ಶನಿವಾರ, ಸೆಪ್ಟೆಂಬರ್ 25, 2021
24 °C

ಚಳವಳಿ ಹಿಂದಿನ ‘ಸ್ತ್ರೀಶಕ್ತಿ’

ಗಾಯತ್ರಿ ನಾವಡ Updated:

ಅಕ್ಷರ ಗಾತ್ರ : | |

ಭಾರತದ ಸ್ವಾತಂತ್ರ್ಯ ಚಳವಳಿಯ ಇತಿಹಾಸವನ್ನು ಅವಲೋಕಿಸಿದರೆ, ಮಹಿಳಾ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ನಮ್ಮ ರಾಜಕೀಯ ದಾಖಲೆಗಳಲ್ಲಿ ಕಾಣಸಿಗುವುದು ಅನಿಬೆಸೆಂಟ್, ಸರೋಜಿನಿ ನಾಯ್ಡು, ಕಮಲಾದೇವಿ ಚಟ್ಟೋಪಾಧ್ಯಾಯ, ವಿಜಯಲಕ್ಷ್ಮಿ ಪಂಡಿತ್‍ ಅವರಂತಹ ನಾಲ್ಕಾರು ಪ್ರಮುಖ ಹೆಸರುಗಳು. ಇವರು ಪುರುಷ ಮಾದರಿಯ ರಾಜಕೀಯ ಚಳವಳಿಯಲ್ಲಿ ಪಾಲ್ಗೊಂಡವರು ಎನ್ನುವುದು ಗಮನಾರ್ಹ. ಅಂದರೆ ನಮ್ಮ ಚಳವಳಿಯ ತಾತ್ವಿಕತೆಯು ಪುರುಷ ಹೋರಾಟಗಾರರು ಮತ್ತು ಅವರ ಹೋರಾಟದ ವಿಧಾನವನ್ನು ಪ್ರಧಾನವಾಗಿ ಗ್ರಹಿಸಿದೆ ಮತ್ತು ದಾಖಲಿಸಿದೆ.

ಸ್ವಾತಂತ್ರ್ಯ ಚಳವಳಿಯಲ್ಲಿ ನೇರವಾಗಿ ಭಾಗಿಯಾದ ಕರ್ನಾಟಕದ ಮಹಿಳೆಯರ ಸಂಖ್ಯೆ ಕಡಿಮೆ ಎನಿಸಿದರೂ ಗಾಂಧೀಜಿಯವರ ರಚನಾತ್ಮಕ ಕಾರ್ಯಕ್ರಮಗಳಲ್ಲಿ ಇಲ್ಲಿನ ಮಹಿಳೆಯರದೇ ಪ್ರಧಾನ ಪಾತ್ರವಾಗಿತ್ತು. ರಾಷ್ಟ್ರೀಯ ಚಳವಳಿಯ ವಿಧಾಯಕ ಕಾರ್ಯಕ್ರಮಗಳಾದ ಖಾದಿ ಪ್ರಚಾರ, ಪಾನನಿಷೇಧ, ಹಿಂದಿ ಪ್ರಚಾರ, ಸ್ವದೇಶಿ ಚಳವಳಿ, ಅಸ್ಪೃಶ್ಯತಾ ನಿವಾರಣೆ, ಸ್ತ್ರೀ ಜಾಗೃತಿ ಚಳವಳಿಯಲ್ಲಿ ಮಹಿಳೆಯರು ಸ್ಪಷ್ಟವಾದ ಭೂಮಿಕೆಯನ್ನು ನಿರ್ವಹಿಸಿದರು. ಮಹಿಳೆಯರ ಈ ನೆಲೆಯ ಸಾಮೂಹಿಕ ಪಾಲ್ಗೊಳ್ಳುವಿಕೆ ಇಲ್ಲದಿದ್ದಲ್ಲಿ ಭಾರತದ ಸ್ವಾತಂತ್ರ್ಯ ಇತಿಹಾಸ ಬೇರೆ ರೀತಿಯೇ ಆಗಿರುತ್ತಿತ್ತು ಎನ್ನುವುದನ್ನು ನಾವು ಗಮನಿಸಬೇಕು.

ವಾಸ್ತವವಾಗಿ ಜನಸಾಮಾನ್ಯರು, ಮಹಿಳೆಯರು ರಾಜಕೀಯ ಹಾಗೂ ರಚನಾತ್ಮಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಈ ಚಳವಳಿಯನ್ನು ಒಂದು ಜನಾಂದೋಲನವಾಗಿ ರೂಪಿಸಿದರು. ಹಾಗೆ ನೋಡಿದರೆ ಈ ಜನಾಂದೋಲನವೇ ಬ್ರಿಟಿಷರನ್ನು ಕಂಗಾಲುಗೊಳಿಸಿದ್ದು. ಯಾಕೆಂದರೆ ಬ್ರಿಟಿಷರಿಗೆ ಶಸ್ತ್ರಾಸ್ತ್ರ ಯುದ್ಧ, ಹಿಂಸೆಯ ಯುದ್ಧತಂತ್ರ ಪರಿಚಿತವಾಗಿತ್ತೇ ಹೊರತು ಭಾರತೀಯ ಅಹಿಂಸೆ, ಉಪವಾಸ ಸತ್ಯಾಗ್ರಹ, ಸಾಮೂಹಿಕತೆಯನ್ನು ಎದುರಿಸುವ ತಂತ್ರಗಾರಿಕೆ ತಿಳಿದಿರಲಿಲ್ಲ.

ಈ ಸೈದ್ಧಾಂತಿಕತೆಯಲ್ಲಿ ಸ್ವಾತಂತ್ರ್ಯ ಚಳವಳಿಯಲ್ಲಿ ಕರ್ನಾಟಕದ ಮಹಿಳಾ ಹೋರಾಟವನ್ನು ಮೂರು ಮುಖಗಳಲ್ಲಿ ಕಂಡುಕೊಳ್ಳಬಹುದು. 1. ರಾಜಕೀಯ ಚಳವಳಿಗಾರರಾಗಿ 2. ರಚನಾತ್ಮಕ ಕಾರ್ಯಕ್ರಮದ ನಿರ್ವಾಹಕರಾಗಿ 3. ಈ ಎರಡೂ ಚಳವಳಿಗಳ ಪೂರಕ ಪಾತ್ರಗಳಾಗಿ.

ಮೊದಲ ಹಂತದಲ್ಲಿ ಕಮಲಾದೇವಿ ಚಟ್ಟೋಪಾಧ್ಯಾಯ, ಯಶೋಧರಾ ದಾಸಪ್ಪ, ಉಮಾಬಾಯಿ ಕುಂದಾಪುರ, ಕಾರ್ನಾಡು ಸೋದರಿಯರು, ಕೃಷ್ಣಾಬಾಯಿ ಪಂಜೀಕರ್, ಸುಬ್ಬಮ್ಮ ಜೋಯಿಸ, ಶಾಂತಾಬಾಯಿ ಕರಮರಕರ ಅವರಂತಹ ಮೇಲು ನೆಲೆಯ ಮಹಿಳೆಯರು ರಾಷ್ಟ್ರ ನಾಯಕರ ಪ್ರಭಾವಕ್ಕೆ ಒಳಗಾಗಿ ರಾಷ್ಟ್ರೀಯ ಚಳವಳಿಗೆ ಧುಮುಕಿದರು. ಕರಾವಳಿ ನೆಲವು ಉಪ್ಪಿನ ಸತ್ಯಾಗ್ರಹದ ಆರಂಭ ಕೇಂದ್ರವಾಯಿತು. ಉತ್ತರ ಕನ್ನಡದಲ್ಲಿ ಶಾಂತಾಬಾಯಿ ಕರಮರಕರ, ಉಮಾಬಾಯಿ ಕುಂದಾಪುರ, ಸೀತಾಬಾಯಿ ಸರಾಫ್, ಆನಂದಿಬಾಯಿ ಹಮ್ಮತೀಕರ, ಅಥಣಿಯ ಅಂಬಕ್ಕ ಬಳೆಗಾರ, ಅವಿಭಜಿತ ದಕ್ಷಿಣ ಕನ್ನಡ ಭಾಗದಲ್ಲಿ ಕಮಲಾದೇವಿ, ರಾಧಾ ಕಾರ್ನಾಡ್, ಸುಗುಣಾ ಕಾರ್ನಾಡ್ ಮೊದಲಾದವರು ಈ ಚಳವಳಿಯ ಮುನ್ನೆಲೆಯಲ್ಲಿದ್ದರು. ಉಪ್ಪಿನ ತಯಾರಿ ಹಾಗೂ ಮಾರಾಟಗಳಲ್ಲಿ ಮಹಿಳೆಯರು ಸಾಮೂಹಿಕವಾಗಿ ಪಾಲ್ಗೊಂಡರು.

ಕರನಿರಾಕರಣ ಹಾಗೂ ಕಾನೂನುಭಂಗ ಚಳವಳಿಯ ಸಂದರ್ಭದಲ್ಲಿ ಧಾರವಾಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಹಿಳಾ ಚಳವಳಿ ತೀವ್ರ ಸ್ವರೂಪವನ್ನು ಪಡೆದುಕೊಂಡಿತು. ಕರ ನಿರಾಕರಣಗಾರರನ್ನು ಬಂಧಿಸಿ ಸರ್ಕಾರ ಅವರ ಆಸ್ತಿಪಾಸ್ತಿಯನ್ನು ವಶಪಡಿಸಿಕೊಂಡು ಕುಟುಂಬಗಳನ್ನು ಹೊರಹಾಕಿದಾಗ, ಗ್ರಾಮೀಣ ಮಹಿಳೆಯರು ಸಾಂಘಿಕ ನೆಲೆಯಲ್ಲಿ ಚಳವಳಿಗೆ ಇಳಿದರು. ಹರಾಜಿನ ಸಂದರ್ಭಗಳಲ್ಲಿ ಸರ್ಕಾರದ ವಿರುದ್ಧ ಹಾಗೂ ಹರಾಜಿನಲ್ಲಿ ವಸ್ತುಗಳನ್ನು ಕೊಂಡವರ ಮನೆಗಳ ಮುಂದೆ ಉಪವಾಸ ಸತ್ಯಾಗ್ರಹ ನಡೆಸಿದರು. ಉತ್ತರ ಕನ್ನಡ ಭಾಗದಲ್ಲಿ ರಮಾಬಾಯಿ ಪ್ರಭು, ಭಾಗೀರಥಿ ಬಾಯಿ ಪುರಾಣಿಕ, ದೇವಯಾನಿ ಹರಿ ಪೈ, ಲಕ್ಷ್ಮೀಬಾಯಿ ರಂಗಪ್ಪ, ಮಹಾದೇವಿ ನಾರಾಯಣ ಹೆಗಡೆ ಮುಂತಾದವರು, ಶಿವಮೊಗ್ಗ ಜಿಲ್ಲೆಯ ಗೌರಮ್ಮ, ಕಾವೇರಮ್ಮ, ದುಗ್ಗಮ್ಮ, ಭಾಗೀರಥಿಯಮ್ಮ, ಸುಬ್ಬಮ್ಮ ಜೋಯಿಸರು ನಡೆಸಿದ ಹೋರಾಟ ಅತ್ಯಂತ ಯಶಸ್ವಿಯಾಯಿತು.

ಅರಣ್ಯ ಕಾಯ್ದೆ, ಈಚಲು ಮರ ಕಡಿಯುವ ಪ್ರಕ್ರಿಯೆಯಲ್ಲಿ ಕರ್ನಾಟಕದ ಮಹಿಳೆಯರು ಸ್ಪಷ್ಟ ಪಾತ್ರ ವಹಿಸಿದರು. ಅರಣ್ಯ ಕಾನೂನನ್ನು ಮುರಿದು ಮರ ಕಡಿದ ಬಿಸಿಲಕೊಪ್ಪ ಮುಕ್ಕುಂಟೆಯವರನ್ನು ದಸ್ತಗಿರಿ ಮಾಡಿದಾಗ ಅವರ ಹೆಂಡತಿ ತಾವೂ ಒಂದು ಮರ ಕಡಿದು ತನ್ನನ್ನೂ ದಸ್ತಗಿರಿ ಮಾಡಬೇಕೆಂದು ಹಟ ತೊಟ್ಟರು. 

ಬಳ್ಳಾರಿ ಸಿದ್ಧಮ್ಮ ಮತ್ತು ನಾಗರತ್ನಮ್ಮ ಹಿರೇಮಠ ಅವರ ಹಿರಿತನದಲ್ಲಿ ಚಿತ್ರದುರ್ಗ, ದಾವಣಗೆರೆ, ತುಮಕೂರು, ಶಿರಾ ಭಾಗಗಳಲ್ಲಿ ಈಚಲು ಮರ ಕಡಿಯುವ ಯಜ್ಞ ಒಳ್ಳೆಯ ಪ್ರತಿಕ್ರಿಯೆಯನ್ನು ತಂದಿತ್ತಿತ್ತು.

1938ರ ಶಿವಪುರ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪುರುಷ ನಾಯಕರ ದಸ್ತಗಿರಿಯಾದಾಗ ಮಹಿಳಾ ತಂಡ ತೋರಿದ ಧೈರ್ಯ ಸ್ಮರಣೀಯವಾದದ್ದು. ಈ ಸಮಾವೇಶವೇ ಮೈಸೂರು ಭಾಗದಲ್ಲಿ ಮಹಿಳಾ ಚಳವಳಿಯ ತೀವ್ರ ಚಟುವಟಿಕೆಗೆ ನಾಂದಿಯಾಯಿತು. ವಿದುರಾಶ್ವತ್ಥದಲ್ಲಿ ನಿಯೋಜಿತವಾದ ಮೈಸೂರು ಕಾಂಗ್ರೆಸ್ ಸಮಾವೇಶದಲ್ಲಿ ಭಾಷಣ ಮಾಡದಂತೆ ತಮ್ಮ ಮೇಲೆ ಹೇರಿದ ನಿಷೇಧವನ್ನು ಕಮಲಾದೇವಿ ಚಟ್ಟೋಪಾಧ್ಯಾಯ ಧಿಕ್ಕರಿಸಿದರು. ‘ಧ್ವಜವನ್ನು ಗೌರವಿಸುವುದೆಂದರೆ ರಾಷ್ಟ್ರವನ್ನು ಗೌರವಿಸುವುದು ಮತ್ತು ರಾಷ್ಟ್ರವನ್ನು ಗೌರವಿಸುವುದೆಂದರೆ ಅದರ ರಕ್ಷಣೆಗಾಗಿ ಹೋರಾಡುವುದು ಅನಿವಾರ್ಯ’ ಎಂದು ಉದ್ಘೋಷಿಸಿ, ಮಹಿಳೆಯರು ರಾಜಕೀಯ ಹಾಗೂ ಸಾಮಾಜಿಕ ಚಳವಳಿಯಲ್ಲಿ ಭಾಗವಹಿಸಬೇಕಾದ ಅಗತ್ಯವನ್ನು ತಿಳಿಸಿದರು. ವಿದುರಾಶ್ವತ್ಥದಲ್ಲಿ ಗರ್ಭಿಣಿ ಗೌರಮ್ಮನನ್ನು ಕೊಂದ ಪ್ರಕರಣ ಮಹಿಳಾ ಚಳವಳಿಗೆ ಬೆಂಕಿ-ಗಾಳಿಯ ತೀವ್ರತೆಯನ್ನು ತಂದುಕೊಟ್ಟಿತು. ಈಸೂರು ಘಟನೆಯಲ್ಲಿ ಬ್ರಿಟಿಷರ ಕ್ರೌರ್ಯಕ್ಕೆ ಸಿಲುಕಿ ಜೀವಾವಧಿ ಶಿಕ್ಷೆಗೆ ಒಳಗಾಗಿ ದೇಶಕ್ಕಾಗಿ ಬಲಿಯಾದವರು ಹಾಲಮ್ಮ ಮತ್ತು ಪಾರ್ವತಮ್ಮ.

ಗಾಂಧೀಜಿಯವರ ವೈಯಕ್ತಿಕ ಸತ್ಯಾಗ್ರಹದ ಮಾದರಿಯು ಕರ್ನಾಟಕದ ಮಹಿಳೆಯರನ್ನು ತೀವ್ರವಾಗಿ ಸೆಳೆಯಿತು. ಯುದ್ಧ ವಿರೋಧಿ ಘೋಷಣೆ, ಪಿಕೆಟಿಂಗ್, ಸರ್ಕಾರಿ ಕಚೇರಿಗಳ ಮೇಲೆ ದಾಳಿ ಮಾಡಿದ ಪಡೆಗಳಲ್ಲಿ ಕಾರ್ಮಿಕ ಹಾಗೂ ಕೆಳ ಹಂತದ ಮಹಿಳೆಯರು ಅಪಾರ ಸಂಖ್ಯೆಯಲ್ಲಿ ಸೇರಿಕೊಂಡರು. ಕರಾವಳಿ ಪರಿಸರದಲ್ಲಿ ಕಮಲಾದೇವಿ, ಕಮಲಾ ಅಧಿಕಾರಿ, ಉತ್ತರ ಕರ್ನಾಟಕದ ಪ್ರೆಸಿಡೆನ್ಸಿ ಪ್ರದೇಶದಲ್ಲಿ ರಮಾಬಾಯಿ ಯಾಳಗಿ, ಶಕುಂತಳಾ ದಬಾಡೆ, ಪದ್ಮಾವತಿ ಬಿದರಿ, ಸತ್ಯಭಾಮಾಬಾಯಿ ಪ್ರಭು ಈ ಸತ್ಯಾಗ್ರಹದ ಕ್ರಿಯಾಶಕ್ತಿಯಾಗಿ ದುಡಿದರು. ತಂಗೆವ್ವ ಹೊಳೆಯಾಚೆ, ತಂಗೆವ್ವ ಬಡಿಗೇರ, ಬಾಳವ್ವ, ಕಾಶವ್ವ ಹೊಸಮನಿ, ಸರಸ್ವತಿಬಾಯಿ ಚೌಗುಲೆ, ನಿಂಗವ್ವ ಚಿಕ್ಕೋಡಿಯವರ ಮಹಿಳಾ ತಂಡವು ಗೋಕಾವಿ, ಸವದತ್ತಿಗಳಲ್ಲಿ ಪೊಲೀಸ್‌ ಬಂದೋಬಸ್ತಿನ ನಡುವೆಯೇ ಸರ್ಕಾರಿ ಕಚೇರಿಗಳಿಗೆ ನುಗ್ಗಿ ದಾಖಲೆ ಪತ್ರಗಳನ್ನು ನಾಶ ಮಾಡಿತು. ಹೇಮಲತಾ ಶಿರ್ನೋಲಿಕರರ ತಂಡ ಧಾರವಾಡ ಜಿಲ್ಲಾ ಮ್ಯಾಜಿಸ್ಟ್ರೇಟರ ನ್ಯಾಯಾಲಯ ಹೊಕ್ಕು ಪಿಕೆಟಿಂಗ್ ನಡೆಸಿತು.

ಕ್ವಿಟ್ ಇಂಡಿಯಾ ಚಳವಳಿಯ ಕಾಲಕ್ಕೆ, ಗಾಂಧೀಜಿ ಹಾಗೂ ಅನೇಕ ಪ್ರಮುಖ ರಾಷ್ಟ್ರ ನಾಯಕರ ದಸ್ತಗಿರಿಯಾಗುತ್ತಿದ್ದಂತೆ ಕರ್ನಾಟಕದಲ್ಲಿ ಚಳವಳಿ ಬಿರುಸಾಯಿತು. ದೂರವಾಣಿ, ತಾರು ತಂತಿಗಳನ್ನು ಕತ್ತರಿಸುವುದು, ರೈಲು ಹಳಿಯ ನಾಶ, ಸರ್ಕಾರಿ ಕಚೇರಿಗಳಿಗೆ ಬೆಂಕಿ, ಕೈಬಾಂಬು ಸಿಡಿಸುವುದು, ಖಜಾನೆ ಲೂಟಿಯಂತಹ ಗುಪ್ತ ಕಾರ್ಯಾಚರಣೆಗಳಲ್ಲಿ ಮಹಿಳೆಯರು ಸಕ್ರಿಯರಾಗಿದ್ದರು.

ಈ ರೀತಿಯ ರಾಜಕೀಯ ಚಳವಳಿ ಒಂದು ಬಗೆಯದಾದರೆ, ಗಾಂಧಿ ಚಳವಳಿಯನ್ನು ಯಶಸ್ವಿಗೊಳಿಸುವಲ್ಲಿ ಅವರ ವಿಧಾಯಕ ಕಾರ್ಯಕ್ರಮಗಳು ಚಳವಳಿಯ ವ್ಯಾಪಕತೆಯನ್ನು ಪಡೆದುಕೊಂಡುದು ಇನ್ನೊಂದು ಬಗೆಯದು. ನನ್ನ ದೃಷ್ಟಿಯಲ್ಲಿ ಎರಡನೆಯ ಅಂಶದ ದೇಣಿಗೆಯೇ ಹೆಚ್ಚಿನದು. ಈ ಚಳವಳಿಯಲ್ಲಿ ಬಹುಸಂಖ್ಯೆಯಲ್ಲಿ ಮಹಿಳೆಯರು ಮುಂಚೂಣಿಯಲ್ಲಿ ಕಾಣಿಸಿಕೊಂಡರು. ಸ್ವದೇಶಿ ಚಳವಳಿಯಲ್ಲಿ ಮನೆಮನೆಗೆ ಹೋಗಿ ವಿದೇಶಿ ವಸ್ತುಗಳನ್ನು ಸಂಗ್ರಹಿಸಿ ಸುಟ್ಟರು. ವಿದೇಶಿ ವಸ್ತುಗಳ ಅಂಗಡಿಗಳ ಮುಂದೆ ಪಿಕೆಟಿಂಗ್ ನಡೆಸಿದರು. ಸ್ವದೇಶಿ ವಸ್ತ್ರಗಳತ್ತ ಜನರನ್ನು ಪ್ರೇರೇಪಿಸಿದರು. ಸ್ವರಾಜ್ಯ ನಿಧಿಗಾಗಿ ಸಾವಿರಾರು ಮಹಿಳೆಯರು ತಮ್ಮ ಆಭರಣಗಳನ್ನು ಕೊಟ್ಟರು. ಸೂತ್ರಯಜ್ಞ, ಖಾದಿ ತಯಾರಿ, ಹಿಂದಿ ಪ್ರಚಾರ ಕಾರ್ಯಕ್ರಮ, ಅಸ್ಪೃಶ್ಯತಾ ನಿವಾರಣೆ, ಹರಿಜನೋದ್ಧಾರ ಹಾಗೂ ಪಾನ ನಿಷೇಧ ಚಳವಳಿಗಳಲ್ಲಿ ಮಹಿಳೆಯರು ನಿರ್ವಹಿಸಿದ ಕಾರ್ಯಭಾರವನ್ನು ಪ್ರತ್ಯೇಕವಾಗಿ ಅಧ್ಯಯನ ಮಾಡಬೇಕಾದ ಅಗತ್ಯವಿದೆ.

ಪುರುಷರ ಭೂಗತ ಚಟುವಟಿಕೆಯ ಚಾಲನಾ ಶಕ್ತಿಯಾಗಿದ್ದವರು ಮಹಿಳೆಯರು. ಅನೇಕ ಭೂಗತರಿಗೆ, ಸ್ವಯಂ ಸೇವಕರಿಗೆ ಆಶ್ರಯ ನೀಡಿದವರು, ಅವರ ಗುಪ್ತ ಸಂದೇಶಗಳನ್ನು, ಕರಪತ್ರಗಳನ್ನು ತಮ್ಮ ಕಟ್ಟಿಗೆ ಹೊರೆ, ಹುಲ್ಲು ಹೊರೆಗಳ ಮಧ್ಯೆ ಇಟ್ಟು ಮುಟ್ಟಿಸುತ್ತಿದ್ದವರು ಗ್ರಾಮೀಣ ಮಹಿಳೆಯರು. ಪ್ರತಿಬಂಧಕಾಜ್ಞೆ ಇರುವ ಪತ್ರಿಕೆಗಳನ್ನು, ಸ್ಫೋಟಕ ವಸ್ತುಗಳನ್ನು ರಕ್ಷಿಸಿ ವಿತರಿಸುವುದು, ಆಂದೋಲನಕ್ಕೆ, ಚಳವಳಿಗಾರರ ಕುಟುಂಬಗಳ ನಿರ್ವಹಣೆಗೆ ಮನೆಮನೆಗೆ ಹೋಗಿ ಧನ, ಧಾನ್ಯ ಸಂಗ್ರಹಿಸುವ ಮತ್ತು ಹಂಚುವ ಕಾರ್ಯವನ್ನು ಕೈಗೊಂಡರು.

ಮನೆಮನೆಗಳಲ್ಲಿ ತಮ್ಮ ಗಂಡ, ಮಕ್ಕಳನ್ನು ಸ್ವಾತಂತ್ರ್ಯ ಚಳವಳಿಗೆ ಇತ್ತು ಮಾನ, ಅಪಮಾನ, ಸಂಕಷ್ಟಗಳನ್ನು ಎದುರಿಸಿದರು. ತಮ್ಮ ಕುಟುಂಬದ ಗಂಡಸರನ್ನು ನೇಣುಗಂಬದ ಮುಂದೆ ನಿಲ್ಲಿಸಿದಾಗ, ಆ ಬಲಿದಾನವನ್ನು ಜೈಕಾರ ಹಾಕಿ ಸ್ವೀಕರಿಸಿದ ಅವರ ರಾಷ್ಟ್ರಪ್ರೇಮ, ಬದುಕನ್ನು ದೇಶಕ್ಕೆ ಇತ್ತ ಅವರ ತ್ಯಾಗ, ಛಲ ಇಡಿಯ ಸ್ವಾತಂತ್ರ್ಯ ಚಳವಳಿಯಲ್ಲಿ ಅತ್ಯಂತ ಮಹತ್ವದ್ದು. ಇಂತಹ ‘ಮನೆಯೊಳಗಿನ ಹೆಣ್ಣು’ಗಳ ಹೋರಾಟದ ಸ್ಮೃತಿಗಳು, ವಿವರಗಳು ದಾಖಲಾಗಬೇಕಾಗಿದೆ. ಹಾಗಾದಾಗ ನಮ್ಮ ಸ್ವಾತಂತ್ರ್ಯ ಹೋರಾಟಕ್ಕೆ, ಮಹಿಳಾ ಚಳವಳಿಯ ಇತಿಹಾಸಕ್ಕೆ ನಿಜವಾದ ವ್ಯಾಪ್ತಿ, ಅರ್ಥ ಸಿಗುತ್ತದೆ. ದುರಂತ ಎಂದರೆ, ನಮ್ಮ ಸ್ವಾತಂತ್ರ್ಯ ಚಳವಳಿಯ ಹೋರಾಟದ ಪರಿಕಲ್ಪನೆ ಪುರುಷ ನೆಲೆಯ ಸಾರ್ವಜನಿಕ ಜಗತ್ತನ್ನಷ್ಟೇ ಚಳವಳಿಯ ಚೌಕಟ್ಟಿನಲ್ಲಿ ಸ್ವೀಕರಿಸಿದೆ, ‘ಮನೆಯೊಳಗಿನ ಹೆಣ್ಣು’ಗಳ ಎಲ್ಲ ಹೋರಾಟವನ್ನು ಚಳವಳಿಯ ಚೌಕಟ್ಟಿನಿಂದ ಹೊರಗಿಟ್ಟಿದೆ. ಹೀಗಾಗಿ, ಸ್ವಾತಂತ್ರ್ಯ ಚಳವಳಿಯ ಪರಿಕಲ್ಪನೆಯನ್ನು ಮರುರಚಿಸಬೇಕಾಗಿದೆ. ಆಗ ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳಾಶಕ್ತಿಯ ನಿಜದ ಇತಿಹಾಸ ಅನಾವರಣಗೊಳ್ಳುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು