ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡವಾಳ ಮಾರುಕಟ್ಟೆ: ಗೋಲ್ಡ್‌ ಬಾಂಡ್‌ನಲ್ಲಿ ಹೂಡಿಕೆ ಮಾಡಿ

Published 17 ಡಿಸೆಂಬರ್ 2023, 23:30 IST
Last Updated 17 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ಭಾರತೀಯರಿಗೆ ಚಿನ್ನ ಅಂದ್ರೆ ಅಚ್ಚುಮೆಚ್ಚು. ಅಂದಾಜು ಒಂದರ ಪ್ರಕಾರ ದೇಶದ ನಾಗರಿಕರ ಬಳಿ ಇರುವ ಚಿನ್ನ ಸುಮಾರು 25ರಿಂದ 27 ಸಾವಿರ ಟನ್. ಹಬ್ಬ, ಮದುವೆ, ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ –ಹೀಗೆ ಚಿನ್ನ ಖರೀದಿಗೆ ಇಲ್ಲಿ ಕಾರಣಗಳು ಅನೇಕ.

ಬಂಗಾರದ ಮೇಲೆ ಹೂಡಿಕೆ ಮಾಡಬೇಕು ಅಂದ ತಕ್ಷಣ ಬಹುಪಾಲು ಜನರು ಆಭರಣ ಖರೀದಿಯನ್ನು ಪರಿಗಣಿಸುತ್ತಾರೆ. ಆದರೆ, ಚಿನ್ನದ ಮೇಲೆ ಹೂಡಿಕೆ ಮಾಡಲು ಈಗ ಗೋಲ್ಡ್ ಇಟಿಎಫ್, ಗೋಲ್ಡ್ ಮ್ಯೂಚುಯಲ್ ಫಂಡ್, ಡಿಜಿಟಲ್ ಗೋಲ್ಡ್, ಸಾವರಿನ್ ಗೋಲ್ಡ್ ಬಾಂಡ್ ಹೀಗೆ ಹಲವು ಆಯ್ಕೆಗಳಿವೆ. ಇಷ್ಟೆಲ್ಲಾ ಆಯ್ಕೆಗಳ ಪೈಕಿ ಸಾವರಿನ್ ಗೋಲ್ಡ್ ಬಾಂಡ್ ಹೆಚ್ಚು ಸುದ್ದಿಯಲ್ಲಿದೆ.

2023-24ನೇ ಆರ್ಥಿಕ ವರ್ಷದ ಮೂರನೇ ಸರಣಿಯ ಸಾವರಿನ್ ಗೋಲ್ಡ್ ಬಾಂಡ್‌‌ಗಳನ್ನು ಆರ್‌ಬಿಐ ಡಿಸೆಂಬರ್ 18 ಮತ್ತು ಡಿಸೆಂಬರ್ 23ರ ನಡುವೆ ವಿತರಿಸುತ್ತಿದೆ. ಸಾವರಿನ್ ಗೋಲ್ಡ್ ಬಾಂಡ್ ಕೇಂದ್ರ ಸರ್ಕಾರದ ಗ್ಯಾರಂಟಿ ಇರುವ ಚಿನ್ನದ ಹೂಡಿಕೆಯಾಗಿದೆ. ಉತ್ತಮ ಲಾಭವನ್ನೂ ಹೂಡಿಕೆದಾರರಿಗೆ ತಂದುಕೊಡುತ್ತಿದೆ. ಬನ್ನಿ ಸಾವರಿನ್ ಗೋಲ್ಡ್ ಬಾಂಡ್ ಬಗ್ಗೆ ಇನ್ನಷ್ಟು ತಿಳಿದು ಜಾಗೃತ ಹೂಡಿಕೆದಾರರಾಗೋಣ.

ಏನಿದು ಸಾವರಿನ್ ಗೋಲ್ಡ್ ಬಾಂಡ್?: ಚಿನ್ನದ ಮೌಲ್ಯಕ್ಕೆ ಪ್ರತಿಯಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನೀಡುವ ಬಾಂಡ್‌ಗಳನ್ನು ಸಾವರಿನ್ ಗೋಲ್ಡ್ ಬಾಂಡ್ ಎಂದು ಕರೆಯಬಹುದು. ಸಾವರಿನ್‌ ಗೋಲ್ಡ್‌  ಬಾಂಡ್‌ಗಳನ್ನು ಸರ್ಕಾರದ ಪರವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ವಿತರಿಸುತ್ತದೆ. ಘನರೂಪದ ಚಿನ್ನಕ್ಕೆ ಪ್ರತಿಯಾಗಿ ಬಾಂಡ್‌ಗಳನ್ನು ವಿತರಿಸಲಾಗುತ್ತದೆ. ಪ್ರತಿ ಬಾಂಡ್ ಒಂದು ಗ್ರಾಂ ಚಿನ್ನಕ್ಕೆ ಸಮನಾದ ಮೌಲ್ಯವನ್ನು ಪ್ರತಿನಿಧಿಸುತ್ತದೆ.

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಚಿನ್ನದ ಬೆಲೆ ಆಧರಿಸಿ ಸಾವರಿನ್ ಗೋಲ್ಡ್ ಬಾಂಡ್‌ನ ಬೆಲೆ ನಿಗದಿಯಾಗುತ್ತದೆ. ಚಿನ್ನದ ಬಾಂಡ್‌ನ ಬೆಲೆಯನ್ನು ಪ್ರತಿ ಗ್ರಾಂನ ಲೆಕ್ಕಾಚಾರದಲ್ಲಿ ನಿಗದಿ ಮಾಡಲಾಗುತ್ತದೆ. 2023-24ನೇ ಆರ್ಥಿಕ ವರ್ಷದ ಮೂರನೇ ಸರಣಿಯ ಸಾವರಿನ್ ಗೋಲ್ಡ್ ಬಾಂಡ್‌‌ನ ಪ್ರತಿ ಗ್ರಾಂನ ಬೆಲೆಯನ್ನು ₹6,199ಕ್ಕೆ ನಿಗದಿ ಮಾಡಲಾಗಿದೆ.

ಸಾವರಿನ್ ಗೋಲ್ಡ್ ಬಾಂಡ್ ಹೀಗೆ ಖರೀದಿಸಿ: 2023-24ನೇ ಸಾವರಿನ್ ಗೋಲ್ಡ್ ಬಾಂಡ್‌‌ನ ಮೂರನೇ ಸರಣಿ ಡಿಸೆಂಬರ್ 18ರಿಂದ ಡಿಸೆಂಬರ್ 22ರ ವರೆಗೆ ಖರೀದಿಗೆ ಲಭ್ಯವಿದೆ. 2023-24ನೇ ಸಾವರಿನ್ ಗೋಲ್ಡ್ ಬಾಂಡ್‌ನ ನಾಲ್ಕನೇ ಸರಣಿಯನ್ನು ಫೆಬ್ರುವರಿ 12ರಿಂದ 16ರವರೆಗೆ ಖರೀದಿಸಲು ಅವಕಾಶವಿದೆ. ಪ್ರಮುಖ ಅಂಚೆ ಕಚೇರಿಗಳು, ಬ್ಯಾಂಕ್‌ಗಳು, ರಾಷ್ಟ್ರೀಯ ಷೇರುಪೇಟೆ (ಎನ್ಎಸ್ಇ), ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಿಂದ (ಬಿಎಸ್ಇ) ಖರೀದಿಸಬಹುದಾಗಿದೆ.

ಡಿ ಮ್ಯಾಟ್ ಖಾತೆ ಇಲ್ಲದಿದ್ದರೂ ಗೋಲ್ಡ್ ಬಾಂಡ್ ಖರೀದಿ ಸಾಧ್ಯವಿದೆ. ಆನ್‌ಲೈನ್‌ನಲ್ಲಿ ಖರೀದಿಸಿದರೆ ಗ್ರಾಂ ಮೇಲೆ ₹50 ವಿನಾಯಿತಿ ಸಿಗುತ್ತದೆ. ಭಾರತದ ಪ್ರಜೆಗಳು, ಹಿಂದೂ ಅವಿಭಕ್ತ ಕುಟುಂಬಗಳು, ಟ್ರಸ್ಟ್‌ಗಳು, ಚಾರಿಟಬಲ್ ಸಂಸ್ಥೆಗಳು ಸಾವರಿನ್ ಗೋಲ್ಡ್ ಬಾಂಡ್‌ನಲ್ಲಿ ತೊಡಗಿಸಬಹುದು. ವ್ಯಕ್ತಿಗಳು ಮತ್ತು ಅವಿಭಕ್ತ ಕುಟುಂಬಗಳು ಕನಿಷ್ಠ 1 ಗ್ರಾಂ ಮತ್ತು ಗರಿಷ್ಠ 4 ಕೆ.ಜಿವರೆಗೆ ಹೂಡಿಕೆ ಮಾಡಬಹುದು.

ಟ್ರಸ್ಟಿಗಳಿಗೆ 20 ಕೆ.ಜಿವರೆಗೆ ಹೂಡಿಕೆಗೆ ಅವಕಾಶವಿದೆ. ಆದರೆ, ಈ ಬಾಂಡ್‌ಗಳಲ್ಲಿ 8 ವರ್ಷಗಳ ಲಾಕಿನ್ ಅವಧಿ ಇರುತ್ತದೆ. 5 ವರ್ಷಗಳ ಬಳಿಕ ಅವಧಿ ಪೂರ್ವ ನಗದೀಕರಣಕ್ಕೆ ಅವಕಾಶವಿದೆ. ಇದಲ್ಲದೆ ಬಾಂಡ್‌‌ಗಳ ಮೇಲೆ ಸಾಲ ಪಡೆಯುವ ಅವಕಾಶವೂ ಇದೆ. ಮತದಾರರ ಗುರುತಿನ ಚೀಟಿ, ಪ್ಯಾನ್‌ಕಾರ್ಡ್, ಆಧಾರ್ ಕಾರ್ಡ್, ಪಾಸ್‌ಪೋರ್ಟ್‌ ನಂತಹ ದಾಖಲೆಗಳನ್ನು ನೀಡಿ ಗೋಲ್ಡ್ ಬಾಂಡ್ ಖರೀದಿಸಬಹುದು.

ಬಾಂಡ್‌ನಲ್ಲಿ ಡಬಲ್ ಲಾಭ: ಆಭರಣ ಚಿನ್ನದ ಮೇಲೆ ಹೂಡಿಕೆ ಮಾಡಿದಾಗ ಚಿನ್ನದ ಬೆಲೆ ಹೆಚ್ಚಳವಾದಾಗ ಮಾತ್ರ ಲಾಭ ಸಿಗುತ್ತದೆ. ಆದರೆ, ಸಾವರಿನ್ ಗೋಲ್ಡ್ ಬಾಂಡ್‌ನಲ್ಲಿ ಹೂಡಿಕೆ ಮಾಡಿದಾಗ ಚಿನ್ನದ ಬೆಲೆ ಹೆಚ್ಚಳವಾದಾಗ ಅದರ ಲಾಭ ಸಿಗುವ ಜೊತೆಗೆ ಹೂಡಿಕೆ ಮೇಲೆ ವಾರ್ಷಿಕ ಶೇ 2.5ರಷ್ಟು ಬಡ್ಡಿ ಲಾಭಾಂಶವೂ ಲಭಿಸುತ್ತದೆ.

ಪ್ರತಿ 6 ತಿಂಗಳಿಗೊಮ್ಮೆ ಬಡ್ಡಿ ಪಾವತಿ ಆಗುತ್ತದೆ. ಆಭರಣ ಚಿನ್ನ ಖರೀದಿಸಿದಾಗ ಶೇ 15 ರಿಂದ ಶೇ 30ರವರೆಗೆ ಮೇಕಿಂಗ್ ಚಾರ್ಜಸ್‌ ನೀಡಬೇಕಾ ಗುತ್ತದೆ. ಸಾವರಿನ್ ಗೋಲ್ಡ್ ಬಾಂಡ್ ಖರೀದಿಸಿದರೆ ಈ ಹೊರೆ ಇರುವುದಿಲ್ಲ. ಆಭರಣ ಚಿನ್ನ ಖರೀದಿಸುವಾಗ ಅದರ ಸುರಕ್ಷತೆ ಮತ್ತು ಗುಣಮಟ್ಟದ ಬಗ್ಗೆ ನೀವೇ ತಲೆಕೆಡಿಸಿಕೊಳ್ಳಬೇಕು. ಆದರೆ, ಈ ಬಾಂಡ್‌ ಅನ್ನು ಭಾರತೀಯ ರಿಸರ್ವ್ ಬ್ಯಾಂಕ್ ನೀಡುವುದರಿಂದ ಗುಣಮಟ್ಟ ಮತ್ತು ಸುರಕ್ಷತೆ ಬಗ್ಗೆ ಶೇ 100ರಷ್ಟು ಖಾತರಿ ಇರುತ್ತದೆ. ಆಭರಣ ಚಿನ್ನ ಖರೀದಿಸಿದಾಗ ಜಿಎಸ್‌ಟಿ ಕಟ್ಟುವ ಜೊತೆಗೆ, ಬಂಗಾರವನ್ನು ಸುರಕ್ಷಿತವಾಗಿಡಲು ಬ್ಯಾಂಕ್ ಲಾಕರ್ ವೆಚ್ಚಕೊಡಬೇಕಾಗುತ್ತದೆ. ಸಾವರಿನ್ ಗೋಲ್ಡ್ ಬಾಂಡ್ ಖರೀದಿಸಿದರೆ ಜಿಎಸ್‌ಟಿಯೂ ಇಲ್ಲ; ಲಾಕರ್ ಶುಲ್ಕದ ಗೊಡವೆಯೂ ಇಲ್ಲ.

ಮೆಚ್ಯೂರಿಟಿ ಮತ್ತು ತೆರಿಗೆ:  ಸಾವರಿನ್ ಗೋಲ್ಡ್‌ ಬಾಂಡ್ 8 ವರ್ಷಗಳ ನಂತರ ಮೆಚ್ಯೂರಿಟಿಗೆ ಒಳಪಡುತ್ತದೆ. ಮೆಚ್ಯೂರಿಟಿ ವೇಳೆ ಬರುವ ಹೂಡಿಕೆ ಮೇಲಿನ ಗಳಿಕೆಗೆ (ಕ್ಯಾಪಿಟಲ್ ಗೇನ್ಸ್) ಯಾವುದೇ ತೆರಿಗೆ ಕಟ್ಟಬೇಕಿಲ್ಲ. ಆದರೆ, ಪ್ರತಿವರ್ಷ ನೀಡುವ ಶೇ 2.5ರಷ್ಟು ಬಡ್ಡಿ ಗಳಿಕೆಗೆ ಆದಾಯ ತೆರಿಗೆ ಸ್ಲ್ಯಾಬ್‌ಗೆ ಅನುಗುಣವಾಗಿ ತೆರಿಗೆ ಪಾವತಿಸಬೇಕಾಗುತ್ತದೆ.

ಬಾಂಡ್ ಹೂಡಿಕೆ ಮೇಲಿನ ಗಳಿಕೆ: ಕಳೆದ 10 ವರ್ಷಗಳ ಅವಧಿಯಲ್ಲಿ ಚಿನ್ನದ ಮೇಲಿನ ಹೂಡಿಕೆ ವಾರ್ಷಿಕ ಸರಾಸರಿ ಶೇ 10ರಷ್ಟು ಲಾಭಾಂಶ ಕೊಟ್ಟಿದೆ. ಇದರ ಜೊತೆ ಸಾವರಿನ್ ಗೋಲ್ಡ್ ಬಾಂಡ್‌ನಲ್ಲಿ ವಾರ್ಷಿಕ ಶೇ 12.5ರಷ್ಟು ಲಾಭಾಂಶವೂ ಸಿಗುವುದರಿಂದ ಈ ಬಾಂಡ್‌ನಲ್ಲಿ ಶೇ 12ರಿಂದ ಶೇ 12.5ರ ವರೆಗೂ ಲಾಭಾಂಶ ನಿರೀಕ್ಷೆ ಮಾಡಬಹುದು. 8 ವರ್ಷಗಳ ಹಿಂದೆ ಹೂಡಿಕೆ ಮಾಡಿದ್ದ ಸಾವರಿನ್ ಗೋಲ್ಡ್ ಬಾಂಡ್‌ನ ಮೊದಲ ಕಂತಿನಲ್ಲಿ ಹೂಡಿಕೆ ಮಾಡಿದ್ದವರಿಗೆ ಬರೋಬ್ಬರಿ ಶೇ 12.9ರಷ್ಟು ಲಾಭಾಂಶ ದಕ್ಕಿದೆ.

ದಾಖಲೆ ಮಟ್ಟಕ್ಕೆ ಜಿಗಿದ ಷೇರುಪೇಟೆ ಸೂಚ್ಯಂಕಗಳು

ಷೇರುಪೇಟೆ ಸೂಚ್ಯಂಕಗಳು ಸತತ ಏಳನೇ ವಾರ ಗಳಿಕೆ ದಾಖಲಿಸಿವೆ. ಡಿಸೆಂಬರ್ 15ಕ್ಕೆ ಕೊನೆಗೊಂಡ ವಾರದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಸಾರ್ವಕಾಲಿಕ ಏರಿಕೆ ಕಂಡಿವೆ.

71,483 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇ 2.37ರಷ್ಟು ಜಿಗಿದಿದೆ. 21,456 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 2.32ರಷ್ಟು ಹೆಚ್ಚಳ ಕಂಡಿದೆ. ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡು ಬಂದ ಸಕಾರಾತ್ಮಕತೆ, ಅಮೆರಿಕ ಫೆಡರಲ್ ಬ್ಯಾಂಕ್‌ನಿಂದ ಬಡ್ಡಿದರ ಇಳಿಕೆಯ ಮುನ್ಸೂಚನೆ, ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಖರೀದಿ ಭರಾಟೆ, ವಿಶ್ವದ ಪ್ರಮುಖ ಸೆಂಟ್ರಲ್ ಬ್ಯಾಂಕ್‌ಗಳಲ್ಲಿ ಬಡ್ಡಿದರ ಯಥಾಸ್ಥಿತಿ ಸೇರಿ ಹಲವು ಅಂಶಗಳು ಮಾರುಕಟ್ಟೆ ಜಿಗಿತಕ್ಕೆ ಕಾರಣವಾಗಿವೆ.

ವಲಯವಾರು ಪ್ರಗತಿ ಅಂತ ನೋಡಿದಾಗ ಎಲ್ಲಾ ವಲಯಗಳು ಸಕಾರಾತ್ಮಕ ಗಳಿಕೆ ದಾಖಲಿಸಿವೆ. ನಿಫ್ಟಿ ಮಾಹಿತಿ ತಂತ್ರಜ್ಞಾನ ಸೂಚ್ಯಂಕ ಶೇ 7, ನಿಫ್ಟಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಮತ್ತು ಲೋಹ ಸೂಚ್ಯಂಕ ತಲಾ ಶೇ 5ರಷ್ಟು ಜಿಗಿದಿವೆ. ನಿಫ್ಟಿ ರಿಯಲ್ ಎಸ್ಟೇಟ್ ಇಂಡೆಕ್ಸ್ ಶೇ 4ರಷ್ಟು ಗಳಿಸಿಕೊಂಡಿದೆ. ಕಳೆದ ವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹18,858.34 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ದೇಶೀಯ ಸಾಂಸ್ಥಿಕ ಹೂಡಿಕೆದಾರರು ₹ 2,592.35 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಏರಿಕೆ- ಇಳಿಕೆ: ಬಿಎಸ್ಇ ಲಾರ್ಜ್ ಕ್ಯಾಪ್‌ನಲ್ಲಿ ಇನ್ಫೋ ಎಡ್ಜ್ ಇಂಡಿಯಾ, ಎಚ್‌ಸಿಎಲ್ ಟೆಕ್ನಾಲಜೀಸ್, ಡಿಎಲ್ಎಫ್, ಎಲ್‌ಟಿಐ ಮೈಂಡ್ ಟ್ರೀ, ಬಂಧನ್ ಬ್ಯಾಂಕ್, ಹಿಂಡಾಲ್ಕೋ ಇಂಡಸ್ಟ್ರೀಸ್, ಎನ್‌ಟಿಪಿಸಿ, ಅಲ್ಟ್ರಾಟೆಕ್ ಸಿಮೆಂಟ್ ಗಳಿಸಿಕೊಂಡಿವೆ. ಅದಾನಿ ಟೋಟಲ್ ಗ್ಯಾಸ್, ಅದಾನಿ ಎನರ್ಜಿ ಸೆಲ್ಯೂಷನ್ಸ್, ಪೇಟಿಎಂ, ಭಾರತ್ ಪೆಟ್ರೋಲಿಯಂ ಮತ್ತು ಐಸಿಐಸಿಐ ಪ್ರೂಡೆನ್ಷಿಯಲ್ ಲೈಫ್ ಇನ್ಶೂರೆನ್ಸ್ ಕಂಪನಿ ಕುಸಿತ ಕಂಡಿವೆ.

ಮುನ್ನೋಟ: ಭಾರತೀಯ ರಿಸರ್ವ್ ಬ್ಯಾಂಕ್ ಜಿಡಿಪಿ ಬೆಳವಣಿಗೆ ಬಗ್ಗೆ ಆಶಾದಾಯಕವಾಗಿ ಇರುವುದು, ಜಾಗತಿಕ ಮಟ್ಟದಲ್ಲಿ ವಿವಿಧ ದೇಶಗಳ ಸೆಂಟ್ರಲ್ ಬ್ಯಾಂಕ್‌ಗಳು ಬಡ್ಡಿದರ ಇಳಿಕೆಯ ಬಗ್ಗೆ ಮನಸ್ಸು ಮಾಡಿರುವುದು ಸೇರಿದಂತೆ ಹಲವು ಅಂಶಗಳು ಭಾರತದ ಷೇರುಪೇಟೆಗೆ ಪೂರಕವಾಗಿವೆ. ಮುಂಬರುವ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕ ಫಲಿತಾಂಶಗಳ ಮೇಲೆ ಹೂಡಿಕೆದಾರರ ದೃಷ್ಟಿ ನೆಟ್ಟಿದೆ. ಸದ್ಯದ ಮಟ್ಟಿಗೆ ದೊಡ್ಡಮಟ್ಟದ ಹೂಡಿಕೆಯ ಬದಲು ಎಸ್ಐಪಿ ಹೂಡಿಕೆಯನ್ನು ಪರಿಗಣಿಸುವುದು ಸೂಕ್ತ.

(ಲೇಖಕಿ ಚಾರ್ಟರ್ಡ್ ಅಕೌಂಟೆಂಟ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT