ಸೋಮವಾರ, ಆಗಸ್ಟ್ 15, 2022
24 °C

PV Web Exclusive: ಸಿರಿಧಾನ್ಯಗಳಲ್ಲಿ ಅರಳಿದ ಕಲಾ ಕುಸುರಿ

ಸಿದ್ದು ಆರ್‌.ಜಿ.ಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಊದಲು ತಿನ್ನೋರ್ಗೆ ಉಬ್ಬಸ ಇಲ್ಲ, ಬರಗ ಇದ್ರೆ ಬರಗಾಲದಲ್ಲೂ ಬದುಕು, ಹಾರಕ ತಿಂದೋರು ಹಾರ್ತಾ ಹೋದ್ರು, ಕೊರಲೆ ತಿಂದು ಕೊರಗೋದು ಬಿಡು... ಈ ನುಡಿಗಟ್ಟುಗಳು ಸಿರಿಧಾನ್ಯಗಳ ಮಹತ್ವವನ್ನು ಸಾರಿ ಹೇಳುತ್ತವೆ. ಹಾಗಾಗಿಯೇ ನಗರವಾಸಿಗಳು ಕೂಡ ಸಿರಿಧಾನ್ಯ ಬಳಕೆಗೆ ಇತ್ತೀಚಿನ ವರ್ಷಗಳಲ್ಲಿ ಮುಗಿಬೀಳುತ್ತಿದ್ದಾರೆ. 

ಇಂಥ ಸಿರಿಧಾನ್ಯಗಳ ಶ್ರೇಷ್ಠತೆಯನ್ನು ಸಾರಲು ವಿನೂತನವಾದ ಕಲಾಮಾರ್ಗವನ್ನು ಕಂಡುಕೊಂಡಿದ್ದಾರೆ ಹಾವೇರಿ ನಗರದ ಯುವ ಕಲಾವಿದ ಗಣೇಶ ವಿ.ರಾಯ್ಕರ್‌. ಭತ್ತ, ರಾಗಿ, ನವಣೆ, ಹೆಸರುಕಾಳು, ಜೋಳ, ಬಿಳಿ ಸಾಸಿವೆ, ಕಾಳುಮೆಣಸು, ಅಕ್ಕಿ ಮುಂತಾದ ಧಾನ್ಯಗಳಿಂದ ಚಿತ್ತಾಕರ್ಷಕ ಕಲಾಕೃತಿಗಳನ್ನು ಮೂಡಿಸಿ ಸೈ ಎನಿಸಿಕೊಂಡಿದ್ದಾರೆ ಗಣೇಶ್‌.

ಬಾಲ್ಯದಲ್ಲೇ ಕಲೆಯ ಸೆಳೆತ:

ಮೂಲತಃ ಮುಂಡಗೋಡದವರಾದ ಗಣೇಶ್ ಅವರು ಪ್ರಸ್ತುತ ಹಾವೇರಿ ನಗರದಲ್ಲಿ ನೆಲೆಸಿದ್ದಾರೆ. ಇವರ ತಂದೆ ವೆಂಕಟೇಶ್‌ ಮತ್ತು ತಾಯಿ ಮಾಲಾ. ಗಣೇಶ್‌ ಅವರು ವೃತ್ತಿಯಿಂದ ಅಕ್ಕಸಾಲಿಗರಾಗಿ, ಪ್ರವೃತ್ತಿಯಿಂದ ಕಲಾವಿದರಾಗಿದ್ದಾರೆ. ಶಾಲೆಯಲ್ಲಿದ್ದಾಗಲೇ ಚಿತ್ರಗಳನ್ನು ಬಿಡಿಸುವುದು, ಗಣೇಶ ಮೂರ್ತಿಗಳನ್ನು ಮಾಡುವುದರ ಮೂಲಕ ಕಲೆಯತ್ತ ಹೆಚ್ಚು ಆಕರ್ಷಿತರಾದರು. 

ನಂತರ ಇತರರಿಗಿಂತ ಭಿನ್ನವಾಗಿ ಏನಾದರೂ ಮಾಡಬೇಕು ಎಂದು ಯೋಚಿಸುತ್ತಿದ್ದಾಗಲೇ ಮೊದಲ ಬಾರಿಗೆ ಗೋಧಿಗಳಿಂದ ಚಿತ್ರ ಬಿಡಿಸಿದರು. ಇದು ಅವರಿಗೆ ಹೆಚ್ಚು ಖುಷಿ ಕೊಟ್ಟಿತು. ಅಂದಿನಿಂದ ಸಿರಿಧಾನ್ಯಗಳನ್ನು ಬಳಸಿಕೊಂಡು ಹಲವಾರು ಚಿತ್ರಗಳನ್ನು ರಚಿಸಿದರು. ಈ ಸಿರಿಧಾನ್ಯಗಳ ಕಲಾಕೃತಿಗಳೇ ಅವರಿಗೆ ಜನಮನ್ನಣೆಯನ್ನು ತಂದುಕೊಟ್ಟಿವೆ. 

ಸಿರಿಧಾನ್ಯಗಳಲ್ಲಿ ಅರಳಿದ ಶ್ರೀಗಳು:

ಹುಕ್ಕೇರಿಮಠದ ಶಿವಲಿಂಗ ಸ್ವಾಮೀಜಿ, ಶಿವಬಸವ ಸ್ವಾಮೀಜಿ, ಸದಾಶಿವ ಸ್ವಾಮೀಜಿ, ವಿವೇಕಾನಂದ, ಸಿಂದಗಿ ಮಠದ ಶಾಂತವೀರ ಶ್ರೀಗಳು ಮುಂತಾದ ಮಹಾಮಹಿಮರ ಚಿತ್ರಗಳನ್ನು ಸಿರಿಧಾನ್ಯಗಳ ಮೂಲಕ ಅರಳಿಸಿದ್ದಾರೆ. ಅಷ್ಟೇ ಏಕೆ, ಮತದಾ ಜಾಗೃತಿ, ಕೊರೊನಾ ಜಾಗೃತಿ ಚಿತ್ರಗಳನ್ನೂ ರಚಿಸಿ ಸಾಮಾಜಿಕ ಕಳಕಳಿಯನ್ನು ತೋರಿದ್ದಾರೆ. ಇವರ ಕಲೆಗೆ ಹುಕ್ಕೇರಿ ಮಠದ ಶ್ರೀಗಳು ಪ್ರೋತ್ಸಾಹದ ನೀರೆರೆದಿದ್ದಾರೆ. 

ಸೂಕ್ಷ್ಮ ಕುಸುರಿ ಕೆಲಸ:

‘ಸಿರಿಧಾನ್ಯಗಳ ಒಂದೊಂದೇ ಕಾಳುಗಳನ್ನು ಆಯ್ದು ಚಿತ್ರ ಬಿಡಿಸುವುದು ಸೂಕ್ಷ್ಮವಾದ ಕುಸುರಿ ಕೆಲಸ. 4 ಸಾವಿರ ಭತ್ತ, 5 ಸಾವಿರ ರಾಗಿಗಳಿಂದ ಚಿತ್ರರಚನೆ ಮಾಡುವುದು ಅಪಾರವಾದ ತಾಳ್ಮೆ ಮತ್ತು ಪರಿಶ್ರಮವನ್ನು ಬೇಡುತ್ತದೆ. ಒಂದು ಚಿತ್ರ ರಚನೆಗೆ ತಿಂಗಳುಗಟ್ಟಲೇ ಸಮಯ ಬೇಕು. ಆರಂಭದಲ್ಲಿ ಮನೆಯಲ್ಲಿ ಬೈಯುತ್ತಿದ್ದರು. ಈಗ ಅವರೇ ನನ್ನ ಕಲೆಯನ್ನು ನೋಡಿ ಬೆನ್ನುತಟ್ಟುತ್ತಿದ್ದಾರೆ. ಬೆಳಿಗ್ಗೆ ವೈಭವ ಜ್ಯುಯಲರ್ಸ್‌ನಲ್ಲಿ ತಂದೆಯವರ ಜತೆ ಕೆಲಸ ಮಾಡುತ್ತೇನೆ. ರಾತ್ರಿ ವೇಳೆ ಸಿರಿಧಾನ್ಯಗಳ ಚಿತ್ರ ರಚನೆಯಲ್ಲಿ ತೊಡಗುತ್ತೇನೆ’ ಎನ್ನುತ್ತಾರೆ ಗಣೇಶ್‌. 

ಸನ್ಮಾನ–ಬಹುಮಾನ

2018ರಲ್ಲಿ ‘ಅಂತರರಾಷ್ಟ್ರೀಯ ವಂಡರ್‌ ಬುಕ್‌ ಆಫ್‌ ರೆಕಾರ್ಡ್‌’ನಲ್ಲಿ ಗಣೇಶ್ ಅವರ ಹೆಸರು ದಾಖಲಾಗಿದೆ. ರಂಭಾಪುರಿ ಶ್ರೀಗಳು ‘ಸಾಧಕ ರತ್ನ’ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. 2019ರಲ್ಲಿ ಕಾರ್ಮಿಕ ಇಲಾಖೆಯಿಂದ ‘ಅಕ್ಕಸಾಲಿಗ ಕಾರ್ಮಿಕ’ ಪ್ರಶಸ್ತಿ ನೀಡಿದ್ದಾರೆ. ಗಣರಾಜ್ಯೋತ್ಸವ, ಹುಕ್ಕೇರಿ ಮಠದ ಜಾತ್ರಾ ಮಹೋತ್ಸವ, ಹಾವೇರಿಯ ಜಿಲ್ಲಾ ಉತ್ಸವ, ಅಕ್ಕಮಹಾದೇವಿ ಜಯಂತ್ಯುತ್ಸವ ಮುಂತಾದ ಕಾರ್ಯಕ್ರಮಗಳಲ್ಲಿ ಗಣೇಶ್‌ ಅವರನ್ನು ಸನ್ಮಾನಿಸಲಾಗಿದೆ. ಹಲವಾರು ಸಂಘ ಸಂಸ್ಥೆಗಳು ಸನ್ನಾನಿಸಿ ಬೆನ್ನುತಟ್ಟಿವೆ. 

ಗಣೇಶ ಅವರಿಗೆ ಹಲವಾರು ಅಭಿರುಚಿಗಳಿವೆ. ಫೇಸ್‌ಬುಕ್‌ನಲ್ಲಿ ‘ಸಾಧಕರತ್ನ’ ಎಂಬ ಹೆಸರಿನಲ್ಲಿ ವಾರಕ್ಕೆ ಮೂವರು ಕಲಾವಿದರನ್ನು ಪರಿಚಿಯಿಸುವ ಕೆಲಸ ಮಾಡುತ್ತಿದ್ದಾರೆ. ‘ಓಂ ಯುವಕ ಸಂಘ’ ಕಟ್ಟಿಕೊಂಡು ಸಾಮಾಜಿಕ ಜಾಗೃತಿ, ಸ್ವಚ್ಛತಾ ಶಿಬಿರಗಳನ್ನು ನಡೆಸುತ್ತಿದ್ದಾರೆ. ಬಡ ಮಕ್ಕಳಿಗೆ ಸ್ಕೇಟಿಂಗ್‌, ಬ್ಯಾಸ್ಕೆಟ್‌ಬಾಲ್‌ ಹೇಳಿಕೊಡುತ್ತಾರೆ. ಸಮಯವನ್ನು ವ್ಯರ್ಥ ಮಾಡದೆ, ತಾನೂ ಬೆಳೆಯುತ್ತಾ, ಇತರರನ್ನೂ ಬೆಳೆಸಬೇಕು ಎಂಬ ಅವರ ಗುಣ ಅನುಕರಣೀಯವಾದುದು. 

‘ಸಿರಿಧಾನ್ಯಗಳ ಕಲೆಯನ್ನು ಏಕಲವ್ಯನಂತೆ ನಾನೇ ಸತತ ಪ್ರಯತ್ನದಿಂದ ಒಲಿಸಿಕೊಂಡಿದ್ದೇನೆ. ರಕ್ತದಾನ ಜಾಗೃತಿ, ಮಾದಕ ದ್ರವ್ಯ ಜಾಗೃತಿ ಕುರಿತು ಕಲಾಕೃತಿಗಳನ್ನು ರಚಿಸಬೇಕು. ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕು’ ಎಂಬುದು ಗಣೇಶ್‌ ಅವರ ಮನದಾಳದ ಮಾತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು