ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣದ ಕಿಮ್ಮತ್ತು, ಮೇಲ್ಮನೆ ಗಮ್ಮತ್ತು

ಮೇಲ್ಮನೆಯ ಸದಸ್ಯತ್ವವನ್ನು ಬಿಕರಿ ಮಾಡುವುದು ಪ್ರಜಾತಂತ್ರದ ಪರಿಹಾಸ್ಯ
Last Updated 19 ಜೂನ್ 2020, 2:33 IST
ಅಕ್ಷರ ಗಾತ್ರ
ADVERTISEMENT
""

ಮೇಲ್ಮನೆ ಎಂದು ಕರೆಯಲಾಗುವ ರಾಜ್ಯಸಭೆ ಹಾಗೂ ವಿಧಾನ ಪರಿಷತ್ತಿನ ಸದಸ್ಯ ಸ್ಥಾನಗಳ ಘನತೆ ಮಸುಳಿಸಿ ಕಾಲಗಳೇ ಸಂದುಹೋಗಿವೆ. ಪ್ರಭಾವಿಗಳ ಕೃಪೆ, ಜಾತಿ ಬಲ, ಕಾಂಚಾಣ ಇದ್ದರಷ್ಟೇ ಮೇಲ್ಮನೆಯ ಬಾಗಿಲು ತೆರೆಯುತ್ತದೆ ಎಂಬುದು ಕಟು ವಾಸ್ತವ.

ಕುದುರೆಯೊಂದನ್ನು ಕಳವು ಮಾಡಿದ್ದ ಕಳ್ಳನೊಬ್ಬ ಅದನ್ನು ಮಾರಾಟ ಮಾಡಲು ಮುಂದಾಗಿದ್ದ. ಅದರ ಬೆಲೆ ಎ‌ಷ್ಟೆಂದು ಆತನಿಗೆ ಗೊತ್ತಿರದೇ ಇದ್ದುದರಿಂದ, ತನಗೆ ಬೇಕಾಗಿರುವ ಮೊತ್ತ ಲೆಕ್ಕಹಾಕಿ ₹20 ಸಾವಿರ ಎಂದು, ಅದನ್ನು ಖರೀದಿ ಮಾಡಲು ಬಂದವನಿಗೆ ಹೇಳಿದ. ಬೆಲೆ ಜಾಸ್ತಿಯಾಯಿತು ಎಂದು ಆತ ಹೋದ. ಮತ್ತೊಬ್ಬ ಬಂದು ಬೆಲೆ ಕೇಳಿದಾಗ, ತಾನು ಕೇಳಿದ್ದು ಜಾಸ್ತಿಯಾಯಿತು ಎಂಬ ಗೊಂದಲಕ್ಕೆ ಬಿದ್ದ ಕಳ್ಳ, ₹15 ಸಾವಿರ ಎಂದ. ಆಗಲೂ ಖರೀದಿದಾರ ‘ಅಷ್ಟು ಬೆಲೆಯಾ’ ಎಂದು ಕೇಳಿ ಹೋದ. ಇದ್ಯಾಕೋ ಬರ್ಕತ್‌ ಆಗ್ತಾ ಇಲ್ಲ ಎಂದು ಎಣಿಸಿದ ಕಳ್ಳ, ನಂತರ ಬಂದ ವ್ಯಾಪಾರಿಗೆ ₹8 ಸಾವಿರ ಹೇಳಿದ. ಆತನೂ ದರ ಹೆಚ್ಚಾಯ್ತು ಎಂದು ತಲೆ ಕೊಡವಿ ಹೋಗಿಯೇಬಿಟ್ಟ. ಇದನ್ನೆಲ್ಲ ನೋಡುತ್ತಿದ್ದ ವ್ಯಕ್ತಿ ಯೊಬ್ಬನಿಗೆ ಇದು ಕಳ್ಳಮಾಲು ಎಂದು ಗೊತ್ತಾಯಿತು. ಆತ ಕಳ್ಳನ ಬಳಿ ಬಂದು, ‘ದರ ಎಷ್ಟು?’ ಎಂದು ಕೇಳಿದ. ಬಂದಷ್ಟು ಬರಲಿ ಎಂಬ ನಿರ್ಧಾರಕ್ಕೆ ಬಂದಿದ್ದ ಕಳ್ಳ ₹7 ಸಾವಿರ ಎಂದ. ₹10 ಸಾವಿರ ಕೊಡುತ್ತೇನೆ ಎಂದು ಆಸಾಮಿ ಹೇಳಿದ. ಇದರಿಂದ ಕಳ್ಳ ಖುಷಿಯಾದ. ಇದೇ ಸಮಯ ಎಂದರಿತ ವ್ಯಕ್ತಿ, ಕುದುರೆಗೆ ಓಡಲು ಬರುತ್ತದೆಯೇ? ಕಾಲುಗಳು ಸೊಟ್ಟ ಇವೆಯೇ ಎಂದು ಪರೀಕ್ಷಿಸಲು ಒಮ್ಮೆ ಸವಾರಿ ಮಾಡಿ ನೋಡುವೆ ಎಂದ. ಕಳ್ಳ ಒಪ್ಪಿಕೊಂಡಿದ್ದೇ ತಡ, ಕುದುರೆ ಹತ್ತಿದ ವ್ಯಾಪಾರಿ ಪರಾರಿಯಾದ. ಕಳ್ಳನಿಗೆ ತನ್ನ ಕುದುರೆ ಕಳವಾಯಿತು ಎಂದು ದೂರು ಕೊಡುವಂತೆಯೂ ಇಲ್ಲದೆ ಪೆಚ್ಚುಮೋರೆ ಹಾಕಿಕೊಂಡು ಮನೆಗೆ ನಡೆದ.

ಮೇಲ್ಮನೆಯ ಸದಸ್ಯತ್ವವನ್ನು ಬಿಕರಿ ಮಾಡುವುದು ನೋಡಿದಾಗ ಇದು ನೆನಪಿಗೆ ಬಂತು. ನಮ್ಮ ಆಳುವ ಪಕ್ಷಗಳಿಗೆ ಸದಸ್ಯತ್ವದ ಬೆಲೆಯಾಗಲೀ ಮೇಲ್ಮನೆಯನ್ನು ಸೃಷ್ಟಿಸಿದ ಉದಾತ್ತ ಆಶಯವಾಗಲೀ ಮರೆತಂತಿದೆ; ಶಾಸನ ರಚನೆ ವೇಳೆ ನಾನಾ ಕ್ಷೇತ್ರಗಳ ಪರಿಣತರು, ನೇರವಾಗಿ ಜನರಿಂದ ಗೆಲ್ಲಲು ಸಾಧ್ಯವಿಲ್ಲದ ಪ್ರತಿಭಾವಂತರು ಹಾಗೂ ಮತಬಾಹುಳ್ಯವಿಲ್ಲದ ತಳಸ್ತರದ ಸಮುದಾಯಗಳ ಪ್ರತಿನಿಧಿಗಳು ಚರ್ಚೆ ನಡೆಸಬೇಕು; ತಮ್ಮ ಸಮುದಾಯದ ಸಂಕಟಗಳ ಅನಾವರಣ ಮಾಡಿ, ಅದಕ್ಕೆ ಶಾಸನ ರೂಪದಲ್ಲಿ ಪರಿಹಾರ ಕಲ್ಪಿಸಬೇಕು ಎಂಬ ಕಾರಣಕ್ಕೆ ಇಂತಹದ್ದೊಂದು ವ್ಯವಸ್ಥೆಯನ್ನು ನಮ್ಮ ಹಿರೀಕರು ಸೃಷ್ಟಿಸಿದರು. ಆದರೆ, ಅದರ ಆಶಯವೇ ಈಗ ಮಣ್ಣುಪಾಲಾಗಿದೆ.

ಒಂದು ಕಾಲದಲ್ಲಿ, ಮೇಲ್ಮನೆಗೆ ಪ್ರಬುದ್ಧರನ್ನು ಕಳುಹಿಸಬೇಕೆಂಬ ಹಂಬಲ ರಾಜಕೀಯ ಪಕ್ಷಗಳ ನಾಯಕರಲ್ಲೇ ಇತ್ತು. ರಾಜೀವ್ ‌ಗಾಂಧಿ ಕಾಲದ ಬೊಫೋರ್ಸ್‌ ಹಗರಣವನ್ನು ಬಯಲಿಗೆಳೆಯುವಲ್ಲಿ ಪ್ರಧಾನ ಪಾತ್ರ ವಹಿಸಿದ್ದವರು ವಕೀಲ ರಾಂ ಜೇಠ್ಮಲಾನಿ. ಅವರನ್ನು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆ ಮಾಡಲಾಗಿತ್ತು. ದೇಶಕ್ಕೆ ಪಂಚಾಯತ್‌ ರಾಜ್ ವ್ಯವಸ್ಥೆಯನ್ನು ಪರಿಚಯಿಸಿದ ಅಬ್ದುಲ್ ನಜೀರ್ ಸಾಬ್‌ ಕೂಡ ವಿಧಾನ ಪರಿಷತ್ತಿನ ಸದಸ್ಯರಾಗಿದ್ದವರು. ಅದು ಜನತಾ ಪರಿವಾರದ ಸರ್ಕಾರ ಇದ್ದ ಕಾಲದಲ್ಲೇ.

ಏಕೆಂದರೆ, ಕಾಂಗ್ರೆಸ್‌ನಲ್ಲಿ ಲಾಗಾಯ್ತಿನಿಂದಲೂ ಹೈಕಮಾಂಡ್‌ನಿಂದ ಬಂದ ಪಟ್ಟಿಗೆ ಜೈಜೈ ಎನ್ನುವುದಷ್ಟೇ ರಾಜ್ಯ ನಾಯಕರ ಪಾಡಾಗಿತ್ತು. ಈಗ ಮತ್ತೆ ಅದೇ ಸಂಪ್ರದಾಯ ಚಾಲ್ತಿಗೆ ಬಂದಿದೆ.

ಮೇಲ್ಮನೆ ಲಾಬಿಯ ಕುರಿತು ಎರಡು ಘಟನೆಗಳು ಇಲ್ಲಿವೆ. 1994ರಲ್ಲಿ ಜನತಾದಳ ನೇತೃತ್ವದ ಸರ್ಕಾರ ಬಂದಾಗ ಕಾಂಗ್ರೆಸ್ ಸಂಪೂರ್ಣ ನೆಲಕಚ್ಚಿತ್ತು. ಮುಖ್ಯಮಂತ್ರಿಯಾಗುವ ಕನಸು ಕಟ್ಟಿಕೊಂಡಿದ್ದ ಎಸ್‌.ಎಂ.ಕೃಷ್ಣ ದಿಕ್ಕುತೋಚದ ಸ್ಥಿತಿಯಲ್ಲಿದ್ದರು. ರಾಜ್ಯಸಭೆಗೆ ಹೋಗುವ ಅಂದಾಜಿನಲ್ಲಿದ್ದರು. ಆದರೆ, ಕಾಂಗ್ರೆಸ್‌ನ ಮತಗಳು ಸಾಕಾಗುತ್ತಿರಲಿಲ್ಲ. ಆಗ ಜನತಾದಳವು ದೇವೇಗೌಡರ ಕೈಯಲ್ಲಿತ್ತು. ಈಗಿನ ಸರ್ಕಾರದಲ್ಲಿ ಪ್ರಭಾವಿ ಆಗಿರುವವರೊಬ್ಬರು ಗೌಡರ ಬಳಿ ಈ ಪ್ರಸ್ತಾಪ ಇಟ್ಟರು. ಯಾವುದೋ ಚಿಂತನೆಯಲ್ಲಿದ್ದ ಗೌಡರು, ಸಿಟ್ಟಿನಿಂದ ಪೆನ್ ಎಸೆದು ‘ಇನ್ನು ಈ ಕಡೆ ಮುಖ ಹಾಕಬೇಡ’ ಎಂದು ಗದರಿಸಿ ಕಳುಹಿಸಿದರು. 15 ದಿನ ಬಿಟ್ಟು ಈ ಪ್ರಭಾವಿಗೆ ಕರೆ ಮಾಡಿದ ಗೌಡರು, ‘ಕೃಷ್ಣ ದೆಹಲಿಗೆ ಹೋದರೆ ನಮಗೇನು ಲಾಭ’ ಎಂದು ಪ್ರಶ್ನಿಸಿದರು. ‘ಈಗ ಜನತಾದಳ ಸರ್ಕಾರ ಇದೆ; ಕೃಷ್ಣ ಇಲ್ಲೇ ಇದ್ದರೆ ನಿಮಗೆ ಸಮಸ್ಯೆ ಜಾಸ್ತಿ. ಅವರನ್ನು ದೆಹಲಿಗೆ ಸಾಗಹಾಕಿದರೆ ನಿಮಗೂ ಸಮಸ್ಯೆಯಾಗದು; ಅವರು ಅಲ್ಲೇ ಸೆಟ್ಲ್ ಆಗಿಬಿಡುತ್ತಾರೆ’ ಎಂದು ಸಂಧಾನಕಾರರು ಸಮಾಧಾನಿಸಿದರು. ಆದರೆ, ಕೃಷ್ಣ ಗೆಲ್ಲಲು ಜನತಾದಳದ ಐದು ವೋಟುಗಳು ಬೇಕಾಗಿದ್ದವು. ಆ ಕಾಲಕ್ಕೆ ತಲಾ ವೋಟಿಗೆ ‘5’ ಕೊಡಲಾಗಿತ್ತು. ವಿಚಿತ್ರವೆಂದರೆ, ಕೃಷ್ಣ ಅವರನ್ನು ಯಾರು ಚುನಾವಣೆಯಲ್ಲಿ ಸೋಲಿಸಿದ್ದರೋ ಅದೇ ಮದ್ದೂರಿನ ಪ್ರತಿನಿಧಿಯೂ ಅವರಿಗೆ ವೋಟು ಹಾಕಿ ದೆಹಲಿಗೆ ಕಳುಹಿಸಿದ್ದರು.

ಈಗಲೂ ರಾಜ್ಯಸಭೆಯ ಸದಸ್ಯರಾಗಿರುವ ಪ್ರಭಾವಿಯೊಬ್ಬರು ಜನತಾದಳ ನೇತೃತ್ವದ ಸರ್ಕಾರ ಇದ್ದಾಗಲೇ ಚುನಾವಣೆಗೆ ಸ್ಪರ್ಧಿಸಿದ್ದರು. ಒಂದು ಮತಕ್ಕೆ ‘10’ ಇನಾಮು ನಿಗದಿ ಮಾಡಲಾಗಿತ್ತು. ಬೆಳಗಾವಿಯ ಒಬ್ಬರು (ಈಗಲೂ ಶಾಸಕರು), ‘ಅಷ್ಟು ದುಡ್ಡನ್ನು ಪೇಪರ್‌ನಲ್ಲಿ ಕಟ್ಟಿಕೊಟ್ಟರೆ, ತಲೆಯಡಿ ಇಟ್ಟುಕೊಂಡು ರೈಲಿನಲ್ಲಿ ಹೋದರೆ ಬೆಳಗಾಗುವಷ್ಟರಲ್ಲಿ ಯಾರಾದರೂ ತಲೆ ಕಡಿದು ದುಡ್ಡು ಹೊತ್ತುಕೊಂಡು ಹೋದಾರು. ಡಿ.ಡಿ. ಕೊಡಿಸಪ್ಪ’ ಎಂದು ‘ಸುಯೋಧನ’ನಂತೆ ಕೇಳಿದ್ದರು. ‘ಏಯ್ ಲಂಚದ ದುಡ್ಡು ಡಿ.ಡಿ. ಕೊಡೋಕೆ ಆಗುತ್ತಾ? ತಲುಪಿಸ್ತೀನಿ ಇರು’ ಎಂದು ಕತ್ತಿಯೇಟು ಹೊಡೆದಂತೆ ಹೇಳಿದ್ದ ಮತ್ತೊಬ್ಬರು, ದುಡ್ಡನ್ನು ಬೆಳಗಾವಿಯವರೆಗೆ ಸುರಕ್ಷಿತವಾಗಿ ತಲುಪಿಸಿದ್ದರು. ಇದು ರಾಜ್ಯಸಭೆಯ ಅಸಲು ವ್ಯವಹಾರ.

ರಾಜ್ಯ ಮಟ್ಟದಲ್ಲಿ ಮೇಲ್ಮನೆಯಾಗಿರುವ ವಿಧಾನ ಪರಿಷತ್ತಿಗೆ ಬಂದರೆ ಇಂತಹುದೇ ಹಲವು ಕತೆಗಳು ವಿಧಾನಸೌಧದ 1–2ನೇ ಮಹಡಿಯಿಂದ ಹರಿದು ಬರುತ್ತವೆ. ರಾಜ್ಯಸಭೆಗೆ ಅವಿರೋಧ ಆಯ್ಕೆ ನಡೆದಿದ್ದು, ಈಗ ಪರಿಷತ್ತಿಗೂ ಅವಿರೋಧ ಆಯ್ಕೆ ಖಚಿತವಾಗಿದೆ.

ಚುನಾವಣೆಗೆ ನಿಂತು ಗೆಲ್ಲುವ ಹಣಬಲ, ಮತಬಲ ಇಲ್ಲದ ಶ್ರೀಸಾಮಾನ್ಯರನ್ನು ಮೇಲ್ಮನೆಗೆ ಆರಿಸಬೇಕೆಂಬುದು ಚಾಲ್ತಿಯಲ್ಲಿದ್ದ ಪದ್ಧತಿ. ಆದರೆ ಅದು ಬದಲಾಗಿ, ಯಾರು ಹೂಡಿಕೆ ಮಾಡುತ್ತಾರೋ ಯಾರು ಹೈಕಮಾಂಡ್‌–ವರಿಷ್ಠರಿಗೆ ಆಪ‍್ತರೋ ಅವರಿಗೆ ನೀಡುವುದು ಹೊಸ ಚಾಳಿ. ಪ್ರಾತಿನಿಧ್ಯವೇ ಸಿಗದ ಸಮುದಾಯಗಳಿಗೆ ನೀಡಬೇಕೆಂಬುದು ಸಾಮಾಜಿಕ ನ್ಯಾಯದ ಆಶಯ ಕೂಡ. ಆದರೆ, ಒಂದೇ ಜಾತಿಗೆ, ರಾಜ್ಯಸಭೆಯನ್ನುಪ್ರತಿನಿಧಿಸಿದ್ದವರಿಗೆ ಮಣೆ ಹಾಕಿರುವುದು ಈಗ ನಡೆದಿದೆ.

ನೇರ ಚುನಾವಣೆಯಲ್ಲಿ ಸೋತವರು ಹಿಂಬಾಗಿಲಿನಿಂದ ಪ್ರವೇಶಿಸುವ ಕೆಟ್ಟ ಸಂಪ್ರದಾಯವೂ ಆರಂಭವಾಗಿದೆ. ಇದಕ್ಕೆ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್ ಈ ಯಾವ ಪಕ್ಷವೂ ಹೊರತಲ್ಲ. ಘಟಾನುಘಟಿ ನಾಯಕರೂ ಭಿನ್ನರಲ್ಲ. 1999ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದ ಬಿ.ಎಸ್‌.ಯಡಿಯೂರಪ್ಪ ಪರಿಷತ್ ಸದಸ್ಯರಾಗಿ, ವಿರೋಧ ಪಕ್ಷದ ನಾಯಕರೂ ಆಗಿದ್ದರು. 2013ರಲ್ಲಿ ಸೋತಿದ್ದ ಕೆ.ಎಸ್‌.ಈಶ್ವರಪ್ಪ ಕೂಡ ಇದೇ ಹಾದಿ ಹಿಡಿದಿದ್ದರು.

2018ರಲ್ಲಿ ನಡೆದ ಚುನಾವಣೆಯಲ್ಲಿ ಗೆದ್ದು, ವರ್ಷ ತುಂಬುವಷ್ಟರಲ್ಲಿ ರಾಜೀನಾಮೆ ಕೊಟ್ಟು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದ ಎಚ್.ವಿಶ್ವನಾಥ್, ಎಂ.ಟಿ.ಬಿ. ನಾಗರಾಜ್‌ ಅವರನ್ನು ಜನ ತಿರಸ್ಕರಿಸಿದ್ದರು. ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವೇ ಇದ್ದರೂ ಅದೇ ಪಕ್ಷದ ಅಭ್ಯರ್ಥಿಗಳಿಗೆ ಜನರು ಮನ್ನಣೆ ನೀಡಿರಲಿಲ್ಲ. ಬಹಳಷ್ಟು ದುಡ್ಡು ಕಾಸು ಇರುವ ಎಂ.ಟಿ.ಬಿ. ನಾಗರಾಜ್ ಕೊನೆಗೂ ಟಿಕೆಟ್‌ ಗಿಟ್ಟಿಸಿಕೊಂಡಿದ್ದಾರೆ. ಪಕ್ಷಾಂತರ ಮಾಡಿದ ಇಬ್ಬರಿಗೆ ಬಿಜೆಪಿ ನಾಯಕರು ಮೇಲ್ಮನೆಯ ದಾರಿ ತೋರಿಸಿ ಋಣ ತೀರಿಸಿಕೊಂಡಿದ್ದಾರೆ. ಹಿಂದುಳಿದ ಸಮುದಾಯಗಳಿಗೆ ಸಿಗಬ ಹುದಾಗಿದ್ದ ಮೂರು ಸ್ಥಾನಗಳನ್ನು, ಇಲ್ಲಿಯವರೆಗೆ ರಾಜಕೀಯ ಪ್ರಾತಿನಿಧ್ಯ ಪಡೆದುಕೊಂಡೇ ಬಂದ ಎರಡು ಜಾತಿಗಳ ನಾಯಕರು ದಕ್ಕಿಸಿಕೊಂಡಿದ್ದಾರೆ. ಅನೇಕ ಬಾರಿ ಶಾಸಕರಾಗಿ, ಗೆದ್ದು–ಸೋತು ರಾಜಕಾರಣ ಮಾಡಿದವರು ತಮ್ಮ ಸಮುದಾಯ ಅಥವಾ ಯಾವುದಾದರೂ ಹಿಂದುಳಿದ ಸಮುದಾಯಕ್ಕೆ ಸಿಗಬಹುದಾದ ಪ್ರಾತಿನಿಧ್ಯವನ್ನು ತಪ್ಪಿಸುವುದು ಸರ್ವಥಾ ಸಾಧುವಲ್ಲ. ಇದು ಪ್ರಜಾತಂತ್ರದ ಪರಿಹಾಸ್ಯವಲ್ಲದೆ ಬೇರೇನೂ ಅಲ್ಲ.

ವೈ.ಗ.ಜಗದೀಶ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT