ಶನಿವಾರ, ಜನವರಿ 29, 2022
22 °C

ಹೂವಿನಲ್ಲಡಗಿದೆ ಬಾಳಧರ್ಮ!

ಶ್ರೀರಂಜನಿ ಅಡಿಗ Updated:

ಅಕ್ಷರ ಗಾತ್ರ : | |

ಹೊಸ ಮನೆಯ ಪ್ರವೇಶದ ಸಂಭ್ರಮವನ್ನು ಕಾಣುವುದು ಹೂವಿನ ಅಲಂಕಾರದಲ್ಲೇ ಅಲ್ಲವೇ? ಹೊಸವರ್ಷಕ್ಕೆ ಪದಾರ್ಪಣೆ ಮಾಡಿರುವ ಈ ಸಂದರ್ಭದಲ್ಲಿ ಅಂತಹ ಸಂಭ್ರಮದ ಅಲೆ ಎಬ್ಬಿಸುವ ಒಂದು ಪುಷ್ಪ ಪುರಾಣ..

**

ಅರಳಿದ ಹೂವುಗಳು ಕಣ್ಣಿಗೆ ಬಿದ್ದಾಗ ಮನಸ್ಸಿಗೆ ಆಗುವ ಮಾಂತ್ರಿಕ ಖುಷಿ ಅಂತಿಂಥದ್ದಲ್ಲ. ಅದು ಸೂಸುವ ಪರಿಮಳ, ಬಣ್ಣಗಳ ಜೋಡಣೆ, ಆಕಾರ ಎಲ್ಲವೂ ಚೇತೋಹಾರಿ ಅಂಶಗಳೇ. ಬೆಂಗಳೂರಿನ ಮಲ್ಲೇಶ್ವರದ ಸಂಪಿಗೆ ರಸ್ತೆ ಇಲ್ಲವೆ ಗಾಂಧಿ ಬಜಾರ್‌ ರಸ್ತೆಯಲ್ಲಿ ಹಾಗೆ ಒಂದು ಬಾರಿ ಸುತ್ತು ಹಾಕಿದರೆ ಮೈ ಮರೆಸುವಂತಹ ಪರಿಮಳ ತಲೆ ತಿರುಗಿಸುವಂತಿರುತ್ತದೆ. ಮರಕ್ಕೆ ನೇತು ಹಾಕಿದ ಸುಗಂಧಿ ಹೂವಿನ ಹಾರಗಳು, ಬಿಡಿಬಿಡಿಯಾಗಿರುವ ಹೂವುಗಳು, ಬೇರೆ ಹೂವುಗಳನ್ನು ಮಧ್ಯೆ ಸೇರಿಸಿಕೊಂಡು ಹೊಸರೂಪ ತಾಳಿದ ಮಾಲೆಗಳು, ಜರ್ಬೆರಾ, ಡೇಲಿಯಾ, ಹೆಸರು ಗೊತ್ತಿಲ್ಲದ ಇನ್ನೂ ಅನೇಕ ವಿದೇಶಿ ಹೂವುಗಳ ಬೊಕೆಗಳು - ಆ ಹೂವುಗಳ ಲೋಕ ನಗರದ ಸುಂದರ ಉದ್ಯಾನದಂತೆ ಕಾಣಿಸುತ್ತದೆ. ಬೆಂಗಳೂರಿನಲ್ಲಿ ಹಕ್ಕಿಗಳ ಚಿಲಿಪಿಲಿಗಿಂತ ಮುನ್ನ ‘ಹೂವೊ…ಹೂವೊ’ ಎಂಬ ಸುಪ್ರಭಾತ ಎಂಥ ಗಾಢನಿದ್ರೆಯಲ್ಲಿ ಇರುವವರನ್ನೂ ಎಬ್ಬಿಸಿಬಿಡುತ್ತದೆ.

ಹೆಣ್ಣುಮಕ್ಕಳಿಗೂ ಹೂವಿಗೂ ಬಿಡಿಸಲಾಗದ ನಂಟು. ಪುಷ್ಪ, ಸುಮ, ಗುಲಾಬಿ, ಚಂಪಾ, ಪದ್ಮ, ಮಂದಾರ ಎಂಬ ಹೆಸರುಗಳೆಲ್ಲಾ ಹೆಣ್ಣಿಗೆ ತಾನೆ? ಅದರಲ್ಲಿಯೂ ಬಾಲ್ಯದಲ್ಲಿ ಹೂವುಗಳ ಆಕರ್ಷಣೆ ವಿಶೇಷವಾಗಿರುತ್ತದೆ. ಕರಾವಳಿಯಲ್ಲಿ ಆಷಾಢ, ಶ್ರಾವಣದ ಮಾಸದಲ್ಲಿ ದಂಡಿಯಾಗಿ ಸಿಗುವ ಜಾಜಿ, ಮಲ್ಲಿಗೆಗಳಿಂದಾಗಿ ಬಾಲೆಯರಿಗೆ ಮೊಗ್ಗಿನ ಜಡೆ ಬಿಡಿಸುವ ಸಂಭ್ರಮ (ಉದ್ದಕೂದಲಿರುವ ಪುಟ್ಟಬಾಲಕರಿಗೂ ಉದ್ದಲಂಗ ಹಾಕಿ ಜಡೆ ಬಿಡುವವರಿದ್ದಾರೆ).

ಹೆಣ್ಣಿಗೆ ಹೂವಿನ ಬಗ್ಗೆ ಎಷ್ಟು ಅಸಕ್ತಿಯೊ ಅಷ್ಟೇ ಆಸಕ್ತಿ ಹೂವಿನ ತೋಟ ಮಾಡುವುದರಲ್ಲಿಯೂ ಇರುತ್ತದೆ. ಹಿತ್ತಲಿನಲಿರುವ ಹೂವಿನ ಗುತ್ತಿಗಳು ಮನೆಯ ಹೆಂಗಸರ ಕೈಚಳಕ, ಕಲಾತ್ಮಕತೆಗೆ ಸಾಕ್ಷಿ. ಅದು ಆಕರ್ಷಕ, ವೈವಿಧ್ಯವಾಗಿದ್ದಷ್ಟು ಗೌರವಭಾವನೆ ದುಪ್ಪಟ್ಟಾಗುವುದು. ಮಳೆಗಾಲದಲ್ಲಿ ಹಿತ್ತಲವರೆಗೂ ಪರಿಮಳ ಸೂಸುವ ಜಾಜಿ, ಸಂಜೆಮಲ್ಲಿಗೆ, ಪಾರಿಜಾತ, ಕಾಕಡ, ಸುರಗಿ ಹೂವುಗಳನ್ನು ಉಮೇದಿನಲ್ಲಿ ಕೊಯ್ದು ಉದ್ದ ಮಾಲೆ ಮಾಡಿಕೊಂಡು ಎರಡು ಜಡೆಯ ಮಧ್ಯೆ ಮುಡಿದುಕೊಂಡೇ ಶಾಲೆಗೆ ಹೋಗಬೇಕು. ದಿನಾ ಹೂವು ಮುಡಿದು ಬರುವ ಹುಡುಗಿ ಇವತ್ತು ಯಾವ ಹೂವು ಮುಡಿದು ಬರುವಳೆಂಬ ಕುತೂಹಲ ಇಡೀ ತರಗತಿಗೆ. ಹೂ ಮುಡಿದ ಹೆಣ್ಣುಗಳ ತಲೆಯಿಂದ ಉದುರಿದ ಹೂವುಗಳಿಂದ ತರಗತಿಯೆಲ್ಲಾ ಕಸವಾಗುವುದೆಂದು ಮೇಷ್ಟ್ರುಗಳು ‘ಹೂವಿನ ಜೊತೆ ಬುಟ್ಟಿಯನ್ನು ಕಟ್ಟಿಕೊಂಡು ಬನ್ನಿ, ಕಸವಾಗುವ ತಾಪತ್ರಯ ಇಲ್ಲ’ ಎಂಬ ಉಪಾಯ ಬೇರೆ ಕೊಡುತ್ತಿದ್ದರು. ಟೀಚರಿಗೆಂದೇ ತರುವ ಹೂವಿನ ಮಾಲೆಯ ಹಿಂದೆ ಅವರ ಪೆಟ್‌ಸ್ಟೂಡೆಂಟ್‌ ಆಗುವ ಸಂಚು ಇರುತ್ತಿತ್ತು.

ಶ್ರಾವಣದಲ್ಲಿ ವಿವಿಧ ಧಾನ್ಯಗಳನ್ನು ಬಳಸಿ ಮಾಡುವ ‘ಕೊಳ್ ಹೂವು’ ದೇವರಿಗೆ, ಹೊಸ್ತಿಲಿಗೆ ಶ್ರೇಷ್ಠ ಎಂಬುದು ಕರಾವಳಿಗರ ನಂಬಿಕೆ. ಅಲ್ಲವೇ ಮತ್ತೆ? ದೇವರಿಗೂ ಹೂವಿಗೂ ಅವಿನಾಭಾವ ಸಂಬಂಧ. ವಿಧವಿಧದ ಹೂವುಗಳಿಂದ ದೇವರ ಕೋಣೆಯನ್ನು ಅಲಂಕರಿಸಿ ಅದರ ಅಂದ ಹೆಚ್ಚಿಸಿ ಭಕ್ತಿಪರವಶರಾಗುವುದು ಭಕ್ತರಿಗೆ ನಿತ್ಯದ ಕಾಯಕ. ನವರಾತ್ರಿಯಲ್ಲಿ ನವದುರ್ಗೆಯರಿಗೆ ಒಂಬತ್ತು ದಿನವೂ ಬೇರೆ ಬೇರೆ ಜಾತಿಯ ನಿರ್ದಿಷ್ಟ ಹೂವುಗಳಿಂದ ಪೂಜಿಸಬೇಕೆಂಬ ನಂಬಿಕೆಯಿದೆ.

ಹಾಗೆಂದು ಎಲ್ಲಾ ಹೂವುಗಳು ಅರ್ಪಣೆಗೆ ಯೋಗ್ಯವಲ್ಲ. ಪರಿಮಳವಿಲ್ಲದ, ಕೇಸರಿ ಇಲ್ಲದ ಹೂವುಗಳು ದೇವರಿಗೆ ಪ್ರಿಯವಲ್ಲವಂತೆ. ಕೇತಕಿ, ಬಕುಲ ಶಿವನಿಗೆ ಊಹೂಂ… ಅಂತೆಯೇ ವಿವಿಧ ದೇವರುಗಳ ಕತೆ ಹೂವಿನೊಂದಿಗೆ ಬೆಸೆದುಕೊಂಡಿರುವುದು ಅದೆಷ್ಟಿದೆ! ಮನ್ಮಥ ತನ್ನ ಹೂಬಾಣವನ್ನೇ ಬಿಟ್ಟು ಶಿವನ ಧ್ಯಾನವನ್ನು ಕೆಡಿಸಿಬಿಟ್ಟ. ಪದ್ಮನಾಭ ಹೆಸರು ಬಂದಿದ್ದೇ ಹೊಕ್ಕಳಿನಲ್ಲಿ ಕಮಲವನ್ನು ಇಟ್ಟುಕೊಂಡಿದ್ದಕ್ಕಲ್ಲವೇ? ದೂರ್ವಾಸ ಮುನಿ ಎಸೆದ ಹೂವಿನ ಹಾರವನ್ನು ಐರಾವತ ಮೆಟ್ಟಿದ್ದರಿಂದ ಸಮುದ್ರಮಥನಕ್ಕೆ ಮೊದಲಾಯಿತು ಎನ್ನಲಾಗುತ್ತದೆ.

ಈ ದೇವರುಗಳಂತೆ ಹೆಂಗಳೆಯರೂ ಹೂವನ್ನು ಮುಡಿದುಕೊಳ್ಳಲು ಬಲು ಚ್ಯೂಸಿ. ಮದುವೆ ಮನೆಗೆ ಹೋಗಲು ಉದ್ದದ ಮಲ್ಲಿಗೆ ಮಾಲೆಯೇ ಆಗಬೇಕು. ಜಾಜಿ, ಸೇವಂತಿಗೆ ಮುಡಿದರೆ ಮರ್ಯಾದೆಗೆ ಕಡಿಮೆ. ಕನಕಾಂಬರ ಗೊರಟೆಗಳು ಬೇಲಿ ಮೇಲಿನ ಹೂವುಗಳೆಂಬ ಸಸಾರ. ಮಲ್ಲಿಗೆಯ ದಂಡೆಯನ್ನು ತುರುಬಿನ ಸುತ್ತ ಸುತ್ತಿಕೊಂಡು ಅದಕ್ಕೆ ಕಾಂಟ್ರಸ್ಟ್ ಆಗಿ ಕೆಂಪು ಗುಲಾಬಿ ಹೂವನ್ನು ಅಡಿ ಭಾಗದಲ್ಲಿ ಮುಡಿದಾಗಲೇ ಒಂದು ಹಂತದ ಅಲಂಕಾರ ಮುಗಿದಂತೆ. ಈಗಂತೂ ಬಹು ಆಕರ್ಷಕವಾಗಿರುವ, ಎಂದಿಗೂ ಬಾಡದಿರುವ ಆದರೆ ಪರಿಮಳ ಸೂಸದ ಕೃತಕ ಹೂವುಗಳು ನಿಜವಾದ ಹೂವಿಗೆ ಸಡ್ಡು ಹೊಡೆಯುತ್ತಿವೆ.

ಮಳೆಗಾಲದಲ್ಲಿ ಸುರಗಿ, ರಂಜೆ, ಬಕುಲ, ಚಳಿಗಾಲದಲ್ಲಿ ಸಂಪಿಗೆ, ಬೇಸಿಗೆ ಕಾಲದಲ್ಲಿ ಮಲ್ಲಿಗೆ - ಕಾಲಧರ್ಮಕ್ಕನುಗುಣವಾಗಿ ಅರಳಿದರೆ ಎಲ್ಲ ಕಾಲಕ್ಕೂ ದಾಸವಾಳ, ಗುಲಾಬಿಗಳು. ಸೂರ್ಯಕಾಂತಿ ಹೂವಿಗೆ ಸೂರ್ಯನಿದ್ದರೆ ಮಾತ್ರ ಉಳಿಗಾಲ. ದಿನಪನೊಂದಿಗೆ ಅದು ತನ್ನ ಬದುಕನ್ನು ಕಂಡುಕೊಂಡಿದೆ, ಹೀಗಾಗಿ ಸೂರ್ಯಕಾಂತಿ ಹೂವು ‘ನಂಬಿ ಕೆಟ್ಟವರಿಲ್ಲವೋ’ ಎಂಬ ದಾಸರ ಪದದಂತೆ ‘ನಂಬಿಕೆಯೇ ಜೀವನಕ್ಕೆ ಶಕ್ತಿ’ ಎಂದು ಸೂಚಿಸುವಂತೆ ಕಾಣುತ್ತದೆ. ಆದರೆ ಅದೇ, ಬ್ರಹ್ಮಕಮಲ ಚಂದಿರನ ಪಕ್ಷಪಾತಿ. ನೈದಿಲೆ ಕೂಡಾ ಚಂದಿರನ ಸಂಗಾತಿ ಅನ್ನುತ್ತದೆ ಕವಿಸಮಯ. ರಾತ್ರಿ ಮಾತ್ರ ಬಿರಿವ, ಹಗಲಾದೊಡನೆ ಮುದುಡುವ ಬ್ರಹ್ಮಕಮಲದ ಆಕರ್ಷಣೆಗೆ ಮನಸೋತವರಿಲ್ಲ, ಆ ಹೂವಿನ ಸೀಸನ್ನಿನಲ್ಲಿ ಎಲ್ಲರೂ ಫೋಟೊ ತೆಗೆದು ಜಾಲತಾಣದಲ್ಲಿ ಹಂಚಿಕೊಳ್ಳುವವರೇ! ಬದುಕಿನ ಕ್ಷಣಿಕತೆಗೆ ಕ್ಷಣಭಂಗುರತೆಗೆ ಬ್ರಹ್ಮಕಮಲಕ್ಕಿಂತ ಬೇರೆ ಸಾಕ್ಷಿ ಬೇಕೆ? ನೀಲಗಿರಿ ಬೆಟ್ಟದಲ್ಲಿ 12 ವರ್ಷಗಳಿಗೊಮ್ಮೆ ನೀಲಿ ಹಾಸಿಗೆ ಹಾಸಿದಂತೆ ಅರಳುವ ಕುರುಂಜಿ ಹೂಗಳು ತಾಳ್ಮೆಗೆ ಪ್ರತಿರೂಪದಂತೆ ಭಾಸವಾಗುತ್ತವೆ. ಮನೆಮನೆಗಳಲ್ಲಿರುವ ಗುಲಾಬಿಯೊಂದಿಗಿನ ಮುಳ್ಳು ಸಂತೋಷದೊಂದಿಗೆ ನೋವೂ ಇದ್ದು ಜೀವನ ಸಿಹಿಕಹಿಗಳ ಮಿಶ್ರಣ ಎಂದು ಉಪದೇಶಿಸುವಂತಿರುತ್ತದೆ.

ಖುಷಿಗೂ, ದುಃಖಕ್ಕೂ ಹೂವನ್ನು ನಿರೀಕ್ಷಿಸುವ ಸಂಸ್ಕೃತಿ ನಮ್ಮದು. ಬದುಕಿನಲ್ಲಿ ಹೊಸ ಸಂಬಂಧಗಳು ಉದಯವಾಗುವುದು, ಜೀವ ಮಣ್ಣಿನಲ್ಲಿ ಅಂತ್ಯವಾಗುವುದು ಕೂಡಾ ಹೂವಿನಿಂದಲೇ ಎನ್ನಬಹುದು. ಮಕರಂದ ಹೀರಲು, ಬೀಜ ಪ್ರಸರಣಕ್ಕಾಗಿ ಕೀಟಗಳನ್ನು ಆಕರ್ಷಿಸಲು ಹೂವುಗಳು ಚೆಲುವನ್ನೆಲ್ಲ ತಮ್ಮದಾಗಿಸಿಕೊಂಡಿದ್ದರೂ ಇದಕ್ಕೆ ವ್ಯತಿರಿಕ್ತವಾಗಿ ವೀನಸ್ ಫ್ಲೈ ಟ್ರಾಪ್, ಪಿಚರ್ ಪ್ಲಾಂಟಿನ ಆಕರ್ಷಣೀಯ ಹೂಗಳು ತನ್ನೆಡೆಗೆ ಬಂದ ಜೀವಿಯನ್ನು ಭಕ್ಷಿಸಿಬಿಡುವ ವಿಲಕ್ಷಣ ಗುಣವನ್ನೊಳಗೊಂಡಿವೆ. ಸಸ್ಯಲೋಕದ ಮಾಂಸಾಹಾರಿ ಗಿಡದ ಬಗ್ಗೆ ಪ್ರಕೃತಿಯ ವೈಶಿಷ್ಟ್ಯದ ಕಾರಣಗಳು ಏನೇ ಇದ್ದರೂ ಬಾಹ್ಯರೂಪದಲ್ಲಿ ಸುಂದರವಾಗಿ ಕಂಡದ್ದು ಆಂತರಿಕವಾಗಿಯೂ ಸುಂದರವಾಗಿರುತ್ತದೆ ಎಂದೇನೂ ಇಲ್ಲ ಎಂದು ಮನುಜನಿಗೆ ಪಾಠ ಹೇಳುವಂತೆ ಕಾಣುತ್ತದೆ! ಇನ್ನೊಬ್ಬರ ಮಾತಿಗೆ ಮರುಳಾಗಿ ಜಾಲದೊಳಗೆ ಸಿಲುಕುವ ನೀತಿಯೂ ಇದರಲ್ಲಿದೆ.

ಹೂವುಗಳು ತಮ್ಮ ಸೌಂದರ್ಯ, ಪರಿಮಳದಿಂದಲೆ ಉಳಿದ ಜೀವಿಗಳನ್ನು ಆಕರ್ಷಿಸುತ್ತವೆ ಎಂದೆನಷ್ಟೆ! ಕೆಲವೊಂದು ಹೂವುಗಳ ಪರಿಮಳ, ಲವಲವಿಕೆಗೆ, ಆಹ್ಲಾದತೆಗೆ, ಔಷಧಕ್ಕೆ ಬಳಸುವುದುಂಟು. ಆದರೆ ‘ಕಾರ್ಪ್ಸ್ ಫ್ಲವರ್’ ಎಂಬ ಗಿಡದ ಹೂವು ಕೊಳೆತ ಶವದ ವಾಸನೆಯಂತಿರುತ್ತದೆ. ಇಂಡೋನೇಷ್ಯಾದ ಮಳೆಕಾಡುಗಳಲ್ಲಿ ಕಂಡುಬರುವ ಈ ಹೂವು ಹತ್ತು ವರ್ಷಗಳಿಗೊಮ್ಮೆ ಅರಳುವುದಂತೆ. ಒಳ್ಳೆಯದೇ ಆಯ್ತು, ದಿನಾ ಬಿರಿವ ಹೂವಾದರೆ ನೆಟ್ಟವರ ಗತಿಯನ್ನು ಒಮ್ಮೆ ಊಹಿಸಿ! ಇನ್ನು ಹಿತ್ತಲಿನಲ್ಲಿ ಬೆಳೆಯುವ ಸುವರ್ಣ ಗಡ್ಡೆಯ ಹೂವು ಕೂಡ ಇಂಥದ್ದೇ. ನೋಡಲು ಎಷ್ಟು ಚಂದವೋ ಅದರ ವಾಸನೆ ಅಷ್ಟೇ ವಾಕರಿಕೆ ತರಿಸುವಂತದ್ದು. ಹೂವು ಅರಳಿದ ಕೂಡಲೇ ಸುವರ್ಣದ ಜೀವನವೂ ಅಂತ್ಯವಾದಂತೆ.

ಹೂವು ಅರಳುವುದು ಸಸ್ಯದ ಜೀವಂತಿಕೆಯ ಲಕ್ಷಣ, ಮುಂದೆ ಕಾಯಿ, ಹಣ್ಣು, ಬೀಜ ಎಂದು ಅದರ ಪೀಳಿಗೆಯ ಮುಂದುವರಿಕೆಗೆ ಸಾಕ್ಷಿಯಾಗುತ್ತದೆ. ಆದರೆ ವಿಚಿತ್ರವೆಂದರೆ ಬಿದಿರು ಹೂವು ಬಿಟ್ಟರೆ ಅದರ ಅಂತ್ಯ ನಿಶ್ಚಿತ. 50, 60 ವರ್ಷಗಳಿಗೊಮ್ಮೆ ಹೂವು ಬಿಟ್ಟಾಗ ಊರಿಗೆ ಬರಗಾಲ ಎಂಬ ನಂಬಿಕೆಯಿದೆ. ಹಾಗೆಯೇ ಆಲೂಗಡ್ಡೆ ಗಿಡದ ಹೂವು ಅರಳಿತೆಂದರೆ ಗಿಡ ಬಲಿತಿದೆ ಎಂಬುದಕ್ಕೆ ಸೂಚಕ.

ಕರಾವಳಿಯಲ್ಲಿ ಧಾರಾಳವಾಗಿರುವ ದಾಸವಾಳದ ಗಿಡದ ಹೂವುಗಳಿಂದ ತಂಬುಳಿ, ಗೊಜ್ಜು, ದೋಸೆ, ಸೆಕೇಟು (ನಿಜವಾಗಿ ಅದು ಸೆಕೆ+ಹಿಟ್ಟು, ಇಡ್ಲಿಯಂತೆ ಆವಿಯಲ್ಲಿ ಬೇಯವುದು, ಆಡುಮಾತಿನಲ್ಲಿ ಸೆಕೇಟು ಆಗಿದೆ, ಅಷ್ಟೇ!) ಗುಲಾಬಿ ಹೂವಿನಿಂದ ಗುಲ್ಕನ್‌, ಸಿಹಿಗುಂಬಳದ ಹೂವಿನಿಂದ ದೋಸೆ ಮಾಡಿದರೆ ಮನೆಯಲ್ಲಿ ಹಬ್ಬ. ತರಕಾರಿಯಂತೆ ತೋರುವ ಆದರೆ ಹೂವಿನ ವರ್ಗಕ್ಕೆ ಸೇರಿದ ಬಾಳೆ ಹೂವು, ಈರುಳ್ಳಿ ಹೂವು, ಹೂಕೋಸು, ಬ್ರೊಕೋಲಿಗಳು ಈಗ ರಸಿಕರ ಬಾಯಿತಣಿಸುವಷ್ಟು ರೀತಿಯಲ್ಲಿ ಅಡುಗೆಯಲ್ಲಿ ಸ್ಥಾನ ಪಡೆಯುತ್ತಿವೆ. ಆದರೆ ಕ್ಯಾಲೋಟ್ರೋಪಿಸ್‌, ಬಿಳಿ ಓಲಿಯಾಂಡರ್‌, ನಾರ್ಸಿಸಸ್‌, ಲಂಟಾನ, ಪಾರ್ಥೇನಿಯಂ ಮುಂತಾದ ಗಿಡಗಳ ಹೂವುಗಳು ಎಷ್ಟೇ ಆಕರ್ಷಕವಾಗಿದ್ದರೂ ಅವುಗಳ ಮೈಯೆಲ್ಲಾ ವಿಷಕಾರಿಯಾಗಿದ್ದು ಅಲರ್ಜಿ, ವಾಕರಿಕೆ, ಉಸಿರಾಟ ಸಂಬಂಧಿ ತೊಂದರೆಗಳನ್ನು ತರುತ್ತವೆ.

‘ಬೆಳ್ಳಗಿರುವುದೆಲ್ಲ ಹಾಲಲ್ಲ’ ಎಂಬಂತೆ ಹೂವುಗಳೆಲ್ಲವೂ ನಯವಾದ ಸೃಷ್ಟಿಯಾಗಿರದೆ ಹಾವಿನಂಥ ಅಪಾಯಕಾರಿ ಗುಣಗಳು ಇರುತ್ತವೆ. ಕಾಣುವ ಸೌಂದರ್ಯದ ಹಿಂದೆ ಗೋಮುಖ ವ್ಯಾಘ್ರನಂತೆ ಅರಿಯದ ಮುಖವಾಡ ಇರಬಹುದು. ಗುಣವೆನ್ನುವುದು ಮುಖದಲ್ಲಿಲ್ಲ, ಅಂತರಂಗದಲ್ಲಿರಬೇಕು ಎಂದು ಹೂವುಗಳು ಮನುಜನಿಗೆ ಪಾಠ ಹೇಳುವಂತಿದೆ. ಏನಂತೀರಿ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು