ಬುಧವಾರ, ಆಗಸ್ಟ್ 4, 2021
20 °C

ಲಾಕ್‌ಡೌನ್‌ ಸಂಕಷ್ಟದ ಮಧ್ಯೆ ಬದುಕು ನೇಯ್ದ ನೇಕಾರ ‘ಪ್ರಭು’

ಹರ್ಷವರ್ಧನ ವಿ. ಶೀಲವಂತ Updated:

ಅಕ್ಷರ ಗಾತ್ರ : | |

Prajavani

ಸಹಸ್ರಾರು ಸೀರೆ ನೇಯ್ದ ನೇಕಾರ ‘ಪ್ರಭು’, ಕೋವಿಡ್ - 19 ಲಾಕ್‍ಡೌನ್‍ನಿಂದ ತನ್ನವರಿಗಾಗಿ ಕಾಯಿಪಲ್ಯ ಮಾರುತ್ತ, ಸಾಮಾಜಿಕ ಸಂಬಂಧಗಳನ್ನು ಹುರಿಗೊಳಿಸಿ ಹೊಸೆದು, 12 ರೈತ ಕುಟುಂಬಗಳಿಗೂ ಆಸರೆಯಾದ ಪರಿ ಪ್ರೇರಣಾದಾಯಿ.

ಬೆಳಗಾವಿ ಜಿಲ್ಲೆ, ಹುಕ್ಕೇರಿ ತಾಲೂಕು ಬಡಕುಂದ್ರಿ ಎಂಬ ಪುಟ್ಟ ಹಳ್ಳಿಯ ಹೈದ ಪ್ರಭು ಚಿಗರಿ. ಓದಿದ್ದು ಪಿಯುಸಿ. ಮನೆತನದ ನೇಕಾರಿಕೆ ವೃತ್ತಿ ಅವಲಂಬಿಸಿ, ಮಹಾರಾಷ್ಟ್ರದ ಈಚಲಕರಂಜಿವರೆಗೆ ಒಡಹುಟ್ಟಿದ ತಮ್ಮನನ್ನು ಬೆನ್ನಿಗಂಟಿಸಿಕೊಂಡು, ಗುಳೆ ಹೋಗಿ ಐದು ವರ್ಷ ದುಡಿದವರು.

ಇಬ್ಬರಿಗೂ ಮದುವೆಯಾದ ಬಳಿಕ, ಅಪ್ಪನ ಸಹಕಾರದಿಂದ, ಕೈಗಡ ಸಾಲ ತಂದು ಮನೆಯಲ್ಲಿ ತಲಾ ಒಂದು ಮಷೀನ್ ಮಗ್ಗ ಹಾಕಿಕೊಂಡಿದ್ದಾಯಿತು. ಜೊತೆಗೆ ಇದ್ದೊಂದು ಎಕರೆ ಹೊಲದಲ್ಲಿ ಕಾಯಿಪಲ್ಯ ಬೆಳೆಯಲು ಶುರು ಮಾಡಿದರು. 10 ಜನರ ಕೂಡು ಕುಟುಂಬಕ್ಕೆ ‘ಕೈಗೆ-ಬಾಯಿಗೆ’ ಸರಿ ಹೋಗುವಷ್ಟು ಆದಾಯ ದೊರೆಯುತ್ತಿತ್ತು. ಪ್ರಭು ಹೇಳುವಂತೆ ‘ಉಂಡುಡಾಕ ಅಷ್ಟಿತ್ರಿ..’

ಬೆಳಗಾವಿ ಜಿಲ್ಲೆಯ ಯಮಕನಮರಡಿ ಹಾಗೂ ಕಾಕತಿಯಿಂದ ರೇಷ್ಮೆ ನೂಲು ತಂದು ಸೀರೆ ನೇಯಬೇಕು. ಅಣ್ಣ-ತಮ್ಮ ಕೂಡಿ ದುಡಿದರೆ, ದಿನವೊಂದಕ್ಕೆ ಐನೂರು ರೂಪಾಯಿ ದುಡಿಮೆ. ‘ಲಾಕ್‍ಡೌನ್’ ಘೋಷಣೆಯಾಗುತ್ತಿದ್ದಂತೆ, ರೇಷ್ಮೆ ನೂಲು ಬಡಕುಂದ್ರಿಗೆ ತರುವುದು ಸಾಧ್ಯವೇ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಯಿತು. ಇಬ್ಬರಿಗೂ ತಲಾ ಎರಡು ಪುಟ್ಟ ಮಕ್ಕಳು ಬೇರೆ. ಪರ್ಯಾಯ ಉದ್ಯೋಗ ಹುಡುಕಬೇಕಾದ ಅನಿವಾರ್ಯತೆ.

ಆರ್ಥಿಕ ನೆರವಿನ ಭರವಸೆ

ಪ್ರಭು ಚಿಗರಿ ಅವರು ಬಡ್ಡಿ ಮೇಲೆ ಕೈಗಡ ಸಾಲ ತಂದು, ಪರ್ಯಾಯ ಉದ್ಯೋಗ ಆರಂಭಿಸಿದ ವಿಷಯ ತಿಳಿದ ಇನಿಷಿಯೇಟಿವ್ಸ್ ಫಾರ್ ಡೆವಲಪ್‍ಮೆಂಟ್ ಆಫ್ ಫಾರ್ಮರ್ಸ್(ಐಡಿಎಫ್) ಸಂಸ್ಥೆ ಅವರಿಗೆ ಹಣಕಾಸಿನ ನೆರವು ನೀಡಲು ಮುಂದಾಗಿದೆ.

ಸುಪ್ರಜಾ ಫೌಂಡೇಷನ್ ಸಹಯೋಗದಲ್ಲಿ ಐಡಿಎಫ್ ವತಿಯಿಂದ ಫಾರ್ಮರ್ಸ್ ಪ್ರೊಡ್ಯುಸಿಂಗ್ ಕಂಪನಿ (ಎಫ್.ಪಿ.ಸಿ‌) ಮಾನದಂಡದಡಿ ಪ್ರಭು ಅವರಿಗೆ ಹಣ ಸಹಾಯ ದೊರಕಿಸಲಾಗುತ್ತಿದೆ. ನರ್ಸರಿ ಮತ್ತು ಬೀಜೋತ್ಪಾದನೆ, ಸೊಪ್ಪಿನ ಕಲ್ಪ ಅಥವಾ ರಸೌಷಧಿ ಮತ್ತು ರೈತಾಪಿ ವರ್ಗದಿಂದ ತಮ್ಮ ಉತ್ಪನ್ನಗಳ ಮೌಲ್ಯವರ್ಧನೆಗೆ ಈ ಹಣ ಸಹಾಯ ಒದಗಿಸಲಾಗುತ್ತಿದೆ. ತಲಾ ರೈತರ ಅವಶ್ಯಕತೆ ಆಧರಿಸಿ ಯೋಜನಾ ವೆಚ್ಚ ಪ್ರತ್ಯೇಕವಾಗಿ ಸಿದ್ಧಗೊಳ್ಳುತ್ತಿದ್ದ, ಮುಂದಿನ ಎರಡು ವಾರಗಳಲ್ಲಿ ಕೋವಿಡ್ -19 ಲಾಕ್ ಡೌನ್ ನಂತರದ ಕೃಷಿಕರ ಪುನರುತ್ಥಾನಕ್ಕೆ ಬೀಜ ಧನದಂತೆ ನೇರ ಖಾತೆಗೆ ಹಣ ಜಮೆಯಾಗಲಿದೆ. ಹುಕ್ಕೇರಿ ಐ.ಡಿ.ಎಫ್ ಕಾರ್ಯವ್ಯಾಪ್ತಿಯಲ್ಲಿಲ್ಲ. ಆದರೂ ಅವರನ್ನು ಈ ಯೋಜನೆ ಅಡಿ ಸೇರಿಸಲಾಗಿದೆ ಎನ್ನುತ್ತಾರೆ ಐಡಿಎಫ್‌ ಸಂಸ್ಥೆಯ ರಾಯಭಾಗ ಕ್ಷೇತ್ರದ ಆಡಳಿತಾಧಿಕಾರಿ ಆನಂದ ಚೌಗಲಾ.


ಚೌಕಾಸಿಯಿಲ್ಲದೆ ತರಕಾರಿ ವ್ಯಾಪಾರ

ಅಪ್ಪ ಹೇಳಿದ್ರು.. ‘ಏ ತಮ್ಮ.. ನಮ್ಮ ಹೊಲದಾಗಿನ ಬೆಂಡಿಕಾಯಿ ಅಲ್ಲೇ ಕೊಳ್ಯಾಕತ್ತೋ.. ಏನ್ ಮಾಡ್ತೀ..’ ಪ್ರಭುಗೆ ದಿಗಿಲು ಬಡಿಯಿತು. ತನ್ನ ತೋಟದ ಅಕ್ಕಪಕ್ಕದ ಕಾಯಿಪಲ್ಯೆ ಬೆಳೆಗಾರರದ್ದೂ ಇದೇ ಸಮಸ್ಯೆ. ಕೂಡಲೇ 10 ಸಾವಿರ ಕೈಗಡ ಸಾಲ ತಂದು, ಅಣ್ಣ ತಮ್ಮ ಸೇರಿಕೊಂಡು, ರೈತರಿಂದ ಐದಾರು ನಮೂನೆ ಕಾಯಿಪಲ್ಯ ಖರೀದಿಸಿದರು. ತಮ್ಮ ದ್ವಿಚಕ್ರ ವಾಹನಕ್ಕೆ ಮೂರು ಕ್ರೇಟ್ ಕಟ್ಟಿದರು. ಹ್ಯಾಂಡಲ್‍ಗೆ ಎರಡು ಜೋಳಿಗೆ ಇಳಿ ಬಿಟ್ಟರು. ಮಾಸ್ಕ್ ಧರಿಸಿಕೊಂಡು, ಸುತ್ತಲೂ ಹತ್ತು ಹಳ್ಳಿ ಅಡ್ಡಾಡಿ, ತಾವು ಬೆಳೆದ ಬೆಂಡೆಕಾಯಿ ಸಮೇತ, ಸುತ್ತಲಿನ ತೋಟಿಗರು ಬೆಳೆದ ಟೊಮೆಟೊ, ಹೀರೆಕಾಯಿ, ಬದನೆಕಾಯಿ, ಹೂಕೋಸು..ಮೆಣಸಿನಕಾಯಿ ಮಾರಲಾರಂಭಿಸಿದರು.

ತಾಜಾ ಕಾಯಿಪಲ್ಯ ಜನ ಚೌಕಾಸಿ ಮಾಡದೇ ಖರೀದಿ ಮಾಡಿದರು. ಬುತ್ತಿ ಗಂಟು ಕಟ್ಟಿಕೊಂಡು ನಸುಕಿನೊಳಗ ಹೊರಟರೆ ವಾಪಸ್ ಬಡಕುಂದ್ರಿಗೆ ಬಂದಿದ್ದು, ಇಳಿ ಸಂಜೆ. ತಮ್ಮೆಲ್ಲ ಖರ್ಚು ತಗೆದು, ಉಳಿದಿದ್ದು ದಿನವೊಂದಕ್ಕೆ ಸಾವಿರ ರೂಪಾಯಿ. ನೇಕಾರಿಕೆಯೊಳಗೆ ದಿನವೊಂದಕ್ಕ ಐನೂರು ಪಡೆದವರು!

ತಮ್ಮ ಕುಟುಂಬಕ್ಕೆ ಅಷ್ಟೇ ಅಲ್ಲ, ಸುತ್ತಲಿನ 12 ರೈತ ಕುಟುಂಬಗಳಿಗೂ ಸಂಕಷ್ಟದ ಸಮಯದೊಳಗೆ ಈ ಅಣ್ಣ-ತಮ್ಮ ಅವರ ಉತ್ಪನ್ನಗಳನ್ನ ಖರೀದಿಸಿ, ಲಾಭಕ್ಕ ಮಾರಿಕೊಟ್ಟು, ಹಿತ ಕಾಯ್ದರು. ಸಾಮಾಜಿಕ ಅಂತರ ಕಾಯ್ದುಕೊಂಡೂ, ನಮ್ಮ ಸಂಬಂಧಗಳನ್ನು ಹೆಂಗ ಬಾಳಿಸಬಹುದು, ‘ಸೋಷಿಯಲ್ ಫ್ಯಾಬ್ರಿಕ್’ ಗಟ್ಟಿಗೊಳಿಸಿದ ಪರಿ ಮಾದರಿ.

‘ನಾನು ಮತ್ತ ತಮ್ಮ, ಸುಗ್ಗ್ಯಾಗ ಗಾಡಿ ಮ್ಯಾಲೆ ಹಾಕ್ಕೊಂಡು ಕಾಯಿಪಲ್ಯ ಮಾರೋದು, ಬಾಕಿ ವೇಳ್ಯಾದಾಗ ಸೀರಿ ನೇಕಾರ್ಕಿ ಮುಂದುವರೆಸೋದು ಅಂತ ಮಾಡೇವ್ರೀ.. ಕೊರೊನಾ ಬಂದ ಮೊದಲ ಹತ್ತ ದಿನ ಭಾಳ ತ್ರಾಸ ಆತ್ರಿ. ಖಾಲಿ ಕೂಡಾಣಿಲ್ರಿ. ಮನಿ ನಡೀಬೇಕ್ರಲಾ?! ಅಪ್ಪ ಬೆಳೆದಿದ್ದ ಸಗಟ, ಆಜು ಬಾಜೂ ಪಾವಣ್ಯಾರು, ಕಾಕಾಗೋಳು, ಆಯಿಗೋಳ್ದು ಎಲ್ಲ ಮಾರಿಕೊಟ್ವಿರೀ.. ನಮಗೂ ಅಷ್ಟ ಆಸರಾತ್ರಿ..’ ಅಂದ್ರು ಪ್ರಭು ಚಿಗರಿ.

ನಿರಂತರ ಜ್ಯೋತಿ ಯೋಜನೆ ಅಡಿ ಸರ್ಕಾರ ಯಂತ್ರ ಮಗ್ಗಗಳಿಗೆ ದಿನದ 24 ಗಂಟೆ ವಿದ್ಯುತ್ ಪೂರೈಕೆ ಖಾತ್ರಿ ಪಡಿಸಿದ ಬಳಿಕ ಅನೇಕ ನೇಕಾರ ಕುಟುಂಬಗಳು ಕೈ ಮಗ್ಗದಿಂದ ಮಷಿನ್ ಮಗ್ಗದತ್ತ ಹೊರಳಿದವು. ಎಲ್ಲ ಖರ್ಚು ತೆಗೆದ ಬಳಿಕ ಗ್ರಾಮ್ಯ ನೇಕಾರನಿಗೆ ದಿನವೊಂದಕ್ಕೆ ಏಳು ನೂರು ರೂಪಾಯಿ ಉಳಿದರೆ ಹೆಚ್ಚು. ಪುಟ್ಟ ಮನೆಯಲ್ಲಿ ಎರಡು ಮಗ್ಗಗಳಿಗೂ ಜಾಗ ಇಲ್ಲ. ಹೀಗಾಗಿ ಪರಿಸ್ಥಿತಿಗೆ ಅನುಗುಣವಾಗಿ ಪರ್ಯಾಯ ಉದ್ಯೋಗ ಅನಿವಾರ್ಯ. ಒಂದಕ್ಕೆ ಕಟ್ಟುಬಿದ್ದರೆ ಉಪವಾಸವೇ ಎಂಬುದು ಪ್ರಭು ಅನಿಸಿಕೆ. ಪ್ರಭು ಚಿಗರಿ ಸಂಪರ್ಕ: 99023 45480

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು