ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡವಾಳ ಮಾರುಕಟ್ಟೆ: ಕಡಿಮೆ ಮೊತ್ತದೊಂದಿಗೆ ಷೇರು ಹೂಡಿಕೆ ಹೇಗೆ?

Published 28 ಜನವರಿ 2024, 23:30 IST
Last Updated 28 ಜನವರಿ 2024, 23:30 IST
ಅಕ್ಷರ ಗಾತ್ರ

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬೇಕಾದರೆ ದೊಡ್ಡ ಮೊತ್ತದ ಹಣ ಅಗತ್ಯ ಎಂಬ ತಪ್ಪುಕಲ್ಪನೆಯಿದೆ. ಆದರೆ, ವಾಸ್ತವದಲ್ಲಿ ಷೇರುಪೇಟೆ ಪ್ರವೇಶಿಸಲು ಸಣ್ಣ ಮೊತ್ತದ ಹಣವೂ ಸಾಕಾಗುತ್ತದೆ.

ಕೇವಲ ನೂರು, ಐನೂರು, ಸಾವಿರ ರೂಪಾಯಿ ಹೂಡಿಕೆ ಮಾಡುತ್ತೇವೆ ಎಂದರೂ ಷೇರು ಮಾರುಕಟ್ಟೆಯಲ್ಲಿ ಉತ್ತಮ ಕಂಪನಿಗಳ ಷೇರು ಖರೀದಿಸಲು ಸಾಧ್ಯವಿದೆ. ಬನ್ನಿ, ಕಡಿಮೆ ಮೊತ್ತದೊಂದಿಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಹೇಗೆ ಎಂದು ತಿಳಿಯೋಣ.

1. ಸಣ್ಣ ಮೊತ್ತದಿಂದ ಷೇರು ಹೂಡಿಕೆ ಆರಂಭಿಸಿ: ಷೇರು ಮಾರುಕಟ್ಟೆ ಪ್ರವೇಶಕ್ಕೆ ನಿಮ್ಮ ಬಳಿ ಎಷ್ಟು ಮೊತ್ತವಿದೆ ಎನ್ನುವುದಕ್ಕಿಂತ ಹೂಡಿಕೆ ಜ್ಞಾನ ಎಷ್ಟಿದೆ ಎನ್ನುವುದು ಬಹಳ ಮುಖ್ಯವಾಗುತ್ತದೆ. ಮೂಲ ಹೂಡಿಕೆ ತತ್ವಗಳ ಬಗ್ಗೆ ಅರಿವಿಲ್ಲದೆ ಷೇರುಪೇಟೆ ಪ್ರವೇಶಿಸಿದರೆ ದೊಡ್ಡ ಮೊತ್ತವಿದ್ದರೂ ಹಣ ಕರಗಿಬಿಡುತ್ತದೆ. ಸರಿಯಾದ ಅರಿವಿನೊಂದಿಗೆ ಹೂಡಿಕೆ ಮಾಡಿದರೆ ಸಣ್ಣ ಮೊತ್ತದ ಮೂಲಕವೂ ಸಂಪತ್ತು ಸೃಷ್ಟಿಸಲು ಸಾಧ್ಯವಿದೆ.

ಸರಳವಾಗಿ ಹೇಳುವುದಾದರೆ ಕಲಿಕೆಯಿಂದಷ್ಟೇ ಷೇರು ಹೂಡಿಕೆಯಲ್ಲಿ ಗಳಿಕೆ ಸಾಧ್ಯ. ಷೇರು ಮಾರುಕಟ್ಟೆ ಹೂಡಿಕೆ ಎನ್ನುವುದು ನೂರು ಮೀಟರ್ ಓಟವಲ್ಲ. ಅದೊಂದು ಮ್ಯಾರಥಾನ್. ನಿಮ್ಮ ಬಳಿ ಈಗ ₹1 ಸಾವಿರ ಇದೆ ಎಂದಾದರೆ ನಿಮ್ಮ ಮೊತ್ತಕ್ಕೆ ದಕ್ಕುವ ಉತ್ತಮ ಷೇರುಗಳನ್ನು ಆಯ್ಕೆ ಮಾಡಿಕೊಂಡು ಹೂಡಿಕೆ ಮಾಡಿ. ಒಮ್ಮೆ ಹೂಡಿಕೆ ಆರಂಭಿಸಿದಾಗ ಮಾರುಕಟ್ಟೆಯ ಏರಿಳಿತದ ಹಿಡಿತ ನಿಮಗೆ ಸಿಗುತ್ತದೆ. ಮತ್ತೆ ಹಣ ಸಿಕ್ಕಾಗ ಮತ್ತಷ್ಟು ಷೇರುಗಳನ್ನು ಖರೀದಿಸಬಹುದು. ಹೀಗೆ ಹಂತ ಹಂತವಾಗಿ ನಿಮ್ಮ ಹೂಡಿಕೆ ಪ್ರಮಾಣವನ್ನು ಹೆಚ್ಚಿಸಿಕೊಳ್ಳುತ್ತಾ ಹೋಗಬಹುದು.

ನೆನಪಿಡಿ ಷೇರುಪೇಟೆಯಲ್ಲಿ ರಾತ್ರೋರಾತ್ರಿ ಶ್ರೀಮಂತರಾಗಲು ಸಾಧ್ಯವಿಲ್ಲ. ಸಂಪತ್ತಿನೆಡೆಗೆ ನಿಧಾನಗತಿಯ ನಡಿಗೆ ಎನ್ನುವುದು ನಿಮ್ಮ ಧೋರಣೆಯಾಗಬೇಕು.‌

2. ಪೆನ್ನಿ ಸ್ಟಾಕ್‌ಗಳ ಬಗ್ಗೆ ಎಚ್ಚರಿಕೆ ಅಗತ್ಯ: ₹10ಕ್ಕಿಂತ ಕಡಿಮೆ ಬೆಲೆ ಹೊಂದಿರುವ ಷೇರುಗಳನ್ನು ಪೆನ್ನಿ ಸ್ಟಾಕ್‌ಗಳು ಎಂದು ಕರೆಯಲಾಗುತ್ತದೆ. ಪೆನ್ನಿ ಸ್ಟಾಕ್‌ಗಳು ಕೆಟ್ಟವು ಎಂದು ನಾವು ಹೇಳುತ್ತಿಲ್ಲ. ಸಾಮಾನ್ಯವಾಗಿ ಬಹುತೇಕ ಸಂದರ್ಭಗಳಲ್ಲಿ ನಿರ್ದಿಷ್ಟ ಕಂಪನಿಯು ಕುಸಿತದ ಹಾದಿಯಲ್ಲಿರುವಾಗ ಅಥವಾ ಬೇಡಿಕೆ ಕಡಿಮೆ ಇದ್ದಾಗ ಷೇರಿನ ಬೆಲೆಯನ್ನು ತಗ್ಗಿಸಲಾಗುತ್ತದೆ.

ಹಾಗಾಗಿ, ಬೇಡಿಕೆಯಿಲ್ಲದ ಕಡಿಮೆ ಬೆಲೆಗೆ ಸಿಗುವ ಷೇರುಗಳ ಖರೀದಿ ಬಗ್ಗೆ ಎಚ್ಚರಿಕೆ ವಹಿಸಿ. ಅಗ್ಗದ ಬೆಲೆಗೆ ಸಿಗುವ ಷೇರುಗಳನ್ನು ಖರೀದಿಸುವ ಮುನ್ನ ಸಾಕಷ್ಟು ಅಧ್ಯಯನ ಮಾಡಿ. ಲೆಕ್ಕಾಚಾರದ ಬಳಿಕವೂ ನಿರ್ದಿಷ್ಟ ಕಂಪನಿಯೊಂದು ಉತ್ತಮ ಎಂದು ಕಂಡುಬಂದರೆ ಆಗ ನಿಮ್ಮ ಪರಿಶ್ರಮದ ಹಣವನ್ನು ಆ ಕಂಪನಿಯ ಮೇಲೆ ತೊಡಗಿಸಿ.

3. ಮೌಲ್ಯ ಹೆಚ್ಚಿರುವ ಷೇರುಗಳತ್ತ ನಿಮ್ಮ ಗಮನವಿರಲಿ: ಹೆಚ್ಚು ಆಂತರಿಕ ಮೌಲ್ಯ ಹೊಂದಿರುವ ಮತ್ತು ಭವಿಷ್ಯದ ಬೆಳವಣಿಗೆ ಸಾಧ್ಯವಿದೆ ಎನ್ನುವ ಷೇರುಗಳ ಮೇಲೆ ಹೂಡಿಕೆ ಮಾಡಿ. ಹೂಡಿಕೆ ಮಾಡುವಾಗ ನಿಮ್ಮ ಹಣದ ಮೌಲ್ಯವರ್ಧನೆ ಎಷ್ಟರಮಟ್ಟಿಗೆ ಸಾಧ್ಯವಾಗಬಹುದು ಎಂಬ ಅಂದಾಜಿರಲಿ. ಹೀಗೆ ಅಳೆದು ತೂಗಿ ಒಳ್ಳೆಯ ಕಂಪನಿಗಳ ಮೇಲೆ ಹಣ ಹಾಕಿದಾಗ ಸಂಪತ್ತು ವೃದ್ಧಿ ಸುಲಭವಾಗುತ್ತದೆ.

ಷೇರು ಬೆಲೆ ಕಡಿಮೆ ಇದೆ ಎನ್ನುವ ಕಾರಣಕ್ಕೆ ಯಾವುದೇ ಷೇರಿನ ಮೇಲೆ ಹೂಡಬೇಡಿ. ನಿಮ್ಮ ಹೂಡಿಕೆ ನಿರ್ಧಾರವು ನಿರ್ದಿಷ್ಟ ಷೇರು ಹೂಡಿಕೆ ಮೇಲೆ ಎಷ್ಟು ಗಳಿಕೆ ತಂದುಕೊಡಬಹುದು ಎಂಬ ಲೆಕ್ಕಾಚಾರದ ಮೇಲೆ ನಿಂತಿರಲಿ.

4. ಒಂದೇ ಷೇರಿನ ಮೇಲೆ ದೊಡ್ಡ ಮೊತ್ತದ ಹೂಡಿಕೆ ಬೇಡ: ಸಣ್ಣ ಮೊತ್ತ ಹೊಂದಿದ್ದೀರಿ ಎನ್ನುವ ಕಾರಣಕ್ಕೆ ನಿಮ್ಮ ಹೂಡಿಕೆ ಮೊತ್ತವೆಲ್ಲವನ್ನೂ ಒಂದೇ ಕಂಪನಿಯ ಮೇಲೆ ತೊಡಗಿಸಬೇಡಿ. ಹೂಡಿಕೆ ಮಾಡುವಾಗ ವೈವಿಧ್ಯ ಕಾಯ್ದುಕೊಳ್ಳಿ. ಕಡಿಮೆ ಮೊತ್ತವಿದ್ದರೂ ಬೇರೆ ಬೇರೆ ಕಂಪನಿಗಳ, ವಲಯಗಳ ಷೇರಿನ ಮೇಲೆ ತೊಡಗಿಸಿ.

ಉದಾಹರಣೆಗೆ ಷೇರು ಮಾರುಕಟ್ಟೆಯಲ್ಲಿ ಬ್ಯಾಂಕಿಂಗ್, ಎಫ್‌ಎಂಸಿಜಿ, ಮಾಹಿತಿ ತಂತ್ರಜ್ಞಾನ, ಫಾರ್ಮಾ, ರಿಯಲ್ ಎಸ್ಟೇಟ್ ಹೀಗೆ ಹಲವು ವಲಯಗಳು ಇರುತ್ತವೆ. ಅಂತಹ ವಿವಿಧ ವಲಯಗಳ ಬೇರೆ ಬೇರೆ ಕಂಪನಿಗಳ ಮೇಲೆ ನಿಮ್ಮ ಹೂಡಿಕೆಯಿರಲಿ. ಹೀಗೆ ಮಾಡಿದಾಗ ಒಂದು ಕಂಪನಿ ಕುಸಿತ ಕಂಡರೂ ಮತ್ತೊಂದು ಕಂಪನಿ ಗಳಿಕೆಯಲ್ಲಿ ಇರುತ್ತದೆ. ಒಟ್ಟಾರೆ ನಿಮ್ಮ ಪೋರ್ಟ್ ಫೋಲಿಯೊದಲ್ಲಿ ಸಮತೋಲನ ಸಾಧ್ಯವಾಗುತ್ತದೆ.

5. ಶೂನ್ಯ ಬ್ರೋಕರೇಜ್ ಫ್ಲಾಟ್‌ಫಾರಂಗಳ ಮೂಲಕ ಹೂಡಿಕೆ ಮಾಡಿ: ಷೇರುಗಳನ್ನು ಖರೀದಿಸುವಾಗ ಮತ್ತು ಮಾರಾಟ ಮಾಡುವಾಗ ಬ್ರೋಕರೇಜ್ ಶುಲ್ಕ ಮತ್ತು ಕೆಲವು ನಿರ್ವಹಣಾ ಶುಲ್ಕವನ್ನು ಬ್ರೋಕರ್‌ಗಳು ವಿಧಿಸುತ್ತಾರೆ. ಆದರೆ, ಈಗ ಅನೇಕ ಶೂನ್ಯ ಬ್ರೋಕರೇಜ್ ಫ್ಲಾಟ್‌ಫಾರಂಗಳಿವೆ. ಕಡಿಮೆ ಮೊತ್ತವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರು ಅಂತಹ ಜೀರೊ ಬ್ರೋಕರೇಜ್ ಫ್ಲಾಟ್‌ಫಾರಂಗಳನ್ನು ಆಯ್ಕೆ ಮಾಡಿಕೊಳ್ಳುವುದು ಒಳಿತು. ಆಗ ಅನಗತ್ಯ ವೆಚ್ಚ ತಗ್ಗುತ್ತದೆ.

ಸತತ ಎರಡನೇ ವಾರ ಕುಸಿದ ಸೂಚ್ಯಂಕಗಳು

ಷೇರುಪೇಟೆ ಸೂಚ್ಯಂಕಗಳು ಸತತ ಎರಡನೇ ವಾರ ಕುಸಿತ ಕಂಡಿವೆ. ಜನವರಿ 25ರಂದು ಕೊನೆಗೊಂಡ ವಾರದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಇಳಿಕೆಯಾಗಿವೆ.

70,700 ಅಂಶಗಳಲ್ಲಿ ವಹಿವಾಟು ಮುಗಿಸಿದ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 1.01 ರಷ್ಟು ಕುಸಿದಿದೆ. 21,352 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿದ ನಿಫ್ಟಿ ಶೇ 1.02 ರಷ್ಟು ತಗ್ಗಿದೆ.

ಅಮೆರಿಕ ಫೆಡರಲ್ ಬ್ಯಾಂಕ್‌‌ನಿಂದ ಬಡ್ಡಿದರ ಇಳಿಕೆ ವಿಳಂಬ, ಕೆಂಪು ಸಮುದ್ರದ ಬಿಕ್ಕಟ್ಟು, ಕಂಪನಿಗಳ ತ್ರೈಮಾಸಿಕ ವರದಿಗಳಲ್ಲಿ ನಿರೀಕ್ಷಿತ ಸಾಧನೆ ಇಲ್ಲದಿರುವುದು, ತೈಲ ಬೆಲೆ ಹೆಚ್ಚಳ, ಚೀನಾ ಮಾರುಕಟ್ಟೆಗೆ ಬಲ ತುಂಬಲು ಚೀನಾ ಸರ್ಕಾರದ ಪ್ರಯತ್ನ ಸೇರಿ ಹಲವು ಅಂಶಗಳು ಷೇರುಪೇಟೆ ಕುಸಿತಕ್ಕೆ ಕಾರಣವಾಗಿವೆ.

ಕಳೆದ ವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹12,140 ಕೋಟಿ ಮೊತ್ತದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ವಲಯವಾರು ಪ್ರಗತಿಯಲ್ಲಿ ನಿಫ್ಟಿ ಮಾಧ್ಯಮ ಸೂಚ್ಯಂಕ ಶೇ 10, ರಿಯಲ್ ಎಸ್ಟೇಟ್ ಶೇ 4.5, ಬ್ಯಾಂಕ್ ಶೇ 2.6, ಹಣಕಾಸು ಸೇವೆ ಶೇ 2.2, ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 2.1, ತೈಲ ಮತ್ತು ಅನಿಲ ಸೂಚ್ಯಂಕ ಶೇ 1.8, ಎಫ್‌ಎಂಸಿಜಿ ಶೇ 1.4, ಮಾಹಿತಿ ತಂತ್ರಜ್ಞಾನ ಶೇ 0.6, ಲೋಹ ಸೂಚ್ಯಂಕ ಶೇ 0.4 ಮತ್ತು ಆಟೊ ಸೂಚ್ಯಂಕ ಶೇ 0.2ರಷ್ಟು ಕುಸಿದಿವೆ. ನಿಫ್ಟಿ ಫಾರ್ಮಾ ಸೂಚ್ಯಂಕ ಶೇ 1.7ರಷ್ಟು ಗಳಿಸಿಕೊಂಡಿದೆ.

ನಿಫ್ಟಿ 50 ಸೂಚ್ಯಂಕದಲ್ಲಿ 27 ಕಂಪನಿಗಳ ಷೇರುಗಳು ಕುಸಿತ ದಾಖಲಿಸಿವೆ. ಏಷಿಯನ್ ಪೇಂಟ್ಸ್, ಇಂಡಸ್ ಇಂಡ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಲೈಫ್ ಇನ್ಶೂರೆನ್ಸ್ ಕಂಪನಿ, ಹಿಂದೂಸ್ತಾನ್‌ ಯುನಿಲಿವರ್, ಎಚ್‌ಡಿಎಫ್‌ಸಿ ಬ್ಯಾಂಕ್, ಡಿವೀಸ್ ಲ್ಯಾಬೊರೇಟರೀಸ್, ವಿಪ್ರೊ, ಬಜಾಜ್ ಫೈನಾನ್ಸ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಟೆಕ್ ಮಹೀಂದ್ರ, ಟಿಸಿಎಸ್, ಮತ್ತು ಐಟಿಸಿ ಶೇ 1.5ರಿಂದ ಶೇ 6.5ರವರೆಗೆ ಕುಸಿದಿದೆ.

ಬಜಾಜ್ ಆಟೊ ಶೇ 7.3ರಷ್ಟು ಗಳಿಸಿಕೊಂಡಿದೆ. ಏರ್‌ಟೆಲ್, ಪವರ್ ಗ್ರಿಡ್ ಕಾರ್ಪೊರೇಷನ್, ಎನ್‌ಟಿಪಿಸಿ ಕೂಡ ಜಿಗಿದಿವೆ.

ಮುನ್ನೋಟ: ಈ ವಾರ ಅದಾನಿ ಗ್ರೀನ್, ಬಿಇಎಲ್, ಬಜಾಜ್ ಫೈನಾನ್ಸ್, ಬಿಪಿಸಿಎಲ್, ಐಟಿಸಿ, ಹೆರಿಟೇಜ್ ಫುಡ್ಸ್, ಜೆಪಿ ಪವರ್, ಮ್ಯಾರಿಕೋ, ಎನ್‌ಟಿಪಿಸಿ, ಡಾ ರೆಡ್ಡೀಸ್, ಅಸ್ಟ್ರಾಲ್ ಲಿಮಿಟೆಡ್‌, ಜಿಲೆಟ್ ಇಂಡಿಯಾ, ಸ್ಟಾರ್ ಹೆಲ್ತ್, ಪಾಲಿಸಿ ಬಜಾರ್, ಸೇಂಟ್ ಗೊಬೇನ್, ವೋಲ್ಟಾಸ್, ಕ್ರಿಸೆಲ್, ಡಾಬರ್, ಐಡಿಎಫ್‌ಸಿ, ಜಿಂದಾಲ್ ಸ್ಟೀಲ್, ಮ್ಯಾಕ್ಸ್ ಹೆಲ್ತ್, ಪಿವಿಆರ್ ಐನಾಕ್ಸ್, ರಿಲ್ಯಾಕ್ಸೋ, ಸೂಜ್ಲಾನ್, ಆವಾಸ್ ಫೈನಾನ್ಸಿಯರ್ಸ್, ಅಬೋಟ್ ಇಂಡಿಯಾ, ಬಾಟಾ ಇಂಡಿಯಾ, ಸೆಂಚುರಿ ಪ್ಲೈ, ಟಾಟಾ ಮೋಟರ್ಸ್ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ. ಪ್ರಮುಖ ದೇಶಗಳ ಸೆಂಟ್ರಲ್ ಬ್ಯಾಂಕ್‌ಗಳು ಬಡ್ಡಿ ದರದ ಬಗ್ಗೆ ಕೈಗೊಳ್ಳುವ ನಿರ್ಣಯ, ಕಂಪನಿಗಳ ತ್ರೈಮಾಸಿಕ ಫಲಿತಾಂಶಗಳು, ಜಾಗತಿಕ ವಿದ್ಯಮಾನಗಳು ಷೇರುಪೇಟೆ ಮೇಲೆ ಪರಿಣಾಮ ಬೀರಲಿವೆ.

(ಲೇಖಕಿ ಚಾರ್ಟಡ್‌ ಅಕೌಂಟೆಂಟ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT