ಸೋಮವಾರ, ಜನವರಿ 25, 2021
28 °C

ಕಥೆ: ಕಂತ್ರಿನಾಯಿ

ಭದ್ರಪ್ಪ ಎಸ್‌. ಹೆನ್ಲಿ Updated:

ಅಕ್ಷರ ಗಾತ್ರ : | |

Dog

(ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆ–2020ರಲ್ಲಿ ತೀರ್ಪುಗಾರರಿಂದ ಮೆಚ್ಚುಗೆ ಪಡೆದ ಕಥೆ)

ಈ ಸ್ವಚ್ಛನಗರಿಯ ಪ್ರತಿಷ್ಠಿತ ಬಡಾವಣೆಯ ಹದಿಮೂರನೆ ಮುಖ್ಯರಸ್ತೆಯ, 9ನೇ ತಿರುವಿನಲ್ಲಿರುವ 312ನೇ ನಂಬರಿನ ಮನೆಯೇ ನನ್ನದು. ನಿವೃತ್ತರ ಶಾಂತಿಧಾಮವೆಂದೇ ಪ್ರಸಿದ್ಧಿಯನ್ನು ಹೊಂದಿದ್ದ ಈ ಬಡಾವಣೆ ಗತಕಾಲದ ವೈಭವವನ್ನು ಕಳೆದುಕೊಂಡು ಸರಿಸುಮಾರು ಎರಡು ದಶಕಗಳೇ ಉರುಳಿಹೋಗಿವೆ. ಕಾಲಮಾನದ ಗತಿ ಬದಲಾದಂತೆಲ್ಲಾ ಮೂರನೆ ತಿರುವಿನ ಉತ್ತರಕ್ಕೆ ಸಾಯಿಬಾಬಾ ದೇವಸ್ಥಾನ, 10ನೇ ಮುಖ್ಯ ರಸ್ತೆಯ ಅಂಚಿಗೆ ರಿಲಯನ್ಸ್ ಟ್ರೆಂಡ್ಸ್, ಎಂಟನೇ ಮೇನ್‍ನಲ್ಲಿ ಈಜಿಡೇ ಬಿಗ್‌ಬಜಾರ್, ಅದರ ಅಕ್ಕ ಪಕ್ಕವೇ ಸ್ಪುಟ್ಣಿಕ್ ಫಿಟ್ನೆಸ್ ಸೆಂಟರ್, ಫ್ರೆಶ್ ಚಿಕನ್ ಸೆಂಟರ್, ದಕ್ಷಿಣಕ್ಕೆ ನ್ಯೂ ಹಾರಿಜನ್‌ ಇಂಟರ್‌ ನ್ಯಾಶನಲ್ ಸ್ಕೂಲ್, ಪಶ್ಚಿಮಕ್ಕೆ ಆಫೀಸರ್ಸ್ ರಿಕ್ರಿಯೇಶನ್ ಕ್ಲಬ್... ಹೀಗೆ ನಾಗರಿಕತೆಯ ಕುರುಹಗಳಾದ ವೈವಿಧ್ಯಮಯ ಸಕಲ ಸವಲತ್ತಿನ ಸೇವಾ ಮಾಧ್ಯಮಗಳೆಲ್ಲವೂ ಬಂದರೂ ಅವುಗಳೆಲ್ಲದರ ವ್ಯೂಹವಲಯದೊಳಗಿನ ಗರ್ಭಸ್ಥಾನದಲ್ಲಿ ಕಳೆದ ಅರ್ಧ ಶತಮಾನದ ಹಿಂದೆಯೇ ಸ್ಥಾಪನೆಗೊಂಡಿದ್ದ ಕೆಲವು ಗೃಹಗಳು ತಮ್ಮ ಗತಕಾಲದ ಸಾಂಪ್ರದಾಯಿಕ ಅವಸ್ಥೆಯ ಮೌಲ್ಯಗಳ ವಜೆಯನ್ನು ತಾಳಿಕೊಳ್ಳಲಾರದೆ ತಲೆಯನ್ನು ಅಲ್ಲಾಡಿಸುತ್ತಾ ದಿನಗಳನ್ನು ದೂಡುತಿದ್ದವು.

ಶತಮಾನದ ಹಿಂದಿನ ಶಂಕರಮಠದಲ್ಲಿ ದಿನ ನಿತ್ಯವೂ ಭಜನೆ ಹಾಗೂ ರಾಮಮಂದಿರದಲ್ಲಿ ಪಾರಾಯಣಗಳು ಅವಿರತವಾಗಿ ನಡೆಯುತ್ತಲೇ ಇದ್ದಾವೆ. ಈ ಸುತ್ತಮುತ್ತಲಿನಲ್ಲಿ ಈಗಲೂ ಮದುವೆಯಾಗದವರಿಗೆ, ಮಾಂಸಾಹಾರಿಗಳಿಗೆ ಬಾಡಿಗೆ ಮನೆ ಸಿಗುವುದಿಲ್ಲ. ಮೊನ್ನೆತಾನೆ ಎಡಗೈ ಚಿತ್ತಣ್ಣನಿಗೆ ಬಾಡಿಗೆ ಮನೆ ಹುಡುಕಿ ಸಿಗದೆ ಸುಸ್ತಾಗಿ ಬೇಸರದಿಂದ ಮೂಲೆಹಿಡಿದು ಕುಳಿತಿದ್ದವನನ್ನು ಬೆನ್ನಹಿಂದೆ ಕುಳ್ಳಿರಿಸಿಕೊಂಡು ಇಡೀ ಬಡಾವಣೆಯನ್ನೆಲ್ಲಾ ಸುತ್ತಿ ಕೊನೆಗೆ ಜನತಾನಗರದ ಅಂಚಿನಲ್ಲಿದ್ದ ಎಡಗೈ ಮನೆಯಲ್ಲೇ ರೂಮನ್ನು ಹುಡುಕಿಕೊಡುವಷ್ಟರಲ್ಲಿ ಸಾಕುಬೇಕಾಯಿತು. ಆದರೆ ನಮ್ಮ ಮನೆಯ ಸುತ್ತಮುತ್ತಲಿನ ನಾಲ್ಕೈದು ರಸ್ತೆಗಳಲ್ಲೂ ಕೆಂಪು ಸೀರೆಗಳು ಧಾರಾಳವಾಗಿ ಕಾಣುತ್ತವೆ! ಇದಿನ್ನೂ ಪುರಾತನ ಕಸೂತಿ ಕುಸುರಿಯ ಮಾಸಿದ ಸೆರಗನ್ನು ಹೊದ್ದು ನಿರುಮ್ಮಳವಾಗಿಯೇ ಮಲಗಿದೆ. ಆದರೆ ಈ ಸುಭಗದ ಶಾಂತಿ ಕದಡುವುದೆ ಶ್ರಾವಣಮಾಸದಲ್ಲಿ. ಪರಮ ವೈರಾಗಿಯಾದ ಗಣೇಶನ ಆಗಮನದ ಸಂದರ್ಭದಲ್ಲಿಯೇ ಯಾಕೆ ಹೆಣ್ಣನಾಯಿಗಳು ಬೆದೆಗೆ ಬರುತ್ತವೊ!? ಶ್ರಾವಣದ ಪೂಜೆ, ಶಂಖ, ಜಾಗಟೆ ಭಜನೆಗಳ ಆಧ್ಯಾತ್ಮಕ ಅನುಸಂಧಾನದ ದಿವ್ಯ ಸಂಗೀತದೊಂದಿಗೆ ಈ ಶ್ವಾನ ಸಮುದಾಯದ ಸಾಮೂಹಿಕ ನಾದವಿಕಾರಗಳು ಬೆರೆತು ನಾಸ್ತಿಕರ ನೆಮ್ಮದಿಗೆ ಭಂಗವನ್ನುಂಟುಮಾಡುತ್ತವೆ. ಹೆಣ್ಣು ನಾಯಿಗಳ ಫಲವಂತಿಕೆಯ ಹಿಂದೆ ಪೈಪೋಟಿಯಲ್ಲಿ ಲಗ್ಗೆ ಹಾಕುವ ಗಂಡುನಾಯಿಗಳ ಮದನಶೌರ್ಯವನ್ನು ನೋಡುವುದೆ ನನಗೆ ರೋಮಾಂಚನ! ಸತ್ಯದ ಸಂಗತಿ ಎಂದರೆ ಇದು ಎಲ್ಲರಿಗೂ ಖುಷಿಕೊಡುವ ದೃಶ್ಯವೇ ಆದರೂ ಬಹಿರಂಗದಲ್ಲಿ ಅನುಭವಿಸಲಾರದ ಸೋಗಲಾಡಿತನದ ಸಭ್ಯತೆಯೊಂದಿಗೆ ತಮ್ಮ ಸಾಕುನಾಯಿಗಳನ್ನು ಬಂದೋಬಸ್ತುಮಾಡುವ ತುರಾತುರಿಯಲ್ಲಿ ಸುತ್ತಮುತ್ತಲಿನ ಮನೆಗಳು ತಮ್ಮ ನೆಮ್ಮದಿಯನ್ನು ಹಾಳುಮಾಡಿಕೊಳ್ಳುತ್ತವೆ. ನಾನಂತೂ ನನ್ನ ರಾಜನನ್ನು ತನಗೆ  ತೃಪ್ತಿಯಾಗುವಷ್ಟು ಮದನಶಿಖೆಯ ಉತ್ತುಂಗದಲ್ಲಿ ಮೈದಣಿಯಲು ಬಿಡುತ್ತೇನೆ. ಆದರೆ ಇದು ನನ್ನ ಎಡಪಕ್ಕದ ಮನೆಯ ಪ್ರೊಫೆಸರರಿಗೆ ಅಸಹನೀಯವಾಗಿ ತನ್ನ ಸಿಡುಕಾಟದಲ್ಲೆ ಅದನ್ನು ನನಗೆ ರವಾನಿಸಿಬಿಡುತ್ತಾರೆ. ಅವರ ಹೆಂಡತಿ ಮಕ್ಕಳು ತಮ್ಮ ಡಾಬರ್ಮ್ಯಾನಳನ್ನು ಸಂರಕ್ಷಿಸುವುದರಲ್ಲೇ ತಮ್ಮ ತಾಳ್ಮೆಯನ್ನೆಲ್ಲಾ ಕಳೆದುಕೊಳ್ಳುತ್ತಾರೆ.

ಸಂತಾನಹರಣವನ್ನು ಮಾಡಿಸಿದ್ದರೂ ಅದರ ಅರಿವೆಯೇ ಇಲ್ಲದ ಆ ಡಾಬರ್ಮ್ಯಾನಳು ಈ ಸಮಯದಲ್ಲಿ ಕೂತಲ್ಲಿ ಕುಳಿತುಕೊಳ್ಳಲಾರದೆ, ನಿಂತಲ್ಲಿ ನಿಲ್ಲಲಾರದೆ ಕುಂಡೆಗೆ ಬೆಂಕಿಬಿದ್ದವಳಂತೆ ಮನೆಯ ತುಂಬಾ ಕುಪ್ಪಳಿಸುತ್ತಿರುತ್ತಾಳೆ. ಈ ಸಮಯದಲ್ಲಿ ಅವಳನ್ನು ಪ್ರೊಫೆಸರ್ ಮಗಳಂದಿರು ಛಡ್ಡಿ ಹಾಕಿಕೊಂಡು ವಾಕಿಂಗಿಗೆ ಹೋಗಲು ಸಾಧ್ಯವಿಲ್ಲ. ಈ ದಿವ್ಯ ದೃಶ್ಯ ಹಾಳಾದುದರಿಂದಾದ ಬೇಸರವನ್ನು ಮರೆತು ಪುಂಡರು ಗಣಪತಿಯ ಪೂಜೆಗೆ ಚಂದಾ ವಸೂಲಿಯಲ್ಲಿ ತೊಡಗುತ್ತಾರೆ. ಇದಾವ ಸಮಸ್ಯೆಯೂ ಇಲ್ಲದ ನನ್ನ ಬಗ್ಗೆ ಹೊಟ್ಟೆಕಿಚ್ಚು ಉಂಟಾದರೂ ಅದನ್ನು ತೋರಿಸಿಕೊಳ್ಳದಿರಲು ಪ್ರಯತ್ನಿಸುತ್ತಾ ನನ್ನ ರಾಜಾನಿಂದ, ಪಾಳೆಗಾರರ ಉಚ್ಛಕುಲದ ಸಂತತಿಯೆಂದು ಬೀಗುವ ತಮ್ಮ ಡಾಬರ್ಮ್ಯಾನಳನ್ನು ರಕ್ಷಿಸುವ ಎಚ್ಚರಿಕೆಯಿಂದಲೂ ನನ್ನೆಡೆಗೆ ಹುಸಿನಗೆಯನ್ನಷ್ಟೆ ನಿರ್ಭಾವುಕವಾಗಿ ಎಸೆದು ನನ್ನಿಂದ ಮಿಲ್ಟ್ರಿ ಸ್ಕಾಚನ್ನು ಪಡೆದು ಸುಮ್ಮನಾಗುತ್ತಾರೆ.

ನನ್ನ ರಾಜಾ ಎಂದಿಗೂ ನನ್ನ ನಂಬಿಕೆಗೆ ಚ್ಯುತಿ ತಂದವನಲ್ಲ. ಅವನ ಸ್ವಾತಂತ್ರ್ಯವನ್ನಾಗಲೀ, ಪುರುಷತ್ವವನ್ನಾಗಲೀ ಎಂದಿಗೂ ಹರಣಮಾಡಲು ನಾನು ಪ್ರಯತ್ನಿಸಲಿಲ್ಲ. ಅದು ನೈತಿಕವಲ್ಲವೆಂದು ನನಗೆ ಗೊತ್ತಿತ್ತು. ಆದುದರಿಂದಲೆ ಅವನ ಜನ್ಮ ಸ್ವಾಭಾವಿಕ ಪ್ರವೃತ್ತಿಗಳಿಗೆ ಎಂದಿಗೂ ನಾನು ಕಡಿವಾಣ ಹಾಕಿದವನಲ್ಲ. ಅವನು ತನ್ನ ಜನ್ಮ ಸಂಬಂಧಿಗಳ ಜೊತೆ ಬೆರೆತು ಮೈಮರೆತು ಚಕ್ಕಂದವಾಡಿ ಮತ್ತೆ ಎಳೆಗರುವಿನಂತೆ ಮನೆಯೊಳಕ್ಕೆ ಬರುತ್ತಾನೆ. ತುಂಬಿ ಹರಿಯುವ ಹಳ್ಳಕ್ಕೆ ಅಡ್ಡಗಟ್ಟೆ ಕಟ್ಟುವುದು ನನ್ನ ಪ್ರಕಾರ ಸಂಸ್ಕಾರವೂ ಅಲ್ಲ, ನಾಗರಿಕತೆಯೂ ಅಲ್ಲ. ‘ಸಂಸ್ಕಾರವಿಲ್ಲದವರಿಗೆ ನಾಗರಿಕ ಸವಲತ್ತನ್ನು ಕೊಟ್ಟರೆ ಸಮಾಜದಲ್ಲಿ ಅವ್ಯವಸ್ಥೆ ಸೃಷ್ಟಿಯಾಗುತ್ತೆ’ ಎಂದು ಪ್ರೊಫೆಸರ್ ತಮ್ಮ ಶತಮಾನದ ಅಸಹನೆಯನ್ನು ಹೊರಹಾಕಿದರೂ ನಾನು ನಿರ್ಲಪ್ತನಾಗಿ ಹುಸಿನಕ್ಕು ಸುಮ್ಮನಾಗುತ್ತೇನೆ. ಆದರೆ ಇದು ಅವರೊಬ್ಬರ ಜನ್ಮದಾತ ಅಸಹನೆಯಲ್ಲ, ನನ್ನ ಅಕ್ಕಪಕ್ಕದ ಹಲವರ ಶ್ರೇಷ್ಠತೆಯ ವ್ಯಸನದ ಪ್ರಾತಿನಿಧಿಕ ಅಭಿವ್ಯಕ್ತಿ ಎಂದು ನನಗೆ ಅರ್ಥವಾಗುತ್ತದೆ ಎನ್ನುವುದೂ ಅವರಿಗೆ ಗೊತ್ತಿದೆ. ಅಷ್ಟೇ ಏಕೆ ನನ್ನ ರಾಜಾನಿಗೂ ಇದು ಅರ್ಥವಾಗುತ್ತದೆ!

ಅಂಟಿಕೊಂಡಂತೆಯೇ ಇರುವ ಈ ಅಕ್ಕಪಕ್ಕದ ಮನೆಗಳಲ್ಲಿ ಪ್ರೊಫೆಸರ್ ಮತ್ತು ನನ್ನ ಸಂಸಾರ ಪ್ರಾರಂಭವಾಗಿ ಇಲ್ಲಿಗೆ ಸರಿಸುಮಾರು ಎರಡು ದಶಕಗಳೇ ಕಳೆದಿವೆ. ಮಹಾನಗರಪಾಲಿಕೆಯ ಕಾಮನ್‌ವಾಲ್ ಮನೆಗಳಲ್ಲಿ ರೋಮಾಂಚನದಿಂದ ಸಂಸಾರ ಹೂಡಿದ ನಿವೃತ್ತ ಸೈನಿಕನಾದ ನನ್ನ ಅಪ್ಪನಾಗಲಿ ಮತ್ತು ತಿರಸ್ಕಾರದಿಂದಲೇ ಅನಿವಾರ್ಯವಾಗಿ ತಳವೂರಿದ ಪಂಚಾಂಗ ಪಂಡಿತರಾಗಿದ್ದ ಪ್ರೊಫೆಸರರ ಪಿತೃಶ್ರೀಯವರಾಗಲಿ ಪರಂಧಾಮವನ್ನು ಸೇರಿ ಎಂಟ್ಹತ್ತು ವರ್ಷಗಳೆ ಕಳೆದಿವೆ. ನನ್ನಪ್ಪ ಲೆ.ನಾಯಕ್ ಕರಗಯ್ಯನವರು ಭಾರತ ಸೇನೆಯಲ್ಲಿ ಕಾಲಾಳು ಸೈನಿಕನಾಗಿ ಇಪ್ಪತ್ತು ವರ್ಷಗಳು ದುಡಿದು, ಕೊನೆಯದಾಗಿ ಕಾರ್ಗಿಲ್ ಯುದ್ಧದಲ್ಲಿ ಕಾಲನ್ನು ಕಳೆದುಕೊಂಡು ಹಳ್ಳಿಗೆ ಹಿಂದಿರುಗಿದಾಗ, ಅಮರಾವತಿಯಂಥ ನಗರದಲ್ಲಿ ಈ ಮನೆ ಮಂಜೂರಾಯಿತು. ‘ನಂಜು ಹತ್ತಿದ ಕೂಳೆ ಕಳೆಯನ್ನು ಕಿತ್ತು ತಂದು ಇಲ್ಲಿಯೇ ಫಲವತ್ತಾದ ಗಿಡವಾಗಿಸುತ್ತೇನೆ’ ಎಂದು ಹಳ್ಳಿಯನ್ನು ತೊರೆದು ಈ ನಗರದಲ್ಲಿ ಬೇರುಬಿಟ್ಟಿದಕ್ಕೆ ತನ್ನ ಜನ್ಮಾಂತರದ ಶಾಪವನ್ನು ಅರ್ಥಮಾಡಿಕೊಳ್ಳುವ ತಿಳಿವಳಿಕೆ ಅವನಿಗೆ ಬಂದಿತ್ತು. ಅವನು ಸೇನೆಗೆ ಸೇರಿದ್ದೂ ಒಂದು ಕಥೆಯೇ-ಹಳ್ಳಿಯಲ್ಲಿ ಕಳ್ಳಭಟ್ಟಿ ಮಾಡಿ ಮಾರಾಟಮಾಡಿ ಒಂಬ್ಹತ್ತು ಮಕ್ಕಳ ಸಂಸಾರವನ್ನು ಸಾಕುತಿದ್ದವನು ಪೊಲೀಸಿಗೆ ಸಿಕ್ಕು ಜೈಲುಪಾಲಾಗಿ ಮತ್ತೆ ಊರಿಗೆ ಮುಖ ಹಾಕಲಿಲ್ಲ. ಯಾರಿಂದಲೋ ಹೇಗೋ ಮಿಲ್ಟ್ರಿಯಲ್ಲಿ ಕ್ಷೌರಿಕನಾಗಿ ಸೇರಿ, ಅಲ್ಲಿಯೇ ಹಿಂದಿ ಕಲಿತು, ಪ್ರಾಥಮಿಕ ಶಿಕ್ಷಣವನ್ನೂ ಮುಗಿಸಿ, ಕಾಲಾಳು ಸೈನಿಕನಾಗಿ ಪದೋನ್ನತಿಯನ್ನು ಪಡೆದ. ಯುದ್ಧದಲ್ಲಿ ಕಾಲು ಕಳೆದುಕೊಂಡು ಕಡ್ಡಾಯ ನಿವೃತ್ತಿಯನ್ನು ಹೊಂದಿ ಹಿಂದಿರುಗುವಾಗ ನನ್ನ ಒಬ್ಬಳು ತಂಗಿಯೊಡನೆ ನನ್ನನ್ನು ಹೊರತುಪಡಿಸಿ, ಉಳಿದವರೆಲ್ಲಾ ಬೀದಿ ನಾಯಿಗಳಂತೆ ನಶಿಸಿ ಹೋಗಿದ್ದರು.

ಸಾಯುವ ಮುನ್ನ ನನ್ನನ್ನು ಪಕ್ಕದಲ್ಲಿ ಕುಳ್ಳಿರಿಸಿಕೊಂಡು ಹೇಳಿದ್ದ: ನಾವು ಹನ್ನೆರಡು ಸೈನಿಕರಿದ್ದ ಬೆಟಾಲಿಯನ್. ನಮ್ಮದು ಮುಂಚೂಣಿಯಲ್ಲಿ ಮುನ್ನುಗ್ಗುವ ಕಾಲಾಳು ಸೈನ್ಯ. ಕಾರ್ಗಿಲ್ಲಿನ ಬೆಟ್ಟವೊಂದರಲ್ಲಿ ಅಡಗಿದ್ದ ಶತ್ರುಗಳನ್ನು ಕೊಲ್ಲಬೇಕಿತ್ತು. ನಾವು ತೆವಳಿಕೊಂಡು ಆ ಬೆಟ್ಟವನ್ನು ಹತ್ತಿದೆವು. ಶತ್ರುಗಳನ್ನೆಲ್ಲಾ ಕೊಂದೆವು, ಆದರೆ ನನ್ನನ್ನು ಹೊರತುಪಡಿಸಿ ಜೊತೆಯವರಾರೂ ಉಳಿಯಲಿಲ್ಲ, ನನ್ನ ಕಾಲು ತುಂಡಾಯಿತು.... ಸತ್ತ ನನ್ನ ಜೊತೆಗಾರರ ಮನೆಯವರಿಗೆ ಪರಿಹಾರ, ಪಿಂಚಣಿ ಎಲ್ಲವೂ ಸಿಕ್ಕಿತು, ನನಗೂ ನಿವೃತ್ತಿ, ಪಿಂಚಣಿ ಎರಡೂ ಸಿಕ್ಕಿತು....ನಮ್ಮ ಹಿಂದಿದ್ದ ನಮ್ಮ ನಾಯಕರಿಗೆ ಸರಕಾರದ ಬಹುಮಾನದ ಜೊತೆಗೆ ಸನ್ಮಾನವೂ ದೊರೆಯಿತು... ಅಕ್ಷರಗಳನ್ನ ಕಲಿಬೇಕು ಮಗನೇ....ಎದೆಗೆ ಬಿದ್ದ ಅಕ್ಷರ ಮುರುಟಿಹೋಗುವುದಿಲ್ಲ...ಇಂದಲ್ಲ ನಾಳೆ ಮೊಳಕೆಯೊಡದೇ ಒಡೆಯುತ್ತದೆ.

ನನ್ನಪ್ಪ ಸತ್ತು ಹೋಗುವಾಗ ಅಕ್ಷರಗಳನ್ನು ಗುರ್ತಿಸಬಲ್ಲವನಾಗಿದ್ದ. ಬದುಕುಳಿದ ಏಕಮಾತ್ರ ಗಂಡುಕುಡಿಯಾದ ನಾನು ಓದನ್ನು ಅರ್ಧಕ್ಕೆ ನಿಲ್ಲಿಸಿ, ಅನುಕಂಪಾಧಾರಿತ ಕೆಲಸವನ್ನು ಪಡೆದು ಬ್ಯಾಂಕಿನಲ್ಲಿ ಜವಾನನಾಗಿ ಸೇರಿ ಈಗ ಗುಮಾಸ್ತನಾಗಿ ಪದೋನ್ನತಿಯನ್ನು ಪಡೆದಿದ್ದೇನೆ. ಅಪ್ಪ ಹೇಳಿದ್ದು ಅದೆಷ್ಟೋ ಶತಮಾನಗಳ ದಮನಿತ ಕೂಗಾಗಿತ್ತೆ? ನನ್ನ ಎದೆಯಲ್ಲಿಯೂ ಅಕ್ಷರಗಳು ಮೊಳಕೆಯೊಡೆಯಲಾರಂಭಿಸಿದವು, ನನಗೇ ಆಶ್ಚರ್ಯವಾಗುವಂತೆ ಪುಸ್ತಕಗಳ ಓದು ಅರ್ಥವಾಗತೊಡಗಿತು! ನನ್ನ ಶಾಪಗ್ರಸ್ತ ಕೈಬೆರಳುಗಳಲ್ಲಿ ಅಕ್ಷರಗಳು ಅರಳತೊಡಗಿದವು! ನಿಧಾನಕ್ಕೆ ನನ್ನ ಗಮ್ಯ ಪ್ರಪಂಚದ ಎಲ್ಲಾ ಹಾಗುಹೋಗುಗಳೂ ನಿಚ್ಚಳವಾಗಿ ಅರ್ಥವಾಗತೊಡಗಿದವು! ಅತ್ಯದ್ಭುತ ವಿಸ್ಮಯವೆಂದರೆ ನನ್ನ ರಾಜಾನಿಗೂ ನನ್ನಷ್ಟೇ ಅರ್ಥವಾಗಿ ಅವನ ಸೂಕ್ಷ್ಮಸಂವೇದನೆ ಜಾಗೃತವಾದುದು! ‘ಸರಸ್ವತಿಯ ವೀಣೆ ಗೊಬ್ಬರಗುಂಡಿಯಲ್ಲಿ ಬಿತ್ತು..’ ಎಂದು ಕುವೆಂಪುವರನ್ನು ಲೇವಡಿಮಾಡಿ ಸತ್ತ ಸಂತತಿಯವರು ನನ್ನನ್ನು ಕಂಡು ಕರುಬಿ ರಕ್ತದೊತ್ತಡಕ್ಕೆ ಒಳಗಾದರೆ?  ನೆರೆಮನೆಯ ಪ್ರೊಫೆಸರ್ ನಿಜಕ್ಕೂ ರಕ್ತದೊತ್ತಡಕ್ಕೆ ಒಳಗಾದರು. ನನ್ನಪ್ಪನಿಂದಾಗಿ ಸಿಗುತ್ತಿದ್ದ ಮಿಲ್ಟ್ರಿ ವಿಸ್ಕಿಯನ್ನು ಅತನಿಗೆ ಕೊಟ್ಟು ರಕ್ತದೊತ್ತಡವನ್ನು ಇಳಿಸುತಿದ್ದೆ.

ನಮ್ಮ ಸೂಕ್ಷ್ಮಪ್ರಜ್ಞೆಯ ಆಳದಲ್ಲಿ ಸತ್ಯ ಅಡಗಿರುತ್ತದೆಯೇನೋ! ನಾಯಿಗಳೆಂದರೆ ಚಿಕ್ಕಂದಿನಿಂದಲೂ ನನಗೆ ಪ್ರೀತಿ. ಅದರಲ್ಲೂ ಕಂತ್ರಿ ನಾಯಿಗಳೆಂದರೆ ನನಗೆ ಪ್ರಾಣ. ಯಾವ ಚಿತ್ರಕಾರನೂ ನಿರ್ಮಿಸಲಾರದ ಬಣ್ಣದ ವೈವಿಧ್ಯ, ಬಾಲವನ್ನು ಅಲ್ಲಾಡಿಸುವ ಕಲಾತ್ಮಕತೆ, ಯಾರೂ ಅನುಕರಿಸಲಾಗದ ಕುಳಿತುಕೊಳ್ಳುವ ಮಲಗುವ ನೆಗೆಯುವ ವಿವಿಧ ಭಂಗಿಗಳು, ಯಾವ ಸಂಗೀತದ ಲಯಕ್ಕೂ ಸಿಗದ ಬೊಗ   ಳುವ ಮುಲುಕುವ ಘೀಳಿಡುವ ನಾದಮಾಧುರ್ಯ, ಮೈಯನ್ನು ನುಲಿಯುತ್ತಾ, ಮೂಸುತ್ತಾ, ತೊನೆಯುತ್ತಾ ಪ್ರೀತಿಯನ್ನು ವ್ಯಕ್ತಪಡಿಸುವ ರೀತಿ.....ಆದರೆ ಇದೆಲ್ಲಾ ಕಂತ್ರಿನಾಯಿಗಳೆಂದು ಉಚ್ಚ ನಾಗರಿಕರು ವರ್ಗಿಕರಿಸಿರುವ ಶ್ವಾನ ಪ್ರಭೇದಕ್ಕೆ ಮಾತ್ರ , ಉಚ್ಚ ಕುಲದ ಜಾತಿ ನಾಯಿಗಳಿಗೆ ಸಂಬಂಧಿಸಿದ್ದಲ್ಲ.  ನೀವೇ ಹೇಳಿ-ಹಂದಿಯಂತೆ ಕೊಬ್ಬಿ ನಡೆಯಲಾರದ, ಕಣ್ಣು ಮೂಗು ಬಾಯಿಯೆಲ್ಲಾ ಕಲಸುಮೇಲೋಗರವಾದ ಮುಸುಡಿಯ, ಕೂದಲಿನಲ್ಲಿಯೇ ಮುಚ್ಚಿಹೋದ ಹಿಮಕರಡಿಯಂತಿರುವ, ಚೋಟುದ್ದದ ಕಾಲುಗಳಲ್ಲಿ ಮರಿಹಂದಿಯಂಥ ಹೊಟ್ಟೆಯನ್ನು ಹೊತ್ತು ತೆವಳುತ್ತಾ ನಡೆಯುವ, ಮುಂಗಸಿಯಂತೆ-ದೊಡ್ಡ ಹೆಗ್ಗಣದಂತೆ ನಿಂತಲ್ಲಿ ನಿಲ್ಲಲಾರದ, ಮೂಗಿಲಿಯಂತೆ ಕಿಚಕಿಚ ಎಂದು ಕೂಗುವ, ಮಾರುದ್ದದ ಕಾಲುಗಳ ಮೇಲೆ ಹಳೆ ದೋಣಿಯಂಥ ಹೊಟ್ಟೆಯನ್ನು ಹೊತ್ತು ನಿಲ್ಲುವ ಶಾಪಗ್ರಸ್ತ ಪ್ರಾಣಿ ಪ್ರಬೇಧವನ್ನು ನಮ್ಮ ನಂಬಿಗಸ್ತ ನಾಯಿ ನಾರಾಯಣನೆಂದು ಒಪ್ಪಿಕೊಳ್ಳಲು ಸಾಧ್ಯವಿದೆಯೇ? ನಂಬುವುದಾದರೆ ಅದು ಕಿಲುಬಿಡಿದ ನಾಗರಿಕತೆಯ ಅವ್ಯವಸ್ಥೆಯೆಂದೇ ನನ್ನ ನಂಬಿಕೆ. ನಾಯಿಯೆಂದರೆ ಸರ್ವತಂತ್ರ ಸ್ವತಂತ್ರ ಪ್ರಾಣಿ, ಅದಕ್ಕೆ ಕಾನ್ವೆಂಟಿನ ಶಿಸ್ತನ್ನು ಕಲಿಸುವುದು, ಯೂನಿಫಾರ್ಮ್‌ ತೊಡಿಸುವುದು ನಾಗರಿಕತೆಯ ವ್ಯಂಗ್ಯ… ಜೀನಿಯಸ್  ಐನ್‌ಸ್ಟೀನ್‌ರಗಿಂತ ಸಾಕ್ಷಿ ಬೇಕೆ ಎಂದೊಮ್ಮೆ ಪ್ರೊಫೆಸರನ್ನು ಕೇಳಿದಾಗ ನನ್ನ ರಾಜಾ ಬಾಲ ಎತ್ತಿ ಕುಣಿದಾಡಿದ್ದ.

ನಾನು ಮೊದಲು ತಂದದ್ದು ಒಂದು ಬೀದಿ ನಾಯಿಮರಿಯನ್ನು. ಅದಕ್ಕೆ ನಾನಿಟ್ಟ ಹೆಸರು ಹರಿಪ್ರಸಾದ! ಅದು ಪ್ರಜ್ಞಾಪೂರ್ವಕವಾಗಿ ಇಟ್ಟ ಹೆಸರೆ? ಒಣ ಮೀನಿನ ಸಾರನ್ನು ತಿಂದ ರಾತ್ರಿ ಎಲ್ಲಾ ನರಳಿ ಸತ್ತೇ ಹೋಯಿತು. ಒಂದು ಜಾತಿ ನಾಯಿಯನ್ನು ಸಾಕಿ ಎಂದ ಪ್ರೊಫೆಸರರ ಮಾತನ್ನು ಧಿಕ್ಕರಿಸಲೇ ಇನ್ನೊಂದು ಕಂತ್ರಿ ನಾಯಿಯನ್ನು ತಂದೆ, ಅದನ್ನು ‘ರಾಮಾ ಎಂದು ಕರೆದೆ, ಸುತ್ತಮುತ್ತಲಿನವರು ಇಷ್ಟು ಅಹಂಕಾರ ಬರಬಾರದು, ಇದಕ್ಕೆ ತಕ್ಕ ಶಿಕ್ಷೆಯನ್ನು ಅನುಭವಿಸಲೇಬೇಕಾಗುತ್ತದೆ ಎಂದರು. ರಾಮನು ಎಲ್ಲಿ ಕಳೆದುಹೋದನೋ ಗೊತ್ತಾಗಲೇ ಇಲ್ಲ. ಆಮೇಲೆ ಬಂದವನೇ ಈ ರಾಜಾ., ಕಾಮ್ರೇಡ್ ರಾಜಾ! ಇವನು ನಮ್ಮ ಬೀದಿಯಲ್ಲೆ ಜನ್ಮ ತಳೆದ ಪುಣ್ಯವಂತ. ನಗರದ ಸ್ವಚ್ಛತಾ ಕಾರ್ಯಕ್ರಮದಿಂದಾಗಿ ತಮ್ಮ ಸ್ವಾಭಾವಿಕ ಉಣಿಸೂ ಸಿಗದೆ, ಕಸದ ತೊಟ್ಟಿಯಲ್ಲಿ ಸಿಗುತಿದ್ದ ಹಳಸಲನ್ನು ತನ್ನ ಜೊತೆಗಾರರ ಜೊತೆ ಹಂಚಿಕೊಂಡು ತಿಂದು, ಅದು ಸಾಕಾಗದೆ ಮನೆಗಳ ಮುಂದೆ ಬಾಲ ಅಲ್ಲಾಡಿಸುತ್ತಾ ತನ್ನ ವಂಶಸ್ಥರೊಂದಿಗೆ ಕುಳಿತುಕೊಳ್ಳುತ್ತಿದ್ದ. ಇಲ್ಲಿನ ಮಾನವ ಕುಲದವರು ಅಳಿದುಳಿದ ಆಹಾರವನ್ನು ದನಗಳಿಗೆ ಹಾಕಿ ಅವುಗಳನ್ನು ಮುಟ್ಟಿ ನಮಸ್ಕರಿಸುತಿದ್ದರೇ ಹೊರತು ಈ ನಾಯಿಗಳಿಗೆ ಹಾಕುತ್ತಿರಲಿಲ್ಲ. ಈ ಶ್ವಾನಸಂತಾನ ಮಿತಿಮೀರಿ ರಾತ್ರಿ ನೆಮ್ಮದಿಯಿಂದ ನಿದ್ರಿಸಲು ಕಷ್ಟವಾದಾಗ ನಗರಪಾಲಿಕೆಯವರಿಗೆ ದೂರು ಕೊಟ್ಟಾಗ ಅವರ ವಿಷದ ಇಂಜಕ್ಷನ್ ಕೊಟ್ಟು ಇವುಗಳಿಗೆ ಮುಕ್ತಿಯನ್ನು ಕರುಣಿಸುತಿದ್ದರು. ರಾಜಾ ಬಾಲ ಅಲ್ಲಾಡಿಸುತ್ತಾ ಗೇಟಿನ ಹತ್ತಿರ ಸುಳಿದಾಡಿದಾಗ ನನ್ನ ಮಗಳು ತಟ್ಟೆಯಲ್ಲುಳಿದ ಅನ್ನದ ಅಗುಳಗಳನ್ನು ಹಾಕಿದ್ದನ್ನೇ ಅಮೃತವೆಂದು ಭಾವಿಸಿ ಅನಂತರ ದಿನವೂ ಸುಳಿದಾಡಲು ಪ್ರಾರಂಭಿಸಿದ. ನನ್ನ ಮಗಳೂ ಅನ್ನದ ಅಗುಳುಗಳ ಪ್ರಮಾಣವನ್ನು ಜಾಸ್ತಿ ಮಾಡುತ್ತಾ ಹೋದಾಗ ಗೇಟಿನ ಒಳಗೆ ಬಂದವನು ಬಾಗಿಲ ಹತ್ತಿರಕ್ಕೂ ಬಂದ. ಆಗಲೇ ಮನೆಯೆದುರಿನ ನಿವೃತ್ತ ಶಿಕ್ಷಕರು -ಅವರನ್ನು ಅಪ್ಪಾಜಿ ಎಂದು ಕರೆಯುತಿದ್ದೆವು- ಎಚ್ಚರಿಕೆಯ ಮಾತನ್ನು ನನಗೆ ಹೇಳಿದರು. ‘ಕಂತ್ರಿ ನಾಯಿಯನ್ನು ಮನೆಯೊಳಗೆ ಸೇರಿಸಿದರೆ ಲಕ್ಷ್ಮಿಯಾಗಲೀ ಸರಸ್ವತಿಯಾಗಲೀ ಮನೆಯೊಳಗೆ ಕಾಲಿಡುವುದಿಲ್ಲ, ಅದು ಏನೇನು ತಿನ್ನತ್ತೆ ನೋಡಿದ್ದೀರಾ?’ ‘ಒಂದು ರೀತಿ ನಾವೂ ಕಂತ್ರಿ ವಂಶದವರೇ ಅಲ್ವಾ ಅಪ್ಪಾಜಿ’ ಎಂದಿದ್ದಕ್ಕೆ ಕೋಪಿಸಿಕೊಂಡು ಅವರ ಮೊಮ್ಮಕ್ಕಳನ್ನು ನಮ್ಮ ಮನೆಯೆದುರು ಸುಳಿಯದಿದ್ದ ಹಾಗೆ ನೋಡಿಕೊಂಡರು. ರಾಜನಿಗೆ ಆ್ಯಂಟಿ ರೆಬೀಸ್ ಚುಚ್ಚುಮದ್ದನ್ನು ಕೊಡಿಸಿ, ಮನೆಯೊಳಗೆ ಬಿಟ್ಟುಕೊಂಡೆವು. ನನ್ನ ಮಗಳು ಅವನಿಗೆ ಸ್ನಾನ ಮಾಡಿಸಿ, ಕೊರಳಿಗೊಂದು ಬೆಲ್ಟ್ ಕಟ್ಟಿ, ತನ್ನ ರೂಮಿನೊಳಗೆ ಮಲಗಿಸಿಕೊಳ್ಳಲು ಪ್ರಾರಂಭಿಸಿದಳು. ಅವನಿಗೆ ‘ಕಾಮ್ರೇಡ್ ರಾಜಾ’ ಎಂದು ನಾಮಕರಣವನ್ನೂ ಮಾಡಿದೆವು. ಅವನು ನಮ್ಮ ಕುಟುಂಬದ ಸದಸ್ಯನೇ ಆಗಿಹೋದನು. ಅವನನ್ನು ಬಂಧಿಸಿ ವಾಕಿಂಗಿಗೆ ಕರೆದುಕೊಂಡು ಹೋಗುತ್ತಿರಲಿಲ್ಲ. ರಾತ್ರಿ ಹೊರಗೆ ಬಿಟ್ಟರೆ ತನ್ನ ಕುಲಭಾಂದವರನ್ನೆಲ್ಲ ಮಾತಾಡಿಸಿಕೊಂಡು ಬರುತಿದ್ದ. ನಾವು ತಿನ್ನುವುದನ್ನೇ ಭಕ್ಷಿಸುವುದನ್ನು ಬಿಟ್ಟು ಬೇರೇನನ್ನೂ ಅವನು ತಿನ್ನುತಿರಲಿಲ್ಲ.

ರಾತ್ರಿ ನಾನು ತಾರಸಿಯ ಮೇಲೇ ವ್ಯಾಯಾಮ ಮಾಡುವಾಗ ನನ್ನೆದುರಿಗೆ ರಾಜಾ ಕುಳಿತುಕೊಂಡು ನನ್ನನ್ನೆ ಅನುಕರಿಸಲು ಪ್ರಯತ್ನಿಸುತಿದ್ದ. ನಾನು ಸಂಗೀತವನ್ನು ಕೇಳಿದರೆ ಅವನೂ ಕೇಳಿಸಿಕೊಳ್ಳುತಿದ್ದ. ಬೈದರೆ ಬೇಸರಿಸಿಕೊಳ್ಳುತಿದ್ದ. ಖುಷಿ ಪಡಿಸಿದರೆ ಪ್ರೀತಿಯಿಂದ ಕೈ ನೆಕ್ಕುತಿದ್ದ. ನಮ್ಮೊಡನೆ ಆಟವಾಡುತಿದ್ದ. ಇದೆಲ್ಲದಕ್ಕೂ ಮಿಗಿಲಾದ ವಿಸ್ಮಯವೆಂದರೆ ಅವನು ಭಾವನಾತ್ಮಕವಾಗಿ ನನ್ನೊಡನೆ ಸಂವಹನ ಮಾಡುತಿದ್ದ! ನಾನು ಬಾಲ್ಕನಿಯಲ್ಲಿದ್ದಾಗ ಪ್ರೊಫೆಸರ್ ಅವರ ಬಾಲ್ಕನಿಗೆ ಬಂದು ಮಾತಿನಲ್ಲಿ ತೊಡಗುತಿದ್ದರು. ತಮ್ಮ ನಾಯಿಯನ್ನು ಮನೆಯೊಳಗೆ ಕೂಡಿಹಾಕಿ ಬರುತಿದ್ದರು. ನಮ್ಮಿಬ್ಬರಲ್ಲಿ ಬಹಳ ವಿಷಯಗಳ ಮೇಲೆ ಸಂವಾದವಾಗುತಿತ್ತು. ಅದಕ್ಕೆಲ್ಲಾ ಸಾಕ್ಷಿಯಾಗಿ ರಾಜಾ ಕುಳಿತುಕೊಳ್ಳುತಿದ್ದುದು ಅವರಿಗೆ ಅಸಹನೀಯವಾಗುತಿತ್ತು. ‘ಈ ನಾಯಿಯನ್ನು ಕೆಳಗೆ ಕಳುಹಿಸಿ, ಅದೊಂದು ನ್ಯೂಸೆನ್ಸ್, ಅದಕ್ಕೇನು ನಮ್ಮ ಮಾತುಗಳು ಅರ್ಥವಾಗುತ್ತದೆಯೇ?’ ಎಂದಾಗ ನಾನು ಸ್ಪಷ್ಟವಾಗಿ ಹೇಳಿದ್ದೆ: ‘ಹೀಗೆಯೇ ನೀವು ಮುಕ್ಕಾಲು ಪಾಲು ಜನರನ್ನು ಅಕ್ಷರ ವಂಚಿತರನ್ನಾಗಿ ಮಾಡಿದಿರಿ, ನಾಲಿಗೆಯನ್ನು ಕತ್ತರಿಸಬೇಕೆಂದಿರಿ, ಕಿವಿಗೆ ಕಾಯಿಸಿದ ಅರಗನ್ನು ಸುರಿಯ ಬೇಕೆಂದಿರಿ’. ಕೋಪಿಸಿಕೊಂಡ ಅವರು, ‘ಕಲಿಯಲೂ ಪೂರ್ವಜನ್ಮದ ಸಂಸ್ಕಾರ ಬೇಕು’ ಎಂದು ದುಸಾಬುಸಾ ಎದ್ದು ನಿಂತರು. ರಾಜಾ ಮೈಯನ್ನು ಸೆಟೆದು, ಬಾಲವನ್ನು ಜೋರಾಗಿ ಅಲ್ಲಾಡಿಸುತ್ತಾ ಬೊಗಳುತ್ತಾ ನಿಂತನು! ‘ಈಗ ನಿಮ್ಮ ಕರ್ಮ ಕಾಂಡಗಳೆಲ್ಲಾ ಇಂಥ ಪ್ರಾಣಿಗಳಿಗೂ ಅರ್ಥವಾಗುತ್ತೆ ಸ್ವಾಮಿ’ ಎಂದೆ. ಸುಮ್ಮನೆ ಮನೆಯೊಳಗೆ ಹೋದರು. ಮುಂದಿನ ತಿಂಗಳು ಮತ್ತೊಂದು ಬಾಟಲಿಯನ್ನು ಕೊಡುವವರೆಗೂ ಅವರ ಕೋಪ ತಿರಸ್ಕಾರ  ನಿಧಾನಕ್ಕೆ ಇಳಿಯುತಿತ್ತು. ಆದರೆ ಅವರ ಮನೆಯ ಜೆಫ್ರಿಗೂ ನಮ್ಮ ರಾಜಾಗೂ ಯಾವುದೇ ದ್ವೇಷವಿರಲಿಲ್ಲ. ಕಂಡಾಗಲೆಲ್ಲಾ ಬಾಲ ಅಲ್ಲಾಡಿಸುತ್ತ ಹತ್ತಿರವಾಗಲು ಪ್ರಯತ್ನಿಸುತಿದ್ದವು. ಆದರೆ ಪ್ರೊಫೆಸರರ ಹೆಂಡತಿಯಾಗಲೀ ಮಗಳಂದಿರಾಗಲೀ ತಮ್ಮ ಮುದ್ದು ನಾಯಿಯ ಮುಖ ತೋರಿಸದೆ ಕಿಟಕಿಬಾಗಿಲುಗಳನ್ನು ಮುಚ್ಚುತಿದ್ದರು. ಅವರು ತಮ್ಮ ಜೆಫ್ರಿಯೊಡನೆ ಮಾತಾಡುತಿದ್ದ ಇಂಗ್ಲಿಷ್ ನಮ್ಮ ರಾಜಾನಿಗೆ ಅರ್ಥವಾಗದೆ ನನ್ನ ಮುಖವನ್ನು ಪೆದ್ದಾಗಿ ನೋಡುತಿದ್ದ.

ನಾನು ಮೈಮೇಲಿನ ಅಂಗಿಯನ್ನು ತೆಗೆದು ಅಂಗಸಾಧನೆ ಮಾಡುವಾಗ ಹಲವು ಭಾರಿ ಪಕ್ಕದ ಮನೆಯ ಕತ್ತಲ ಕೋಣೆಯೊಳಗಿನಿಂದ ಜೋಡಿಕಣ್ಣುಗಳು ಅಸ್ಪಷ್ಟವಾಗಿ ಕಾಣಿಸುತಿದ್ದವು. ರಾಜಾ ಆಕಡೆ ತಿರುಗಿ ಬೊಗಳಿದ ಕೂಡಲೇ ಅವು ಮರೆಯಾಗುತಿದ್ದವು. ನಾನು ಶವಾಸನ ಹಾಕಿ ಮಲಗಿದಾಗ ಅವನೂ ತನ್ನ ನಾಲ್ಕೂ ಕಾಲಗಳನ್ನು ನೆಲಕ್ಕೆ ಅಂಟಿಸಿ ಮಲಗುತಿದ್ದ. ನಾನು ಎದ್ದು ಕುಳಿತಾಗ ಅವನು ಬಂದು ನನ್ನ ತೊಡೆಯ ಮೇಲೆ ತಲೆ ಹಾಕಿ ಮಲಗುತಿದ್ದ. ಅದು ನಮ್ಮಿಬ್ಬರ ಭಾವನಾತ್ಮಕ ಸಂವಹನದ ಸಮಯ. ನಮ್ಮ ಅಮೂರ್ತ ಸಂವಾದ ಕಾಲ ದೇಶದ ಎಲ್ಲೆಯನ್ನು ದಾಟಿ ಹೋಗುತಿತ್ತು :

...ಮಾನವೇತಿಹಾಸದಲ್ಲಿ ಅಲೆಮಾರಿಗಳಾಗಿಯೇ ಬದುಕುತ್ತಿರುವ ಜಿಪ್ಸಿಗಳ ಮೂಲ ನಮ್ಮ ರಾಜಾಸ್ಥಾನವಂತೆ.

...ನಮ್ಮ ಮಾನವ ಕುಲದವರೇ ಆದ ರೊಹಿಂಗ್ಯಾ ಮುಸ್ಲಿಮರಿಗೆ  ಇನ್ನೂ ಎಲ್ಲಿಯೂ ನೆಲೆ ಸಿಕ್ಕಿಲ್ಲವಂತೆ

...ದೊಂಬಿದಾಸರು, ಹಕ್ಕಿಪಿಕ್ಕಿಯವರಂಥ ನೂರಾರು ಬುಡಕಟ್ಟಿನವರಿಗೆ ತಮ್ಮದೇ ಆದ ನೆಲೆ ಇನ್ನೂ ಸಿಕ್ಕಿಲ್ಲ.

...ನೀಗ್ರೋಗಳಿಗೆ ಸ್ವಂತ ನೆಲವೇ ಇಲ್ಲ.

...ಬುದ್ದಂ ಶರಣಂ ಗಚ್ಛಾಮಿ...ಟಿಬೇಟನ್ನರಿಗೆ ತಮ್ಮ ನೆಲದಲ್ಲಿ ನೆಲೆಯೇ ಇಲ್ಲ.

... ಅಸಂಖ್ಯಾತ ಜನಾಂಗಗಳಿಗೆ ಬದುಕುವ ಹಕ್ಕಿಲ್ಲ, ಮಾತಾಡುವ ಸ್ವಾತಂತ್ರ್ಯವಿಲ್ಲ.

...ಶಿಷ್ಟ ಕೇಂದ್ರಿತ ಅಲ್ಪ ಸಂಖ್ಯಾತರ ಸುಖಕ್ಕಾಗಿ, ಹಲವು ಪದರಗಳ ಪರಿಶಿಷ್ಟ ಬಹುಸಂಖ್ಯಾತರ ಸೇವೆ

...ಉಳ್ಳವರ ಅರಮನೆಯೊಳಗೆ ಜಾತಿನಾಯಿಗಳು, ಬೀದಿಯ ತುಂಬಾ ಕಂತ್ರಿನಾಯಿಗಳು....

ತಲೆಎತ್ತಿ ನನ್ನ ಕಣ್ಣನ್ನೆ ದಿಟ್ಟಿಸಿ ನೋಡುತ್ತಾ ನಿಂತನು ರಾಜಾ. ಹೌದು, ನಾನು ಅವನ ತಲೆ ನೇವರಿಸುತ್ತಾ ಹೇಳಿದೆ:

ಭೂಮಿಯ ಉದ್ದಗಲಕ್ಕೂ ಇದೇ ವಾಸ್ತವ. ನವ ನಾಗರೀಕತೆಯ ಹುಸಿ ಮೌಲ್ಯಗಳು ಪಾಕಗಟ್ಟಿದ್ದೇ ನೆಲಮೂಲ ಬದುಕಿನ ಕೊಳೆತ ಗೊಬ್ಬರದ ಮೇಲಲ್ಲವೇ? ಉಚ್ಚ ಸಂಸ್ಕೃತಿಯ ಮರಳಿನ ಗೋಪುರಗಳೆಲ್ಲಾ ನಿಂತಿರುವುದು ಶ್ರಮಜೀವಿ ಬದುಕಿನ ಭದ್ರ ಅಡಿಪಾಯದ ಮೇಲಲ್ಲವೇ? ಬೀದಿ ಬೀಡಾಡಿಗಳ ಬೆವರಿನ ಮೇಲೆಯೇ ಈ ಭವ್ಯ ಮಹಲುಗಳ ಬದುಕು ನಿಂತಿರುವುದಲ್ಲವೇ? ನನ್ನ ವಂಶ ಬಹಳ ದೊಡ್ಡದಣ್ಣ. ಸುಸಂಸ್ಕೃತರ ಬದುಕಿನ ಅಮೇಧ್ಯವನ್ನೆಲ್ಲಾ ಬಳಿದು ಶುದ್ದ ಮಾಡುವವರು, ಇವರು ಉಡುವ ತೊಡುವ ಉಣ್ಣುವ ಎಲ್ಲವನ್ನೂ ನೀಡುವವರು, ಈ ಭೂಮಿಗೆ ಬಡಿಯುವ ಎಲ್ಲ ರೋಗಗಳನ್ನೂ ನುಂಗಿ ಜೀರ್ಣಿಸಿಕೊಳ್ಳುವವರು ಎಲ್ಲರೂ ನಮ್ಮ ವಂಶಸ್ಥರೇ ಅಲ್ಲವೇ? ...ನಮಗೆ ಸುಸಂಸ್ಕೃತರ ನಡೆ ನುಡಿ ನೆಲೆ ಬೆಲೆಗಳು ದಕ್ಕುವುದಾದರೂ ಹೇಗೇ? ಈ ಭೂಮಿಗೆ ಅಜೀರ್ಣವಾದಾಗ ಬಲಿಯಾಗುವವರು, ನಾಗರಿಕರಿಗೆ ಕೋಪ ಬಂದಾಗ ಗುರಿಯಾಗುವವರು ಮುಂಚೂಣಿಯಲ್ಲಿರುವ ನಾವೇ ಅಲ್ಲವೇ?... ನಿಮ್ಮಪ್ಪನಂಥ ಕಾಲಾಳು ಸೈನಿಕರಂತೆ?...ನಾವು ನಾಡಾಡಿಗಳು, ಬೀಡಾಡಿಗಳು, ಪದಕುಸಿಯೆ ನೆಲವಿಲ್ಲದ ಬೀದಿನಾಯಿಗಳು. ರಾಜಾ ಹೀಗೆ ಹೇಳುತಿದ್ದನೆ?

ನನ್ನ ರಾಜಾನಂತೆಯೇ ನಾನೂ ಬೀಡಾಡಿಯೇ ಆದುದರಿಂದ ಇಲ್ಲಿಯವರಾರೂ ನನ್ನನ್ನು ಸುಲಭವಾಗಿ ಹತ್ತಿರಕ್ಕೆ ಸೇರಿಸಿಕೊಳ್ಳವುದಿಲ್ಲ. ಹಬ್ಬ ಹರಿದಿನ ಪೂಜೆ ಭಜನೆ ಸಂಘ ಸಂಸ್ಥೆಗಳಿಂದ ಬಹಿಷ್ಕೃತನಾದುದರಿಂದ ಶ್ರೇಷ್ಠರಿಂದ ಹೋಗಲಿ ನನ್ನದೇ ವಂಶಸ್ಥರಿಂದಲೂ ತಿರಸ್ಕೃತನಾಗಿದ್ದೇನೆ. ನನ್ನಿಂದಾಗಿ ಇಂಗ್ಲಿಷ್ ಬಾರದ ನನ್ನ ಹೆಂಡತಿ, ಕನ್ನಡ ಶಾಲೆಯ ನನ್ನ ಮಕ್ಕಳೂ ಸಹ ಅಸ್ಪೃಶ್ಯರಾಗಿದ್ದಾರೆ. ವೇದವ್ಯಾಸರ ಗಂಧಗಮಲಿನಲ್ಲಿ ಮುಳುಗಿ ಹೋಗಿರುವ ಇಲ್ಲಿ, ನಾನು ಇವರ ಅಸಹನೆ ತಿರಸ್ಕಾರ ಕುಚೋದ್ಯಕ್ಕೆ ಗುರಿಯಾದರೂ ನನ್ನ ರಾಜಾನಂತೆ ಯಾವುದನ್ನೂ ಲೆಕ್ಕಿಸದೆ ಬೀಡಾಡಿಯಾಗಿದ್ದೇನೆ. ಇವರ ತಿರಸ್ಕಾರಕ್ಕೆ ರಾಜಾನೂ ತುತ್ತಾದರೂ ಎಂದಿಗೂ ಅವನ ಕೊರಳಿಗೆ ಚೈನು ಬಿಗಿದು, ದಾರಿಯ ಪಕ್ಕದಲ್ಲಿ ಹೇಸಿಗೆ ಮಾಡಿಸಲು ವಾಕಿಂಗಿಗೆ ಕರೆದುಕೊಂಡು ಹೋಗುವುದಿಲ್ಲ. ರಾತ್ರಿ ಮತ್ತು ಬೆಳಗಿನ ಮಸುಕಿನಲ್ಲಿ ಗೇಟು ತೆರೆದು ಬಿಟ್ಟರೆ ತನ್ನ ಕುಲಬಾಂಧವರೊಡನೆ ಅಶ್ವಮೇಧಯಾಗವನ್ನು ಮುಗಿಸಿ ಮಾನವರಾರಿಗೂ ಕಿಂಚಿತ್ತೂ ತೊಂದರೆಯನ್ನು ಕೊಡದೆ ಕುದುರೆಯಂತೆ ಬಂದು ಸೇರುತ್ತಾನೆ. ಆದರೂ ನನ್ನ ರಾಜಾನಂತೆಯೇ ನನ್ನ ಮನೆಯೂ ಬೇಡದ ಜಾಗದಲ್ಲಿ ಹುಟ್ಟಿದ ಕುರುವಿನಂತೆ ಅಕ್ಕಪಕ್ಕದವರಿಗೆ ತೀರ ಅಸಹನೀಯವಾಗಿದೆ.

ಆ ದಿನ ರಾತ್ರಿ ಪ್ರೊಫೆಸರರಿಗೆ ನಾನು ಕೊಟ್ಟಿದ್ದ ಮಿಲ್ಟ್ರಿ ವಿಸ್ಕಿ ತುಸು ಜಾಸ್ತಿಯಾಗಿತ್ತೆಂದು ಕಾಣುತ್ತದೆ. ರಾತ್ರಿ ಬಾಲ್ಕನಿಯ ಮೇಲೆ ಬಂದರು. ತಲೆಗೆ ಏರಿದ್ದರಿಂದ ಬಾಗಿಲನ್ನು ಮುಚ್ಚಲು ಮರೆತರೆಂದು ಕಾಣುತ್ತದೆ. ನಾನು ರಾಜಾನೊಡನೆ ಕುಳಿತಿದ್ದೆ. ಶ್ರಾವಣ ಮಾಸದ ಅಮಲು ಶ್ವಾನ ಸಂತತಿಗೆಲ್ಲಾ ತಟ್ಟಿಬಿಟ್ಟಿದ್ದರಿಂದ ಬೀದಿಯೆಲ್ಲಾ ಕಾಮನ ಹುಣ್ಣಿಮೆಯಿಂದ ರಂಗಾಗಿತ್ತು. ಪ್ರೊಫೆಸರರ ಹೆಂಡತಿ ಮಕ್ಕಳು ಶ್ರಾವಣಪೂಜೆಗೆ ದೇವಸ್ಥಾನಕ್ಕೆ ಹೋಗಿದ್ದರೆಂದು ಕಾಣುತ್ತದೆ.

.....ಆ ಹಡಬೆ ನಾಯಿಗಳ ಉಪದ್ರ ಜಾಸ್ತಿಯಾಯಿತು. ನೆಮ್ಮದಿಯಿಂದ ನಿದ್ರೆ ಮಾಡುವುದಕ್ಕೂ ಬಿಡುವುದಿಲ್ಲ. ಈ ಕಂತ್ರಿ ನಾಯಿಗಳಿಂದ ನಮ್ಮ ನಾಯಿಗಳನ್ನು ಬಚಾವು ಮಾಡುವುದರಲ್ಲೇ ಸಾಕಾಗುತ್ತದೆ. ನಗರಪಾಲಿಕೆಯವರಿಗೆ ಯಾವುದೂ ಬೇಕಿಲ್ಲ. ನಿಮ್ಮ ಕಂತ್ರಿನಾಯಿಯ ಬಗ್ಗೆ ಆಕ್ಷೇಪಣೆ ಏನಿಲ್ಲ. ಅದಕ್ಕೂ ಚೈನುಹಾಕಿ ಲಕ್ಷಣವಾಗಿ ವಾಕಿಂಗ್ ಕರೆದುಕೊಂಡು ಹೋಗಿ ಸ್ವಲ್ಪ ಒಳ್ಳೆಯ ಮ್ಯಾನರ್ಸ್‌ಗಳನ್ನು ಕಲಿಸಿ ಎಂದರೆ ನೀವು ಕೇಳುವುದೇ ಇಲ್ಲ. ಅಕ್ಕ ಪಕ್ಕದವರಿಗೆ ನ್ಯೂಸೆನ್ಸ್ ಕೊಡಬಾರದೆಂಬ ಮಿನಿಮಮ್ ಸಂಸ್ಕಾರವೂ ಇಲ್ಲವೆಂದಾದರೆ ಓದಿದ್ದಕ್ಕಾದರೂ ಏನು ಪ್ರಯೋಜನ?

......ಸ್ವಾಮಿ ಸಂಸ್ಕಾರವಂತರು ಕೋಪಮಾಡಿಕೊಳ್ಳಬಾರದೆಂದು ನಾನು ನಿಮಗೆ ಹೇಳಬೇಕಾಗಿಲ್ಲ ಅಲ್ಲವೇ? ನನ್ನ ರಾಜಾನಿಂದ ಯಾರಿಗೂ ತೊಂದರೆಯಾಗಿಲ್ಲ. ನಾನು ಅವನಿಗೆ ಇಂಗ್ಲಿಷ್ ಕಲಿಸಿಲ್ಲ, ವಾಕಿಂಗ್ ಕರೆದುಕೊಂಡು ಹೋಗಿ ಯಾರ‍್ಯಾರ ಮನೆಗಳ ಮುಂದೆಯೋ ಹೇಸಿಗೆ ಮಾಡಿಸುವುದಿಲ್ಲ, ರಾತ್ರಿ ಮಾತ್ರ ಹೊರಗೆ ಅಡ್ಡಾಡಿ ಬಂದು ಸೇರುತ್ತಾನೆ, ಅವನನ್ನು ಕಟ್ಟಿಹಾಕುವುದು, ಡಿಸಿಪ್ಲಿನ್ ಕಲಿಸುವುದು ಎಳೆ ಮಕ್ಕಳನ್ನು ಕಾನ್ವೆಂಟಿಗೆ ಸೇರಿಸಿದಷ್ಟೇ ಪಾಪವೆಂದು ನಿಮಗೆ ಬಹಳ ಸಾರಿ ಹೇಳಿದ್ದೇನೆ. ಇನ್ನು ಬೀದಿನಾಯಿಗಳ ಜವಾಬ್ದಾರಿ ನನ್ನದಲ್ಲ.

ನನ್ನ ಮೇಲೆ ಯುದ್ಧ ಮಾಡುವುದಕ್ಕೇ ಶತಮಾನಗಳಿಂದ ಕಾದು ಕೂತಿದ್ದವರಂತೆ ಓತಪ್ರೋತವಾಗಿ ಕೂಡಿಟ್ಟ ವಿಷವನ್ನೆಲ್ಲಾ ವಾಂತಿ ಮಾಡಿಕೊಂಡರು: ಸ್ವಾತಂತ್ರ್ಯ ಬಂದಾಗ ಈ ದೇಶ ಸೊಷಲಿಸ್ಟರ ಕೈಗೆ ಸಿಕ್ತು ನೋಡಿ, ಅಲ್ಲೇ ಆಗಿದ್ದು ಎಡವಟ್ಟು. ಸಮಾನತೆಯಂತೆ, ಒಡಹುಟ್ಟಿದ ಅಣ್ಣತಮ್ಮಂದಿರೆ ಸಮನಾಗಿ ಹಂಚಿಕೊಳ್ಳೋದಿಲ್ಲ... ಇನ್ನು ವಿದ್ಯೆ, ಭಾಷೆ, ಯೋಗ್ಯತೆ ಇಲ್ಲದ ಕಾಡುಮನುಷ್ಯರಿಗೆಲ್ಲ ಸಮಾನತೆ ಕೊಡಬೇಕಂತೆ. ವಿಶೇಷ ರಿಯಾಯಿತಿಗಳನ್ನು ಕೊಟ್ಟು ಮುಖ್ಯವಾಹಿನಿಗೆ ತರಬೇಕಂತೆ. ಈ ಅಯೋಗ್ಯರಿಗಾಗಿ ಯೋಗ್ಯರ ಕೊಲೆಮಾಡಬೇಕಂತೆ. ಈ ಛಿದ್ರಾನ್ವೇಷಿಗಳಿಂದ, ವಿಚಾರವಾದಿಗಳಿಂದ, ಕಮ್ಯುನಿಸ್ಟ್‌ ಇಂಟಿಲಾಕ್ಚುವಲ್‍ಗಳಿಂದ ದೇಶಕ್ಕೆ ಈ ಗತಿ ಬಂದಿರುವುದು. ಒಂದು ವ್ಯವಸ್ಥೆಯನ್ನು ಕಟ್ಟುವುದನ್ನು ಬಿಟ್ಟು ಒಡೆದುಹಾಕುತ್ತಾರೆ...ಮನೆಮುರುಕರು.

ಹೌದು ಸಾರ್ ಕಟ್ಟಿಹಾಕಬೇಕು, ಇಡೀ ಸಮಾಜವನ್ನು ಕಬ್ಬಿಣದ ಸಂಕೋಲೆಯೊಳಗೆ ಕಟ್ಟಿ ಹಾಕಬೇಕು, ನಾಯಿಯನ್ನು ಮಾತ್ರವಲ್ಲ, ಹೆಂಡತಿ ಮಕ್ಕಳನ್ನೂ ಕಟ್ಟಿಹಾಕಬೇಕು ಮನೆಯೊಳಗೆ...

ಅವರ ಮರ್ಮಕ್ಕೇ ತಾಕಿತೆಂದು ಕಾಣುತ್ತದೆ. ನಖಶಿಖಾಂತ ಉರಿದು ಕುರ್ಚಿಗೆ ಕುಸಿದು ಕುಳಿತು, ವಿಸ್ಕಿಯನ್ನು ಹೀರುತ್ತಾ ನನ್ನ ಮುಖವನ್ನೇ ದಿಟ್ಟಿಸುತ್ತಾ ಕೇಳಿದರು: ನಿಜ ಹೇಳು ನನ್ನ ಹೆಂಡತಿಯನ್ನು ನೀನು ನಿಜವಾಗಿಯೂ ಆಂಟಿ ಎಂದೇ ಭಾವಿಸಿದ್ದೀಯಾ? ನನ್ನ ಮಗಳಂದಿರನ್ನು ಕೆಟ್ಟ ದೃಷ್ಟಿಯಿಂದ ನೋಡಿಲ್ಲವಾ?

ನನಗೆ ದಿಗ್‍ಭ್ರಾಂತಿಯ ಜೊತೆಗೆ ಬಹಳ ನೋವಾಯಿತು. ಬಹಳ ದಿನಗಳಿಂದ ಇವರ ಮನಸ್ಸನ್ನು ಇದು ಕೊರೆಯುತ್ತಿರಬಹುದು, ನಾನು ರಾತ್ರಿ ಬಾಲ್ಕನಿಯ ಮೇಲೆ ಅಂಗಸಾಧನೆಯನ್ನು ಮಾಡುತಿದ್ದುದು ಹೌದು, ಪಕ್ಕದ ಮನೆಯ ಕತ್ತಲ ಕೋಣೆಗಳ ಕಿಟಕಿಗಳಿಂದ ಮೂರು ಜೋಡಿಕಣ್ಣುಗಳು ಕದ್ದು ನೋಡುತಿದ್ದುದೂ ಹೌದು, ಅಂತದ್ದೆ ಸನ್ನಿವೇಶದಲ್ಲಿ ಪ್ರೊಫೆಸರರ ಕಣ್ಣಿಗೆ ಬಿದ್ದಿರಲೂಬಹುದು. ನಾನು ಅವರ ಕೈಹಿಡಿದು ಮೃದುವಾಗಿ ಮೈ ತಟ್ಟತ್ತಾ ನಿಧಾನಕ್ಕೆ ಹೇಳಿದೆ. ‘ ನಿಮ್ಮ ವಿದ್ಯೆ, ಸಂಸ್ಕಾರ ಬುದ್ದಿಗಂಟಿದ ಶತಮಾನದ ಕಿಲುಬನ್ನು ತೊಳೆಯಲು ಸೋತಿತಲ್ಲ ಪ್ರೊಫೆಸರ್. ನನಗೆ ನಿಮ್ಮ ಶ್ರೇಷ್ಠ ಸಂಸ್ಕೃತಿಯ ಉತ್ಕೃಷ್ಟ ಮೌಲ್ಯಗಳಾಗಲೀ, ಮಾತುಗಳಾಗಲೀ ಅಗತ್ಯವಿಲ್ಲ.....ನಾನು ಯಾರನ್ನೂ ಆಂಟಿ ಎಂದು, ತಂಗಿ ಎಂದು ಕರೆಯುವುದಿಲ್ಲ. ಯಾವ ಆತ್ಮವಂಚನೆಯೂ ಇಲ್ಲದೆ ಮನುಷ್ಯರನ್ನಾಗಿ ಕಾಣುತ್ತೇನೆ. ನಿಮ್ಮ ಅನುಮಾನಗಳನ್ನು ನೀವೇ ಪರಿಹರಿಸಿಕೊಳ್ಳಿ. ಸಂತೃಪ್ತಿ ಇಲ್ಲದ ಮನಸ್ಸುಗಳು ಮಾತ್ರ ಕಿಂಡಿಯನ್ನು ಇಣುಕುತ್ತವೆ ಅಲ್ಲವೇ? ಆ ವಿಕಾರಗಳ ಬಗ್ಗೆ ನನಗೆ ಯಾವ ಆಸಕ್ತಿಯೂ ಇಲ್ಲ, ಜವಾಬ್ದಾರಿಯೂ ಇಲ್ಲ. ಅದು ನಿಮ್ಮ ತಲೆನೋವು ಮಾನ್ಯರೇ. ಈ ನೆಲದೊಳಗೇ ಕರಗಿ ಕೊಳೆತು ನಾಶವಾಗದೆ ಚಿಗುರೊಡೆದ ಯಾರೂ ಆತ್ಮವಂಚನೆ ಮಾಡಿಕೊಳ್ಳಲಾರರು..... ಆದರೆ ಸುಳ್ಳು ಆತ್ಮ ವಂಚನೆಗಳು ನಿಮ್ಮಂಥ ಶ್ರೇಷ್ಠರಿಗೆ ಅಗತ್ಯವಾಗಿ ಬೇಕು.... ನೀವು ಮನೆಗೆಲಸದವಳನ್ನು ಆಕ್ರಮಿಸಿ ಬಿದ್ದುಕೊಂಡಾಗ ನಿಮ್ಮ ಇಂಗ್ಲಿಷ್ ನಾಯಿ ಬೊಗಳಲು ಪ್ರಾರಂಭಿಸಿತು. ಅಲ್ಲಿಗೆ ಬಂದ ನಿಮ್ಮ ಧರ್ಮ ಪತ್ನಿಯವರಿಗೆ ನೇರವಾಗಿ ಸಿಕ್ಕಿ ಬಿದ್ದಿರಿ ! ಅದೇ ಅಪರಾಧಿ ಮನಸ್ಸಿಗೆ ಬೇಕಿಲ್ಲದ ಅನುಮಾನ ಹುಟ್ಟುತ್ತಿದೆ. ಧೈರ್ಯವಾಗಿರಿ, ಸಮಾದಾನದಿಂದ ಕ್ಲಬ್ಬಿಗೆ ಹೋಗಿ, ನನ್ನ ಮಾತುಗಳನ್ನು ನಂಬಿ, ಆದರೆ ಬೇರೆಯವರನ್ನು ನಂಬಿ ಎಂದು ಹೇಳುವ ಧೈರ್ಯವಾಗಲೀ ಹಕ್ಕಾಗಲೀ ನನಗೆಲ್ಲಿದೆ ಹೇಳಿ’

ಪ್ರೊಫೆಸರ್ ನನ್ನ ಕೈಹಿಡಿದು ಅಳಲಾರಂಭಿಸಿದರು. ಆದರೆ ನಾವಿಬ್ಬರೂ ನಮ್ಮ ರಾಜಾನನ್ನೆ ಮರೆತು ಬಿಟ್ಟಿದ್ದೆವು. ಪಕ್ಕದ ಮನೆಯಿಂದ ಛಿ... ಛಿ... ಎನ್ನುವ ಶಬ್ದ ಬಂದಾಗಲೇ ನಾವು ಎಚ್ಚರವಾದದ್ದು. ಆಚೆ ನೋಡಿದರೆ ಅವರ ಬಾಲ್ಕನಿಯ ಮೇಲೆ ಕಾಮ್ರೇಡ್ ರಾಜಾ ಡಾಬರ್ಮನ್ನಳ ಮೇಲೆ ಆಕ್ರಮಣ ಮಾಡಿದ್ದ! ಮದನವಿಲಾಸದಲ್ಲಿ ಅವು ಮೈಮರೆತಿದ್ದವು. ಬೇಕೋಬೇಡವೋ ಎಂದು ಬಹಳ ಮುಜಗರದಿಂದ ಪ್ರೊಫೆಸರ್ ಹೆಂಡತಿ ಅವುಗಳನ್ನು ದೂರಮಾಡಲು ಗದರುತಿದ್ದರು, ಮಗಳಂದಿರು ಕಿಟಕಿಯಿಂದ ನೋಡುತ್ತಾ ಸುಮ್ಮನೆ ನಿಂತಿದ್ದರೆ? ಆಕಾಶ ಕಳಚಿಬಿದ್ದಂತೆ, ಕಲಿಯುಗವೇ ನಾಶವಾಗುವ ವರ್ಣಸಂಕರವಾದಂತೆ ಪ್ರೊಫೆಸರ್ ಎದ್ದು ಅರಚಾಡುತ್ತಾ ಅವುಗಳನ್ನು ಬಿಡಿಸಲು ನುಗ್ಗುವುದರಲ್ಲಿದ್ದರು, ನಾನು ಅವರ ಕೈಯನ್ನು ಗಟ್ಟಿಯಾಗಿ ಹಿಡಿದಕೊಂಡು ಹೇಳಿದೆ. ಆ ದಡ್ಡತನ ಮಾಡಬೇಡಿ, ಇಂಥ ಸಮಯದಲ್ಲಿ ಅವು ಬಹಳ ಫೆರೋಷಿಯಸ್ ಆಗಿರುತ್ತವೆ. ಅವರು ಕುಸಿದು ಕುಳಿತುಕೊಂಡರು. ಸುಸಂಸ್ಕೃತ ಹೆಣ್ಣು ಮತ್ತು ಕಂತ್ರಿ ಗಂಡು ನಾಯಿಗಳು ತಮ್ಮ ಜನ್ಮಾಂತರದ ವಂಶಾವಳಿಯ ಗಂಟು ಹಾಕಿಕೊಂಡು ನಾಲಗೆ ಹಿರಿದುಕೊಂಡು ಮಾನವಕುಲಕ್ಕೆ ಸವಾಲುಹಾಕಿದಂತೆ ನಿಂತುಕೊಡಿದ್ದವು! ಸಮಯ ಸಾಗಿ, ಗಂಟು ಬಿಚ್ಚಿ ಅವು ತಮ್ಮ ಮನೆಗಳಿಗೆ ಹಿಂತಿರುಗಿದಾಗ ಏನೂ ಮಾತಾಡದೆ ಪ್ರೊಫೆಸರ್ ಅವರ ಮನೆಗೆ ಹೋದರು. ನಾನು ನನ್ನ ಕಾಮ್ರೇಡನ ಮೈಸವರಿ ಶಹಬಾಸ್ ಹೇಳುತ್ತಾ ಮನೆಯೊಳಗೆ ಬಂದೆ.

ಮಾರನೆಯ ದಿನ ಎಂದಿನಂತೆ ನಸುಕಿನಲ್ಲಿ ರಾಜಾನನ್ನು ಹೊರಬಿಟ್ಟೆ. ಎಷ್ಟೊತ್ತಾದರೂ ಅವನು ಬರಲಿಲ್ಲ. ಅರ್ಧ ಘಂಟೆಯೊಳಗೆ ಹಿಂದಿರುಗುತಿದ್ದವನು ಎರಡು ಘಂಟೆಯಾದರೂ ಬರಲೇ ಇಲ್ಲ. ಮನಸ್ಸಿನಲ್ಲಿ ತಳಮಳ ಉಂಟಾಯಿತು. ಅವನನ್ನು ಹುಡುಕಿಕೊಂಡು ಹೊರಟೆ. ಹೀಗಾಗಿದ್ದು ಇದೆ ಮೊದಲು. ದೂರವೇನಿಲ್ಲ, ಹಿಂದಿನ ರಸ್ತೆಯ ವಿದ್ಯುತ್ ಕಂಬದ ಬುಡದಲ್ಲಿ ಹಲವು ನಾಯಿಗಳು ಬಿದ್ದಿದ್ದವು. ನಾನು ದುಗುಡದಿಂದ ಹತ್ತಿರ ಹೋದೆ. ನನ್ನ ರಾಜಾ ಅಲ್ಲಿ ಇರದಿದ್ದರೆ ಸಾಕೆಂದು ಹುಡುಕಿದೆ.

 ನಾಯಿಗಳ ಮಧ್ಯೆ ಅಡಿಯಲ್ಲಿ ನನ್ನ ರಾಜಾ ಕಾಲು ಸೆಟೆದುಕೊಂಡು ಬಿದ್ದುಕೊಂಡಿದ್ದ, ನಾಲಿಗೆ ಹೊರಚಾಚಿತ್ತು!

 ನನ್ನ ಎಲ್ಲಾ ಭಾವ ಸೂಕ್ಷ್ಮ ಸಂವೇದನೆಗಳೂ ಆಗಲೇ ಮುರುಟಿಹೋದವು, ಮತ್ತೇನನ್ನು ಹೇಳಲಿ?

–ಭದ್ರಪ್ಪ ಎಸ್‌. ಹೆನ್ಲಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು