ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ವಾನ ಪ್ರದರ್ಶನ: ಹೆಮ್ಮೆಯ ‘ಮುಧೋಳ’ ಬೆಸ್ಟ್‌ ಆಫ್‌ ಶೋ!

ಗಮನ ಸೆಳೆದ ವೈವಿಧ್ಯಮಯ ಶ್ವಾನ ತಳಿಗಳು
Last Updated 27 ಫೆಬ್ರುವರಿ 2021, 13:43 IST
ಅಕ್ಷರ ಗಾತ್ರ

ಬಳ್ಳಾರಿ: ಕರ್ನಾಟಕದ ಹೆಮ್ಮೆಯ ಮುಧೋಳ ಶ್ವಾನವು ಇಲ್ಲಿ ಭಾನುವಾರ ನಡೆದ ಜಿಲ್ಲಾಮಟ್ಟದ ಶ್ವಾನ ಪ್ರದರ್ಶನದಲ್ಲಿ ‘ಬೆಸ್ಟ್‌ ಆಫ್‌ ಶೋ’ ಸ್ಥಾನವನ್ನು ಪಡೆದು ವಿಶೇಷ ಗಮನ ಸೆಳೆಯಿತು. ಅದರ ಪಾಲಕ, ನಗರದ ನಿವಾಸಿ ಡಾ.ಅನೀಶ್‌ ಎಲ್ಲರ ಪ್ರಶಂಸೆಗೆ ಪಾತ್ರರಾದರು.

ಹೊಸಪೇಟೆಯ ಟಿ.ಸತೀಶ್‌ ಅವರ ಡಾಬರ್‌ಮನ್‌ ತಳಿಗೆ ಎರಡನೇ ಸ್ಥಾನ, ಬಳ್ಳಾರಿಯ ಪವನ್‌ ಅವರ ಜರ್ಮನ್‌ ಶಪರ್ಡ್‌ಗೆ ಮೂರನೇ ಸ್ಥಾನ ದೊರಕಿತು.

ವೆನೋಶ್ ಕನತ್ ಅವರ ‘ರಾಟ್‌ವೈಲರ್’, ಶಿವರಾಜ್ ಅವರ ‘ಫ್ರೆಂಚ್ ಬುಲ್‌’ ಮತ್ತು ರವಿಶಂಕರ್‌ ಅವರ –ಫಸ್ಟ್‌ ಬ್ರೀಡ್‌ ಸಮಾಧಾನಕರ ಬಹುಮಾನ ಪಡೆಯಿತು

ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯು ಕರ್ನಾಟಕ ಪಶುವೈದ್ಯಕೀಯ ಸಂಘದ ಜಿಲ್ಲಾ ಘಟಕದ ಸಹಯೋಗದಲ್ಲಿ ಏರ್ಪಡಿಸಿದ್ದ ಪ್ರದರ್ಶನದಲ್ಲಿ ಗದಗ ಪಶುವೈದ್ಯ ಕಾಲೇಜಿನ ಪ್ರೊ. ಬಿ.ಬಿ.ಬಾಳಪ್ಪನವರ್‌ ಮತ್ತು ಬೆಂಗಳೂರಿನ ಸಿಲಿಕನ್‌ ಸಿಟಿ ಕೆನೆಲ್‌ ಕ್ಲಬ್‌ನ ಜಂಟಿ ಕಾರ್ಯದರ್ಶಿ ಮನೋಜ್‌ಕುಮಾರ್‌ ತೀರ್ಪುಗಾರರಾಗಿದ್ದರು.

ಬಹುಮಾನ ಘೋಷಣೆ ಬಳಿಕ ಮಾತನಾಡಿದ ಪ್ರೊ.ಬಾಳಪ್ಪನವರ್, ‘ಜಿಲ್ಲೆಯ ಎಲ್ಲೆಡೆಯಿಂದ ಬಂದಿದ್ದ ಶ್ವಾನಗಳನ್ನು ಬಹುಮಾನಕ್ಕಾಗಿ ಆಯ್ಕೆ ಮಾಡುವುದು ಕಠಿಣ ಸವಾಲಾಗಿತ್ತು. ತೀರ್ಪು ಕೈಗೊಳ್ಳಲು ಕಷ್ಟಕರವಾದ ಸ್ಪರ್ಧೆಯಾಗಿತ್ತು. ಆದರೂ ತಳಿಯ ವಿಶೇಷ ಲಕ್ಷ್ಮಣ, ನಡೆವಳಿಕೆ, ಶ್ವಾನದ ಪಾಲಕರು ನೀಡಿದ ಉತ್ತರಗಳನ್ನು ಪರಿಗಣಿಸಿ ಆಯ್ಕೆ ಮಾಡಲಾಗಿದೆ’ ಎಂದರು.

ಶ್ವಾನ ಪಾಲಕರ ಸಂಘ: ‘ವೈವಿಧ್ಯಮಯ ಶ್ವಾನ ತಳಿಗಳನ್ನು ಸಾಕಿರುವ ಪಾಲಕರೆಲ್ಲರೂ ಸೇರಿ ಶ್ವಾನಪ್ರೇಮಿಗಳ ಸಂಘವನ್ನು ರಚಿಸಿಕೊಂಡರೆ ಹೆಚ್ಚಿನ ಚಟುವಟಿಕೆಗಳನ್ನು ಹಮ್ಮಿಕೊಳ್ಳಬಹುದು. ಶ್ವಾನಗಳ ಆರೋಗ್ಯ ರಕ್ಷಣೆ, ನಿರ್ವಹಣೆಯ ಕುರಿತು ಪರಸ್ಪರ ಚರ್ಚಿಸಬಹುದು’ ಎಂದು ಸಲಹೆ ನೀಡಿದರು.

ಬೆಳಿಗ್ಗೆಯಿಂದ ಮಧ್ಯಾಹ್ನ 3 ಗಂಟೆಯವರೆಗೂ ಪ್ರದರ್ಶನದಲ್ಲಿ 16ಕ್ಕೂ ಹೆಚ್ಚು ತಳಿಗಳ ಸುಮಾರು 125 ಶ್ವಾನಗಳು ಪಾಲ್ಗೊಂಡಿದ್ದವು. ಇದೇ ಸಂದರ್ಭದಲ್ಲಿ ಜಿಲ್ಲಾ ಸಶಸ್ತ್ರಮೀಸಲು ಪಡೆಯ ಶ್ವಾನಗಳ ಔಪಚಾರಿಕ ಪ್ರದರ್ಶನವೂ ಗಮನ ಸೆಳೆಯಿತು. ಶ್ವಾನಗಳ ಪ್ರದರ್ಶನ ವೀಕ್ಷಿಸಲು ಜಿಲ್ಲಾ ಕ್ರೀಡಾಂಗಣದಲ್ಲಿ ಶ್ವಾನಪ್ರಿಯರು ಅಧಿಕ ಸಂಖ್ಯೆಯಲ್ಲಿ ನೆರೆದಿದ್ದರು.

ಪ್ರದರ್ಶನವನ್ನು ಶಾಸಕ ಜಿ.ಸೋಮಶೇಖರರೆಡ್ಡಿ ಉದ್ಘಾಟಿಸಿದರು. ಜಿಲ್ಲಾ ಸಶಸ್ತ್ರಮೀಸಲು ಪಡೆಯ ಡಿವೈಎಸ್ಪಿ ಎಂ.ಎಸ್‌.ಸರ್ದಾರ್, ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಪಿ.ದೀನಾ, ಪರಮೇಶ್ವರ ನಾಯ್ಕ್, ಸಹಾಯಕ ನಿರ್ದೇಶಕ ಡಾ.ಶ್ರೀನಿವಾಸ್‌ ಉಪಸ್ಥಿತರಿದ್ದರು.ಜಿಲ್ಲಾ ಪಂಚಾಯ್ತಿಯ ನೆರವಿನಲ್ಲಿ ವಿಸ್ತರಣಾ ಘಟಕಗಳ ಬಲಪಡಿಸುವಿಕೆ ಯೋಜನೆಯ ಅಡಿ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT