ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ: ತೆರಿಗೆದಾರರಿಗೆ ನೀಡಿರುವ ವಿನಾಯಿತಿಗಳ ಬಗ್ಗೆ ಇಲ್ಲಿದೆ ಮಾಹಿತಿ

Last Updated 10 ಜನವರಿ 2023, 19:31 IST
ಅಕ್ಷರ ಗಾತ್ರ

ರಾಜಶೇಖರ ಹೆಬ್ಬಾರ, ಊರು ಉಲ್ಲೇಖಿಸಿಲ್ಲ

ಪ್ರಶ್ನೆ: ನಾನು ಆಸ್ತಿಯೊಂದನ್ನು 2021ರಲ್ಲಿ ಮಾರಾಟ ಮಾಡಿ ಬಂದ ₹ 35 ಲಕ್ಷವನ್ನು ಬ್ಯಾಂಕೊಂದರ ಬಂಡವಾಳ ವೃದ್ಧಿ ಖಾತೆಯಲ್ಲಿ ಇರಿಸಿದ್ದು 2023ರ ಮಾರ್ಚ್‌ಗೆ ಎರಡು ವರ್ಷ ಮುಗಿಯುತ್ತದೆ. ಬೇರೆ ಮನೆ ಖರೀದಿಸಲಾಗದಿದ್ದರೆ ಎಷ್ಟು ತೆರಿಗೆ ಬರುತ್ತದೆ? ನನ್ನ ವಾರ್ಷಿಕ ವರಮಾನ ₹ 5 ಲಕ್ಷ.

ಉತ್ತರ: ಆದಾಯ ತೆರಿಗೆ ನಿಯಮದ ಅಡಿ ಕೆಲವು ನಿರ್ದಿಷ್ಟ ಸನ್ನಿವೇಶಗಳಲ್ಲಿ ಅರ್ಹ ತೆರಿಗೆದಾರರಿಗೆ ಕೆಲವು ಷರತ್ತುಬದ್ಧ ವಿನಾಯಿತಿಗಳನ್ನು ನೀಡಲಾಗುತ್ತದೆ. ಮನೆ ಮಾರಾಟ ಮಾಡಿ ಬರುವ ಹಣವನ್ನು ಪುನಃ ಹೂಡಿಕೆ ಮಾಡುವ ಉದ್ದೇಶದೊಂದಿಗೆ ಮಾರಾಟದಿಂದ ಬಂದ ಮೊತ್ತವನ್ನು ಎರಡು ವರ್ಷದ ಅವಧಿಯೊಳಗೆ ಹೊಸ ಮನೆ ಖರೀದಿಗೆ ಅಥವಾ ಹೊಸ ಮನೆಯ ನಿರ್ಮಾಣದ ಕೆಲಸ ಪೂರ್ಣಗೊಳ್ಳುವ ತನಕ ಮೂರು ವರ್ಷದವರೆಗೆ ಬಂಡವಾಳ ವೃದ್ಧಿ ಖಾತೆಯಲ್ಲಿ ಹೂಡಿಕೆ ಮಾಡಿದ್ದರೆ ಆ ಮೊತ್ತಕ್ಕೆ ತೆರಿಗೆ ವಿನಾಯಿತಿ ಸಿಗುತ್ತದೆ. ಇದನ್ನು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 54ರಲ್ಲಿ ಹೇಳಲಾಗಿದೆ.

ಆದರೆ ಕೆಲವೊಮ್ಮೆ ಅನುಕೂಲವಲ್ಲದ ಆರ್ಥಿಕ ಪರಿಸ್ಥಿತಿಯಿಂದ ಅಥವಾ ನಿರ್ಧಾರದ ಬದಲಾವಣೆಗಳಿಂದ ಇಂತಹ ಖಾತೆಯಲ್ಲಿ ತೊಡಗಿಸಿರುವ ಹಣವನ್ನು ಹೊಸ ಮನೆ ಖರೀದಿ ಅಥವಾ ನಿರ್ಮಾಣಕ್ಕೆ ಉಪಯೋಗಿಸಲಾಗದಿದ್ದರೆ, ಆಸ್ತಿ ಮಾರಾಟವಾದ ದಿನದಿಂದ ಮೂರು ವರ್ಷ ಪೂರ್ಣಗೊಂಡ ಆರ್ಥಿಕ ವರ್ಷದಲ್ಲಿ ಅಂತಹ ಮೊತ್ತಕ್ಕೆ ತೆರಿಗೆ ಪಾವತಿಸಬೇಕಾಗಿರುತ್ತದೆ. ಅಂದರೆ, ಇಂತಹ ಖಾತೆಗಳಲ್ಲಿ ಹೂಡುವ ಹಣ ದೀರ್ಘಾವಧಿ ಬಂಡವಾಳ ಆಸ್ತಿ ಮಾರಾಟದಿಂದ ಬಂದಿರುವ ಮೊತ್ತವಾಗಿರುವುದರಿಂದ, ಖಾತೆಯಲ್ಲಿ ಉಪಯೋಗಿಸದೆ ಉಳಿದ ಮೊತ್ತಕ್ಕೆ ಶೇಕಡ 20ರ ಮೂಲ ದರ ಹಾಗೂ ಶೇ 4ರಷ್ಟು ಸೆಸ್ ಸೇರಿಸಿ ತೆರಿಗೆ ಪಾವತಿಸಬೇಕಾಗುತ್ತದೆ.

ನೀವು ಮೇಲೆ ಹೇಳಿರುವ ಮಾಹಿತಿಯಂತೆ, ನಿಮ್ಮ ಮನೆ ಮಾರಾಟ ಮಾಡಿ ಈಗ ಎರಡು ವರ್ಷ ಮುಗಿಯುತ್ತಿದೆ. ಇನ್ನು ಒಂದು ವರ್ಷದ ಅವಧಿಯೊಳಗೆ ಮನೆ ಕಟ್ಟುವ ನಿರ್ಧಾರ ಕೈಗೊಂಡರೂ ಈ ಮೊತ್ತವನ್ನು ತೆರಿಗೆ ಮುಕ್ತವಾಗಿ ಉಪಯೋಗಿಸಿಕೊಳ್ಳಬಹುದು. ಒಂದು ವೇಳೆ ನಿಮ್ಮ ನಿರ್ಧಾರದಲ್ಲಿ ಬದಲಾವಣೆಯಾಗಿ ಹಣ ಹಿಂಪಡೆಯುವುದಿದ್ದರೆ, ಬ್ಯಾಂಕಿಗೆ ಆದಾಯ ತೆರಿಗೆ ಇಲಾಖೆಯಿಂದ ಇದಕ್ಕೆ ಪೂರಕವಾದ ಹೆಚ್ಚುವರಿ ದಾಖಲೆ ಪತ್ರಗಳನ್ನು (ಫಾರಂ-ಜಿ) ಅಗತ್ಯಕ್ಕೆ ತಕ್ಕಂತೆ ಕೊಡಬೇಕಾದೀತು. ಇದಕ್ಕೆ ನಿಮ್ಮ ತೆರಿಗೆ ಮತ್ತೆ ಲೆಕ್ಕ ಹಾಕಬೇಕು. ಕಾರಣ ಹೆಚ್ಚುವರಿ ಲಾಭದ ಮೊತ್ತಕ್ಕೆ ಹೂಡಿಕೆ ಮೊತ್ತ ವಿನಿಯೋಗಿಸದ ಕಾರಣ ಹಿಂದಿನ ವರ್ಷಗಳಲ್ಲಿ ಪಡೆದಿರುವ ತೆರಿಗೆ ವಿನಾಯಿತಿಯನ್ನು ಸರ್ಕಾರಕ್ಕೆ ಮರಳಿಸಬೇಕಾಗುತ್ತದೆ.

**

ಮಹಾಂತೇಶ ಆರ್, ಊರು ತಿಳಿಸಿಲ್ಲ

ಪ್ರಶ್ನೆ: ನಾನು ಹಿಂದೆ ಯು.ಪಿ. ಪುರಾಣಿಕರ ಅಂಕಣ ಓದಿ, ಬ್ಯಾಂಕಿನಲ್ಲಿ ಆರ್.ಡಿ ಮಾಡಿಸಿದ್ದೆ. ಅವರು ಆರ್.ಡಿ. ಖಾತೆಗೆ ಬರುವ ಬಡ್ಡಿಗೆ ತೆರಿಗೆ ಇರುವುದಿಲ್ಲ ಎಂದು ಹೇಳುತ್ತಿದ್ದರು. ಆದರೆ ನಮ್ಮ ಖಾತೆ ಅವಧಿ ಪೂರ್ಣಗೊಂಡ ನಂತರ ಹಣ ಬಿಡಿಸಿಕೊಳ್ಳಲು ಹೋದಾಗ ತೆರಿಗೆ ಕಡಿತಗೊಳಿಸಿದ್ದಾರೆ. ನಾವು ಕಟ್ಟಿದ್ದು ₹ 3 ಲಕ್ಷ, ಅವರು ಶೇ 6ರ ಬಡ್ಡಿ ದರದಲ್ಲಿ ₹ 35 ಸಾವಿರ ನೀಡುತ್ತೇವೆ ಎಂದು ಪಾಸ್‌ಬುಕ್‌ನಲ್ಲಿ ಮುದ್ರಿಸಿದ್ದರು. ಹಣವನ್ನು ನಮ್ಮ ಬಿಡಿಸಿಕೊಳ್ಳಲು ಹೋದಾಗ ₹ 5 ಸಾವಿರವನ್ನು ತೆರಿಗೆ ಎಂದು ಕಡಿತ ಮಾಡಿದರು. ದಯವಿಟ್ಟು ಸಲಹೆ ತಿಳಿಸಿ.

ಉತ್ತರ: ಬ್ಯಾಂಕುಗಳ ಆವರ್ತಕ ಠೇವಣಿ ಯೋಜನೆಗಳು (ಆರ್.ಡಿ) ಬಹುತೇಕ ಜನರು ಆಯ್ಕೆ ಮಾಡುವ ಅಪಾಯರಹಿತ ಹಾಗೂ ಅತ್ಯಂತ ಜನಪ್ರಿಯ ಹೂಡಿಕೆ ಆಯ್ಕೆಗಳಲ್ಲಿ ಒಂದು. ಇಂತಹ ಠೇವಣಿಗಳ ಮೇಲೆ ಟಿಡಿಎಸ್ ಅನ್ವಯಿಸುವ ಬದಲಾವಣೆಗಳನ್ನು ಸರ್ಕಾರ 2019ರ ಏಪ್ರಿಲ್‌ನಿಂದ ಜಾರಿಗೆ ತಂದಿದೆ. ಉದಾಹರಣೆಗೆ, ಪ್ರಸ್ತುತ ನಮ್ಮ ಉಳಿತಾಯ ಖಾತೆಗೆ ಬರುವ ಬಡ್ಡಿ ಆದಾಯ ಹೇಗೆ ಈಗಲೂ ತೆರಿಗೆ ಕಡಿತದಿಂದ (ಟಿಡಿಎಸ್) ಮುಕ್ತವೋ ಹಾಗೆಯೇ ಹೊಸ ನಿಯಮ ಬರುವ ತನಕ ಆವರ್ತಕ ಠೇವಣಿ ಯೋಜನೆಗಳ ಮೇಲೆ ತೆರಿಗೆ ಕಡಿತಗೊಳಿಸುವ ಪದ್ದತಿ ಇರಲಿಲ್ಲ. ಆದರೆ ಇಲ್ಲಿ ಗಮನಿಸಬೇಕಾದ ಒಂದು ಅಂಶವೆಂದರೆ ಯಾವುದೇ ಸಂದರ್ಭದಲ್ಲಿ, ಟಿಡಿಎಸ್ ಇದ್ದಿರಲಿಲ್ಲವೇ ವಿನಾ ಅಂತಹ ಆದಾಯ ಸಂಪೂರ್ಣವಾಗಿ ತೆರಿಗೆಯಿಂದ ಮುಕ್ತವಾಗಿರಲಿಲ್ಲ. ಹೀಗಾಗಿ ಬಡ್ಡಿ ಆದಾಯವನ್ನು ಸ್ವತಃ ತೆರಿಗೆದಾರರೇ ಘೋಷಿಸಿ ತಮಗೆ ಅನ್ವಯವಾಗುವ ಸ್ಲ್ಯಾಬ್‌ ದರದಲ್ಲಿ ತೆರಿಗೆಯನ್ನು ಪಾವತಿಸಬೇಕಾಗಿರುತ್ತದೆ.

ಆದಾಯ ತೆರಿಗೆಯ ಸೆಕ್ಷನ್ 194 ಎ ಅಡಿ ಉಲ್ಲೇಖಿಸಿರುವಂತೆ ಟಿಡಿಎಸ್ ದರ ಶೇ 10. ಸಾಮಾನ್ಯ ನಾಗರಿಕರಿಗೆ ಉಳಿತಾಯ ಖಾತೆಯನ್ನು ಹೊರತುಪಡಿಸಿ, ಪಾವತಿಯಾಗುವ ಒಟ್ಟು ₹ 40,000ದವರೆಗಿನ ವಾರ್ಷಿಕ ಬಡ್ಡಿಗೆ ತೆರಿಗೆ ಕಡಿತ ಇರುವುದಿಲ್ಲ. ಆದರೆ ಹಿರಿಯ ನಾಗರಿಕರಿಗೆ ಈ ಮೊತ್ತ ₹ 50,000. ಇದಕ್ಕಿಂತ ಕಡಿಮೆ ಪಾವತಿ ಇದ್ದಲ್ಲಿ ಬ್ಯಾಂಕ್‌ಗಳು ತೆರಿಗೆ ಕಡಿತಗೊಳಿಸುವ ಅಗತ್ಯ ಇಲ್ಲ. ಯಾವುದೇ ತೆರಿಗೆ ಕಡಿತಗೊಳಿಸದಿರುವಂತೆ ಬ್ಯಾಂಕುಗಳನ್ನು ವಿನಂತಿಸಲು ಆದಾಯ ತೆರಿಗೆಯ ಫಾರ್ಮ್ 15ಜಿ / ಫಾರ್ಮ್ 15 ಎಚ್ಅನ್ನು ಸ್ವಂತ ಘೋಷಣೆಯಾಗಿ ಸಲ್ಲಿಸಬೇಕಾಗುತ್ತದೆ. ನಿಮ್ಮ ಆದಾಯ ಗರಿಷ್ಠ ತೆರಿಗೆ ವಿನಾಯಿತಿ ಮೊತ್ತಕ್ಕಿಂತ ಕೆಳಗಡೆ ಇದ್ದರಷ್ಟೇ ( ₹ 2.50 ಲಕ್ಷ, ಹಿರಿಯ ನಾಗರೀಕರಾಗಿದ್ದಲ್ಲಿ ₹ 3 ಲಕ್ಷ ಹಾಗೂ ಅತಿ ಹಿರಿಯ ನಾಗರೀಕರಾಗಿದ್ದರೆ ₹ 5 ಲಕ್ಷ) ಇದನ್ನು ಸಲ್ಲಿಸುವುದರಲ್ಲಿ ಅರ್ಥವಿದೆ. ಈ ಮಿತಿಗಿಂತ ಬೇರೆ ಆದಾಯವಿದ್ದಾಗ ಬ್ಯಾಂಕುಗಳಿಗೆ ಅದನ್ನು ಸಲ್ಲಿಸುವುದರಿಂದ ಒಟ್ಟು ತೆರಿಗೆ ತಗ್ಗಲಾರದು.

ನೀವು ಹಿರಿಯ ನಾಗರಿಕರಾಗಿದ್ದಲ್ಲಿ ಸೆಕ್ಷನ್ 80 ಟಿಟಿಬಿ ಅಡಿ ಠೇವಣಿಯ ₹ 50,000ದವರೆಗಿನ ಬಡ್ಡಿಗಿರುವ ಪೂರ್ಣ ವಿನಾಯಿತಿ ಪಡೆಯಬಹುದು. ನಿಮ್ಮ ವಿಚಾರದಲ್ಲಿ ತೆರಿಗೆ ಕಡಿತಗೊಂಡಿದ್ದರೂ, ಮೇಲಿನ ಅಂಶದಂತೆ ಒಟ್ಟಾರೆ ತೆರಿಗೆಗೊಳಪಡುವ ಆದಾಯ ಇಲ್ಲದಿದ್ದರೆ, ತೆರಿಗೆ ರಿಫಂಡ್ ಪಡೆಯುವ ಅವಕಾಶವಿರುತ್ತದೆ. ಇದನ್ನು ಹೆಚ್ಚುವರಿ ಮಾಹಿತಿಯೊಂದಿಗೆ ಪರಿಶೀಲಿಸಿ.

ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ
ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪತ್ರದಲ್ಲಿ (ದೂರವಾಣಿ ಸಂಖ್ಯೆ ಸಹಿತ) ಬರೆದು ಕಳುಹಿಸಿ.
ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–560001 ಇ–ಮೇಲ್‌: businessdesk@prajavani.co.in

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT