ಭಾನುವಾರ, ಜುಲೈ 3, 2022
22 °C
28 ಬ್ಯಾಂಕ್‌ಗಳಿಗೆ ₹22,842 ಕೋಟಿ ವಂಚನೆ

ಆಳ–ಅಗಲ: ಎಬಿಜಿ ಶಿಪ್‌ಯಾರ್ಡ್ ಬೃಹತ್‌ ವಂಚನೆಯ ಕತೆ

ಜಯಸಿಂಹ ಆರ್., ಅಮೃತ್‌ ಕಿರಣ್‌ ಬಿ.ಎಂ. Updated:

ಅಕ್ಷರ ಗಾತ್ರ : | |

Prajavani

ಹಡಗು ನಿರ್ಮಾಣದ ಬೃಹತ್‌ ಸಂಸ್ಥೆ ಎಂದು ಹೆಸರಾಗಿದ್ದ ಗುಜರಾತಿನ ಎಬಿಜಿ ಶಿಪ್‌ಯಾರ್ಡ್ ಕಂಪನಿಯು ವಂಚನೆ ಪ್ರಕರಣದಲ್ಲಿ ಈಗ ತನಿಖೆ ಎದುರಿಸುತ್ತಿದೆ. ಎಸ್‌ಬಿಐ ನೀಡಿದ ದೂರಿನ ಆಧಾರದಲ್ಲಿ ಎಬಿಜಿ ಶಿಪ್‌ಯಾರ್ಡ್, ಕಂಪನಿಯ ನಿರ್ದೇಶಕರು ಹಾಗೂ ಎಬಿಜಿ ಇಂಟರ್‌ ನ್ಯಾಷನಲ್‌ ಪ್ರೈ.ಲಿ. ಸಂಸ್ಥೆಯ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. 28 ಬ್ಯಾಂಕ್‌ಗಳ ಒಕ್ಕೂಟಕ್ಕೆ ₹22,842 ಕೋಟಿ ಸಾಲ ಮರುಪಾವತಿ ಮಾಡಿಲ್ಲ ಎಂಬ ಆರೋಪವು ಶಿಪ್‌ಯಾರ್ಡ್ ಮೇಲಿದೆ.

2012–13ರಲ್ಲಿ ಕಂಪನಿಯ ನಿವ್ವಳ ಲಾಭ ₹107 ಕೋಟಿ. ಆದರೆ ಇದರ ಮರುವರ್ಷವೇ ಕಂಪನಿಯ ಆರ್ಥಿಕ ಚಿತ್ರಣ ಬದಲಾಗಿ, ₹199 ಕೋಟಿ ನಷ್ಟ ದಾಖಲಿಸಿತು. 2016ರ ಹೊತ್ತಿಗೆ ಕಂಪನಿಯ ಒಟ್ಟು ನಷ್ಟ ₹3,704 ಕೋಟಿಗೆ ತಲುಪಿತು. 2013–14ರಲ್ಲಿ ಕಂಪನಿಯು ತನ್ನ ವಾರ್ಷಿಕ ವರದಿಯಲ್ಲಿ ನಷ್ಟದ ಕಾರಣಗಳನ್ನು ಪಟ್ಟಿ ಮಾಡಿತ್ತು. ಹೊಸ ಹಡಗುಗಳ ನಿರ್ಮಾಣದ ಹಲವು ಗುತ್ತಿಗೆಗಳು ರದ್ದಾಗಿರುವುದು, ಬ್ಯಾಂಕ್‌ ಸಾಲದಲ್ಲಿ ಇಳಿಕೆ, ಕೇಂದ್ರ ಸರ್ಕಾರ ನೀಡುವ ಹಡಗು ನಿರ್ಮಾಣ ಸಹಾಯಧನ ಯೋಜನೆಯು 2007ರಲ್ಲಿ ಮುಕ್ತಾಯವಾಗಿರುವುದರಿಂದ ನಷ್ಟ ಉಂಟಾಗಿದೆ ಎಂದು ಉಲ್ಲೇಖಿಸಲಾಗಿತ್ತು. ಸಿಬಿಐಗೆ ನೀಡಿದ ದೂರಿನಲ್ಲಿ ಎಸ್‌ಬಿಐ ಸಹ ಇದೇ ಅಂಶವನ್ನು ಉಲ್ಲೇಖಿಸಿದೆ. 

ಎಬಿಜಿ ಶಿಪ್‌ಯಾರ್ಡ್‌ ಕಂಪನಿಯು ಬ್ಯಾಂಕ್‌ನಿಂದ ಪಡೆದ ಸಾಲವನ್ನು ವಿದೇಶದಲ್ಲಿ ವಿವಿಧ ಕಂಪನಿಗಳಲ್ಲಿ ದೊಡ್ಡ ಮಟ್ಟದ ಬಂಡವಾಳ ಹೂಡಿಕೆಗೆ ಬಳಸಿಕೊಂಡಿದೆ ಎಂದು ಆರೋಪಿಸಲಾಗಿದೆ. ಬ್ಯಾಂಕ್‌ನಿಂದ ಪಡೆದ ಸಾಲವನ್ನು ಆಸ್ತಿ ಖರೀದಿಯಂತಹ ಅನ್ಯ ಉದ್ದೇಶಗಳಿಗೆ ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಕರಣದ ತನಿಖೆ ಆರಂಭಿಸಿರುವ ಸಿಬಿಐ, ಕಂಪನಿಯ ಅಂದಿನ ವ್ಯವಸ್ಥಾಪಕ ನಿರ್ದೇಶಕ ರಿಷಿ ಕಮಲೇಶ್ ಅಗರ್‌ವಾಲ್ ಸೇರಿದಂತೆ ಸಂಸ್ಥೆಯ ಎಲ್ಲ ನಿರ್ದೇಶಕರನ್ನು ತನಿಖೆಗೆ ಒಳಪಡಿಸಿದೆ. 

ಸಾಲವನ್ನು ಮರು ಪಾವತಿಸಲು ಅನುಕೂಲ ವಾಗುವಂತೆ ಶಿಪ್‌ಯಾರ್ಡ್ ಕಂಪನಿಗೆ ಬ್ಯಾಂಕ್‌ಗಳು 2014ರಲ್ಲಿ ಕೆಲವು ಸವಲತ್ತು ಗಳನ್ನು ನೀಡಿದವು. ಬಡ್ಡಿ ಕಡಿತ, ಸಾಲ ಮರುಪಾವತಿ ಅವಧಿ ವಿಸ್ತರಣೆಯಂತಹ ಕ್ರಮಗಳ ಹೊರತಾಗಿಯೂ ಕಂಪನಿಯು ಸಾಲದಿಂದ ಮೇಲೇಳಲಿಲ್ಲ. 2013ರಿಂದ ಪೂರ್ವಾನ್ವಯವಾಗುವಂತೆ ಎಬಿಜಿ ಶಿಪ್‌ಯಾರ್ಡ್ ಸಾಲವನ್ನು ಎನ್‌ಪಿಎ (ವಸೂಲಾಗದ ಸಾಲ) ಎಂದು 2016ರಲ್ಲಿ ಘೋಷಿಸಲಾಯಿತು. 

2012ರಿಂದ 2017ರ ಅವಧಿಯಲ್ಲಿ ಕಂಪನಿಯಲ್ಲಿ ಆಗಿರುವ ಲೋಪಗಳನ್ನು ಪತ್ತೆಹಚ್ಚಲು ಅರ್ನೆಸ್ಟ್ & ಯಂಗ್ ಸಂಸ್ಥೆಯು ವಿಧಿವಿಜ್ಞಾನ ಲೆಕ್ಕಪತ್ರಗಳ ಪರಿಶೀಲನೆ (ಫೊರೆನ್ಸಿಕ್) ಆರಂಭಿಸಿತು. ಮೂರ್ನಾಲ್ಕು ವರ್ಷಗಳ ಕಾಲ ದಾಖಲೆಗಳ ಪರಿಶೋಧನೆ ನಡೆಯಿತು. ಉದ್ಯಮ ದಿವಾಳಿತನ ಪ್ರಕ್ರಿಯೆಗಾಗಿ ಈ ಪ್ರಕರಣವನ್ನು 2017ರಲ್ಲಿ ನ್ಯಾಷನಲ್ ಕಂಪನಿ ಲಾ ಟ್ರಿಬ್ಯುನಲ್‌ಗೆ (ಎನ್‌ಸಿಎಲ್‌ಟಿ) ವಹಿಸಲಾಯಿತು. ಎಬಿಜಿ ಶಿಪ್‌ಯಾರ್ಡ್‌ ಪ್ರಕರಣವನ್ನು ವಂಚನೆ ಎಂಬುದಾಗಿ ಎಲ್ಲ 28 ಬ್ಯಾಂಕ್‌ಗಳು ಘೋಷಿಸಿದವು.

2019ರಲ್ಲಿ ಸಿಬಿಐನಲ್ಲಿ ಮೊದಲ ದೂರು ದಾಖಲಾಯಿತು. 2020ರ ಆಗಸ್ಟ್‌ನಲ್ಲಿ ಹೆಚ್ಚಿನ ವಿವರಗಳೊಂದಿಗೆ ಎಸ್‌ಬಿಐ ಎರಡನೇ ದೂರು ದಾಖಲಿಸಿತು. ಪ್ರಕರಣವನ್ನು ಸಂಪೂರ್ಣ ಪರಿಶೀಲಿಸಿದ ಬಳಿಕ, 2022ರ ಫೆಬ್ರುವರಿ 7ರಂದು ಎಫ್‌ಐಆರ್ ದಾಖಲಾಯಿತು. ಫೆ.12ರಂದು ವಿವಿಧ ಕಡೆ ಶೋಧ ನಡೆಸಿದ ಸಿಬಿಐ, ದಾಖಲೆಗಳನ್ನು ಕಲೆಹಾಕಿತು. ಸಾಲ ನೀಡಿಕೆಗೆ ಸಂಬಂಧಿಸಿದ ಮತ್ತಷ್ಟು ದಾಖಲಾತಿ ಗಳನ್ನು ಒದಗಿಸುವಂತೆ ಬ್ಯಾಂಕ್‌ಗಳಿಗೆ ಸಿಬಿಐ ನಿರ್ದೇಶನ ನೀಡಿದ್ದು, ತನಿಖೆ ಮುಂದುವರಿಸಿದೆ. 

ಬೃಹತ್‌ ಸಂಸ್ಥೆ

ಎಬಿಜಿ ಶಿಪ್‌ಯಾರ್ಡ್ 1995ರ ಜೂನ್‌ನಲ್ಲಿ ಕಾರ್ಯಾರಂಭ ಮಾಡಿತು. ಅಲ್ಲಿಂದ 2013ರ ವರೆಗಿನ ಅವಧಿಯಲ್ಲಿ ಕಂಪನಿಯು 165 ಹಡಗುಗಳನ್ನು ಕಟ್ಟಿದೆ. ಇವುಗಳಲ್ಲಿ ಶೇ 80ರಷ್ಟು ವಿದೇಶಗಳಿಗೆ ಮಾರಾಟವಾಗಿವೆ. 2000ನೇ ಇಸ್ವಿಯಲ್ಲಿ ಸರ್ಕಾರದ ಮೊದಲ ಗುತ್ತಿಗೆ ವಹಿಸಿಕೊಂಡ ಕಂಪನಿಯು, ಕರಾವಳಿ ಕಾವಲು ಪಡೆಗಾಗಿ ದೋಣಿಗಳನ್ನು ನಿರ್ಮಿಸಿತು. 2011ರಲ್ಲಿ, ಜಲಾಂತರ್ಗಾಮಿ ಗಳು ಸೇರಿದಂತೆ ರಕ್ಷಣಾ ಇಲಾಖೆಗೆ ಹಡಗುಗಳನ್ನು ನಿರ್ಮಿಸುವ ಪರವಾನಗಿ ಸಿಕ್ಕಿತು. 2012ರಲ್ಲಿ ₹16,600 ಕೋಟಿ ಮೊತ್ತದ ಗುತ್ತಿಗೆಯನ್ನು ಪಡೆದಿತ್ತು.

ಇದರ ಮುಖ್ಯ ಹಡಗುಕಟ್ಟೆಯು ತಾಪಿ ನದಿ ದಂಡೆಯ ಮಗದಲ್ಲಾ ಎಂಬಲ್ಲಿ 35 ಕಿಲೋಮೀಟರ್‌ನಷ್ಟು ವಿಸ್ತಾರವಾಗಿದೆ. ಗುಜರಾತ್‌ ಸರ್ಕಾರದ ಜೊತೆ ಒಪ್ಪಂದ ಮಾಡಿಕೊಂಡು, ಭರೂಚ್‌ನ ದಹೆಜ್ ಎಂಬಲ್ಲಿ ಎರಡನೇ ಹಡಗುಕಟ್ಟೆ ನಿರ್ಮಿಸಲಾಯಿತು.

ಎಸ್‌ಬಿಐ ದೂರಿನಲ್ಲಿ ಬಿಟ್ಟುಹೋದ ವಿವರಗಳು

ಈ ಪ್ರಕರಣದಲ್ಲಿ ಸಿಬಿಐಗೆ ದೂರು ನೀಡಲು ಎಸ್‌ಬಿಐ ವಿಳಂಬ ಮಾಡಿದೆ ಎಂದು ಕಾಂಗ್ರೆಸ್‌ ಮತ್ತು ಇನ್ನೂ ಹಲವು ವಿರೋಧ ಪಕ್ಷಗಳು ಆರೋಪಿಸಿವೆ. ಇದರಲ್ಲಿ ಯಾವುದೇ ವಿಳಂಬವಾಗಿಲ್ಲ ಎಂದು ಎಸ್‌ಬಿಐ ಸ್ಪಷ್ಟನೆ ನೀಡಿದೆ. ಆದರೆ ಎಸ್‌ಬಿಐ ನೀಡಿದ್ದ ದೂರಿನಲ್ಲಿ ಅಗತ್ಯ ಮಾಹಿತಿಗಳು ಇರಲಿಲ್ಲ. ಹೀಗಾಗಿ ಆ ಮಾಹಿತಿಯನ್ನು ಸಲ್ಲಿಸಲು ಎಸ್‌ಬಿಐಗೆ ಸೂಚಿಸಲಾಗಿತ್ತು ಎಂದು ಸಿಬಿಐ ತನ್ನ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದೆ.

ಎಬಿಜಿ ಶಿಪ್‌ಯಾರ್ಡ್‌ ಕಂಪನಿಯ ಸಾಲಗಳು ಎನ್‌ಪಿಎ ಆಗಿವೆ ಎಂದು 2016ರಲ್ಲೇ ಘೋಷಿಸಲಾಗಿತ್ತು. ಈ ಸಾಲಗಳೆಲ್ಲವೂ ವಂಚನೆ ಎಂದು 2019ರಲ್ಲಿ ಘೋಷಿಸಲಾಗಿತ್ತು. ಈ ಸಂಬಂಧ ಎಸ್‌ಬಿಐ, ಸಿಬಿಐಗೆ ಮೊದಲ ದೂರು ನೀಡಿದ್ದು 2019ರ ನವೆಂಬರ್ 8ರಂದು. ಆದರೆ ಈ ದೂರಿನಲ್ಲಿ ಅಗತ್ಯ ಮಾಹಿತಿಗಳು ಇಲ್ಲ ಎಂದು ಸಿಬಿಐ ಸ್ಪಷ್ಟನೆ ಕೇಳಿ 2020ರ ಮಾರ್ಚ್‌ 12ರಂದು ಎಸ್‌ಬಿಐಗೆ ಪತ್ರ ಬರೆದಿತ್ತು. ಸಿಬಿಐ ಕೇಳಿದ್ದ ಸ್ಪಷ್ಟನೆಗಳೊಂದಿಗೆ ಎಸ್‌ಬಿಐ 2020ರ ಆಗಸ್ಟ್‌ 25ರಂದು ಎರಡನೇ ದೂರು ನೀಡಿತ್ತು. ಆನಂತರ ದೂರನ್ನು ಪರಿಶೀಲಿಸಿ, 2022ರ ಫೆಬ್ರುವರಿ 7ರಂದು ಎಫ್‌ಐಆರ್ ದಾಖಲಿಸಿದೆ.

ಇಡೀ ಪ್ರಕ್ರಿಯೆಯಲ್ಲಿ ವಿಳಂಬವಾಗಿರುವುದು ಕಾಣುತ್ತದೆ. ಎಸ್‌ಬಿಐ ಮೊದಲ ದೂರು ನೀಡುವಾಗ ಹಲವು ಮಾಹಿತಿಗಳನ್ನು ಸಲ್ಲಿಸಿಲ್ಲ. ಈ ದೂರನ್ನು ಪರಿಶೀಲಿಸಿ, ಸ್ಪಷ್ಟನೆ ಕೇಳಲು ಸಿಬಿಐ ನಾಲ್ಕು ತಿಂಗಳು ಸಮಯ ತೆಗೆದುಕೊಂಡಿದೆ. ಆನಂತರ ಆ ಆಕ್ಷೇಪಗಳಿಗೆ ಸ್ಪಷ್ಟನೆ ನೀಡಲು ಎಸ್‌ಬಿಐ ಮತ್ತೆ ಐದು ತಿಂಗಳು ಸಮಯ ತೆಗೆದುಕೊಂಡಿದೆ. ಆನಂತರ ಸಲ್ಲಿಸಲಾದ ಎರಡನೇ ದೂರನ್ನು ಪರಿಶೀಲಿಸಿ, ಪ್ರಕರಣ ದಾಖಲಿಸಲು ಸಿಬಿಐ 18 ತಿಂಗಳು ತೆಗೆದುಕೊಂಡಿದೆ.

ಸಿಬಿಐ ನೀಡಿದ್ದ ದೂರಿನಲ್ಲಿ ಅಗತ್ಯ ಮಾಹಿತಿಗಳು ಇರದಿದ್ದ ಕಾರಣ, ಪ್ರಕರಣ ದಾಖಲಿಸಲು ಒಂಬತ್ತು ತಿಂಗಳು ವಿಳಂಬವಾಗಿದೆ. ಆದರೆ ಆ ಮಾಹಿತಿಗಳನ್ನು ನೀಡಿದ ನಂತರ ಪ್ರಕರಣ ದಾಖಲಿಸಲು ಸಿಬಿಐ ಮತ್ತೆ 18 ತಿಂಗಳು ತೆಗೆದುಕೊಳ್ಳುವ ಮೂಲಕ ಮತ್ತಷ್ಟು ವಿಳಂಬ ಮಾಡಿದೆ. ಒಟ್ಟಾರೆ ಪ್ರಕರಣ ದಾಖಲಿಸುವಲ್ಲಿ ದೀರ್ಘಾವಧಿಯ ವಿಳಂಬವಾಗಿರುವುದು ಎದ್ದು ಕಾಣುತ್ತದೆ.

ಸಿಬಿಐನ ಆಕ್ಷೇಪಗಳು

1. ಆಂತರಿಕ ತನಿಖೆ ನಡೆಸಿರುವ ಬಗ್ಗೆ ದೂರಿನಲ್ಲಿ ಯಾವುದೇ ವಿವರಗಳು ಇಲ್ಲ.

2. ಈ ವಂಚನೆಯಲ್ಲಿ ಯಾವುದೇ ಸರ್ಕಾರಿ ಅಧಿಕಾರಿ ಭಾಗಿಯಾಗಿರುವ ಬಗ್ಗೆ ಅನುಮಾನಗಳಿಲ್ಲ ಎಂದು ಬ್ಯಾಂಕ್‌ ಹೇಳಿದೆ.

3. ಲೆಟರ್‌ ಆಫ್ ಕ್ರೆಡಿಟ್‌ನ (ಸಾಲ ಖಾತರಿ ಪತ್ರ) ಬಗ್ಗೆ ದೂರಿನಲ್ಲಿ ಉಲ್ಲೇಖವೇ ಇಲ್ಲ.

4. ವಂಚನೆ ನಡೆದ ಅವಧಿ ಮತ್ತು ಹಣವನ್ನು ದುರ್ಬಳಕೆ ಮಾಡಿಕೊಂಡ ಬಗ್ಗೆ ದೂರಿನಲ್ಲಿ ವಿವರಗಳು ಇಲ್ಲ.

5. ಸಾಲ ನೀಡಿದ ಬ್ಯಾಂಕ್‌ಗಳ ಒಪ್ಪಿಗೆ ಪಡೆಯಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆದರೆ ಒಪ್ಪಿಗೆ ಪಡೆದುದರ ದಾಖಲೆಯನ್ನು ದೂರಿನ ಜತೆಗೆ ಸಲ್ಲಿಸಿಲ್ಲ.

ಇವುಗಳಲ್ಲಿ ನಾಲ್ಕು ಆಕ್ಷೇಪಗಳಿಗೆ (ಮೂರನೇ ಆಕ್ಷೇಪ ಹೊರತುಪಡಿಸಿ) ಎಸ್‌ಬಿಐ ಸ್ಪಷ್ಟನೆ ನೀಡಿದೆ

ಎಲ್‌ಸಿ ವಿವರ ಇಲ್ಲ

ಸಿಬಿಐ ನೀಡಿದ್ದ ಮೊದಲ ದೂರಿನಲ್ಲಿ ಸಾಲ ಖಾತರಿ ಪತ್ರದ (ಎಲ್‌ಸಿ) ಉಲ್ಲೇಖವಿರಲಿಲ್ಲ ಮತ್ತು ಅದನ್ನು ಲಗತ್ತಿಸಿಯೂ ಇರಲಿಲ್ಲ. ಆ ದೂರಿಗೆ ಸಿಬಿಐ ಸಲ್ಲಿಸಿದ್ದ ಆಕ್ಷೇಪಗಳಲ್ಲಿ ಎಲ್‌ಸಿಗೆ ಸಂಬಂಧಿಸಿದ ಆಕ್ಷೇಪವೂ ಒಂದು. ಎರಡನೇ ದೂರಿನಲ್ಲಿ ಬೇರೆಲ್ಲಾ ಆಕ್ಷೇಪಗಳಿಗೆ ಅಗತ್ಯವಾದ ಸ್ಪಷ್ಟನೆಯನ್ನು ಎಸ್‌ಬಿಐ ನೀಡಿದೆ. ಆದರೆ ಎಲ್‌ಸಿಯ ವಿವರ ನೀಡಿಲ್ಲ. ಎಲ್‌ಸಿಯನ್ನು ಸಲ್ಲಿಸಿಯೂ ಇಲ್ಲ. 

ಅಲ್ಲದೆ, ‘ಇದನ್ನು ಗಮನಿಸಿದ್ದೇವೆ’ ಎಂದಷ್ಟೇ ಉತ್ತರ ನೀಡಿದೆ.

ಆರೋಪ, ಪ್ರತ್ಯಾರೋಪ

ಎಬಿಜಿ ಶಿಪ್‌ಯಾರ್ಡ್‌ ಬ್ಯಾಂಕ್ ವಂಚನೆ ಪ್ರಕರಣವು ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷವಾದ ಕಾಂಗ್ರೆಸ್‌ ಮಧ್ಯೆ ಮಾತಿನ ಜಟಾಪಟಿಗೂ ಕಾರಣವಾಗಿದೆ. ಎಬಿಜಿ ಶಿಪ್‌ಯಾರ್ಡ್‌ ಪ್ರವರ್ತಕರ ವಿರುದ್ಧ ಸಿಬಿಐ ಎಫ್‌ಐಆರ್‌ ದಾಖಲಿಸಿದ ಬೆನ್ನಲ್ಲೇ ವಿರೋಧ ಪಕ್ಷಗಳು, ‘ಇಂತಹ ಎಲ್ಲಾ ವಂಚನೆ ಪ್ರಕರಣಗಳ ಮೂಲ ಯಾವಾಗಲೂ ಗುಜರಾತ್ ಆಗಿರುವುದು ಏತಕ್ಕೆ’ ಎಂದು ಪ್ರಶ್ನಿಸಿದ್ದವು. ಅಲ್ಲದೆ ಎಫ್‌ಐಆರ್ ಪ್ರಕಾರ, 2016ರಲ್ಲೇ ಕಂಪನಿಯ ಸಾಲವನ್ನು ಎನ್‌ಪಿಎ ಎಂದು ಘೋಷಿಸಲಾಗಿತ್ತು. ಹೀಗಿದ್ದೂ ಪ್ರಕರಣ ದಾಖಲಿಸಲು ಇಷ್ಟೊಂದು ಸಮಯ ತೆಗೆದುಕೊಂಡಿದ್ದು ಏಕೆ ಎಂದು ವಿರೋಧ ಪಕ್ಷಗಳು ಪ್ರಶ್ನಿಸಿದ್ದವು.

ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ‘ಇಂತಹ ಪ್ರಕರಣಗಳಲ್ಲಿ ವಂಚನೆಯನ್ನು ಪತ್ತೆ ಹಚ್ಚಲು ಬ್ಯಾಂಕ್‌ಗಳು ಸಾಮಾನ್ಯವಾಗಿ 50–60 ತಿಂಗಳು ಸಮಯ ತೆಗೆದುಕೊಳ್ಳುತ್ತವೆ. ಆದರೆ ಈ ಪ್ರಕರಣದಲ್ಲಿ ಇನ್ನೂ ಕಡಿಮೆ ಸಮಯದಲ್ಲಿ ವಂಚನೆಯನ್ನು ಪತ್ತೆ ಮಾಡಲಾಗಿದೆ. ಇದು ಅತ್ಯಂತ ತ್ವರಿತವಾಗಿ ಪತ್ತೆ ಮಾಡಲಾದ ಪ್ರಕರಣವಾಗಿದೆಯೇ ಹೊರತು, ಯಾವುದೇ ವಿಳಂಬವಾಗಿಲ್ಲ’ ಎಂದು ಹೇಳಿದ್ದರು.

‘ಇಂತಹ ಪ್ರಕರಣಗಳ ಮೂಲ ಯಾವಾಗಲೂ ಗುಜರಾತ್ ಆಗಿರುತ್ತದೆ ಮತ್ತು ಬಿಜೆಪಿ ಇಂತಹ ವಂಚನೆಗಳು ನಡೆಯಲು ಅನುವು ಮಾಡಿಕೊಡುತ್ತದೆ’ ಎಂದು ಕಾಂಗ್ರೆಸ್‌ ಆರೋಪಿಸಿತ್ತು. ಈ ಆರೋಪವನ್ನು ನಿರ್ಮಲಾ ಸೀತಾರಾಮನ್ ಅವರು ತಳ್ಳಿಹಾಕಿದ್ದರು. ‘ಎಬಿಜಿ ಶಿಪ್‌ಯಾರ್ಡ್‌ನ ಸಾಲಗಳು ಎನ್‌ಪಿಎ ಆಗಿದ್ದು 2013ರಲ್ಲಿ. ಆಗಿನ್ನೂ ನಾವು ಅಧಿಕಾರಕ್ಕೇ ಬಂದಿರಲಿಲ್ಲ’ ಎಂದು ಹೇಳಿದ್ದರು.

ಆಧಾರ: ಸಿಬಿಐ ದಾಖಲಿಸಿರುವ ಎಫ್‌ಐಆರ್‌, ಪಿಟಿಐ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು