ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುರಾಜ ಕರಜಗಿ ಅಂಕಣ – ಬೆರಗಿನ ಬೆಳಕು| ಸರ್ವಾತ್ಮತೆಯ ಅಭ್ಯಾಸ

Last Updated 25 ಜನವರಿ 2023, 19:30 IST
ಅಕ್ಷರ ಗಾತ್ರ

ಚಿರಶಿಕ್ಷೆಯಿಂ ನಿನಗೆ ಸರ್ವಾತ್ಮತಾಭ್ಯಾಸ |
ಸರಳ ಸಹಜವದಹುದು ಮೂಗಿನುಸಿರವೊಲು ||
ಪರ ನಿಯತಿಯಿರದು ಸ್ವತಸಿದ್ಧ ನಿಯತಿಯಿರೆ |
ಹೊರಸಡಿಲಕೊಳಹಿಡಿತ – ಮಂಕುತಿಮ್ಮ || 808 ||

ಪದ-ಅರ್ಥ: ಚಿರಶಿಕ್ಷೆಯಿಂ=ದೀರ್ಘಕಾಲದ ಶಿಕ್ಷೆಯಿಂದ, ಸರ್ವಾತ್ಮತಾಭ್ಯಾಸ=ಎಲ್ಲವೂ ತನ್ನ ಆತ್ಮವೇ ಎಂಬ ಭಾವವನ್ನು ಅಭ್ಯಾಸಮಾಡುವುದು, ಸಹಜವದಹುದು=ಸಹಜವು +ಅದು+ಅಹುದು, ಮೂಗಿನುಸಿರವೊಲು=ಮೂಗಿನ ಉಸಿರಿನಂತೆ, ಪರ=ಹೊರಗಿನ, ನಿಯತಿಯಿರದು=ನಿಯಮವಿರದು, ಹೊರಸಡಿಲಕೊಳಹಿಡಿತ=ಹೊರಸಡಿಲ(ಹೊರಗೆ ಸಡಿಲ)+ಒಳಹಿಡಿತ.
ವಾಚ್ಯಾರ್ಥ: ದೀರ್ಘವಾದ ಶಿಕ್ಷೆಯಿಂದ ನಿನಗೆ, ಎಲ್ಲವೂ ನಿನ್ನ ಆತ್ಮವೇ ಎಂಬುದು ಅಭ್ಯಾಸವಾಗುತ್ತದೆ. ಅದು ಉಸಿರಾಟದಂತೆ ಸರಳ, ಸಹಜವಾದದ್ದು. ಅಂತರಂಗದ ಹಿಡಿತವಿದ್ದರೆ ಹೊರಗಿನ ನಿಯಮಗಳು ಬೇಕಿಲ್ಲ, ಅದಕ್ಕೇ ಹೊರಗಿನ ಸಡಿಲತೆ ಮತ್ತು ಅಂತರಂಗದ ಬಿಗಿ ಬೇಕು.
ವಿವರಣೆ: ನನಗೆ ಗುಜರಾತಿನ ಸ್ವಾಮಿಗಳೊಬ್ಬರ ಪರಿಚಯವಿತ್ತು. ಅವರನ್ನು ಜನ ದೇವರಂತೆ ಕಾಣುತ್ತಿದ್ದರು. ಅದು ಎಷ್ಟರಮಟ್ಟಿನ ಗೌರವವೆಂದರೆ ಅವರು ಕಾರು ಹೋದ ಮೇಲೆ ಅದರ ಗಾಲಿಗಳು ಮಣ್ಣಿನಲ್ಲಿ ಮೂಡಿಸಿದ ಗುರುತುಗಳನ್ನು ಕಾಗದದಲ್ಲಿ ಕಟ್ಟಿಕೊಂಡು ಹೋಗಿ ಪೂಜಿಸುತ್ತಿದ್ದರು. ಸ್ವಾಮಿಗಳು ಒಂದು ದಿನವೂ ಯಾರನ್ನೂ ತೆಗಳಿದವರಲ್ಲ, ಗಡುಸಾಗಿ ಮಾತನಾಡಿಸಿದವರಲ್ಲ. ಅವರ ಕಣ್ಣುಗಳಲ್ಲಿ ಸದಾ ಪ್ರೀತಿಯ ಹೊನಲು. ಅವರನ್ನು ಟೀಕಿಸಿದವರಿಗೂ ಅದೇ ಪ್ರೀತಿ. ಅವರ ಶಿಷ್ಯ ವರ್ಗ ತುಂಬ ದೊಡ್ಡದು. ಅಮೇರಿಕೆಯಲ್ಲಿ ಅವರು ಬೆರಳು ತೋರಿಸಿದರೆ ಸಾಕು ಸಾವಿರ ಮಂದಿ ಶ್ರೀಮಂತ ಶಿಷ್ಯರು ಅವರಿಗಾಗಿ ಏನನ್ನಾದರೂ ಮಾಡಲು ಸಿದ್ಧವಿದ್ದರು. ಸ್ವಾಮಿಗಳ ಬದುಕು ತೀರಾ ಸರಳ ಮತ್ತು ಸಹಜ. ಕೃತಕತೆ ಅವರ ಬಳಿ ಸುಳಿಯಲೇ ಇಲ್ಲ. ಯಾರಾದರೂ ಒಂದು ವಿಷಯವನ್ನು ಹೇಳಿದರೆ, “ಓ, ಹೌದಾ? ಎಷ್ಟು ಚೆನ್ನಾಗಿ ಹೇಳಿದಿರಿ. ನನಗೆ ಗೊತ್ತೇ ಇರಲಿಲ್ಲ” ಎಂದು ಮಗುವಿನಂತೆ ಕಣ್ಣರಳಿಸಿ ಕೇಳುವರು. ಈ ಮಗುತನ, ಈ ನಿರ್ಮಲತೆ ಅವರಲ್ಲಿ ಹೇಗೆ ಬಂದಿತು ಎಂದು ನಾನು ಆಶ್ಚರ್ಯಪಡುತ್ತಿದ್ದೆ. ಒಂದು ದಿನ ಅವರನ್ನೇ ಕೇಳಿದೆ, “ಸ್ವಾಮೀಜಿ, ಈ ಸರಳತೆ ನಿಮಗೆ ಹೇಗೆ ಬಂದಿತು? ಮೊದಲಿನಿಂದಲೂ ನೀವು ಹೀಗೆಯೇ ಇದ್ದಿರಾ?” ಅವರು ಹೇಳಿದ್ದು ಇನ್ನೂ ಅದ್ಭುತ. “ಅಯ್ಯೋ ಸರಳತೆ ನನಗೆಲ್ಲಿದೆ? ಇನ್ನೂ ಸರಳವಾಗಲು ಸತತ ಪ್ರಯತ್ನ ಮಾಡುತ್ತೇನೆ. ನನಗೆ ಮೊದಲು ಬಹಳ ಅಹಂಕಾರವಿತ್ತು. ನನಗೆ ಏನು
ಮಾಡಬೇಕೆಂಬುದು ತೋಚದೆ ನನ್ನ ಗುರುಗಳ ಪಾದ ಹಿಡಿದುಕೊಂಡುಬಿಟ್ಟೆ. ಅವರು ಶೌಚಾಲಯಗಳನ್ನು ತೊಳೆಯುವುದರಿಂದ ಹಿಡಿದು ಎಲ್ಲ ಕಾರ್ಯಗಳನ್ನು ಮಾಡಿಸಿ ಅಹಂಕಾರ ಕಿತ್ತೊಗೆಯಲು ಕಾರಣರಾದರು. ಇನ್ನೂ ಪೂರ್ತಿ ಅಹಂಕಾರ ಹೋಗಿಲ್ಲ. ಆಗಾಗ ಬರುತ್ತದೆ. ಗುರುಗಳೇ ಪ್ರತಿಯೊಬ್ಬರಲ್ಲಿ ದೇವರನ್ನು ಕಾಣಲು ಕಲಿಸಿದರು. ಎಲ್ಲರೂ ದೇವರೇ ಆದ ಮೇಲೆ ನನಗೆ ಯಾರ ಮೇಲೆ ಕೋಪ, ಅಸಹನೆ ಬರಬೇಕು?”. ಇದು ಈ ಕಗ್ಗದ ಮಾತುಗಳಿಗೆ ವಿವರಣೆಯಂತಿದೆ. ಎಲ್ಲರಲ್ಲೂ ತನ್ನ ಆತ್ಮವನ್ನೇ ಕಾಣುವುದು ಸಾಧ್ಯವಾಗುವುದು ದೀರ್ಘವಾದ ಪ್ರಯತ್ನದಿಂದ. ಆಗ ಅದು ಉಸಿರಾಡುವಷ್ಟು ಸರಳ ಮತ್ತು ಸಹಜವಾಗುತ್ತದೆ. ಇದು ಹೊರಗಿನಿಂದ ಬಂದ ಒತ್ತಡದಿಂದ, ನಿಯಮಗಳಿಂದ ಸಾಧ್ಯವಾಗುವುದಿಲ್ಲ. ಆಂತರಿಕವಾದ ಸಂಯಮ, ಇಂದ್ರಿಯ ನಿಗ್ರಹ, ಭಕ್ತಿ, ಶ್ರದ್ಧೆ ಇವುಗಳ ಹಿಡಿತಗಳ ಅಭ್ಯಾಸದಿಂದ ಬಂದದ್ದು. ಹೊರಗಡೆ ನಿರಾಳ, ಸಡಿಲ, ಆದರೆ ಆಂತರಿಕವಾದ ಬಿಗಿತನ ಇವುಗಳಿಂದ, ದೀರ್ಘ ಮಪ್ರಯತ್ನದಿಂದ, ಈ ಸರ್ವಾತ್ಮತೆ ಸಾಧ್ಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT