ ಕಳಕಳಿಗೆ ಕರಗಿದ್ದು ಯಾವ ದೇವತೆಯೋ, ಜೀವವೊಂದು ಮೊಳೆಯತೊಡಗಿತು. ಈ ಹಟ್ಟಿಗೆ ಮೊದಲ ಕುಡಿಯ ಆಗಮನ ಅನ್ನೋದು ಖಾತರಿಯಾದಂತೆ ಆನಂದದ ಕಡಲಿನಲ್ಲಿ ತೇಲಾಡಿದವನು ಅಪ್ಪ ಬಸವಣ್ಣಿ.

ಆ ಗಳಿಗೆಯಿಂದ ಇಲ್ಲೀ ತಂಕ ಪ್ರತಿ ಕ್ಷಣಕೂ ಬಣ್ಣ ಹಚ್ಚಿ ಕಾದವಳು ನಾಗವಂತಿ. ಒಂದು ಕಾಲಿಗೆ ಮಣಿ ಮಣಿಯ ಗೆಜ್ಜೆಯ ಕಟ್ಟಿ ಅದರ ಸುತ್ತಲೂ ಬಣ್ಣದ ಗೆರೆ ಎಳೆದು, ಪಾದವನು ಪಟಪಟನೆ ತಿರುಗಿಸಿ ಮಗು ರಾಧೆಯ ತೆರನಿರಲಿ ಅಂದುಕೊಳ್ಳುತ್ತಾಳೆ. ಇನ್ನೊಂದು ಕಾಲಿಗೆ ಕೆಸರು ಮೆತ್ತಿಕೊಂಡು ಕಂದ ಕೃಷ್ಣನಂತಿರಲಿ ಎಂದು ಬಿಮ್ಮಗೆ ಬೀಗುತಾಳೆ. ಹೊಕ್ಕುಳ ಸುತ್ತ ಗರುಕೆ ಹುಲ್ಲಿನಿಂದ ಸ್ಪರ್ಶಿಸಿ ಅದರ ಸಿಮರು ಒಳಗಿರುವ ಜೀವಕೆ ತಾಕಿದಂತೆ, ಅಲ್ಲಿಂದ ಹೊರಟ ಪ್ರತಿಸ್ಪರ್ಶವೂ ಮೈತುಂಬಾ ಆವರಿಸಿಕೊಂಡು ಇಡೀ ಹಟ್ಟಿಯೊಳಗೆ ತನ್ನಿರವೇ ಕಳೆದುಹೋದಂತೆ ಅನ್ನಿಸಿ ಕಣ್ಮುಚ್ಚಿಕೊಂಡಳು.

ಹೊಲದ ಬದುಗಳ ಇಕ್ಕೆಲಗಳಲ್ಲಿ ನೀರು ಹಾಯಿಸಿ ಹಟ್ಟಿಗೆ ಬಂದ ಬಸವಣ್ಣಿ, ಪೂರ್ಣಕ್ಕೆ ಪೂರ್ಣ ಮೈಮರೆತು ಕುಂತಿದ್ದ ಮನದೊಡತಿಯ ಕೈಬೆರಳುಗಳಲ್ಲಿ ಕೈಯಾಡಿಸಿ, ‘ಭೂಮಿಗೆ ನೀರು ಹನಿಸೀನಿ ಒಳಗಿನ ಜೀವ ಜಳಕ ಮಾಡಿ ಮೊಳೆತು ಬರಲು ಬೇಕು ಕಾಲ’ ಎಂಬ ಸಾಂತ್ವನದ ನುಡಿಯನ್ನು ಕಿವಿಯೊಳಗೆ ಉಸುರಿ, ಬಸುರಿ ಹೆಂಗಸಿನ ನಾಚಿಕೆಯನ್ನು ಕಂಡು ನಸುನಕ್ಕು ಮರೆಯಾಗುತ್ತಿದ್ದ. ಕಿವಿಯ ಹತ್ತಿರಕೆ ಬಂದು ಪಿಸುಗುಡುವ ಅವನ ಉಸಿರು ಏಸು ಚೆಂದಾ ಅಲ್ವಾ, ಅವನ ಬೆವರಿನಲಿ ಏನ್ ಗಂಧ, ಅವನ ಕಣ್ಣೊಳಗೆ ಏನ್ ತೇಜ. ಅವನ್ನೆಲ್ಲ ಹೀರಿಕೊಂಡೇ ನಾನಿವತ್ತು ಗರ್ಭವತಿ ಎಂದುಕೊಂಡವಳ ಹೊಕ್ಕುಳ ಆಚೀಚೆಗೆ ಮುತ್ತನ್ನಿಟ್ಟಂತೆ ಭಾಸವಾಗಿ ಕಣ್ಣ ರೆಪ್ಪೆಗಳೆಲ್ಲ ಪಟಪಟಾಂತ ತಾಡನವಗೈದು ಆನಂದದ ಒಂದೇ ಒಂದು ಹನಿಯೂ ಆಚೆ ತುಳುಕದಂತೆ ತಡೆಯಿತು.

ಮರುಕಳಿಸೋ ನೆನಪುಗಳ ಓಕುಳಿಯಲ್ಲಿ ಮತ್ತೆ ಮತ್ತೆ ಮದುಮಗಳಾಗುವುದೆಂದರೆ ನಾಗವಂತಿಗೆ ಬೋಯಿಷ್ಟ. ದಾವಣಿ ತೊಟ್ಕೊಂಡು, ರವಿಕೆ ಹಾಕ್ಕೊಂಡು ಅದರ ಮೇಲೆ ಅವ್ವನ ಅರ್ಧಸೀರೆ ಉಟ್ಕೊಂಡು ಜವ್ವಂತಿಯಾದ ದಿನವಿಡೀ ಅದನ್ನು ಕಳಚಲಾರೆ ಎಂದು ರಗಳೇ ತೆಗೆದು ಹಂಗಂಗೇ ನಿದ್ದೆಗೆ ಜಾರಿದವಳ ಕೆನ್ನೆಯ ಹೊಳಪು ಕಂಡ ಚಿಕ್ತಾಯಿ, ಬದುಕೆಲ್ಲ ಇವಳ ಕಾಂಬೋ ಕಾವಲನ ಮನಸು ಚೆಂದಾಕಿರಲಿ ಎಂದು ಹರಸಿದಳಂತೆ. ಆಕೆಯ ಹರಕೆಯೂ ದಿಟವಾಯ್ತು. ಬಂದವ ಬಸವಣ್ಣಿ, ತರಾವರಿ ಕನಸುಗಳ ಕೌದಿಯನ್ನೇನೂ ಹೊದೆಸಲಿಲ್ಲ, ಸೆರಗೀಗೆ ಪೋಣಿಸಿದ ಮಣಿಯಂತೆ ಇದ್ದುಬಿಟ್ಟ.

ಎಲ್ಲವೂ ಕಚಕುಳಿ ಇಟ್ಟಂತೆ ಕಳೆದೇಹೋಯಿತು ಒಂದು ವರ್ಷ. ಅವನ ಮೈಯ ಬೆವರಿನ ವಾಸನೆಗೇ ಎಷ್ಟೊಂದು ಬಾರಿ ನಾಚಿ ಹೋಗಿದ್ದೇನೆ, ಕಂಕುಳೊಳಗೆ ಮೂಗಿಟ್ಟು ಕಳೆದು ಹೋಗಿದ್ದೇನೆ, ಅಂಗಿಯ ಗುಂಡಿಯನ್ನು ತಿರುವುತ್ತ ತಿರುವುತ್ತ ಇಷ್ಟಗಲ ಚಾಚಿಕೊಂಡಿದ್ದ ಎದೆ ರೋಮದೊಳಕ್ಕೆ ಇಳಿದು ಕರಗಿಯೇ ಬಿಟ್ಟಿದ್ದೇನೆ, ಕೆದರಿಕೊಂಡ ಅವನ ತಲೆಗೂದಲನ್ನು ಬಿಡಿಬಿಡಿಯಾಗಿ ಎತ್ತಿ ಒಪ್ಪ ಮಾಡುತ್ತ ಮಾಡುತ್ತ ತನ್ನೆದೆ ಏದುಸಿರನ್ನೆಲ್ಲ ಅವನೆದೆಗೆ ಹರಿಸಿದ್ದೇನೆ ಎಂದು ಯೋಚಿಸುತ್ತ ಮತ್ತೆ ಕೆಂಪಾಗುತ್ತಾಳೆ ನಾಗವಂತಿ. ಹೊಲದಲ್ಲಿ ಬಸವಣ್ಣಿ ಇನ್ನಿಲ್ಲದಂತೆ ಗೇದು ಬರುತ್ತಿದ್ದ. ಮಟ್ಟಸವಾಗಿ ಬೆಳೆದ ತೋಳಿನಲ್ಲಿ ಸೆಟೆದು ನಿಂತಿರುತ್ತಿದ್ದ ನರಗಳು, ಬೆವರಿನಲ್ಲೇ ಮುದ್ದೆಯಾಗಿ ಬಿದ್ದಿರುತ್ತಿದ್ದ ಎದೆಯ ರೋಮಗಳನ್ನು ದಿಟ್ಟಿಸುತ್ತ ದಿಟ್ಟಿಸುತ್ತ ಅವನ ಶ್ರಮಕ್ಕೆ ಹನಿಗಣ್ಣಾಗುತ್ತಿದ್ದ ದಿನಗಳು ಏಸೊಂದು. ಆ ಕ್ಷಣಗಳಲ್ಲಿ ಅವನೆದೆಯ ಪ್ರತಿ ರೋಮವನ್ನೂ ಆಸೆ ಮಾಡ್ಬೇಕು ಎಂಬ ಉತ್ಕಟತೆ. ಅವನಿಗೋ ಹೊಲ ತುಂಬಾ ಬೆಳೆ ಬೆಳೀಬೇಕು, ಬಾಳೆಗಿಡ ಹಾಕ್ಬೇಕು, ಜೋಳದ ತೆನೆ ಕಂಡು ಹಿಗ್ಗಬೇಕು, ದಳದಳ ಅಂತ ನೀರು ಹನಿಸಬೇಕು, ಆ ಹನಿಯ ಜಾಲದಲ್ಲಿ ಅವನಿ ತುಂಬಿದ ಬಸುರಿಯಂತೆ ಕಾಣಬೇಕು ಎಂಬೋ ಕನಸು.

ಎದೆಯ ಮೇಲೆ ತಲೆಯಿಟ್ಟು ಫಲದ ಆಸೆಗೆ ಬಿದ್ದವನ ಮೊಗದ ಮೇಲೆ ಚೆಲ್ಲಾಡಿದ ನಗೆ ಕೊಯ್ಲನ್ನು ಕಂಡು ಎಷ್ಟೊಂದು ಬಾರಿ ಖುಷಿಯ ಮಹಲನ್ನು ಕಟ್ಟಿದ್ದಾಳೆ. ಮಾತಿನ ಮಂಟಪಕ್ಕೆಂದು ಕಾದು ಕುಳಿತವಳು ಮೌನದ ಜೋಕಾಲಿಯಲ್ಲಿ ಕನಸಿಗೆ ಜಾರಿದ್ದಾಳೆ. ಅದಕ್ಕೆಂದೆ ಆಕೀಗೆ ಸೂರ್ಯನಂತಾ ಮಗಾ ಬೇಡ, ಅವನಿಯಂಥ ಆಪ್ತೆ ಬೇಕು. ಆ ಕಂದ ಬಸವಣ್ಣಿಯ ಕಣ್ಣಿನೊಳಗೆ ಹಸಿರ ಚಾದರ ಹೊದ್ದು ಮಲಗಿದ, ಸದಾ ಕಿಲಕಿಲ ಅನ್ನುವ ಭುವಿಯಾಗಿರಬೇಕು ಅನ್ನೋದರಲ್ಲಿ ತನ್ನದೇನೂ ಸ್ವಾರ್ಥವಿಲ್ಲ, ಅದು ಇಬ್ಬರ ಆಸೆಯೂ ಹೌದು ಎಂಬಂತೆ ಹಗುರಾಗುತ್ತಾಳೆ.

ಆವತ್ತೊಂದು ಬೆಳಗಿನ ಜಾವದಲಿ ಬಿದ್ದ ಕನಸಿನ ಒಂದೊಂದು ಎಳೆಯೂ ಆಕಿಗೆ ನೆನಪಿದೆ. ತೇಜಪುರವೆಂಬ ಊರಿನ ಹೃದಯದ ನೊಸಲಿನಲ್ಲೇ ಇರುವ ಈ ಬಸವಣ್ಣಿ ಎಂಬೋ ಗಟ್ಟಿ ಆಳು ಉತ್ತು- ಬಿತ್ತಿದ ನೆಲ ಗಿಣಿ ಬಣ್ಣದ ಸೀರೆ ಉಟ್ಟವಳಂತೆ ವೈನಾಗಿದ್ದಳು. ಸೂರ್ಯನ ತಿಳಿತಿಳಿ ಕಿರಣಗಳಿಗೆ ಪ್ರತಿ ಪೈರನ್ನೂ ಸೋಕುವ ತವಕ.

ಊರಿನ ಬೀದಿಬೀದಿಯೂ ಚಿನ್ನದ ಝರಿಯ ಜಳಕ ಮಾಡಿದಂತೆ ಕಾಣುತ್ತಿತ್ತು. ನನ್ ಯಜಮಾನ ಕಂಡ ಕನಸೆಲ್ಲ ನನಸಾಗ್ತದೆ, ಬೋರ್ವೆಲ್ ತುಂಬಾ ನೀರು ತುಂಬಿ ತುಳುಕಾಡ್ತದೆ ಎಂಬೋ ಹಿಗ್ಗಿನಲ್ಲಿ ನಾಗವಂತಿ ದಾವಣಿ ಎತ್ತಿ ಹಿಡಕೊಂಡೇ ಆ ಹೊಲದ ಬದುವಿನಲ್ಲಿ ಸುಳಿದಾಡುತ್ತಿದ್ದಾಗಲೇ ನಡುವಲೊಂದು ಸಣ್ಣ ಬೆಳಕಬಿಂದು. ಆಕೆಯ ಕಣ್ಣೆದುರಿಗೇ ಅದು ಜೀವಬಿಂದುವಿನಂತೆ ಇಷ್ಟಿಷ್ಟೇ ಬೆಳೆಯತೊಡಗಿತು. ದಾವಣಿಯನ್ನು ಹಸಿರ ಮೇಲೆ ಹಾಸಿಕೊಂಡೇ ಆಕೆ ಅವಾಕ್ಕಾಗಿ ಆ ಜೀವಬಿಂದುವಿನ ಕಡೆಗೆ ದಿಟ್ಟಿನೆಟ್ಟು ಕಾದೇ ಕಾದಳು.

ಆ ಜೀವ ಒಂದು ಹಸುಗೂಸಾಗಿ ಮಗ್ಗುಲು ಬದಲಿಸಿ ಆಕೆಯ ಕಡೆಗೆ ಕಣ್ಣು ಮಿಟುಕಿಸಿತು. ಮಿಂಚಿನಂತೆ ಅದು ತನ್ನೊಳಗೆ ಪ್ರವೇಶ ಮಾಡಿದಂತಾಗಿ ನಾಗವಂತಿ ಒಮ್ಮೆಗೇ ಏದುಸಿರು ಬಿಟ್ಟಿದ್ದಳು. ಇಡೀ ದೇಹ ಬೆಚ್ಚಗಾದಂತ ಅನುಭವ... ಹುಟ್ಟುವುದು ಹೆಣ್ಣು ಸಂತಾನವೇ, ಅದು ಭುವಿಯ ಮಿಂಚೇ ಎಂಬೋದು ಅಂದೇ ನಾಗವಂತಿಗೆ ನಿಕ್ಕಿಯಾಗಿತ್ತು. ತಾನು ತುಂಬಿದ ಬಸುರಿ ಎಂಬೋದನ್ನೂ ಮರೆತು, ಬೆಳಗಿನ ಜಾವದ ಸವಿನಿದ್ದೆಯಲ್ಲಿ ಮಗ್ಗುಲಲ್ಲೇ ಹಗುರಾಗಿದ್ದ ಬಸವಣ್ಣಿಯನ್ನು ಬಾಚಿಕೊಂಡು ಮುದ್ದಾಡುತ್ತ ತೇಜಪುಂಜದ ಕಥೆಯನ್ನು ಗಂಡನಿಗೆ ಒಪ್ಪಿಸಿದ್ದಳು. ಬಸವಣ್ಣಿಯೋ ನಾಗವಂತಿಯನ್ನು ಮೆತ್ತಗೆ ಅಂಗಾತ ಮಲಗಿಸಿ ಬಸುರಿ ಹೊಟ್ಟೆಯ ಮೇಲೆ ಹೂವಿನಂತೆ ಕೈಯಾಡಿಸಿ ‘ನಿನ್ನ ತುಂಟಾಟ ನೋಡಿ ಆ ಪುಟ್ಟಿ ಕಾಲು ಪಟಪಟಾಂತ ಬಡೀತಾಯಿದೆ ನೋಡ್ಲೇ’ ಅನ್ನುತ್ತಾ ಕಣ್ಣು ಇಷ್ಟಗಲ ಮಾಡಿದ್ದ.

‘ಬೋ ಸಂದಾಕ್ ಏಳಿಯೇ ನೀನು, ನಿಂಗೊಂದ್ ಇಸ್ಯಾ ಗೊತ್ತಾ?’

‘ಏನ್ ನಾಗೀ ಅದೂ ನಂಗೊತ್ತಿಲ್ದೇ ಇರಾದು...?’

‘ನಾ ಆಕೀ ಜತೆ ದಿನವೂ ಏಸೊಂದ್ ಬಾರಿ ಮಾತಾಡ್ತಾ ಇರ್ತೀನಿ. ಕೆಲ್ಸ ಮಾಡ್ತಾ ಮಾಡ್ತಾ, ಆಕೀ ಜತೆ ಮಾತಾಡ್ತಾ ಇರೋ ಸುಕ ಏನ್ ಸಂದಾಕಿರ್ತದೆ. ಅಕ್ಕನ ವಚನಾ ಹೇಳಿದ್ರೆ ಸುಮ್ಕೇ ಕೇಳೋದು. ಒಂದ್ ಹನಿ ಹಂದಾಟನೂ ಇಲ್ಲ. ಅದೇ ಮಂಟೇಸಾಮಿ ಹಾಡೂ ಅಂತ ನಾ ಏನಾರ ಹಾಡಿದ್ರೆ ಹುಚ್ಚೆದ್ದು ಕುಣ್ದಂಗೆ ಕಾಲು ಬಡಿದಾಡೋದು..!’

‘ಆಕೀಗ್ ನಿದ್ದಿ ಮಾಡಾಕೂ ಬಿಡಾಂಗಿಲ್ಲ ನೀ ಮತ್ತ..!’

‘ಏಯ್ ಬಾ ಇಲ್ಲಿ, ಕೈಕೊಡು...’ ಬಸವಣ್ಣಿಯ ಕೈಯನ್ನು ಕಿಬ್ಬೊಟ್ಟೆಗಿಟ್ಟು ‘ನಂಗೆ ಆಕೀ ಮಾತು, ನಿಂಗೆ ಆಕೀ ಆಟ’ ಅನ್ನುತ್ತಾ ಬೆರಳಿಗೆ ತಾಕುವ ಪ್ರತಿ ಬಡಿತಗಳನ್ನು ಲೆಕ್ಕ ಹಾಕಲು ಶುರು ಮಾಡಿಕೊಳ್ಳುತ್ತ ಅದರ ಜಾಡು ಹಿಡಿಯುವ ಪರಿಯನ್ನೂ ಬಸಣ್ಣಿಗೆ ಹೇಳಿಕೊಟ್ಟಳು.

‘ನಮ್ ಆಟ ನೋಡಿ ಅದು ಎಷ್ಟು ನಕ್ಕಾದೋ...’ ಎಂದು ಪೆದ್ದುಪೆದ್ದಾಗಿ ನಕ್ಕಿದ್ದ. ಕಿಬ್ಬೊಟ್ಟೆತಾವ ಕೈ ಇಟ್ಕೊಂಡೇ ಬಸವಣ್ಣಿ ನಿದ್ದಿ ಹೋಗಿದ್ದ.

ಆವತ್ತೇ ಬೆಳಗಿನ ಜಾವದಾಗೆ ಕಿಲ್ಲಯ್ಯವಾಡಿಯ ಧರಣೀಶ ಅಷ್ಟುದ್ದದ ಬೇವಿನ ಕಡ್ಡಿ ಹಿಡಕೊಂಡು ಇಡೀ ಹೊಲದ ತುಂಬ ಓಡಾಡಿದ್ದ. ಬಸವಣ್ಣೀನೂ ಯಾವ ತಾವ ನೀರ ಸೆಲೆ ಸಿಕ್ಕೀತು ಅಂದ್ಕೊಂಡು ಅವನ ಹಿಂದೇನೇ ಆಸೆಗಣ್ಣಿಂದ ನೆಗೆದಾಡೋನು. ಕೊನೆಗೆ ಕಾಕತಾಳೀಯವಾಗಿ ನಾಗವಂತಿಗೆ ಕನಸಿನಾಗೆ ಬೆಳಕಿನ ಬಿಂದು ಕಾಣಿಸಿದ ತಾವದಲ್ಲೇ ನೀರಿನ ಸೆಲೆಯ ಸೂಚನೆ ಸಿಕ್ಕಿತ್ತು. ಬಸವಣ್ಣಿ ಮತ್ತೆ ತಡಮಾಡದೇ ಚೆಲುವಾಂಬಾ ಬೋರ್ವೆಲ್ ಕಂಪನಿಯವರನ್ನು ಕರೆಸಿ ಕೊಳವೆಬಾವಿ ಕೊರೆಸಿದ್ದ. ‘ಮನೆತಾವ ಬಸುರಿ ಹೆಂಗಸಿರುವಾಗ ಭೂಮ್ತಾಯಿ ಒಡಲೊಡೆವ ಕೆಲಸ ಮಾಡಬೇಡ ಬಸವ’ ಎಂದಿದ್ದರು ತಾಯಿ ಕದಿರೆವ್ವ.

‘ಸಂದಾಕ್ ಹೇಳಿಯೇ ನೀನು, ಭೂಮ್ತಾಯ ಒಡಲ ಹನಿ ನಾಏನಾ ಕುಡಿದೇನೇ, ಅವಳೊಡಲಿಗೇ ಹರಿಸೋ ಮಗಾ ನಾ’ ಎಂದು ಧೈರ್ಯ ತುಂಬಿದ್ದ.

ಪದನಾಪುರದಿಂದ ಶಂಕರಿ ಕ್ರಾಸ್ಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಕ್ಷ್ಮೀವಾಡಿ ಬಾಜೂಕದ ತೆಂಗಿನಮರದ ರಸ್ತೆಯ ಮಗ್ಗುಲಲ್ಲಿರುವ ಊರಾದ ತೇಜಪುರದಲ್ಲಿ ಯಾವತ್ತಂದ್ರೆ ಯಾವತ್ತೂ ಇಷ್ಟೊಂದು ವಾಹನಗಳು ಓಡಾಡಿದ ಇತಿಹಾಸ ಇಲ್ಲ, ಈ ಊರ ಜನ, ಸಂಜೀ ಓಡಾಡೊ ಕುರಿ ಮೇಕೆಗಳು ದೂಳು ಎಬ್ಬಿಸಿದ ಕಥೆ ಮಾತ್ರ ಹೇಳಬಲ್ಲರು. ಆದರೆ, ಇವತ್ತು ಎಂತೆಂಥಾ ದೈತ್ಯ ವಾಹನಗಳು ಬಸವಣ್ಣಿಯ ತೋಟದೊಳಗೆ ಏಕಾಏಕಿ ನುಗ್ಗಿದ್ದವು.

ಇಡೀ ತೋಟವನ್ನು ನೀರಿನಿಂದ ಹನಿಸಬೇಕೆಂಬೋ ಆಸೆಯಿಂದ ತೆಗೆದಿದ್ದ ಬೋರ್ವೆಲ್ಗೆ ಆತನ ಕಂದ ಬಿದ್ದ ಸುದ್ದಿ ಸುತ್ತಲಿನ ಹತ್ತೂರುಗಳಿಗೆ ಬೆಂಕಿಯಂತೆ ಹಬ್ಬಿಬಿಟ್ಟಿತ್ತು.

ಅವನಿಯೊಳಗೆ ಸೇರಿಕೊಂಡ ಅವನಿಯನ್ನು ಮೇಲಕ್ಕೆತ್ತಲೇಬೇಕಂತ ಪಣಾ ತೊಟ್ಟವರಂತೆ ಭೂಮ್ತಾಯಿಯನ್ನು ಅಗೆದು ಗುಡ್ಡ ಮಾಡೋ ಕೆಲಸ ಶುರುವಾಗಿತ್ತು. ರಾಜಕೀಯ ಮಂದಿ, ಅಧಿಕಾರಿ ಮಂದಿ, ಸುದ್ದಿ ಮಂದಿ, ಊರೂರ್ ಮಂದಿ ತೋಟದೊಳಗೆ ಜಮಾಯಿಸಿಬಿಟ್ಟಿದ್ದರು.

ನಾಗವಂತಿಯ ಕಂದ ಮೇಲೆದ್ದು ಬರಲಿ ಎಂಬ ಪ್ರಾರ್ಥನೆ ಸತತವಾಗತೊಡಗಿತ್ತು. ತೋಟದ ಹೃದಯ ಭಾಗದಲ್ಲಿರುವ ಬೇವಿನ ಮರದ ಕೆಳಗೆ ಮಣ್ಣಿನ ಸಣ್ಣದೊಂದು ಮೂರ್ತಿ ಮಾಡಿದ ಅಜ್ಜಿ ಕದಿರೆವ್ವ, ‘ಪಾರುವತಿ ದೇವಿ ನಮ್ಮುಸಿರು ನಿನ್ ಮುಡಿಗಿಟ್ಟಿವ್ನಿ, ಕಾದುಕೊಡು ತಾಯೇ’ ಎಂದು ಸೆರಗೊಡ್ಡಿ ಪರಿಪರಿಯಾಗಿ ಮೊರೆಯಿಟ್ಟಿದ್ದಳು. ಸಂಜೀಗೆ ಆರಂಭವಾದ ಯಂತ್ರಗಳ ಕೆಲಸ ನಡುರಾತ್ರಿಯೂ ನಡೆದೇ ಇತ್ತು. ತಾಸುಗಳು ಒಂದರ ಹಿಂದೆ ಒಂದು ಮಡಿಕೆ ಹಾಕಿವೆ, ಪುಟ್ತಾಯಿಯ ಉಸಿರು ಈತನಕ ಉಳಿದೀತೇ ಎಂದು ಹೊಟ್ಟೆಯೊಳಗೆ ಹಿಂಸೆಪಟ್ಟವರ ದನಿಯಲ್ಲೂ ಒಂದೆಳೆಯ ಆಸೆಯ ಒಸರಿತ್ತು.

ಈ ಸರಿರಾತ್ರಿಯಲ್ಲಿ ಹಾಲು ಸುರಿವ ಬೆಳದಿಂಗಳ ಹಾಸಿನ ಕೆಳಗೆ ಕುಳಿತ ನಾಗವಂತಿ ಮಾತ್ರ ತನ್ನಾಸೆ, ದುಃಖ, ಕಳವಳ, ಹಂಬಲದ ನೆನಪಿನ ಗರ್ಭವತಿಯಾಗಿದ್ದಳು. ಈ ತೇಜಪುರವೆಂಬ ಊರಿಗೆ ಬಂದಾಗಿನಿಂದ ಬಸಿರೊಡೆದ ಕನಸಿನ ಪ್ರತಿ ಕ್ಷಣವನ್ನೂ ಒಂದೊಂದಾಗಿ ಪೋಣಿಸುತ್ತಿದ್ದಂತೆ ಅವಳಂತರಂಗದೊಳಗಿನ ಶಿಶುವಿನ ಉಸಿರು ಹೊಕ್ಕುಳ ಬಳ್ಳಿಗೆ ಮತ್ತೆ ಮತ್ತೆ ತಾಕಿದಂತೆ ಭಾಸವಾಗಿತ್ತು. ಅವನಿಯೊಳಗಿಳಿದವಳ ಹೃದಯದ ಪ್ರತಿ ಬಡಿತವೂ ಅವಳಿಗೆ ಕೇಳಿಸಿದಂತಾಗಿ ಅದಕ್ಕೆ ಕಿವಿಗೊಟ್ಟಳು. ಆಕೆಯ ಪ್ರತಿ ಏದುಸಿರನ್ನೂ ಲೆಕ್ಕವಿಡುವುದು ಸಂಕಟವಾಗತೊಡಗಿತು.

ಮತ್ತೆ ನಿನ್ನ ಮಡಿಲು ಸೇರಿಸಿಕೊಳ್ಳು, ಎಂದು ಅದು ಧೇನಿಸಿದಂತೆ ಅನ್ನಿಸಿತು. ಒಂದರೆ ಕ್ಷಣ ಧ್ಯಾನಸ್ಥ ಸ್ಥಿತಿಯಲ್ಲಿದ್ದವಳ ಕಣ್ರೆಪ್ಪೆ ಯಾಕೆ ಹೀಗೆ ಬಡಿದುಕೊಳ್ಳುತ್ತಿದೆ ಎಂದು ದಿಗಿಲಾದಳು. ತಕ್ಷಣ ನೆನಪಾಗಿದ್ದು ಭೀಮಾ ದಡದ ಪಾರ್ವತಿ ಮಂದಿರದಿಂದ ತಂದಿದ್ದ ಬಿಳಿ ಬಿಳಿ ಹರಳಿನ ಹಾರ. ಮುಚ್ಚಿದ ಕಣ್ಣನ್ನು ತೆರೆಯದೇ ಹಾರಕ್ಕಾಗಿ ಕತ್ತಿನ ತುಂಬ ತಡಕಾಡಿದಳು. ಎದೆಗೆ ಭಾರವಾಗದಂತೆ ಹಾರ ಅಲ್ಲೇ ತಣ್ಣಗೆ ಮಲಗಿತ್ತು.

ಎರಡೂ ಕೈಗಳಲ್ಲಿ ಹಾರವನ್ನು ಸುತ್ತಾಸುತ್ತ ತಿರುಗಿಸಿದಳು. ಹಾಂ! ಪಾರ್ವತಿಯ ಪದಕವೆಲ್ಲಿ, ಅದೇ ಕಾಣಿಸುತ್ತಿಲ್ಲ, ಬಿದ್ದೆಲ್ಲಿ ಹೋಯಿತು? ಅಯ್ಯೋ ಆ ದೇವಿಯೂ ಕೈಬಿಟ್ಟು ನಡೆದುಬಿಟ್ಟಳೆ ಎಂದು ಒಮ್ಮೆಗೇ ಕಣ್ತೆರೆದು ಹುಡುಕಾಡಿದಳು. ಈ ಘಳಿಗೆಯಲ್ಲಿ ಎಲ್ಲವೂ ಯಾಕೆ ಕೆಟ್ಟದೆನಿಸುತ್ತಿದೆ ಎಂದು ಸೆಟೆದು ಕುಂತಳು.

ಸೆರಗನ್ನು ಸೊಂಟಕ್ಕೆ ತುಂಬಿಕೊಂಡಳು. ರವಿಕೆಯೊಳಗೆ ಕೈ ಹಾಕಿ ತಡವಿಕೊಂಡಳು. ತಲೆಯನ್ನು ಬಾಗಿಸಿ ನೋಡಿದಳು; ಪಾರ್ವತಿ ಪದಕ ಅಲ್ಲೇ ಇತ್ತು. ಕುಚದೊಳಗಿನಿಂದ ಇಳಿದ ಪದಕ ರವಿಕೆಯ ಮುಂಭಾಗದ ಹುಕ್ಕಿಗೆ ಸಿಕ್ಕಿಕೊಂಡು ನೇತಾಡುತ್ತಿತ್ತು. ಹಾಗೇ ಬಗ್ಗಿ ಅದನ್ನು ಕಣ್ಣಿಗೆ ಒತ್ತಿಕೊಂಡಳು. ಹುಕ್ಕಿನಿಂದ ಪದಕವನ್ನು ನಿಧಾನಕ್ಕೆ ಬಿಡಿಸಿ ಮತ್ತೆ ಹಾರಕ್ಕೆ ಜೋಡಿಸಿಕೊಳ್ಳುತ್ತಲೇ ಮತ್ತೆ ಅಂತರಂಗಕ್ಕೆ ದನಿಯಾದಳು. ತನ್ನ ಧ್ಯಾನವೇ ಆಕೀಗೆ ರಕ್ಷಾಕವಚವಾಗಬೇಕು, ಆಕೆ ಮತ್ತೆ ತನ್ನ ಮಡಿಲು ಸೇರಿಕೊಳ್ಳಲೇಬೇಕು ಎಂಬ ಛಲ ಗಟ್ಟಿಯಾಗತೊಡಗಿತು.

ಸರಕ್ಕೆ ಪೋಣಿಸಿದ್ದ ಪಾರ್ವತಿಯ ಪದಕವನ್ನು ಮುಷ್ಟಿಯೊಳಗೆ ಗಟ್ಟಿಯಾಗಿ ಹಿಡಿದುಕೊಂಡಳು. ನಿನ್ನ ಗರ್ಭ ಸೇರಿದ ಶಿಶುವನ್ನು ನನ್ನ ಮಡಿಲಿಗೆ ಮತ್ತೆ ಸೇರಿಸುವವರೆಗಿನ ಛಲವಿದು ಎಂಬ ಎಚ್ಚರಿಕೆಯೊಂದಿಗೆ ದೇಹದ ಅಷ್ಟೂ ಉಸಿರನ್ನು ಎದೆಗೆ ಎಳೆದುಕೊಂಡಳು.

ಇಂಥಾದ್ದೇ ಒಂದು ಪುಟ್ಟ ಮುತ್ತಿನ ಸರವನ್ನು ಮಗಳು ಅವನಿಗೂ ಕೊಂಡಿದ್ದಳು ನಾಗವಂತಿ. ಪಾರ್ವತಿ ಮಂದಿರದಿಂದ ಬಂದ ದಿನವೇ ಸರವನ್ನು ಕತ್ತಿನಿಂದ ಎಳೆದು ಅಷ್ಟೂ ಮಣಿಗಳು ಅಂಗಣದ ತುಂಬಾ ಚೆಲ್ಲಾಡಿದ್ದವು. ‘ಅವ್ವೀ, ಅವ್ವೀ ಕಣದ ತುಂಬಾ ಸಕ್ರಿ ಚೆಲ್ಲಿದಂಗಾಯ್ತಲ್ಲೇ’ ಎನ್ನುತ್ತಾ ಅಷ್ಟೂ ಮಣಿಗಳನ್ನು ಬಿಡದೇ ನೈಲಾನು ದಾರಕ್ಕೆ ಪೋಣಿಸಿದ ಕ್ಷಣಗಳು ಮತ್ತೆ ನೆನಪಾದವು. ಒಂದೊಂದು ಮಣಿಯೂ ಕಂದನಿಗೆ ಉಸಿರು ತುಂಬಿದಂತಾಗಲಿ ಎಂದು ಕಣ್ಮುಚ್ಚಿಕೊಂಡು ಮತ್ತೆ ಪೋಣಿಸಿದಂತೆ ಕನಸ ಕಂಡಳು...

‘ಅವ್ವೀ..!’

‘ನೀನೂ ಅವ್ವೀ, ನಾನೂ ಅವ್ವೀ... ನಿನ್ನ ಉಡಿಯೊಳಗಿನ ಬಿಸಿಯುಸಿರ ಉಂಡವಳಾಕಿ..,

‘ಚಲವೀ ನೀ...ನಿನ್ನ ಪಾದಾವ ನನ್ನ ಕೆನ್ನೆಯಾಗಿಟ್ಟು ಕಚಕುಳಿ ಕೊಟ್ಟಾಕೀ ನೀ..!’

‘ನೀ ನನ್ನ ಪಾದದ ಬೆರಳು ಬೆರಳಿಗೂ ಹಚ್ಚೀಯಲ್ಲಾ ಎಣ್ಣೀ? ಮಾಡ್ಸೀಯಲ್ಲಾ ಜಳಕ? ಅದ ನಾ ಮರೆಯಂಗಿಲ್ಲವ್ವೀ... ಅದೆಂಥಾ ಪುಳಕ ಇತ್ತಂತೀ...’

‘ಛೀ..! ಬಿಡವ್ವೀ... ಜಳಕದ ಮಾತಾ ಏನಂತೀ, ಹೊಕ್ಕೂಳ ಸುತ್ತ ಎಣ್ಣೀ ಹಚ್ಚೀದ್ರ, ನಕ್ಕೋತ ನಕ್ಕೋತ ಆ ಹೊಟ್ಟೀ ಮತ್ತ ಮತ್ತ ಕುಣ್ಸಿಯಲ್ಲೇ ಬಂಗಾರೀ..!’

‘ನಿನ್ ಬೆರಳ ಸೋಕಿದ್ರಾ ಸಾಕಿತ್ತವ್ವೀ... ನನ್ ಮೈಯಾಗ ಹೊಸ ಜೀಂವಾ... ಗಲ್ಲ ಹಿಂಡಿ ಹಿಂಡಿ ಮೂಗಿನ್ ತುದಿ ತಂಕಾ ತರೋ ಹೊತ್ತೀಗ್ ನಿನ್ ಮೂಗಿನ್ ನತ್ತಿನ್ ಬೆಳ್ಕು ನನ್ ಕಣ್ಣೊಳಗೆ ಮಿಂಚಾಗ್ತಿತ್ತಾ..!’

‘ಯೇ ನನ್ ಕಂದಾ, ಅಕ್ಕನ ವಚನಾ ನಿನ್ ರಕ್ತದಾಗ್ ಸೇರ್ ಹೋಯ್ತಲ್ಲೇ..,’

‘ಅಕ್ಕನ ಹಾಡೂ ಏಟ್ ವೈನಾಗ್ ಹಾಡ್ತಿದ್ದೀ ಅವ್ವೀ... ಉಡಿಯಾಗೂ ಹಾಡು, ಹಟ್ಟಿಯಾಗೂ ಹಾಡು... ತೊಟ್ಟಿಲ ಸುಗಂಧದೊಳಗೆ ಗಿಲಗಿಲಕಿ ಸದ್ದು. ಕಣ್ಣ ಮುಚ್ಚಿದರೆ ನಿನ್ನ ದುಂಡ ದುಂಡಗಿನ ಕೆನ್ನೆ, ಅದಕ್ಕೆ ಮುಗುಳ್ನಗಿಯ ಸಿಂಗಾರ..!’

‘ಹಟ್ಟಿಯ ತೊಟ್ಟಿಲಾಗೆ ಕೈಕಟ್ಟಿ ಮಲಗಿರುವ ಅವ್ವೀಗೂ ಕನಸೇ..?’

‘ಅವ್ವೀ ಅಂದ್ರ ಏನವ್ವೀ?’

‘...ಭೂಮ್ತಾಯಿ ಕಾಣ್ ಮಗಾ!’

‘ಹಾಂ! ನಾ ಅವ್ವೀಯೊಳಗಿನ ಅವ್ವೀ!’

ಅಂದ್ರ??

ಭೂಮ್ತಾಯ ಉಸಿರು!,

ಕಂದನೊಂದಿಗೆ ಹೀಗೆ ಸಂಭಾಷಣೆಗೆ ಇಳಿದು, ಮುತ್ತಿನ ಸರದ ಮಣಿಗಳನ್ನು ಎಣಿಸುತ್ತ ಎಣಿಸುತ್ತ ಅಂಗಣದ ಹಸಿ ನೆಲದಲ್ಲಿ ಧ್ಯಾನಸ್ಥಳಾಗಿ ಕುಂತಿದ್ದ ನಾಗವಂತಿ ಒಮ್ಮೆಗೇ ದಿಗ್ಗನೆದ್ದು ಕುಂತಳು. ಆಕಿಯ ಮುಂದೆ ಮಂಡಿಯೂರಿ ಅವಳ ಮೊಗವನ್ನು ತನ್ನ ಬೊಗಸೆಯೊಳಗಿಟ್ಟು ಕುಳಿತಿದ್ದ ಬಸವಣ್ಣಿ. ಆ ಕ್ಷಣದಲ್ಲೇ ಹೊಲದಲ್ಲಿ ಎದ್ದಿದ್ದ ಗೌಜು- ಗದ್ದಲ, ಯಂತ್ರದ ಸದ್ದು ನಿಂತುಹೋಗಿತ್ತು. ಅವನಿಯ ಅವ್ವಿಗೆ ಉಸಿರು ಕಟ್ಟಿದಂತಾಗಿತ್ತು. ಯಾರೋ ಕೂಗಿದರು; ಅದು ಅತ್ಯಂತ ಸನಿಹದಲ್ಲೇ ಕೇಳಿಸಿತು.

ನಾಗವಂತೀ..!

ನಾಗವಂತೀ..!

ಬಸವಣ್ಣಿ ಮಾತನಾಡಿದ,

‘ನಿನ್ನ ಧ್ಯಾನ ಫಲಿಸಿದೆ ನಾಗವಂತೀ, ಅವನಿ ಮತ್ತೆ ಉಸಿರಾಗಿದ್ದಾಳೆ’ ಎಂದು ಉದ್ಗರಿಸಿದ. ನಾಗವಂತಿಯ ಮುಚ್ಚಿದ ಕಣ್ರೆಪ್ಪೆ ಸೀಳಿಕೊಂಡ ಒಂದು ಹನಿ ಬಸವಣ್ಣಿಯ ಕೈ ಮೇಲೆ ಬಿದ್ದು ಹರಳಾಯಿತು. ಭೂಮ್ತಾಯ ಮಗನಂತಿರುವ ಪತಿಯ ಮುಖವನ್ನು ಎದೆಗೆಳೆದುಕೊಂಡವಳ ಅಂತರಂಗದ ಕಾವಳ ಕರಗಿ ಬೆಳದಿಂಗಳಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.