ಬಳ್ಳಾರಿ: ತುಂಗಭದ್ರಾ ಡ್ಯಾಂನ 19ನೇ ಗೇಟ್ ಮುರಿದು ಹೋಗಿರುವ ಕಾರಣ ಭಾರಿ ಪ್ರಮಾಣದಲ್ಲಿ ನೀರನ್ನು ನದಿಗೆ ಬಿಡುತ್ತಿದ್ದು, ಸಂಭಾವ್ಯ ನೆರೆ ಪರಿಸ್ಥಿತಿ ಎದುರಿಸಲು ಬಳ್ಳಾರಿ ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಿದೆ.
ಈ ಕುರಿತು ಪ್ರಜಾವಾಣಿ ಜೊತೆಗೆ ಮಾತನಾಡಿರುವ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ‘ನದಿಗೆ ಹೆಚ್ಚಿನ ನೀರು ಬಿಡುತ್ತಿರುವುದರಿಂದ ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಿದೆ. ಎಲ್ಲ ವ್ಯವಸ್ಥೆಗಳನ್ನೂ ಮಾಡಿಕೊಳ್ಳಲಾಗಿದೆ. ಕಂಪ್ಲಿ ಹಾಗೂ ಸಿರುಗುಪ್ಪ ತಹಶೀಲ್ದಾರ್ ಹಾಗೂ ಇತರೆ ತಾಲೂಕು ಮಟ್ಟದ ಅಧಿಕಾರಿಗಳು ಪರಿಸ್ಥಿತಿ ಎದುರಿಸಲು ಸಜ್ಜಾಗಿದ್ದಾರೆ. ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳೂ ಪರಿಸ್ಥಿತಿಯ ಮೇಲೆ ತೀವ್ರ ನಿಗಾ ವಹಿಸಿದ್ದಾರೆ’ ಎಂದು ತಿಳಿಸಿದರು.
ತುಂಗಭದ್ರಾ ನದಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿಸಿದರೆ ಕಂಪ್ಲಿ ಮತ್ತು ಸಿರುಗುಪ್ಪದಲ್ಲಿ ನೆರೆ ಪರಿಸ್ಥಿತಿ ಉಂಟಾಗುತ್ತದೆ. 2 ಲಕ್ಷ ಕ್ಯುಸೆಕ್ ಮೀರಿ ನೀರು ಹರಿದರೆ ಮಾತ್ರ ಸಮಸ್ಯೆ. ಸದ್ಯ 1 ಲಕ್ಷ ಕ್ಯುಸೆಕ್ ನೀರು ಹರಿಯುತ್ತಿರುವುದರಿಂದ ಯಾವುದೇ ತೊಂದರೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗೆ ತುಂಗಭದ್ರಾ ಡ್ಯಾಂನಿಂದ 1.50 ಲಕ್ಷ ಕ್ಯುಸೆಕ್‌ನಷ್ಟು ನೀರು ಹರಿಯಬಿಡಲಾಗಿತ್ತು. ಕಂಪ್ಲಿ–ಗಂಗಾವತಿ ಸೇತುವೆ ಮುಳುಗಿದ್ದು, ಕುಮಾರರಾಮನ ಕೋಟೆ ವರೆಗೆ ನೀರು ಬಂದಿದ್ದು ಬಿಟ್ಟರೆ ಯಾವುದೇ ಅನಾಹುತವಾಗಿರಲಿಲ್ಲ. ಹೀಗಾಗಿ, ಈಗಲೂ ಬಳ್ಳಾರಿ ಜಿಲ್ಲೆಯಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತುಂಗಭದ್ರಾ ಅಣೆಕಟ್ಟೆಯ 19ನೇ ಗೇಟ್ ಮುರಿದು ಹೋಗಿರುವ ಕಾರಣ ಭಾರಿ ಪ್ರಮಾಣದಲ್ಲಿ ನೀರನ್ನು ನದಿಗೆ ಬಿಡುತ್ತಿದೆ. ಪ್ರವಾಸಿಗರಿಗೆ ಅಣೆಕಟ್ಟೆ ವೀಕ್ಷಣೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ.#Tungabhadra #TungabhadraDam #TungabhadraReservoir pic.twitter.com/sfWuDQEaUu
— Prajavani (@prajavani) August 11, 2024
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.