ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕಲನ | ಚೀನಾ ಗಡಿ ಸಂಘರ್ಷ: ಈವರೆಗೆ ಏನೆಲ್ಲಾ ಆಯ್ತು? ತಂತ್ರ ಪ್ರತಿತಂತ್ರಗಳ ನೋಟ

ಚೀನಾ ಹೆಜ್ಜೆ
ಅಕ್ಷರ ಗಾತ್ರ

ಭಾರತದ ನೆಲಕ್ಕೆ ಸದ್ದಿಲ್ಲದೆ ಬಂದು ಕಾಲೂರಿದ್ದ ಚೀನಾ ಸೇನೆ ಇದೀಗ ಗಾಲ್ವನ್ ಕಣಿವೆಯಿಂದ ಹಿಂದೆ ಸರಿಯುತ್ತಿದೆ.

ಜೂನ್ 15ರಂದು ಇದೇ ಕಣಿವೆಯಲ್ಲಿ ಭಾರತೀಯ ಯೋಧರ ನೆತ್ತರು ಚೆಲ್ಲಿತ್ತು. ಅಲ್ಲಿಂದಾಚೆಗಿನ 20 ದಿನಗಳಲ್ಲಿ ಮಾಧ್ಯಮಗಳಲ್ಲಿ ಕಾಣುವಂತೆ ನಡೆದ ಚರ್ಚೆ, ಸಂಧಾನ, ಮಾತುಕತೆಗಳಿಗೆ ಸಮಾನಾಂತರವಾಗಿ ತೆರೆಮರೆಯ ರಾಜತಾಂತ್ರಿಕ ಮತ್ತು ಮಿಲಿಟರಿ ಯತ್ನಗಳೂ ಅವ್ಯಾಹತವಾಗಿ ನಡೆಯುತ್ತಿದ್ದವು.

ಇದೀಗ ಚೀನಿ ಪಡೆಗಳು ಗಾಲ್ವನ್ ಕಣಿವೆಯಿಂದ ಹಿಂದೆ ಸರಿಯುವುದರೊಂದಿಗೆ ಲಡಾಖ್‌ನಲ್ಲಿ ಉದ್ಭವಿಸಿದ್ದ ಗಡಿ ಸಂಘರ್ಷಕ್ಕೆ ತಾರ್ಕಿಕ ಅಂತ್ಯ ಸಮೀಪಿಸಿದಂತೆ ಆಗಿದೆ.ಕಳೆದ 20 ದಿನಗಳಲ್ಲಿ ಈ ವಿವಾದಕ್ಕೆ ಸಂಬಂಧಿಸಿದಂತೆ www.prajavani.net ಜಾಲತಾಣದಲ್ಲಿ ಪ್ರಕಟವಾಗಿದ್ದ ಪ್ರಮುಖ ಬರಹಗಳ ಮಾಹಿತಿ ಇಲ್ಲಿದೆ.

1)ಗಾಲ್ವನ್ ಕಣಿವೆಯಿಂದ ಹಿಂದೆ ಸರಿಯುತ್ತಿದೆ ಚೀನಾ
ಗಾಲ್ವನ್‌ ಕಣಿವೆಯ ಕೆಲವು ಪ್ರದೇಶಗಳಲ್ಲಿ ಬೀಡು ಬಿಟ್ಟಿದ್ದ ಚೀನಾದ ಸೈನಿಕರು ಟೆಂಟ್‌ಗಳನ್ನು ತೆರವು ಮಾಡುತ್ತಿದ್ದು, ಸೇನೆ ಅಲ್ಲಿಂದ ಹಿಂದೆ ಸರಿಯುತ್ತಿರುವುದರ ಸೂಚನೆಯಾಗಿದೆ’ ಎಂದು ಸರ್ಕಾರದ ಮೂಲಗಳು ಸೋಮವಾರ ತಿಳಿಸಿವೆ.

2) ಸಂಪಾದಕೀಯ |
ಚೀನಾದ ಆಕ್ರಮಣಕಾರಿ ವರ್ತನೆಯನ್ನು ಭಾರತವು ಅತ್ಯಂತ ಎಚ್ಚರಿಕೆಯಿಂದ ವಿಶ್ಲೇಷಣೆಗೆ ಒಳಪಡಿಸಬೇಕು. ಗಡಿ ಸಮಸ್ಯೆ ಇರುವ ಇಷ್ಟೂ ವರ್ಷಗಳಲ್ಲಿ ಗಾಲ್ವನ್‌ ಕಣಿವೆಯು ಭಾರತದ ವಶದಲ್ಲಿಯೇ ಇದೆ. ಗಾಲ್ವನ್‌ ಕಣಿವೆಯ ಮೇಲೆ ಚೀನಾಕ್ಕೆ ದಿಢೀರನೆ ಉಂಟಾದ ವಿಶೇಷ ಆಸಕ್ತಿಗೆ ಕಾರಣ ಏನು ಎಂಬುದನ್ನು ಭಾರತ ಅರ್ಥ ಮಾಡಿಕೊಂಡು, ಅದಕ್ಕೆ ಅನುಗುಣವಾಗಿ ಮುಂದಿನ ನಡೆಯನ್ನು ರೂಪಿಸಬೇಕಿದೆ.

3)ಗಾಲ್ವನ್ ಕಣಿವೆಯಲ್ಲಿ ಜೂನ್ 15ರಂದು ಏನೆಲ್ಲಾ ನಡೆಯಿತು?
ಘರ್ಷಣೆಯಲ್ಲಿ ಹುತಾತ್ಮರಾದ ಯೋಧರ ಮೃತದೇಹದಲ್ಲಿ ಆಳವಾದ, ಗಂಭೀರ ಗಾಯಗಳು, ಮೂಳೆ ಮುರಿತ ಸಂಭವಿಸಿರುವುದು ಮರಣೊತ್ತರ ಪರೀಕ್ಷೆಯಿಂದ ತಿಳಿದುಬಂದಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಹಲವು ಮಾಧ್ಯಮಗಳು ವರದಿ ಮಾಡಿದ್ದವು. ಗಂಭಿರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಯೋಧರ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿರಲಿಲ್ಲ. ಅಂದು ರಾತ್ರಿ ಗಾಲ್ವನ್ ಕಣಿವೆಯಲ್ಲಿ ಏನಾಯ್ತು?

4)
ಚೀನಾ ಯಾವುದೇ ರೀತಿಯ ದುಃಸ್ಸಾಹಸಕ್ಕೆ ಕೈಹಾಕಿದರೆ ತಕ್ಕ ಉತ್ತರ ನೀಡಿ ಎಂದು 3,500 ಕಿ.ಮೀ. ಗಡಿ ಉದ್ದಕ್ಕೂ ನಿಯೋಜಿಸಲಾಗಿರುವ ಯೋಧರಿಗೆ ಸೂಚಿಸಲಾಗಿದೆ. ಸಶಸ್ತ್ರ ಪಡೆಗಳಿಗೆ ಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಮುಂಚೂಣಿ ಪ್ರದೇಶಗಳಿಗೆ ಸಾವಿರಾರು ಯೋಧರನ್ನು ಕಳುಹಿಸಲಾಗಿದೆ. ಯುದ್ಧ ವಿಮಾನಗಳು ಕೂಡ ಸಜ್ಜಾಗಿ ನಿಂತಿವೆ.

5)Explainer | ಭಾರತ–ಚೀನಾ ಗಡಿ ಸಮಸ್ಯೆಯತ್ತ ಒಂದು ನೋಟ
ಗಾಲ್ವನ್‌ ನದಿಯು ಅಕ್ಷಾಯ್‌ ಚಿನ್‌ನಿಂದ ಲಡಾಖ್‌ಗೆ ಹರಿಯುತ್ತದೆ. ನದಿಯ ಪಶ್ಚಿಮ ಭಾಗವು ತನಗೆ ಸೇರಿದ್ದು ಎಂದು ಚೀನಾ ವಾದಿಸುತ್ತಿದೆ. ಆದರೆ, ಇಡೀ ಅಕ್ಷಾಯ್‌ ಚಿನ್‌ ತನ್ನದು ಎಂಬುದು ಭಾರತದ ಪ್ರತಿಪಾದನೆ. ಭಾರತ ನಿರ್ಮಿಸುತ್ತಿರುವ ಒಂದು ರಸ್ತೆ ಮತ್ತು ಒಂದು ಸೇತುವೆ ಚೀನಾದ ಅಸಮಾಧಾನಕ್ಕೆ ಕಾರಣ. ಒಂದು ರಸ್ತೆಯು ಪಾಂಗಾಂಗ್‌ ಸರೋವರದ ಮುಂಚೂಣಿ ನೆಲೆಯನ್ನು ಸಂಪರ್ಕಿಸುತ್ತದೆ; ಇನ್ನೊಂದು ರಸ್ತೆಯು ದರ್ಬುಕ್‌–ಶಯೋಕ್‌ ಮೂಲಕ ದೌಲತ್‌ ಬೇಗ್‌ ಓಲ್ಡಿ ನೆಲೆಯನ್ನು ಸಂಪರ್ಕಿಸುತ್ತದೆ. ಈ ರಸ್ತೆಯ ಉದ್ದ 255 ಕಿ.ಮೀ. ಎಲ್‌ಎಸಿಯ ಈ ಭಾಗದಲ್ಲಿ ಭಾರತವು ಕೈಗೆತ್ತಿಕೊಂಡಿರುವ ಮೂಲಸೌಕರ್ಯ ನಿರ್ಮಾಣ ಕಾಮಗಾರಿಗಳು ಚೀನಾದ ನಿದ್ದೆಗೆಡಿಸಿವೆ.

6)
ಗಡಿಯಲ್ಲಿ ಗಡಿಬಿಡಿ ಹೆಚ್ಚಾದ ನಂತರ ಹಲವರು ಭಾರತ ಮತ್ತು ಚೀನಾ ಸೇನೆಗಳನ್ನು ಹೋಲಿಸಿ ವರದಿಗಳನ್ನು ಪ್ರಕಟಿಸುತ್ತಿದ್ದರು. ಈ ಸಂದರ್ಭ ತಮ್ಮ ವರದಿಗಳನ್ನು ಪ್ರಕಟಿಸಿದಬಾಸ್ಟನ್‌ನ ಹಾರ್ವರ್ಡ್ ಕೆನಡಿ ಸ್ಕೂಲ್ ಆಫ್ ಗವರ್ಮೆಂಟ್‌ನ ಬೆಲ್ಫರ್ ಸೆಂಟರ್ ಮತ್ತು ವಾಷಿಂಗ್ಟನ್‌ನ ‘ಸೆಂಟರ್ ಫರ್ ಎ ನ್ಯೂ ಅಮೆರಿಕನ್ ಸೆಕ್ಯೂರಿಟಿ’ ಭಾರತೀಯ ಸೇನೆ ಮೇಲುಗೈ ಸಾಧಿಸಲಿದೆ ಎಂದು ಹೇಳಿತ್ತು. ಪಾಕಿಸ್ತಾನದ ಜೊತೆಗೆ ಗಡಿಯಲ್ಲಿ ಆಗಾಗ ಸಂಭವಿಸುವ ಸಣ್ಣಪುಟ್ಟ ಘರ್ಷಣೆಗಳು ಭಾರತೀಯ ಸೇನೆಗೆ ಯುದ್ಧ ಸಾಮರ್ಥ್ಯ ಕಾಪಾಡಿಕೊಳ್ಳಲು ನೆರವಾಗಿದೆ. 1979ರ ವಿಯೆಟ್ನಾಂ ಯುದ್ಧದ ಬಳಿಕ ಚೀನಾ ಸೇನೆಗೆ ಯಾವುದೇ ಯುದ್ಧ ಅನುಭವವಿಲ್ಲ ಎಂದೂ ಈ ವರದಿಗಳು ಉಲ್ಲೇಖಿಸಿದ್ದವು.

7)
ಹಿಂದೂಮಹಾಸಾಗರ ಪ್ರದೇಶದಲ್ಲಿ ಭಾರತವನ್ನು ಸುತ್ತುವರಿಯುವ ಚೀನಾದ ಜಿಯೊಪಾಲಿಟಿಕ್ಸ್‌ಗೆ ರಾಜತಾಂತ್ರಿಕರು ಮತ್ತು ರಕ್ಷಣಾ ತಜ್ಞರು ನೀಡಿರುವ ಹೆಸರು ‘ಸ್ಟ್ರಿಂಗ್ ಆಫ್ ಪರ್ಲ್ಸ್‌’ (ಮುತ್ತಿನಮಾಲೆ) ಎನ್ನಬಹುದು. ಚೀನಾದ ಮುಖ್ಯಭೂಮಿಯಿಂದ ಸುಡಾನ್‌ ದೇಶದ ಬಂದರಿನವರೆಗೆ ಈ ಮುತ್ತಿನ ಮಾಲೆಯ ವ್ಯಾಪ್ತಿ ಹರಡಿದೆ. ಭಾರತದ ಪಶ್ಚಿಮಕ್ಕಿರುವ ಅರಬ್ಬಿ ಸಮುದ್ರ, ದಕ್ಷಿಣಕ್ಕಿರುವ ಹಿಂದೂ ಮಹಾಸಾಗರ ಮತ್ತು ಪೂರ್ವಕ್ಕಿರುವ ಬಂಗಾಳಕೊಲ್ಲಿಯನ್ನು ಇದು ಆವರಿಸಿಕೊಳ್ಳುತ್ತದೆ.

8)
ಗಾಲ್ವನ್‌ ಕಣಿವೆಯಲ್ಲಿ ನಿರ್ಮಾಣವಾಗಿರುವ ಉದ್ವಿಗ್ನ ವಾತಾವರಣ ಶಮನವಾಗುವ ಮುನ್ನವೇ, ಚೀನಾ ಸೇನೆ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್‌ಎಸಿ) ಉತ್ತರಕ್ಕಿರುವ ದೆಪ್ಸಾಂಗ್ ಬಯಲು ಪ್ರದೇಶದುದ್ದಕ್ಕೂ ಬೀಡುಬಿಟ್ಟಿದೆ. ಇದು ಎಲ್‌ಎಸಿಯನ್ನು ಮುಂದೊತ್ತುವ ಮತ್ತು ವಿವಾದದ ಹುಯಿಲೆಬ್ಬಿಸುವ ಚೀನಾದ ಮತ್ತೊಂದು ಪ್ರಯತ್ನ ಎಂದು ಹೇಳಲಾಗಿದೆ.

9)
ಚೀನೀಯರು ಭಾರತದ ವಿರುದ್ಧ ಅನುಸರಿಸುತ್ತಿರುವ 'ಸಲಾಮಿ ಸ್ಲೈಸ್' ತಂತ್ರವನ್ನು 'ಅನ್‌ರಿಸ್ಟ್ರಿಕ್ಟೆಡ್‌ ವಾರ್‌ಫೇರ್‌' ಪುಸ್ತಕ ವಿಸ್ತಾರವಾಗಿ ವಿವರಿಸುತ್ತದೆ. 1962ರ ಯುದ್ಧದ ಮೊದಲು ನಡೆದ ಬೆಳವಣಿಗೆಗಳು ಮತ್ತು ಇದೀಗ 2020ರಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಈ ಸಿದ್ಧಾಂತಕ್ಕೆ ಅನುಗುಣವಾಗಿಯೇ ಇದೆ. ಮಿಲಿಟರಿ ಅಧಿಕಾರಿಗಳು ಬರೆದಿರುವ ಈ ಪುಸ್ತಕ ಪ್ರತಿಪಾದಿಸುವ ಆಶಯಗಳ ಹಿನ್ನೆಲೆಯಲ್ಲಿ ಭಾರತೀಯ ದೃಷ್ಟಿಕೋನದಿಂದ ಚೀನಾವನ್ನು ನೋಡಿದರೆ ಹಲವು ಹೊಳಹುಗಳು ಸಿಗುತ್ತವೆ. ಮಾತ್ರವಲ್ಲ ಚೀನಾದ ಹಲವು ತಂತ್ರಗಳ ಹಿನ್ನೆಲೆಯೂ ಅರ್ಥವಾಗುತ್ತದೆ.

10)
ಭಾರತೀಯ ಸೇನೆಯ ಉತ್ತರ ಕಮಾಂಡ್‌ನಲ್ಲಿ ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಆಗಿ ಕಾರ್ಯನಿರ್ವಹಿಸಿದ್ದ, 4 ದಶಕಗಳ ವಿಶೇಷ ವೃತ್ತಿ ಅನುಭವ ಹೊಂದಿರುವ ಲೆಫ್ಟಿನೆಂಟ್ ಜನರಲ್ ದೀಪೇಂದ್ರ ಸಿಂಗ್ ಹೂಡಾ ಅವರು ಚೀನಾದ ‘ಪೀಪಲ್ಸ್ ಲಿಬರೇಶನ್ ಆರ್ಮಿ’ಯ (ಪಿಎಲ್‌ಎ) ಹಲವು ಮುಖಗಳನ್ನು ನೋಡಿದವರು. ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಯ ಕಲ್ಯಾಣ್ ರೇ ಅವರಿಗೆ ನೀಡಿದ ಸಂದರ್ಶನದಲ್ಲಿ ಸದ್ಯದ ಬಿಕ್ಕಟ್ಟಿನ ಬಗ್ಗೆ ವಿಶ್ಲೇಷಿಸಿದ್ದಾರೆ.

11)
ಭಾರತದೊಂದಿಗೆ ಗಡಿ ವಿವಾದ, ಹಾಂಕಾಂಗ್‌ ರಾಜಕೀಯದಲ್ಲಿ ಮೂಗು ತೂರಿಸುವುದು, ಅಮೆರಿಕ ಮತ್ತು ಆಸ್ಟ್ರೇಲಿಯಾ ಜೊತೆಗಿನ ವಾಣಿಜ್ಯ ಸಮರ, ದಕ್ಷಿಣ ಹಾಗೂ ಪೂರ್ವ ಚೀನಾ ವಿಚಾರವಾಗಿ ಅದು ನಡೆದುಕೊಳ್ಳುತ್ತಿರುವ ರೀತಿಯು ವಿಶ್ವದಲ್ಲಿ ಅದನ್ನು ಒಂಟಿಯನ್ನಾಗಿಸುತ್ತಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

12)
ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಚೀನಾದ ಯುದ್ಧ ವಿಮಾನಗಳ ಹಾರಾಟ ಹೆಚ್ಚಾಗಿರುವ ಬೆನ್ನಹಿಂದೆಯೇ ಭಾರತೀಯ ಸೇನೆಯು ಪೂರ್ವ ಲಡಾಖ್‌ ವಲಯಕ್ಕೆ ಸುಧಾರಿತ ಖಂಡಾಂತರ ಕ್ಷಿಪಣಿ ವ್ಯವಸ್ಥೆಯನ್ನು ರವಾನಿಸಿದೆ.

13)
‘ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಭೌಮತೆಗೆ ಧಕ್ಕೆ ತರುತಿದ್ದ ಕಾರಣ ಇವುಗಳನ್ನು ನಿಷೇಧಿಸಲಾಗಿದೆ’ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೇಳಿದೆ. 59 ಆ್ಯಪ್‌ಗಳಲ್ಲಿ ಬಹುತೇಕ ಎಲ್ಲವೂ ಚೀನಾದ ಕಂಪನಿಗಳಿಗೆ ಸೇರಿವೆ. ಗಡಿ ಸಂಘರ್ಷಕ್ಕೆ ಪ್ರತೀಕಾರವಾಗಿ ಕೇಂದ್ರ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ ಎಂದು ವಿಶ್ಲೇಷಿಸಲಾಗಿದೆ.

14)Explainer | ಆ್ಯಪ್‌ ನಿಷೇಧದ ಮೂಲಕ ಚೀನಾಕ್ಕೆ ಮಾರ್ಮಿಕ ಪೆಟ್ಟು ಕೊಟ್ಟಭಾರತ
‘ಯಾವುದೇ ದೇಶದ ಮಿಲಿಟರಿ ಶಕ್ತಿಗೆ ತಲೆಬಾಗದೆ, ನಮ್ಮ ಅಗತ್ಯಕ್ಕೆ ತಕ್ಕ ದೃಢ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಭಾರತಕ್ಕೆ ಇದೆ’ ಎಂಬುದು ಈ ನಡೆಯ ಮೂಲಕ ಭಾರತ ತನ್ನ ಎದುರಾಳಿಗೆ ನೀಡಿರುವ ಸ್ಪಷ್ಟ ಸಂದೇಶ. ಭಾರತದ ಈ ನಡೆಯಿಂದ ದೇಶೀಯ ಆರ್ಥಿಕತೆಯ ಮೇಲೆ ಹೇಳಿಕೊಳ್ಳುವಂಥ ಪರಿಣಾಮವೇನೂ ಆಗುವುದಿಲ್ಲ. ಆದರೆ ಭಾರತದಲ್ಲಿ ವ್ಯಾಪಕವಾಗಿ ಹೂಡಿಕೆ ಮಾಡಿರುವ ಮತ್ತು ಭವಿಷ್ಯದ ಆರ್ಥಿಕ ಬೆಳವಣಿಗೆಯ ಲಾಭ ಬಾಚಿಕೊಳ್ಳುವ ಚೀನಾದ ಲೆಕ್ಕಾಚಾರ ಉಲ್ಟಾಪಲ್ಟಾ ಆಗಿದೆ.

15)
‘ನಿಮ್ಮ ಧೈರ್ಯ ನೀವಿಂದು ಕರ್ತವ್ಯ ನಿರ್ವಹಿಸುತ್ತಿರುವ ಪ್ರದೇಶ ಇರುವುದಕ್ಕಿಂತಲೂ ಎತ್ತರದಲ್ಲಿದೆ. ನೀವು ಮತ್ತು ನಿಮ್ಮ ಸಹಚರರು ತೋರಿದ ಧೈರ್ಯ ಇಡೀ ಜಗತ್ತಿಗೇ ಭಾರತದ ಶಕ್ತಿಯ ಕುರಿತಾದ ಸಂದೇಶ ಸಾರಿದೆ’ ಎಂದು ಮೋದಿ ಯೋಧರನ್ನು ಶ್ಲಾಘಿಸಿದ್ದರು.

16) ಚೀನಾ ಗಡಿಗೆ ಭೇಟಿ ನೀಡಿದ್ದ ಭಾರತದ ಪ್ರಧಾನಿಗಳು
ಮೋದಿ ಅವರು ಲೇಹ್‌ಗೆ ಅಚ್ಚರಿ ಭೇಟಿ ನೀಡಿದ ಮಧ್ಯೆಯೇ ಸುದ್ದಿಯಾಗಿದ್ದು ಇಂದಿರಾ ಗಾಂಧಿ ಅವರ ಲೇಹ್ ಭೇಟಿ.2019ರ ಜನವರಿಯಲ್ಲಿ ಚೀನಾ ಜೊತೆ ಗಡಿ ಹಂಚಿಕೊಂಡಿರುವ ಅರುಣಾಚಲ ಪ್ರದೇಶಕ್ಕೆ ಅಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ಭೇಟಿ ನೀಡಿದ್ದರು.

17)
2020ರ ಜುಲೈ 3ರಂದು ಲಡಾಖ್‌ನಲ್ಲಿ ಮೋದಿ ಆಡಿದ ಮಾತುಗಳ ಸುಳಿವು 2014ರ ಸೆಪ್ಟೆಂಬರ್ 1ರಂದೇ ಸಿಕ್ಕಿತ್ತು. ಅಂದು ಜಪಾನ್ ರಾಜಧಾನಿ ಟೋಕಿಯೊದಲ್ಲಿ ನಡೆದಿದ್ದ ವಾಣಿಜ್ಯ ಸಮಾವೇಶದಲ್ಲಿ ಪಾಲ್ಗೊಂಡಿದ್ದ ನರೇಂದ್ರ ಮೋದಿ, ಇಂದು ಲಡಾಖ್‌ನಲ್ಲಿ ಪ್ರತಿಧ್ವನಿಸಿದ ಆಶಯಗಳನ್ನು ಹೋಲುವ ಮಾತುಗಳನ್ನೇ ಆಡಿದ್ದರು.

18)
ಚೀನಾ ಗಡಿಯ ಸನಿಹ ಭಾರತೀಯ ವಾಯುಪಡೆಯ ಚಟುವಟಿಕೆಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ರಷ್ಯಾ ನಿರ್ಮಿತ ಎಸ್‌ಯು 30 ಎಂಕೆಐ ಮತ್ತು ಮಿಗ್‌-29 ಯುದ್ಧ ವಿಮಾನಗಳ ಹಾರಾಟ ಎದ್ದು ಕಾಣುವಂತಿದೆ.

19)
ಚಳಿಗಾಲದಲ್ಲಿನ ಬಳಕೆಗಾಗಿಯೇ ತಯಾರಿಸಲಾಗಿರುವ ವಿಶೇಷ ತೈಲ ಮೈನಸ್‌ (–) 33 ಡಿಗ್ರಿ ಸೆಲ್ಸಿಯಸ್‌ನಷ್ಟು ಶೀತಮಯ ವಾತಾವರಣದಲ್ಲೂ ಬಳಕೆಗೆ ಅನುವಾಗುತ್ತದೆ. ಗಡಿ ಭಾಗಗಳಲ್ಲಿ ಸೇನಾ ಚಟುವಟಿಕೆಗಳನ್ನು ಹೆಚ್ಚಿಸಿರುವುದರಿಂದ ಈ ತೈಲಕ್ಕೆ ಬೇಡಿಕೆ ಇನ್ನಷ್ಟು ಹೆಚ್ಚಾಗಬಹುದೆಂದು ಐಒಸಿ ಅಂದಾಜಿಸಿದೆ. ಜಮ್ಮು ಮತ್ತು ಕಾಶ್ಮೀರದಿಂದ ಪ್ರತ್ಯೇಕವಾಗಿ ಲಡಾಕ್‌ ಕೇಂದ್ರಾಡಳಿತ ಪ್ರದೇಶವಾಗಿ ರೂಪುಗೊಂಡ ಬೆನ್ನಲ್ಲೇ 2019ರ ನವೆಂಬರ್‌ 19ರಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಲಡಾಕ್‌ಗಾಗಿಯೇ ವಿಶೇಷ ತೈಲ ಬಳಕೆಗೆ ಚಾಲನೆ ನೀಡಿದ್ದರು.

20)
ಚೀನಾ ಮೇಲಿನ ಆಮದು ಅವಲಂಬನೆ ತಪ್ಪಿಸಲು ಸರ್ಕಾರವು ಹಲವಾರು ಸರಕುಗಳಿಗೆ ತಾಂತ್ರಿಕ ನಿಯಂತ್ರಣ ಕ್ರಮಗಳನ್ನು ರೂಪಿಸಿದೆ. ಇದರಡಿ 371 ಸರಕುಗಳನ್ನು ಗುರುತಿಸಲಾಗಿದೆ. ಗುಣಮಟ್ಟದ ನಿಯಮಗಳನ್ನು ಪಾಲಿಸಲೂ ಕ್ರಮ ಕೈಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT