ಮಂಗಳವಾರ, ಮೇ 11, 2021
28 °C
ಅಧಿಕಾರಶಾಹಿ ಎಂಬ ವ್ಯವಸ್ಥೆಗೆ ಈ ತತ್ವದ ಅರಿವು ಬಹುಮಟ್ಟಿಗೆ ಇರುವುದಿಲ್ಲ

ಕ್ಯಾಪ್ಟನ್ ಜಿ.ಆರ್. ಗೋಪಿನಾಥ್ ಅಂಕಣ| ‘ಕಿಸ್’ ತತ್ವ ನೆನಪಿಸಬೇಕಿದೆ!

ಕ್ಯಾಪ್ಟನ್ ಜಿ.ಆರ್. ಗೋಪಿನಾಥ್ Updated:

ಅಕ್ಷರ ಗಾತ್ರ : | |

ಅರುಣ್ ಜೇಟ್ಲಿ ಅವರು ಕೇಂದ್ರ ಹಣಕಾಸು ಸಚಿವರಾಗಿದ್ದಾಗ, 2018ರ ಡಿಸೆಂಬರ್‌ನಲ್ಲಿ ಒಂದು ಮಾತು ಹೇಳಿದ್ದರು. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯ ಅಡಿಯಲ್ಲಿ ಕೆಲವು ವಸ್ತುಗಳಿಗೆ ಶೇಕಡ 28ರಷ್ಟು ತೆರಿಗೆ ವಿಧಿಸುವುದು ಶೀಘ್ರದಲ್ಲೇ ಇನ್ನಿಲ್ಲವಾಗುತ್ತದೆ, ಎರಡು ಹಂತಗಳ ತೆರಿಗೆ ವ್ಯವಸ್ಥೆ (ಕೆಲವು ವಸ್ತು, ಸೇವೆಗಳನ್ನು ಹೊರತುಪಡಿಸಿ) ದೇಶದಲ್ಲಿ ಬರಬಹುದು ಎಂದಿದ್ದರು. ಆದರೆ, ದುರದೃಷ್ಟದ ವಿಚಾರವೆಂದರೆ, ಅವರು ಹಾಗೆ ಹೇಳಿದ ಒಂದು ವರ್ಷಕ್ಕೂ ಮೊದಲೇ ಇನ್ನಿಲ್ಲವಾದರು, ಮಾತು ಜಾರಿಗೆ ತರಲು ಅವರಿಂದ ಆಗಲಿಲ್ಲ. ಜಿಎಸ್‌ಟಿ ವ್ಯವಸ್ಥೆಯು ಈಗಲೂ ಸಂಕೀರ್ಣವಾಗಿಯೇ ಇದೆ. ಇದರಲ್ಲಿ ಬೇರೆ ಬೇರೆ ಹಂತಗಳ ತೆರಿಗೆಗಳು ಇವೆ, ಅರ್ಥ ಮಾಡಿಕೊಳ್ಳಲು ಇದು ಸುಲಭವಲ್ಲ, ವ್ಯವಸ್ಥೆಯನ್ನು ಹಲವು ರೀತಿಯಲ್ಲಿ ವ್ಯಾಖ್ಯಾನಿಸಲು ಅವಕಾಶವಿದೆ, ವ್ಯವಸ್ಥೆಯನ್ನು ಬಳಸಿ ಕಿರುಕುಳ ನೀಡಲೂ ಸಾಧ್ಯವಿದೆ. ಹಾಗಾಗಿ, ಕೇಂದ್ರ ಹಣಕಾಸು ಸಚಿವಾಲಯದ ಅಧಿಕಾರಿಗಳಿಗೆ ‘ಕಿಸ್‌’ (KISS - Keep it simple, stupid) ತತ್ವದ ಬಗ್ಗೆ ಮತ್ತೆ ನೆನಪಿಸಿಕೊಡಬಹುದು!

ಲಾಕ್‌ಹೀಡ್‌ ಸಂಸ್ಥೆಯ ವೈಮಾನಿಕ ಎಂಜಿನಿಯರ್ ಕೆಲ್ಲಿ ಜಾನ್ಸನ್‌ ಹೇಳಿದ್ದು ಎನ್ನಲಾದ, ವಾಣಿಜ್ಯೋದ್ಯಮದಲ್ಲಿ ಬಹಳ ಜನಪ್ರಿಯವಾಗಿರುವ ತತ್ವ ಕಿಸ್. ವ್ಯವಸ್ಥೆಯನ್ನು ಸರಳವಾಗಿ ಇರಿಸು ಎಂಬುದು ಇದರ ತಾತ್ಪರ್ಯ. ಅಂದರೆ, ವಿಮಾನಗಳ ವಿನ್ಯಾಸವು ಎಷ್ಟು ಸರಳವಾಗಿ ಇರಬೇಕೆಂದರೆ, ಯುದ್ಧರಂಗದಲ್ಲಿ ಒಂದು ವಿಮಾನವನ್ನು ಒಬ್ಬ ಮೂರ್ಖ ಕೂಡ ಬಹಳ ಸಾಮಾನ್ಯವಾದ ಉಪಕರಣ ಬಳಸಿ ರಿಪೇರಿ ಮಾಡಲು ಸಾಧ್ಯವಾಗುವಂತೆ ಇರಬೇಕು ಎಂಬುದು ಇದರ ಅರ್ಥ.

ಆದರೆ, ಅಧಿಕಾರಶಾಹಿ ಎಂಬ ವ್ಯವಸ್ಥೆಗೆ ‘ಕಿಸ್’ ತತ್ವದ ಅರಿವು ಬಹುಮಟ್ಟಿಗೆ ಇರುವುದಿಲ್ಲ. ತಾನು ಒಂದು ಕೋಟಿಗಿಂತ ಹೆಚ್ಚು ಬಗೆಯ ವಸ್ತುಗಳನ್ನು ಮಾರಾಟ ಮಾಡುವುದಾಗಿ, ಹಲವು ಬಗೆಯ ಸೇವೆಗಳನ್ನು ಒದಗಿಸುವುದಾಗಿ, ಪ್ರತಿದಿನವೂ ಹೊಸ ಹೊಸ ವಿಭಾಗಗಳನ್ನು ತನ್ನಲ್ಲಿ ಸೇರಿಸಿಕೊಳ್ಳು ತ್ತಿರುವುದಾಗಿ ಅಮೆಜಾನ್‌ ಸಂಸ್ಥೆ ಜಾಹೀರಾತಿನಲ್ಲಿ ಹೆಮ್ಮೆಯಿಂದ ಹೇಳಿಕೊಳ್ಳುತ್ತದೆ. ಇಷ್ಟೆಲ್ಲ ಮಾಡುವುದು ಒಂದೇ ಕಂಪನಿ. ಇದನ್ನು ಹಿನ್ನೆಲೆಯಾಗಿ ಇಟ್ಟುಕೊಂಡು ಗಮನಿಸಿ: ಎಲ್ಲ ವಸ್ತುಗಳನ್ನು ಜಿಎಸ್‌ಟಿ ವ್ಯವಸ್ಥೆಯ ವಿವಿಧ ತೆರಿಗೆ ವರ್ಗಗಳಿಗೆ ಸೇರಿಸಿ ಎಂದು ಅಧಿಕಾರಶಾಹಿಗೆ ಹೇಳುವುದರಿಂದ ಗೊಂದಲ ಸೃಷ್ಟಿ ಖಚಿತ. ಮಹಾನ್ ಕಲಾವಿದ ಲಿಯೊನಾರ್ಡೊ ಡಾ ವಿಂಚಿ, ‘ಅತ್ಯಂತ ಸರಳವಾಗಿರುವುದೇ ಅತ್ಯಂತ ಆಧುನಿಕವೂ ಆಗಿರುತ್ತದೆ’ ಎಂದು ಹೇಳಿದ್ದ.

ಏಕರೂಪದ ತೆರಿಗೆ ವ್ಯವಸ್ಥೆಯಿಂದ ಲಾಭ ಇದೆ. ಇದನ್ನು ವಿಶ್ವದ ಎಲ್ಲೆಡೆ ಸಿಗುವ ಅಂಕಿ-ಅಂಶಗಳು ಗೊಂದಲಕ್ಕೆ ಆಸ್ಪದವಿಲ್ಲದಂತೆ ಹೇಳುತ್ತವೆ. ಹಾಗಾಗಿ, ಎರಡೇ ಎರಡು ಹಂತಗಳಲ್ಲಿ ತೆರಿಗೆ ವಿಧಿಸಲು ಅನುಕೂಲ ಆಗುವಂತೆ ಸರಕು ಮತ್ತು ಸೇವೆಗಳನ್ನು ವರ್ಗೀಕರಿಸುವಂತೆ ಅಧಿಕಾರಶಾಹಿಗೆ ಸ್ಪಷ್ಟವಾದ ನಿರ್ದೇಶನ ನೀಡಬೇಕು. ಶೂನ್ಯ ತೆರಿಗೆ ಪ್ರಮಾಣದ ಒಂದು ವರ್ಗ, ಶೇಕಡ 10ರಿಂದ 12ರ ನಡುವಿನದ್ದು ಅಥವಾ ಅದಕ್ಕೂ ಕಡಿಮೆಯ ಇನ್ನೊಂದು ತೆರಿಗೆ ವರ್ಗ ಇರಬೇಕು.

ಇದು ಸಾಧ್ಯವಾಗಬೇಕು ಎಂದಾದರೆ ರಾಜಕೀಯ ನಾಯಕರ ಮಟ್ಟದಲ್ಲಿ ದಿಟ್ಟವಾದ, ಸ್ಪಷ್ಟವಾದ ಸುಧಾರಣಾತ್ಮಕ ಚಿಂತನೆಗಳು ಆಗಬೇಕು. ಮುನ್ನೂರು ಕೊಠಡಿಗಳ ಪಂಚತಾರಾ ಹೋಟೆಲ್‌ ಅಂದಾಜು ನೂರಾರು ಜನರಿಗೆ ನೇರ ಉದ್ಯೋಗ ಕಲ್ಪಿಸುತ್ತದೆ. ಹೋಟೆಲ್‌ಗೆ ಹೊಂದಿಕೊಂಡು ಇರುವ ಸ್ಪಾ, ಉಡುಗೊರೆಗಳ ಅಂಗಡಿ, ಈಜುಕೊಳದಂತಹ ವ್ಯವಸ್ಥೆಗಳು ಕೂಡ ಒಂದಿಷ್ಟು ಜನರಿಗೆ ಉದ್ಯೋಗ ಕಲ್ಪಿಸುತ್ತವೆ.

ಇಂತಹ ಹೋಟೆಲ್‌ಗಳು ಇತರ ಕ್ಷೇತ್ರಗಳಲ್ಲಿ ಕೂಡ ಪರೋಕ್ಷ ಉದ್ಯೋಗ ಸೃಷ್ಟಿಗೆ ಕಾರಣವಾಗುತ್ತವೆ. ಅವು ಲಿನೆನ್‌ ಖರೀದಿ ಮಾಡುತ್ತವೆ, ಪೀಠೋಪಕರಣ ಖರೀದಿಸುತ್ತವೆ. ನೆಲಹಾಸು, ಹೊದಿಕೆ (ಇವುಗಳನ್ನು ಕಾಲಕಾಲಕ್ಕೆ ಬದಲಿಸಬೇಕಿರುವ ಕಾರಣ, ಇವು ಜವಳಿ ಕ್ಷೇತ್ರದಲ್ಲಿ ಒಂದಿಷ್ಟು ಉದ್ಯೋಗ ಸೃಷ್ಟಿಯಾಗಲು ಮೂಲವಾಗುತ್ತವೆ), ಹವಾ ನಿಯಂತ್ರಕಗಳು, ವಿದ್ಯುತ್ ಉಪಕರಣಗಳು ಇಂತಹ ಹೋಟೆಲ್‌ಗಳಿಗೆ ಬೇಕು. ಅಲ್ಲದೆ, ಇಂತಹ ಸ್ಥಳಗಳಿಗೆ ಆಹಾರ ವಸ್ತುಗಳು ಸಹ ದೊಡ್ಡ ಮಟ್ಟದಲ್ಲಿ ಬೇಕಾಗಿರುತ್ತವೆ. ಇವೆಲ್ಲ ಉದ್ಯೋಗ ಸೃಷ್ಟಿಯ ಚಟುವಟಿಕೆಗಳು, ರೈತರ ಉತ್ಪನ್ನಗಳಿಗೆ ಬೇಡಿಕೆ ಸೃಷ್ಟಿಸುವಂಥವು. ಅಲ್ಲದೆ, ಕಟ್ಟಡ ನಿರ್ಮಾಣ ಗುತ್ತಿಗೆದಾರರಿಗೆ, ಕರಕುಶಲ ಕೆಲಸಗಾರರಿಗೆ ಮತ್ತು ಇತರ ಉತ್ಪನ್ನಗಳ ತಯಾರಕರಿಗೆ ನೆರವಾಗುತ್ತವೆ. ಇಂತಹ ಹೋಟೆಲ್‌ಗಳ ಮೇಲೆ ವಿಪರೀತ ಪ್ರಮಾಣದಲ್ಲಿ ತೆರಿಗೆ ವಿಧಿಸುವುದು ಸೂಕ್ತವಲ್ಲ. ಐಷಾರಾಮಿ ಕಾರುಗಳ ಮೇಲೆ ಭಾರಿ ತೆರಿಗೆ ವಿಧಿಸುವುದು ಕೂಡ ಅಸಹಜ ಆಲೋಚನೆಗಳ ಪರಿಣಾಮವೇ. ಐಷಾರಾಮಿ ಕಾರುಗಳನ್ನು ಉಪಯೋಗಿಸುವವರು ಶ್ರೀಮಂತರಾದರೂ ಕಾರುಗಳ ತಯಾರಿಕೆಯ ಕ್ಷೇತ್ರದಲ್ಲಿ ಇರುವ ಹೆಚ್ಚಿನವರು ಕಡಿಮೆ ಆದಾಯ ಹೊಂದಿರುವ ಗುಂಪುಗಳಿಗೆ ಸೇರಿದವರು. ಕಾರುಗಳ ಮೇಲಿನ ಭಾರಿ ತೆರಿಗೆಯಿಂದ ಆಗುವ ಪರಿಣಾಮ ಬೇರೆ ಬೇರೆ ಹಂತಗಳಲ್ಲಿ ಇರುತ್ತದೆ.

ಐ.ಡಿ. ಫ್ರೆಷ್ ಫುಡ್‌ ನವೋದ್ಯಮ ಜಿಎಸ್‌ಟಿ ವಿಚಾರವಾಗಿ ಎದುರಿಸುತ್ತಿರುವ ವಿವಾದವನ್ನು ಉದಾಹರಣೆಯಾಗಿ ಇಲ್ಲಿ ಗಮನಿಸಬಹುದು. ಈ ನವೋದ್ಯಮವು ಸವಿಯಲು ಸಿದ್ಧವಾಗಿರುವ ಚಪಾತಿ, ರೋಟಿ, ಪರೋಟಾಗಳನ್ನು, ಇಡ್ಲಿ ಮತ್ತು ದೋಸೆ ಹಿಟ್ಟನ್ನು ಮಾರಾಟ ಮಾಡುವ ವಹಿವಾಟಿನಲ್ಲಿ ತೊಡಗಿಸಿಕೊಂಡಿದೆ. ಪರೋಟ, ರೋಟಿ, ಚಪಾತಿಗಳಿಗೆ ಅವರು ಶೇಕಡ 5ರಷ್ಟು ಜಿಎಸ್‌ಟಿ ‍ಪಾವತಿಸುತ್ತಿದ್ದರು. ಆದರೆ, ಬುದ್ಧಿವಂತ ತೆರಿಗೆ ಅಧಿಕಾರಿಯೊಬ್ಬ ಅಸಾಮಾನ್ಯ ಆಲೋಚನೆಯೊಂದನ್ನು ತಂದ. ಪರೋಟಕ್ಕೆ ಶೇ 18ರಷ್ಟು ತೆರಿಗೆ ವಿಧಿಸಿದ; ಪರೋಟ ಎಂಬುದು ಪದರುಗಳಿರುವ ಬ್ರೆಡ್ ಇದ್ದಂತೆ, ಹಾಗಾಗಿ ಅದಕ್ಕೆ ಕಡಿಮೆ ಪ್ರಮಾಣದ ತೆರಿಗೆ ಸಾಧುವಲ್ಲ ಎಂದು ಹೇಳಿದ!

ತೆರಿಗೆ ಅಧಿಕಾರಿಗಳು ಪಾಕತಜ್ಞರಾಗಿ ಪರಿವರ್ತನೆ ಹೊಂದಿ, ಹಿಟ್ಟು ಮಾಡುವುದು ಹೇಗೆ ಎಂಬುದನ್ನು ಸಂಶೋಧಿಸುತ್ತ ಕುಳಿತರೆ ಅಂತಹ ದೇಶ 5 ಟ್ರಿಲಿಯನ್ ಡಾಲರ್‌ ಗಾತ್ರದ ಅರ್ಥವ್ಯವಸ್ಥೆಯನ್ನು ಹೊಂದುವುದು ಸಾಧ್ಯವೇ?

ಇದುವರೆಗೆ ಬಜೆಟ್ ಎಂಬುದು ತೀರಾ ನಾಜೂಕಿನಿಂದ ಸಿದ್ಧಪಡಿಸುತ್ತಿದ್ದ ಕಡತವಾಗಿತ್ತು. ಹಾಗೆ ಮಾಡುವ ಬದಲು ಹಣಕಾಸು ಸಚಿವರು, ಪ್ರಧಾನಿಯವರ ಮಾತಿನಿಂದ ಒಂದಿಷ್ಟು ಕಲಿತುಕೊಳ್ಳಬೇಕು. ಕೋವಿಡ್‌–19 ಅಪ್ಪಳಿಸಿದ ನಂತರ ಪ್ರಧಾನಿಯವರು ದೊಡ್ಡ ಮಟ್ಟದ ಸುಧಾರಣೆಗಳ ಬಗ್ಗೆ ಸೂಚನೆ ನೀಡಿದ್ದರು, ಗೊಂದಲ ಮೂಡಿಸುವ ತೆರಿಗೆ ಹಂತಗಳನ್ನು ನಿವಾರಿಸುವ ಮಾತನ್ನು ಅವರು ಆಡಿದ್ದರು. ಹಾಗೆ ಮಾಡಿದರೆ, ಹಣಕಾಸು ಸಚಿವರು ಕಡಿಮೆ ಪ್ರಮಾಣದ ಒಂದೇ ಹಂತದ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತರಬಹುದು. ಇದರಿಂದ ತೆರಿಗೆ ಪಾವತಿ ಹೆಚ್ಚುತ್ತದೆ, ‍ಪಾವತಿ ಮಾಡುವವರು ಹೆಚ್ಚುತ್ತಾರೆ, ವಾಣಿಜ್ಯೋದ್ಯಮಗಳನ್ನು ನಡೆಸುವ ಕೆಲಸ ಸುಲಭದ್ದಾಗುತ್ತದೆ, ಅರ್ಥ ವ್ಯವಸ್ಥೆಗೆ ಚೈತನ್ಯ ತುಂಬಿದಂತಾಗುತ್ತದೆ. ಇದರಿಂದ ಉದ್ಯೋಗ ಸೃಷ್ಟಿಯೂ ಆಗುತ್ತದೆ, ನಂತರದಲ್ಲಿ ತೆರಿಗೆ ಸಂಗ್ರಹವೂ ಜಾಸ್ತಿ ಆಗುತ್ತದೆ. ಇಂತಹ ಕ್ರಮವನ್ನು ಜನರೂ ಇಷ್ಟಪಡುತ್ತಾರೆ, ಅರ್ಥಶಾಸ್ತ್ರಜ್ಞರು ಕೂಡ ಮೆಚ್ಚುತ್ತಾರೆ.

‘ಸಂಪದ್ಭರಿತ ಆಗುವ ಉದ್ದೇಶದಿಂದ ತನ್ನ ಮೇಲೆ ತಾನೇ ತೆರಿಗೆ ವಿಧಿಸಿಕೊಳ್ಳುವ ದೇಶವು, ವ್ಯಕ್ತಿಯೊಬ್ಬ ಒಂದು ಬಕೆಟ್‌ನಲ್ಲಿ ನಿಂತು ಅದೇ ಬಕೆಟ್ಟನ್ನು ಎತ್ತಲು ಯತ್ನಿಸುವುದಕ್ಕೆ ಸಮ’ ಎಂದು ವಿನ್‌ಸ್ಟನ್ ಚರ್ಚಿ‌ಲ್ ಅವರು ಒಮ್ಮೆ ಹೇಳಿದ್ದನ್ನು ನೆನಪಿಟ್ಟುಕೊಳ್ಳುವುದು ಒಳ್ಳೆಯದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು