ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಧೋಳ | ಲಾಕ್‌ಡೌನ್ ಪರಿಣಾಮ ನಷ್ಟದಲ್ಲಿ ಉಡುಪಿ ಹೋಟೆಲ್

ಬಾಡಿಗೆ ಇರಲಿ, ಕರೆಂಟ್ ಬಿಲ್ ಕಟ್ಟಲು ಆಗದ ಪರಿಸ್ಥಿತಿಯಲ್ಲಿ ಮಾಲೀಕರು
Last Updated 10 ಮೇ 2020, 19:30 IST
ಅಕ್ಷರ ಗಾತ್ರ

ಮುಧೋಳ: ಗ್ರಾಹಕರಿಗೆ ಶುಚಿ–ರುಚಿಯಾದ ತಿಂಡಿ, ಊಟ ನೀಡಿ ನಗರದಲ್ಲಿ ಉಡುಪಿ ಹೋಟೆಲ್‌ಗಳು ತಮ್ಮದೇ ಛಾಪು ಮೂಡಿಸಿದ್ದವು. ಈಗ ಕೋವಿಡ್–19 ಲಾಕ್‌ಡೌನ್‌ನಿಂದಾಗಿ ಹೋಟೆಲ್ ಮಾಲೀಕರು ಕಂಗೆಟ್ಟಿದ್ದಾರೆ.

ಇಲ್ಲಿನ ಬಹಳಷ್ಟು ಉಡುಪಿ ಹೋಟೆಲ್‌ಗಳು ಬಾಡಿಗೆ ಕಟ್ಟಡದಲ್ಲಿ ಇವೆ. ಆದರೆ ಈಗ ಬಾಡಿಗೆ ಇರಲಿ, ಕರೆಂಟ್ ಬಿಲ್ ಕಟ್ಟಲು ಆಗದ ಪರಿಸ್ಥಿತಿಗೆ ಮಾಲೀಕರು ಬಂದಿದ್ದಾರೆ. ಲಾಕ್‌ಡೌನ್‌ಗೆ ಮುನ್ನ ಬೆಳಿಗ್ಗೆ 5.30 ರಿಂದ ಆರಂಭವಾಗುವ ಇವರ ಕಾಯಕ ರಾತ್ರಿ 11ರವರೆಗೂ ನಡೆದೇ ಇರುತ್ತಿತ್ತು. ಹೀಗಾಗಿ ಆರ್ಥಿಕ ತೊಂದರೆ ಒಂದೆಡೆಯಾದರೆ ವೇಳೆ ಕಳೆಯುವುದು ಕಷ್ಟಕರವಾಗಿದೆ.

ಮುಧೋಳದಲ್ಲಿ ಉಡುಪಿ ಮೂಲದ27 ಪ್ರಮುಖ ಹೋಟೆಲ್‌ಗಳಿವೆ. ಇವರಲ್ಲಿ ಎರಡು ಹೋಟೆಲ್‌ಗಳು ಬಿಟ್ಟರೆ ಉಳಿದವೆಲ್ಲ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಎಲ್ಲ ಕಟ್ಟಡಗಳಿಗೆ ದುಬಾರಿ ಬಾಡಿಗೆ ಹಾಗೂ ಮುಂಗಡ ಹಣ ನೀಡಲಾಗಿದೆ.

ಹೊಟೇಲ್‌ನಲ್ಲಿ ಕೆಲಸ ಮಾಡಲು ಕಾರ್ಮಿಕರಿಗೂ ಮುಂಗಡ ಹಣ ನೀಡಿ ಉಡುಪಿ, ಕುಂದಾಪುರ, ಮುಂಡಗೋಡದಿಂದ ಕರೆತರಲಾಗಿದೆ. ಅವರನ್ನು ಈಗ ಅವರವರ ಊರಿಗೆ ಕಳುಹಿಸಲಾಗಿದೆ.

‘ನಮ್ಮ ಹೊಟೇಲ್ ನಂಬಿ ಹಲವರು ಕಾಯಂ ಗ್ರಾಹಕರು ಇದ್ದರು. ಅವರಲ್ಲಿ ವೈದ್ಯರು, ಬ್ಯಾಂಕ್ ಹಾಗೂ ವಿವಿಧ ಇಲಾಖೆ ನೌಕರರು, ಉದ್ದಿಮೆಗಳಲ್ಲಿ ಕೆಲಸ ಮಾಡುವವರು ಇದ್ದಾರೆ. ಅವರಲ್ಲಿ ಬಹುತೇಕರು ಬ್ಯಾಚುಲರ್‌ಗಳು. ಹೋಟೆಲ್ ಬಂದ್ ಆದಾಗಿನಿಂದ ನಷ್ಟ ಒಂದು ಕಡೆಯಾದರೆ ನಮ್ಮನ್ನು ನಂಬಿದ ಗ್ರಾಹಕರಿಗೆ ಅವರಿಗೆ ಕಷ್ಟಕಾಲದಲ್ಲಿ ತಿಂಡಿ, ಊಟ ನೀಡಿ ನೆರವಾಗಲಿಲ್ಲ ಎಂಬ ನೋವು ಇದೆ’ ಎಂದು ಮುಧೋಳದ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಬಾಬು ದೇವಾಡಿಗ ಹೇಳುತ್ತಾರೆ.

’ನಾವು ಹಿಂದೆಲ್ಲಾ ವಿಪತ್ತಿನ ಕಾಲದಲ್ಲಿ ಸಾರ್ವಜನಿಕರು, ಸರ್ಕಾರಕ್ಕೆ ನೆರವು ನೀಡಿದ್ದೇವೆ. ಈಗ ನಾವೇ ನೆರವಿಗಾಗಿ ಅಂಗಲಾಚುವ ಸ್ಥಿತಿ ಬಂದೊದಗಿದೆ. ನಮ್ಮ ನಂಬಿರುವ ತರಕಾರಿ ಮಾರಾಟಗಾರರು ಲಾಕ್‌ಡೌನ್ ಎಂದು ಮುಗಿಯುತ್ತದೆ ಎಂದು ಕೇಳುವಾಗ ಸಂಕಟವಾಗುತ್ತದೆ. ಮಾಡಿಕೊಂಡಿರುವ ಸಾಲ ನಿಗದಿತ ಅವಧಿಯಲ್ಲಿ ತೀರಿಸಲು ಸಾಧ್ಯವಾಗುವುದೊ ಇಲ್ಲವೂ ಎಂಬ ಭಯ ಕಾಡುತ್ತಿದೆ. ಹೊಟೇಲ್‌ನಲ್ಲಿ ಉಳಿದಿರುವ ಪೇಡೆ, ಚೂಡಾ, ಬ್ರೆಡ್, ಮೈದಾ, ಶೇಂಗಾ, ರವೆ, ಹಾಗೂ ಒಂದು ವಾರಕ್ಕೆ ಆಗುವಷ್ಟು ಸಂಗ್ರಹಿಸಿಟ್ಟಿದ್ದ ತರಕಾರಿ ಎಲ್ಲಾ ನಾಶವಾಗಿದೆ.

ಮುಧೋಳ ನಗರವಷ್ಟೆ ಅಲ್ಲ ಮಹಾಲಿಂಗಪುರ, ಜಮಖಂಡಿಯ ಗ್ರಾಹಕರು ನಮ್ಮ ಹೊಟೇಲ್‌ಗಳಿಗೆ ಬರುತ್ತಿದ್ದರು. ಮತ್ತೆ ಮೊದಲಿನಂತೆ ಆಗುತ್ತದೆಯೊ ಇಲ್ಲವೋ ಅನಿಸುತ್ತಿದೆ ಎಂದು ದೇವಾಡಿಗ ಹೇಳುತ್ತಾರೆ.

*
ಸರ್ಕಾರ ಹೋಟೆಲ್ ಉದ್ಯಮದ ಸಹಾಯಕ್ಕೆ ಬಂದರೆ ಮಾತ್ರ ನಮಗೆ ಉಳಿಗಾಲವಿದೆ. ಈ ಬಗ್ಗೆ ಸಂಘದಿಂದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ
-ಬಾಬು ದೇವಾಡಿಗ, ಮುಧೋಳ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT