ಹೇಗಿದೆ ಓಲಾದ ಮೊದಲ ಎಲೆಕ್ಟ್ರಿಕ್ ಸ್ಕೂಟರ್; ಬೆಂಗಳೂರು ರಸ್ತೆಗಳಲ್ಲಿ ಅದರ ಸಂಚಾರ

ಬೆಂಗಳೂರು: ಪೆಟ್ರೋಲ್ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ನೂರು ರೂಪಾಯಿ ಕೊಟ್ಟರೂ ಪೂರ್ತಿ ಒಂದು ಲೀಟರ್ ಪೆಟ್ರೋಲ್ ಸಿಗದ ಸ್ಥಿತಿ ಎದುರಾಗಿದೆ. ಅದಾಗಲೇ ಪೆಟ್ರೋಲ್ ವಾಹನಗಳಿಗೆ ಪರ್ಯಾಯದ ಹುಡುಕಾಟದಲ್ಲಿರುವವರನ್ನು 'ಓಲಾ' ತನ್ನತ್ತ ಸೆಳೆಯುವ ಪ್ರಯತ್ನ ನಡೆಸಿದೆ. ಓಲಾ ಎಲೆಕ್ಟ್ರಿಕ್ ತಯಾರಿಸಿರುವ ಹೊಸ ಸ್ಕೂಟರ್‌ನ ಸಾಮರ್ಥ್ಯವನ್ನು ವಿಡಿಯೊ ತುಣುಕಿನ ಮೂಲಕ ಬಹಿರಂಗ ಪಡಿಸಿದೆ.
ಹೇಗಿದೆ ಓಲಾದ ಮೊದಲ ಎಲೆಕ್ಟ್ರಿಕ್ ಸ್ಕೂಟರ್, ರಸ್ತೆಯಲ್ಲಿ ಹೇಗೆ ಸಾಗಬಹುದು, ಕಾರ್ಯಕ್ಷಮತೆ ಹೇಗಿದೆ,...ಎಂಬಿತ್ಯಾದಿ ಕುತೂಹಲದ ಪ್ರಶ್ನೆಗಳಿಗೆ ಓಲಾ ಎಲೆಕ್ಟ್ರಿಕ್ ಸಿಇಒ ಭವಿಷ್ ಅಗರ್ವಾಲ್ ವಿಡಿಯೊ ಟ್ವೀಟಿಸುವ ಮೂಲಕ ಉತ್ತರಿಸಿದ್ದಾರೆ. 'ನೀವು ಈ ಟ್ವೀಟ್ ಓದುವುದಕ್ಕಿಂತಲೂ ವೇಗವಾಗಿ ಶೂನ್ಯದಿಂದ 60 ಕಿ.ಮೀ. ವೇಗವನ್ನು ಸ್ಕೂಟರ್ ತಲುಪುತ್ತದೆ. ಸಿದ್ಧವಿರುವಿರೋ ಅಥವಾ ಇಲ್ಲವೋ, ದೊಡ್ಡ ಬದಲಾವಣೆಯಂತೂ ಬರುತ್ತಿದೆ!' ಎಂದು ಟ್ವೀಟಿಸಿದ್ದಾರೆ.
ಈ ಹೊಸ ಸ್ಕೂಟರ್‌ನ ಬೆಲೆ ಅಂದಾಜು ಒಂದು ಲಕ್ಷ ಇರಬಹುದು ಎಂದು ಆಟೊಮೊಬೈಲ್ ವಲಯದಲ್ಲಿ ಊಹಿಸಲಾಗುತ್ತಿದೆ. ಬೆಂಗಳೂರು ಮೂಲದ ಏಥರ್ ಎನರ್ಜಿಯ 450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಅದಾಗಲೇ ನಗರ ವಾಸಿಗಳನ್ನು ಸೆಳೆದಿದ್ದು, ಓಲಾ ಸ್ಕೂಟರ್‌ಗಳಿಗೆ ಏಥರ್ ಮೊದಲ ದೇಶೀಯ ಪ್ರತಿಸ್ಪರ್ಧಿಯಾಗಲಿದೆ.
Took this beauty for a spin! Goes 0-60 faster than you can read this tweet! Ready or not, a revolution is coming! #JoinTheRevolution @Olaelectric https://t.co/ZryubLLo6X pic.twitter.com/wPsch79Djf
— Bhavish Aggarwal (@bhash) July 2, 2021
ಸ್ಕೂಟರ್‌ನ ಗುಣಲಕ್ಷಣ ಕುರಿತು ಸಂಪೂರ್ಣ ವಿವರ ಬಹಿರಂಗವಾಗಿಲ್ಲ. ಒಂದು ಬಾರಿ ಸಂಪೂರ್ಣ ಬ್ಯಾಟರಿ ಚಾರ್ಜ್ ಮಾಡಿದರೆ 150 ಕಿ.ಮೀ. ವರೆಗೂ ಪ್ರಯಾಣಿಸುವ ಸಾಧ್ಯತೆಯಿದೆ ಎಂದು ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ. ಗಂಟೆಗೆ ಗರಿಷ್ಠ 90 ಕಿ.ಮೀ. ವೇಗ, ಮನೆಯಲ್ಲಿಯೇ ಚಾರ್ಜ್ ಮಾಡಬಹುದಾದ ವ್ಯವಸ್ಥೆ ಇರಲಿದೆ.
ದೇಶದ 100 ನಗರಗಳಲ್ಲಿ ಮೊದಲ ವರ್ಷ ಓಲಾ 5,000 ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪಿಸುತ್ತಿದೆ. ಚಾರ್ಜಿಂಗ್ ಕೇಂದ್ರಗಳಲ್ಲಿ ಕೇವಲ 18 ನಿಮಿಷಗಳಲ್ಲಿ ಸ್ಕೂಟರ್‌ನ ಬ್ಯಾಟರಿ ಶೇ 50ರಷ್ಟು ಚಾರ್ಜ್ ಆಗಲಿದೆ ಹಾಗೂ 75 ಕಿ.ಮೀ. ವರೆಗೂ ಸಾಗಬಹುದಾಗುತ್ತದೆ. ಸ್ಮಾರ್ಟ್‌ಫೋನ್ ಅಪ್ಲಿಕೇಷನ್ ಮೂಲಕ ಸ್ಕೂಟರ್‌ನೊಂದಿಗೆ ಸಂಪರ್ಕ ಸಾಧಿಸುವ ವ್ಯವಸ್ಥೆ ಅಭಿವೃದ್ಧಿ ಪಡಿಸಲಾಗಿದೆ.
ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ತಯಾರಿಸುವ ವ್ಯವಸ್ಥೆ ರೂಪಿಸಲು ಓಲಾ ಕಂಪನಿಯು ₹ 2,400 ಕೋಟಿ ಹೂಡಿಕೆ ಮಾಡಿದ್ದು, ತಮಿಳುನಾಡಿನಲ್ಲಿ ಎಲೆಕ್ಟ್ರಿಕ್ ವಾಹನ ತಯಾರಿಕಾ ಘಟಕ ಸ್ಥಾಪನೆಯಾಗಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.