ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ಇಡುಕಿರಿದ ವಿವರಗಳ ಸೃಜನಶೀಲತೆ ಸಂಕಷ್ಟ

Last Updated 3 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಅಮರೇಶ ನುಗಡೋಣಿಯವರ ‘ದಂದುಗ’ ಎರಡು ಕಾರಣಗಳಿಂದಾಗಿ ಗಮನಸೆಳೆಯುವ ಕಾದಂಬರಿ. ಜನಪ್ರಿಯ ಕಥೆಗಾರ ಮೊದಲ ಬಾರಿಗೆ ಕಾದಂಬರಿ ಪ್ರಯೋಗಕ್ಕೆ ತನ್ನನ್ನು ಒಡ್ಡಿಕೊಂಡಿರುವುದು ಮೊದಲ ಕಾರಣ; ಇಡೀ ಜಗತ್ತನ್ನು ತಲ್ಲಣಗೊಳಿಸಿರುವ ಕೊರೊನಾ ವೈರಸ್‌ ಸಂದರ್ಭದ ಸಂಕಷ್ಟಗಳ ಕುರಿತ ಕಥನ ಎನ್ನುವುದು ಎರಡನೇ ಕಾರಣ. ಕೊರೊನಾ ಕಾಲಘಟ್ಟದ ಬಗ್ಗೆ ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಕಥೆಗಳು ಪ್ರಕಟವಾಗಿವೆಯಾದರೂ, ಕಾದಂಬರಿ ಪ್ರಕಾರದಲ್ಲಿ ‘ದಂದುಗ’ ಮೊದಲ ಕೃತಿ.

ಅಮರೇಶ ನುಗಡೋಣಿಯವರ ಕಥೆಗಳ ಕೇಂದ್ರದಲ್ಲಿರುವುದು ಜನಸಾಮಾನ್ಯರ ತುದಿಮೊದಲಿಲ್ಲದ ಸಂಕಷ್ಟಗಳು. ಭರವಸೆಗಳೆಲ್ಲ ಹುಸಿಯಾದ ಸಂದರ್ಭದಲ್ಲಿ ಅಸಹಾಯಕತೆಯಿಂದ ತತ್ತರಿಸುವ ಪಾತ್ರಗಳನ್ನು ಚಿತ್ರಿಸುವ ಅವರ ಕಥೆಗಳು ಓದುಗರ ಅಂತರಂಗವನ್ನು ಕಲಕುತ್ತವೆ; ಜ್ವರದಂತೆ ಕಂಗೆಡಿಸುತ್ತವೆ. ಅಮರೇಶರ ಕಥೆಗಳನ್ನು ಓದಿದವರಿಗೆ, ಕೊರೊನಾ ಕಾರಣದಿಂದಾಗಿ ದೇಶದಲ್ಲಿ ಜಾರಿಗೊಂಡ ಲಾಕ್‌ಡೌನ್‌ ಸಂದರ್ಭದಲ್ಲಿ, ಅವರ ಕಥೆಗಳ ಪಾತ್ರಗಳೆಲ್ಲ ಪುಸ್ತಕಗಳಿಂದ ನುಸುಳಿಕೊಂಡು ರಸ್ತೆಗಿಳಿದಂತೆ ಕಾಣಿಸಿದರೆ ಆಶ್ಚರ್ಯವೇನೂ ಇಲ್ಲ. ಆ ಜೀವಂತ ಪಾತ್ರಗಳನ್ನು ನೋಡುತ್ತ ನೋಡುತ್ತ ನುಗಡೋಣಿಯವರಿಗೆ ಅವರನ್ನೆಲ್ಲ ಕಾದಂಬರಿಯ ದೊಡ್ಡ ಕ್ಯಾನ್ವಾಸ್‌ನಲ್ಲಿ ಹಿಡಿದಿಡಬೇಕು ಎನ್ನಿಸಿರಬೇಕು.

ಇಬ್ಬರು ತರುಣರು ಹಾಗೂ ಓರ್ವ ತರುಣಿಯನ್ನು ಕೇಂದ್ರವಾಗಿರಿಸಿಕೊಂಡು ‘ದಂದುಗ’ದ ಕಥೆ ಬೆಳೆಯುತ್ತದೆ. ಯುಗಾದಿ ಹಬ್ಬಕ್ಕೆಂದು ಊರಿಗೆ ಹೋಗಲು ಬಸ್‌ ನಿಲ್ದಾಣಕ್ಕೆ ಬಂದ ನಂದೀಶ ಮತ್ತು ಸುನಂದ ಎನ್ನುವ ವಿಶ್ವವಿದ್ಯಾಲಯದಲ್ಲಿನ ಸಂಶೋಧನಾ ವಿದ್ಯಾರ್ಥಿಗಳು, ಇದ್ದಕ್ಕಿದ್ದಂತೆ ಜಾರಿಗೊಂಡ ಲಾಕ್‌ಡೌನ್‌ನಿಂದಾಗಿ ಊರಿಗೂ ಹೋಗಲಾಗದೆ, ತಮ್ಮ ಕೋಣೆಗಳಿಗೂ ಹಿಂತಿರುಗಲಾಗದೆ ದಿಕ್ಕುಗೇಡಿಗಳಾಗುತ್ತಾರೆ. ಆಗ ಅವರಿಗೆ ಆಶ್ರಯ ನೀಡುವುದು ಮಲಿಕ್‌ಜಾನ್‌ ಎನ್ನುವ ಹಿರಿಯ ವಿದ್ಯಾರ್ಥಿ. ವಿಭಿನ್ನ ಹಿನ್ನೆಲೆಗಳ ಮೂವರು ವಿದ್ಯಾರ್ಥಿಗಳು ಒಟ್ಟಿಗೆ ಬಾಳಬೇಕಾದ ಸ್ಥಿತಿಯನ್ನು ಕೊರೊನಾ ಕಲ್ಪಿಸುತ್ತದೆ.

ಸುನಂದ ಹಾಗೂ ನಂದೀಶ ಅಕಡೆಮಿಕ್‌ ಅಧ್ಯಯನದ ಹಿನ್ನೆಲೆಯಲ್ಲಿ ಸಮಾಜದ ಬಗ್ಗೆ ಗ್ರಹಿಕೆಗಳನ್ನು ರೂಪಿಸಿಕೊಂಡವರು. ಇವರಿಬ್ಬರಿಗೂ ಹೋಲಿಸಿದರೆ, ಪುಸ್ತಕಗಳ ಓದಿನ ಜೊತೆಗೆ ಸಮಾಜದ ಕಡು ವಾಸ್ತವಗಳಿಗೂ ಮುಖಾಮುಖಿಯಾದ ಮಲಿಕ್‌ಜಾನ್‌ ಜೀವನಾನುಭವ ದೊಡ್ಡದು. ವೈಯಕ್ತಿಕ ಬದುಕನ್ನು ಕಟ್ಟಿಕೊಳ್ಳುತ್ತಲೇ ಸಮಾಜದ ತವಕತಲ್ಲಣಗಳಿಗೂ ಮಿಡಿಯುವ ವ್ಯಕ್ತಿತ್ವ ಆತನದು. ಈ ಮೂವರು ವಿದ್ಯಾರ್ಥಿಗಳ ನೋಟದ ಮೂಲಕ ಜನಸಾಮಾನ್ಯರ ಬದುಕಿನ ದಂದುಗಗಳನ್ನು ಕಾದಂಬರಿ ಚಿತ್ರಿಸುತ್ತದೆ. ಸಾಮಾನ್ಯ ಸಂದರ್ಭದಲ್ಲೇ ಸಂಕಷ್ಟಗಳ ಸರಮಾಲೆ ಎದುರಿಸುತ್ತಿದ್ದ ಜನಸಾಮಾನ್ಯರು, ಕೊರೊನಾ ಲಾಕ್‌ಡೌನ್‌ ಸಮಯದಲ್ಲಿ ಕೆಂಡದ ದಾರಿಯಲ್ಲಿ ನಡೆಯುತ್ತಿರುವುದರ ವಿವರಗಳನ್ನು ‘ದಂದುಗ’ ಒಳಗೊಂಡಿದೆ.

ಕೊರೊನಾ ಕಾಲದ ಸಂಕಷ್ಟಗಳನ್ನು ಚಿತ್ರಿಸಲು ನುಗಡೋಣಿಯವರು ಮುಖ್ಯವಾಗಿ ಪತ್ರಿಕಾ ವರದಿಗಳನ್ನು ಆಧರಿಸಿದ್ದಾರೆ. ಮನೆಕೆಲಸದ ಹೆಣ್ಣುಮಕ್ಕಳು, ತರಕಾರಿ ಹೊತ್ತು ಮಾರುವವರು, ಕೂಲಿ ಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಪೊಲೀಸರು, ವಿದ್ಯಾರ್ಥಿಗಳು, ವಲಸೆ ಬಂದವರು, ವಾಹನ ಚಾಲಕರು, ಕೊರೊನಾ ಕಾರ್ಯಕರ್ತರು – ಹೀಗೆ ವಿವಿಧ ವರ್ಗಗಳ ಜನ ಕಾದಂಬರಿಯಲ್ಲಿ ಕಿಕ್ಕಿರಿದಿದ್ದಾರೆ. ಸಾಲಿನಲ್ಲಿ ನಿಂತು ದಿನಸಿಯನ್ನು ಪಡೆಯುವ ಬಡ ಹೆಣ್ಣುಮಗಳು ಹಾಗೂ ಆಕೆಯಿಂದ ದಿನಸಿಯ ಚೀಲ ಕಸಿದುಕೊಂಡು ಹೋಗುವ ಬಡ ಕಳ್ಳ ಹಾಗೂ ಪೊಲೀಸರ ಕಣ್ಣು ತಪ್ಪಿಸಿಕೊಂಡು ನೂರಾರು ಮೈಲಿ ನಡೆದು ದಣಿದ ಕಾರ್ಮಿಕರ ದಾರುಣ ಚಿತ್ರಗಳು ಕಾದಂಬರಿಯಲ್ಲಿವೆ. ಪತ್ರಿಕೆಗಳು ಹಾಗೂ ಟೀವಿಯಲ್ಲಿ ಈಗಾಗಲೇ ಕಂಡ ದಾರುಣ ಚಿತ್ರಗಳನ್ನು ಕಾದಂಬರಿ ಕೊಲಾಜ್‌ ರೂಪದಲ್ಲಿ ಒಳಗೊಳ್ಳುವ ಪ್ರಯತ್ನ ಮಾಡುತ್ತದೆ.

ಕೊರೊನಾ ಸೋಂಕಿಗೊಳಗಾದ ಮಲಿಕ್‌ಜಾನ್‌ ಆಸ್ಪತ್ರೆ ಸೇರಿಕೊಂಡಾಗ, ಊರಿಗೆ ಹೊರಟ ಸುನಂದ ಮತ್ತು ನಂದೀಶ ಪೊಲೀಸರಿಗೆ ಸಿಕ್ಕಿಬಿದ್ದು ಕ್ವಾರಂಟೈನ್‌ ಕೇಂದ್ರ ಸೇರಿಕೊಳ್ಳುತ್ತಾರೆ. ಗೆಳೆಯರ ದಿಕ್ಕುಗಳು ಕವಲೊಡೆದ ಸಂದರ್ಭ, ಕಾದಂಬರಿಯ ಮಟ್ಟಿಗೂ ಹೊಸ ತಿರುವು. ಕ್ವಾರಂಟೈನ್‌ ಕೇಂದ್ರದಲ್ಲಿನ ಕಾರ್ಮಿಕರು ನಂದೀಶನ ನೇತೃತ್ವದಲ್ಲಿ ತಾವು ಆಶ್ರಯ ಪಡೆದ ಶಾಲೆಯ ಸ್ವರೂಪವನ್ನು ಬದಲಿಸುತ್ತಾರೆ. ಕೊರೊನಾದಿಂದ ಗುಣಮುಖನಾದ ಮಲಿಕ್‌ಜಾನ್‌ ತನ್ನೂರಿನಲ್ಲಿ ಸಾಮಾಜಿಕ ಚಲನೆಯುಂಟಾಗಲು ಕಾರಣಕರ್ತನಾಗುತ್ತಾನೆ. ಮಲಿಕ್‌ನ ನಂಬಿಕೆಗಳನ್ನು ಒರೆಗೆ ಹಚ್ಚಲು ಹಳ್ಳಿ ಪ್ರಯೋಗಶಾಲೆಯಾಗುತ್ತದೆ. ಊರಿನಿಂದ ವಲಸೆ ಹೋದವರು ಹಿಂತಿರುಗಿದಾಗ, ಅವರನ್ನು ಊರು ಅನುಮಾನದಿಂದ ದೂರವಿಡುತ್ತದೆ. ಜಮೀನ್ದಾರಿಕೆಯ ತಣ್ಣನೆ ಕ್ರೌರ್ಯವೂ ತನ್ನ ಇರುವನ್ನು ಪ್ರಕಟಪಡಿಸುತ್ತದೆ. ಊರಿನ ಎಲ್ಲರನ್ನೂ ಮಾನವೀಯ ನೆಲೆಗಟ್ಟಿನಲ್ಲಿ ಒಗ್ಗೂಡಿಸುವುದರಲ್ಲಿ ಮಲಿಕ್‌ ಯಶಸ್ವಿಯಾಗುತ್ತಾನೆ.

ನುಗಡೋಣಿಯವರು ತಮ್ಮ ಕೃತಿಯನ್ನು ‘ಕೊರೊನಾ ಕಾಲಘಟ್ಟದ ಸಂಕಷ್ಟಗಳ ಕುರಿತ ಕಥನ’ ಎಂದು ಕರೆದುಕೊಂಡಿದ್ದಾರೆ. ಸಂಕಷ್ಟಗಳ ಚಿತ್ರಣದ ಮಟ್ಟಿಗೆ ‘ದಂದುಗ‘ದ ಉದ್ದೇಶ ಯಶಸ್ವಿಯಾಗಿದೆ. ಆದರೆ, ಸಂಕಷ್ಟಗಳ ಜೋಡಣೆ ಕಾದಂಬರಿಯ ರೂಪದಲ್ಲಿ ಜೀವಗೊಂಡಿದೆಯೇ ಎಂದು ಪ್ರಶ್ನಿಸಿಕೊಂಡರೆ, ‘ದಂದುಗ’ ಓದುಗನಲ್ಲಿ ಅತೃಪ್ತಿ ಉಳಿಸುತ್ತದೆ. ಇಲ್ಲಿನ ಬಹುತೇಕ ಸಂಕಷ್ಟಗಳು ವರದಿಯ ರೂಪವಾಗಿ ಉಳಿದಿವೆಯೇ ಹೊರತು, ಕಾದಂಬರಿಯ ಸಾವಯವ ಶಿಲ್ಪದ ಭಾಗವಾಗಿಲ್ಲ. ಮೂವರು ವಿದ್ಯಾರ್ಥಿಗಳ ಚರ್ಚೆಗೆ ಕೃತಿಯ ಬಹುಭಾಗ ಮೀಸಲಾಗಿದೆ. ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ನಡುವಿನ ಮಾತುಕತೆಯಂತಿರುವ ಈ ಭಾಗ, ಸಮಾಜಶಾಸ್ತ್ರದ ಪಠ್ಯದಂತೆ ಕಾಣಿಸುತ್ತದೆ; ಕಾದಂಬರಿಯೊಂದು ನೀಡುವ ಜೀವನ ದರ್ಶನದಂತೆ ಆಪ್ತವಾಗುವುದಿಲ್ಲ; ಬಿಕ್ಕಟ್ಟಿನ ಸಂದರ್ಭಕ್ಕೆ ಸೃಷ್ಟಿಶೀಲ ಬರಹಗಾರನ ಧ್ಯಾನಸ್ಥ ಪ್ರತಿಕ್ರಿಯೆಯಾಗಿ ರೂಪುಗೊಂಡಿಲ್ಲ.

ಸಮಕಾಲೀನ ಸಂಗತಿಯನ್ನು ಕಥನವಾಗಿಸುವುದು ಬರಹಗಾರನಿಗೆ ಅನುಕೂಲವೂ ಹೌದು, ತೊಡಕೂ ಹೌದು. ಕೊರೊನಾ ಕಾಲಘಟ್ಟವನ್ನೇ ವಸ್ತುವನ್ನಾಗಿಸಿಕೊಂಡಾಗ ಬರೆಯಲಿಕ್ಕೆ ಸಾಕಷ್ಟು ಸಾಮಗ್ರಿ ಸುಲಭವಾಗಿ ದೊರೆಯುತ್ತದೆ. ಆದರೆ, ಆ ವಿವರಗಳನ್ನು ಕಲಾಕೃತಿಯಾಗಿಸುವುದು ಬಹುದೊಡ್ಡ ಸವಾಲು. ಓದುಗನಿಗೆ ಪರಿಚಿತವಾದ ಸಂಗತಿಗಳನ್ನೇ ಮತ್ತೆ ಹೇಳುವಾಗ, ಆ ವಿವರಗಳು ಓದುಗನಿಗೆ ಈವರೆಗೆ ಹೊಳೆಯದ ನೋಟವನ್ನು ಕರುಣಿಸಬೇಕು. ಅದು ‘ದಂದುಗ’ದಲ್ಲಿ ಸಾಧ್ಯವಾಗಿಲ್ಲ. ಕುತೂಹಲಕರ ಪ್ರಯೋಗದ ರೂಪದಲ್ಲಿ ಗಮನಸೆಳೆಯುವ ನುಗಡೋಣಿಯವರ ಕೃತಿ, ಕೊರೊನಾ ಕಾಲಘಟ್ಟದ ಚಿತ್ರಣಕ್ಕೆ ಮುನ್ನುಡಿಯನ್ನು ಬರೆದಿರುವ ಕಾರಣದಿಂದಾಗಿ ಸಾಹಿತ್ಯ ಚರಿತ್ರೆಯಲ್ಲಿ ಸ್ಥಾನ ಪಡೆದುಕೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT