ಮಂಗಳವಾರ, ಮಾರ್ಚ್ 28, 2023
33 °C

ಆಳ– ಅಗಲ: ಮೂಲಸೌಕರ್ಯ ಕೊರತೆ- ವಂದೇ ಭಾರತ್ ವೇಗಕ್ಕೆ ಹತ್ತಾರು ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ–ಬೆಂಗಳೂರು–ಮೈಸೂರು ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನ ಪ್ರಾಯೋಗಿಕ ಸಂಚಾರ ನಡೆದಿದೆ. ಈ ಮಾರ್ಗದಲ್ಲಿ ಈಗಾಗಲೇ ಸಂಚರಿಸುತ್ತಿರುವ ಶತಾಬ್ದಿ ರೈಲಿನ ಸರಾಸರಿ ವೇಗಕ್ಕಿಂತ, ವಂದೇ ಭಾರತ್ ರೈಲಿನ ಸರಾಸರಿ ವೇಗ 2 ಕಿ.ಮೀ.ನಷ್ಟು ಮಾತ್ರ ಹೆಚ್ಚು. ಇದೇ 11ರಂದು ಈ ರೈಲನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ. ಆದರೆ, ಶತಾಬ್ದಿಗಿಂತಲೂ ಹೆಚ್ಚಿನ ವೇಗವನ್ನು ನೀಡದ ಮತ್ತು ಪ್ರಯಾಣದ ಅವಧಿಯನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡದ ಈ ವಂದೇ ಭಾರತ್ ಎಕ್ಸ್‌ಪ್ರೆಸ್‌ನಿಂದ ಹೆಚ್ಚಿನ ಉಪಯೋಗವಿಲ್ಲ ಎಂಬ ಆಕ್ಷೇಪ ವ್ಯಕ್ತವಾಗುತ್ತಿದೆ. 160 ಕಿ.ಮೀ./ಪ್ರತಿ ಗಂಟೆ ವೇಗದಲ್ಲಿ ಓಡುವ ಸಾಮರ್ಥ್ಯ ಇರುವ ವಂದೇ ಭಾರತ್ ರೈಲುಗಳನ್ನು ದೇಶದ ಎಲ್ಲಾ ಮಾರ್ಗಗಳಲ್ಲೂ ಅತ್ಯಂತ ಕಡಿಮೆ ವೇಗದಲ್ಲಿ ಓಡಿಸಲಾಗುತ್ತಿದೆ. ಈ ರೈಲುಗಳನ್ನು ವೇಗವಾಗಿ ಓಡಿಸಲು ಸಾಧ್ಯವಿರುವಂತಹ ಹಳಿ, ನಿಲ್ದಾಣ ಮತ್ತು ಸಿಗ್ನಲಿಂಗ್‌ ವ್ಯವಸ್ಥೆಯಂತಹ ಮೂಲಸೌಕರ್ಯಗಳು ಇಲ್ಲದೆ ಇರುವುದೇ, ಇವು ವೇಗವಾಗಿ ಓಡದಿರಲು ಪ್ರಮುಖ ಕಾರಣ.

***

ವಂದೇ ಭಾರತ್ ರೈಲುಗಳು 160 ಕಿ.ಮೀ./ಪ್ರತಿ ಗಂಟೆ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿವೆ. ಅಷ್ಟು ವೇಗದಲ್ಲೂ ಆರಾಮದಾಯಕ ಪ್ರಯಾಣ ಸಾಧ್ಯವಾಗುವಂತೆ ಅವುಗಳ ಬೋಗಿಗಳನ್ನು ವಿನ್ಯಾಸ ಮಾಡಲಾಗಿದೆ. ದೇಶದಾದ್ಯಂತ ಈಗ ನಾಲ್ಕು ಮಾರ್ಗಗಳಲ್ಲಿ ಒಟ್ಟು ಎಂಟು ವಂದೇ ಭಾರತ್ ರೈಲುಗಳು ಸಂಚರಿಸುತ್ತಿವೆ. ಈ ಎಂಟೂ ರೈಲುಗಳಲ್ಲಿ ಯಾವೊಂದರ ಸರಾಸರಿ ವೇಗವೂ 100 ಕಿ.ಮೀ./ಪ್ರತಿಗಂಟೆಯನ್ನು ಮೀರುವುದಿಲ್ಲ.

ದೆಹಲಿ–ವಾರಾಣಸಿ ಮಧ್ಯೆ ಸಂಚರಿಸುವ ವಂದೇ ಭಾರತ್ ರೈಲು ಮಾತ್ರ ಕೆಲ ನಿಲ್ದಾಣಗಳ ಮಧ್ಯೆ 130 ಕಿ.ಮೀ./ಪ್ರತಿಗಂಟೆ ವೇಗದಲ್ಲಿ ಓಡುತ್ತದೆ. ಇದರ ಸರಾಸರಿ ವೇಗ 95 ಕಿ.ಮೀ./ಪ್ರತಿ ಗಂಟೆ ಮಾತ್ರ. ಇದು ದೇಶದಲ್ಲಿ ಈಗಾಗಲೇ ಇರುವ ಸೆಮಿಹೈಸ್ಪೀಡ್‌ ರೈಲು, ದೆಹಲಿ–ಆಗ್ರಾ ಗತಿಮಾನ್‌ ಎಕ್ಸ್‌ಪ್ರೆಸ್‌ನ (160 ಕಿ.ಮೀ./ಪ್ರತಿಗಂಟೆ ಗರಿಷ್ಠ ವೇಗ) ವೇಗಕ್ಕಿಂತ ಕಡಿಮೆ.

ಸಾಮರ್ಥ್ಯವಿದ್ದರೂ ವಂದೇ ಭಾರತ್ ರೈಲುಗಳನ್ನು ಕಡಿಮೆ ವೇಗದಲ್ಲಿ ಓಡಿಸುತ್ತಿರುವುದಕ್ಕೆ ರೈಲ್ವೆ ಇಲಾಖೆಯ ತಜ್ಞರು ಹಲವು ಕಾರಣಗಳನ್ನು ಪಟ್ಟಿ ಮಾಡಿದ್ದಾರೆ. ಹೀಗೆ ಪಟ್ಟಿ ಮಾಡಲಾದ ತೊಡಕುಗಳನ್ನು ನಿವಾರಿಸದೇ ಇದ್ದರೆ, ಈ ರೈಲುಗಳನ್ನು ವೇಗವಾಗಿ ಓಡಿಸಲು ಸಾಧ್ಯವಿಲ್ಲ ಎನ್ನಲಾಗಿದೆ. ಈ ರೈಲುಗಳ ವೇಗಕ್ಕೆ ಕಡಿವಾಣ ಹಾಕುತ್ತಿರುವ ತೊಡಕುಗಳು ಈ ಮುಂದಿನಂತಿವೆ. ಒಟ್ಟಾರೆ ಮೂಲಸೌಕರ್ಯದಲ್ಲಿ ಇರುವ ಕೊರತೆಯೇ ಈ ರೈಲುಗಳ ವೇಗಕ್ಕೆ ಕಡಿವಾಣ ಎಂಬುದನ್ನು ಇವು ಸೂಚಿಸುತ್ತವೆ.

1. ರೈಲು ಮಾರ್ಗಗಳು ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲುಗಳನ್ನು, ಸಾಮಾನ್ಯ ಲೋಕೊಮೋಟಿವ್ ಎಂಜಿನ್‌ ರೈಲುಗಳನ್ನು ಓಡಿಸುವ ಮಾರ್ಗದಲ್ಲೇ ಓಡಿಸಬಹುದು. ಆದರೆ, ರೈಲುಮಾರ್ಗವು ನೇರವಾಗಿ ಇರಬೇಕು. ರೈಲುಮಾರ್ಗವು ನೇರವಾಗಿ ಇರದೇ ಇದ್ದರೆ ಮತ್ತು ತಿರುವುಗಳಿಂದ ಕೂಡಿದ್ದರೆ ಇವುಗಳನ್ನು ವೇಗವಾಗಿ ಓಡಿಸಲು ಸಾಧ್ಯವಿಲ್ಲ. ತಿರುವುಗಳಲ್ಲಿ ಈ ರೈಲುಗಳು ವೇಗವಾಗಿ ಓಡಿದರೆ, ಹಳಿತಪ್ಪುವ ಮತ್ತು ಉರುಳುವ ಅಪಾಯವಿರುತ್ತದೆ. ಈಗಾಗಲೇ ಇರುವ ಮಾರ್ಗಗಳಲ್ಲೇ ಇವು ಸಂಚರಿಸುತ್ತಿರುವುದರಿಂದ ಗರಿಷ್ಠ ವೇಗ ಸಾಧ್ಯವಾಗುತ್ತಿಲ್ಲ. 

ರೈಲು ಮಾರ್ಗವು ಸಾಗುವ ಪ್ರದೇಶವು ಹಳ್ಳದಿಣ್ಣೆಗಳಿಂದ ಕೂಡಿದ್ದರೆ, ಮಾರ್ಗವೂ ಉಬ್ಬು–ತಗ್ಗಾಗಿರುತ್ತದೆ. ಅಂತಹ ಮಾರ್ಗದಲ್ಲಿ ಕಡಿಮೆ ವೇಗದ ರೈಲುಗಳು ಯಾವುದೇ ಅಪಾಯವಿಲ್ಲದೇ ಸಂಚರಿಸಬಹುದು. ಆದರೆ, ವೇಗದ ರೈಲುಗಳು ವೇಗವಾಗಿ ಸಂಚರಿಸಿದರೆ ಹಳಿತಪ್ಪುವ ಅಪಾಯವಿರುತ್ತದೆ. ಮೈಸೂರು–ಬೆಂಗಳೂರು–ಚೆನ್ನೈ ಮಾರ್ಗವೂ ಈ ರೀತಿಯ ತಿರುವು ಮತ್ತು ಉಬ್ಬು–ತಗ್ಗುಗಳಿಂದ ಕೂಡಿದೆ. ಹೀಗಾಗಿ ವಂದೇ ಭಾರತ್ ರೈಲನ್ನು ಗರಿಷ್ಠ ವೇಗದಲ್ಲಿ ಓಡಿಸಲು ಸಾಧ್ಯವಾಗುತ್ತಿಲ್ಲ ಎಂದು ರೈಲ್ವೆ ಅಧಿಕಾರಿಗಳು ಮಾಧ್ಯಮಗಳಿಗೆ ವಿವರಣೆ ನೀಡಿದ್ದಾರೆ.

2. ರೈಲುಮಾರ್ಗಗಳಿಗೆ ಬೇಲಿಯಿಲ್ಲ ದೇಶದಲ್ಲಿರುವ ರೈಲುಮಾರ್ಗಗಳಿಗೆ ಬೇಲಿ ವ್ಯವಸ್ಥೆ ಇಲ್ಲ. ದೆಹಲಿ–ಆಗ್ರಾ ಮಧ್ಯೆ ಸಂಚರಿಸುವ ಗತಿಮಾನ್‌ ರೈಲಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ 90 ಕಿ.ಮೀ.ನಷ್ಟು ಅಂತರದ ಮಾರ್ಗಕ್ಕೆ ಮಾತ್ರ ಎರಡೂ ಬದಿಯಲ್ಲಿ ಬೇಲಿ ಹಾಕಲಾಗಿದೆ. ಜನರು, ಜಾನುವಾರುಗಳು ಮತ್ತು ಪ್ರಾಣಿಗಳು ಈ ಬೇಲಿಯನ್ನು ದಾಟಿ ಬರುವ ಸಾಧ್ಯತೆ ಇಲ್ಲದೇ ಇರುವ ಕಾರಣ ರೈಲು ವೇಗವಾಗಿ ಸಂಚರಿಸಲು ಸಾಧ್ಯವಾಗುತ್ತದೆ. ಆದರೆ, ವಂದೇ ಭಾರತ್ ರೈಲುಗಳು ಸಂಚರಿಸುತ್ತಿರುವ ಮಾರ್ಗಗಳಲ್ಲಿ ಇಂತಹ ಬೇಲಿಯ ವ್ಯವಸ್ಥೆ ಇಲ್ಲ.

ಮುಂಬೈ ಸೆಂಟ್ರಲ್‌ ಮತ್ತು ಗಾಂಧಿನಗರದ ಮಧ್ಯೆ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್‌ ಗುಜರಾತ್‌ನ ವಿವಿಧ ಕಡೆ ದನದ ಹಿಂಡಿಗೆ, ಗೂಳಿಗೆ ಮತ್ತು ಎಮ್ಮೆಗೆ ಡಿಕ್ಕಿ ಹೊಡೆದ ಪ್ರಕರಣಗಳು ವರದಿಯಾಗಿದ್ದವು. ಆ ಮಾರ್ಗದಲ್ಲೂ ಬೇಲಿಯ ವ್ಯವಸ್ಥೆ ಇಲ್ಲ. ಈ ಕಾರಣದಿಂದಲೇ ಜಾನುವಾರುಗಳು ರೈಲು ಮಾರ್ಗದ ಮೇಲೆ ಬಂದು, ರೈಲಿಗೆ ಸಿಲುಕಿದ್ದವು. ಬೇಲಿ ಇಲ್ಲದ ಮಾರ್ಗದಲ್ಲಿ ವೇಗವಾಗಿ ಸಂಚರಿಸಿದರೆ, ತುರ್ತು ಸಂದರ್ಭದಲ್ಲಿ ರೈಲನ್ನು ನಿಲ್ಲಿಸುವುದೂ ತ್ರಾಸದಾಯಕ. ಈ ಕಾರಣದಿಂದಲೇ ಬೇಲಿ ಇಲ್ಲದೇ ಇರುವ ಮಾರ್ಗಗಳಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನ ವೇಗಕ್ಕೆ ನಿರ್ಬಂಧ ಹೇರಲಾಗಿದೆ.

ಎಲ್ಲಾ ಮಾರ್ಗಗಳಲ್ಲಿ ಇಂತಹ ಬೇಲಿಯ ವ್ಯವಸ್ಥೆ ಮಾಡದೇ ಇದ್ದರೆ, ವಂದೇ ಭಾರತ್ ರೈಲುಗಳನ್ನು ಹೆಚ್ಚಿನ ವೇಗದಲ್ಲಿ ಓಡಿಸಲು ಸಾಧ್ಯವಿಲ್ಲ.

ಮಹಿಳೆ ಬಲಿ: ಗುಜರಾತ್ ಹಾಗೂ ಮಹಾರಾಷ್ಟ್ರ ನಡುವಿನ ಮಾರ್ಗದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಡಿಕ್ಕಿಯಾಗಿ ಮಹಿಳೆಯೊಬ್ಬರು ಮಂಗಳವಾರ ಮೃತಪಟ್ಟಿದ್ದಾರೆ. ಗುಜರಾತ್‌ನ ಆನಂದ್‌ನಲ್ಲಿ ಈ ಅವಘಡ ನಡೆದಿದೆ. ಹಳಿ ದಾಟುತ್ತಿದ್ದ ಬೀಟ್ರಿಸ್ ಆರ್ಚಿಬಾಲ್ಡ್ ಪೀಟರ್ ಎಂಬ 54 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಅಹಮದಾಬಾದ್ ನಿವಾಸಿಯಾದ ಇವರು, ಆನಂದ್‌ನಲ್ಲಿ ಸಂಬಂಧಿಕರ ಭೇಟಿಗೆ ತೆರಳಿದ್ದರು ಎಂದು ವರದಿಯಾಗಿದೆ. ರೈಲು ಗಾಂಧಿನಗರದಿಂದ ಮುಂಬೈ ಸೆಂಟ್ರಲ್‌ಗೆ ಸಂಚರಿಸುತ್ತಿದ್ದಾಗ ಈ ಅವಘಡ ನಡೆದಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಜಾನುವಾರುಗಳಿಗೆ ವಂದೇ ಭಾರತ್ ರೈಲುಗಳು ಡಿಕ್ಕಿ ಹೊಡೆದ ಮೂರು ಪ್ರಕರಣಗಳು ವರದಿಯಾಗಿದ್ದವು.

3. ನಿಲ್ದಾಣಗಳಲ್ಲಿ ಹಳಿ ಬದಲಾವಣೆ ತೊಡಕು ದೇಶದ ರೈಲು ಮಾರ್ಗಗಳು ಹಾದುಹೋಗುವ ಪ್ರಮುಖ ನಿಲ್ದಾಣಗಳಲ್ಲಿ ರೈಲುಗಳು ಬಹುತೇಕ ಸಂದರ್ಭದಲ್ಲಿ ಹಳಿ ಬದಲಾವಣೆ ಮಾಡಬೇಕಾಗುತ್ತದೆ. ಬಹುತೇಕ ಸಂದರ್ಭದಲ್ಲಿ ಹಳಿ ಬದಲಾವಣೆ ಮಾಡುವಾಗ ರೈಲುಗಳ ವೇಗ 10 ಕಿ.ಮೀ./ಪ್ರತಿಗಂಟೆಗಿಂತಲೂ ಕಡಿಮೆ ಇರಬೇಕು. ವಂದೇ ಭಾರತ್ ರೈಲುಗಳೂ ಈ ನಿಲ್ದಾಣಗಳನ್ನು ಹಾದು ಹೋಗಬೇಕಿರುವ ಕಾರಣ, ಅವೂ ಸಹ ಕಡಿಮೆ ವೇಗದಲ್ಲೇ ಹಳಿ ಬದಲಾವಣೆ ಮಾಡಬೇಕಾಗುತ್ತದೆ. ಹಳಿ ಬದಲಾವಣೆ ಮಾಡದೆಯೇ ನಿಲ್ದಾಣಗಳನ್ನು ಹಾದುಹೋಗುವಂತೆ ವ್ಯವಸ್ಥೆ ಮಾಡಿದರಷ್ಟೇ, ಈ ರೈಲುಗಳು ಉತ್ತಮ ವೇಗವನ್ನು ಕಾಯ್ದುಕೊಳ್ಳಲು ಸಾಧ್ಯ. ಕಡಿಮೆ ವೇಗದ ರೈಲುಗಳನ್ನು ಹಿಂದಿಕ್ಕಿ ಹೋಗಲೂ ಸಾಧ್ಯವಿಲ್ಲದೇ ಇರುವ ಕಾರಣ ವಂದೇ ಭಾರತ್ ರೈಲುಗಳು ವೇಗವನ್ನು ಕಾಯ್ದುಕೊಳ್ಳಲು ಸಾಧ್ಯವಿಲ್ಲ. 

4. ಹಳಿ ದಾಟುವ ಜನರು ರೈಲು ನಿಲ್ದಾಣಗಳಲ್ಲಿ ಜನರು ಒಂದು ಪ್ಲಾಟ್‌ಫಾರ್ಮ್‌ನಿಂದ ಮತ್ತೊಂದು ಪ್ಲಾಟ್‌ಫಾರ್ಮ್‌ಗೆ ಹೋಗಲು ಸಾಮಾನ್ಯವಾಗಿ ಮೇಲ್ಸೇತುವೆಯನ್ನು ನಿರ್ಮಿಸಲಾಗಿರುತ್ತದೆ. ಆದರೂ ಜನರು ಹಳಿಗಳನ್ನು ದಾಟಿಕೊಂಡೇ ಒಂದು ಪ್ಲಾಟ್‌ಫಾರ್ಮ್‌ನಿಂದ ಮತ್ತೊಂದು ಪ್ಲಾಟ್‌ಫಾರ್ಮ್‌ಗೆ ಹೋಗುವುದು ಸಾಮಾನ್ಯ ಎಂಬಂತಾಗಿದೆ. ಹೀಗಾಗಿಯೇ ರೈಲು ನಿಲ್ದಾಣವನ್ನು ಹಾದುಹೋಗುವಾಗ ರೈಲುಗಳ ವೇಗವನ್ನು ತಗ್ಗಿಸುವಂತೆ ಸೂಚಿಸಲಾಗುತ್ತದೆ. ವಂದೇ ಭಾರತ್ ಸೇರಿದಂತೆ ಎಲ್ಲಾ ಸೆಮಿ ಹೈಸ್ಪೀಡ್‌ ರೈಲುಗಳಿಗೂ ಇದು ಅನ್ವಯವಾಗುತ್ತದೆ. ಹೀಗಾಗಿಯೇ ವಂದೇ ಭಾರತ್ ರೈಲುಗಳೂ ಇಂತಹ ನಿಲ್ದಾಣವನ್ನು ಹಾದುಹೋಗುವಾಗ ವೇಗವನ್ನು ತಗ್ಗಿಸುತ್ತವೆ. ಈ ಕಾರಣದಿಂದ ಅವುಗಳು ಉತ್ತಮ ವೇಗ ಕಾಯ್ದುಕೊಳ್ಳಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಅವುಗಳ ಸರಾಸರಿ ವೇಗ ಕಡಿಮೆಯಾಗುತ್ತದೆ.

ಚೆನ್ನೈ–ಮೈಸೂರು ನಡುವೆ ಐದನೇ ರೈಲು
ಮುಂದಿನ ಮೂರು ವರ್ಷಗಳಲ್ಲಿ ಹೊಸ ತಲೆಮಾರಿನ 400 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಪರಿಚಯಿಸಲಾಗುತ್ತದೆ ಎಂದು 2022ರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಪ್ರಕಟಿಸಿತ್ತು. 2019ರಿಂದಲೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ಈ ಸರಣಿಯ ಮೊದಲ ರೈಲು ದೆಹಲಿ–ವಾರಾಣಸಿ ನಡುವೆ ಪ್ರಯಾಣ ಆರಂಭಿಸಿತ್ತು. ಇದೀಗ ಚೆನ್ನೈ–ಮೈಸೂರು ನಡುವೆ ಐದನೇ ರೈಲು ಓಡಾಟ ಶುರುವಾಗಲಿದೆ. ಪರೀಕ್ಷಾರ್ಥ ಸಂಚಾರ ಮುಗಿದಿದ್ದು, ಇದೇ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರು ಚೆನ್ನೈ–ಮೈಸೂರು ಮಾರ್ಗದ ವಂದೇ ಭಾರತ್ ರೈಲಿಗೆ ಅಧಿಕೃತ ಚಾಲನೆ ನೀಡಲಿದ್ದಾರೆ

* ದೆಹಲಿ ಹಾಗೂ ಉತ್ತರ ಪ್ರದೇಶದ ವಾರಾಣಸಿ ನಡುವೆ 2019ರ ಫೆಬ್ರುವರಿ 15ರಂದು ಮೊದಲ ರೈಲು ಸಂಚಾರ ಆರಂಭವಾಗಿತ್ತು. ಈ ಮಾರ್ಗದಲ್ಲಿ ಎರಡೂ ರೈಲುಗಳು ಸಂಚರಿಸುತ್ತಿವೆ. ಒಂದು ರೈಲು ದೆಹಲಿಯಿಂದ, ಮತ್ತೊಂದು ವಾರಾಣಸಿಯಿಂದ ಸಂಚಾರ ಆರಂಭಿಸುತ್ತದೆ

* ಎರಡನೇ ವಂದೇ ಭಾರತ್ ರೈಲು ದೆಹಲಿ ಹಾಗೂ ಜಮ್ಮು ಕಾಶ್ಮೀರದ ನಡುವೆ ಓಡಾಡುತ್ತಿದೆ. ದೆಹಲಿ–ಶ್ರೀ ಮಾತಾ ವೈಷ್ಣೋದೇವಿ ಕಟ್ರಾ ನಡುವಿನ ಈ ಮಾರ್ಗವು 2019ರ ಅಕ್ಟೋಬರ್ 3ರಂದು ಆರಂಭವಾಗಿತ್ತು. ಎರಡೂ ರೈಲುಗಳು ಈ ಮಾರ್ಗದಲ್ಲಿ ಓಡಾಡುತ್ತಿವೆ

* ಮಹಾರಾಷ್ಟ್ರ ಹಾಗೂ ಗುಜರಾತ್ ಸಂಪರ್ಕಿಸುವ ಮೂರನೇ ರೈಲನ್ನು 2022ರ ಸೆಪ್ಟೆಂಬರ್ 30ರಂದು ಶುರು ಮಾಡಲಾಯಿತು. ಮುಂಬೈ ಸೆಂಟ್ರಲ್ ನಿಲ್ದಾಣ ಹಾಗೂ–ಗಾಂಧಿನಗರದ ಮಾರ್ಗದಲ್ಲಿ ಈ ರೈಲು ಸಂಚಾರ ನಡೆಸುತ್ತಿದೆ 

* ವಂದೇ ಭಾರತ್ ಸರಣಿಯ ನಾಲ್ಕನೇ ರೈಲು ದೆಹಲಿ ಹಾಗೂ ಹಿಮಾಚಲ ಪ್ರದೇಶವನ್ನು ಸಂಪರ್ಕಿಸುತ್ತದೆ. ದೆಹಲಿ–ಅಂಬ್ ಅಂದೌರಾ ಮಾರ್ಗದ ರೈಲು ಕಾರ್ಯಾಚರಣೆಯು ಇದೇ 13ರಂದು ಆರಂಭವಾಗಿತ್ತು

* ವಂದೇ ಭಾರತ್ ಸರಣಿಯ ಐದನೇ ರೈಲು ದಕ್ಷಿಣ ಭಾರತದಲ್ಲಿ ಸಂಚಾರ ಆರಂಭಿಸಲಿದೆ. ಇದರ ಪರೀಕ್ಷಾರ್ಥ ಓಡಾಟ ಇತ್ತೀಚೆಗೆ ಯಶಸ್ವಿಯಾಗಿ ನಡೆದಿದೆ. ತಮಿಳುನಾಡು ಹಾಗೂ ಕರ್ನಾಟಕವನ್ನು ಈ ಮಾರ್ಗದ ರೈಲು ಸಂಪರ್ಕಿಸುತ್ತದೆ. ಬೆಂಗಳೂರು ಮಾರ್ಗವಾಗಿ ಚೆನ್ನೈ–ಮೈಸೂರು ಮಧ್ಯೆ ರೈಲು ಓಡಾಡಲಿದೆ

ಆಧಾರ: ಪಿಟಿಐ, ರೈಲ್ವೆ ಇಲಾಖೆ, ಭಾರತೀಯ ಹೈಸ್ಪೀಡ್‌ ರೈಲ್‌ ನಿಗಮ

ಮಹಿಳೆ ಬಲಿ
ಗುಜರಾತ್ ಹಾಗೂ ಮಹಾರಾಷ್ಟ್ರ ನಡುವಿನ ಮಾರ್ಗದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಡಿಕ್ಕಿಯಾಗಿ ಮಹಿಳೆಯೊಬ್ಬರು ಮಂಗಳವಾರ ಮೃತಪಟ್ಟಿದ್ದಾರೆ. ಗುಜರಾತ್‌ನ ಆಣಂದ್‌ನಲ್ಲಿ ಈ ಅವಘಡ ನಡೆದಿದೆ. ಹಳಿ ದಾಟುತ್ತಿದ್ದ ಬೀಟ್ರಿಸ್ ಆರ್ಚಿಬಾಲ್ಡ್ ಪೀಟರ್ ಎಂಬ 54 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಅಹಮದಾಬಾದ್ ನಿವಾಸಿಯಾದ ಇವರು, ಆಣಂದ್‌ನಲ್ಲಿ ಸಂಬಂಧಿಕರ ಭೇಟಿಗೆ ತೆರಳಿದ್ದರು ಎಂದು ವರದಿಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು