ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಾಲು
ಹೆದ್ದಾರಿ ಕಾಮಗಾರಿಯಿಂದಾಗಿ ವಾಹನಗಳು ಸಂಚರಿಸಲು ಪರದಾಡುತ್ತಿರುವುದು
ರಾಷ್ಟ್ರೀಯ ಹೆದ್ದಾರಿ 44ರ ಚಂದಾಪುರದಲ್ಲಿ ಶನಿವಾರ ಕಂಡು ಬಂದ ರಸ್ತೆ ದಟ್ಟಣೆ

ಕಾಲೇಜಿಗೆ ಹೋಗಬೇಕಾದಾಗ ವಾರದಲ್ಲಿ ಮೂರ್ನಾಲ್ಕು ದಿನ ಈ ರಸ್ತೆಯಲ್ಲಿ ವಾಹನ ದಟ್ಟಣೆಯಲ್ಲಿ ಸಿಲುಕುತ್ತಿದ್ದೇವೆ. ದೂರವಾದರೂ ಪರವಾಗಿಲ್ಲ ಎಂದು ಆನೇಕಲ್ ಜಿಗಣಿ ಜಯದೇವ ಆಸ್ಪತ್ರೆಯ ಮೂಲಕ ಬೆಂಗಳೂರಿನ ಕಾಲೇಜಿಗೆ ತೆರಳುತ್ತಿದ್ದೇವೆ
ಮಾನಸ ವಿದ್ಯಾರ್ಥಿನಿ4 ಕಿ.ಮೀ ವರೆಗೆ ವಾಹನ ದಟ್ಟಣೆ
ವಾರಾಂತ್ಯವಾಗಿರುವುದರಿಂದ ಐಟಿ ಸಿಬ್ಬಂದಿ ತಮಿಳುನಾಡಿಗೆ ಹೋಗುವವರು ಹೆಚ್ಚಾಗಿದ್ದರಿಂದ ಶನಿವಾರ ವಾಹನ ದಟ್ಟಣೆ ಹೆಚ್ಚಾಗಿತ್ತು. ಸುಮಾರು 4 ಕಿ.ಮೀ ವರೆಗೆ ವಾಹನ ದಟ್ಟಣೆ ಇತ್ತು. ಚಂದಾಪುರದಿಂದ ಹೆಬ್ಬಗೋಡಿಯವರೆಗೂ ವಾಹನಗಳ ಸಾಲುಗಳು ಕಂಡು ಬಂದಿತು. ಸಾಮಾನ್ಯವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಗಮವಾಗಿ ಸಂಚರಿಸಬಹುದು. ಆದರೆ ಆನೇಕಲ್ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿಯ ಸಂಚಾರ ಆಮೆಗತಿಯಲ್ಲಿದೆ. ಹೆಬ್ಬಗೋಡಿಯಿಂದ ಅತ್ತಿಬೆಲೆವರೆಗೆ ಸಾಮಾನ್ಯವಾಗಿ 20 ನಿಮಿಷಗಳಲ್ಲಿ ತಲುಪಬಹುದು ಆದರೆ ಕಾಮಗಾರಿ ನಡೆಯುವ ಸ್ಥಳದಿಂದ ಹೆಬ್ಬಗೋಡಿಯಿಂದ ಅತ್ತಿಬೆಲೆಗೆ ತಲುಪಲು ಎರಡು ಗಂಟೆಯಾದರೂ ಬೇಕು ಎನ್ನುತ್ತಾರೆ ಸವಾರರು. ಕೆಲವು ವಾಹನಗಳು ನಿಂತಲ್ಲೇ 10-20 ನಿಮಿಷ ನಿಲ್ಲಬೇಕಾಗಿದೆ. ಈ ರಸ್ತೆಯಲ್ಲಿ ನಿತ್ಯ ಓಡಾಡುವ ಕಾರ್ಮಿಕರು ವಿದ್ಯಾರ್ಥಿಗಳು ಹಿಡಿ ಶಾಪ ಹಾಕುತ್ತಾ ರಸ್ತೆಯಲ್ಲಿ ಸಂಚರಿಸುತ್ತಿದ್ದಾರೆ.
ಆಂಬುಲೆನ್ಸ್ ಸಂಕಟ
ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರವು ಹಲವು ಪ್ರತಿಷ್ಠಿತ ಆಸ್ಪತ್ರೆಗಳಿಗೆ ಹೆಸರುವಾಸಿಯಾಗಿದೆ. ತಮಿಳುನಾಡು ಕೇರಳ ಕರ್ನಾಟಕದಿಂದ ರೋಗಿಗಳು ಬರುತ್ತಾರೆ. ಆದರೆ ರಾಷ್ಟ್ರೀಯ ಹೆದ್ದಾರಿ ಆಂಬ್ಯುಲೆನ್ಸ್ ಸಿಲುಕಿಕೊಂಡರೆ ಕಷ್ಟ. ಒಮ್ಮೊಮ್ಮೆ ಆಂಬುಲೆನ್ಸ್‌ಗಳು ರಸ್ತೆ ದಟ್ಟಣೆಯಲ್ಲಿ ಸಿಲುಕಿ ಸಮಸ್ಯೆ ಅನುಭವಿಸುವ ಉದಾಹರಣೆಗಳಿವೆ ಎನ್ನುತ್ತಾರೆ ಸ್ಥಳೀಯರಾದ ವೆಂಕಟೇಶಪ್ಪ.
ನಿತ್ಯ ಪರದಾಟ
ಹಳೇ ಚಂದಾಪುರದ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಸಂಚರಿಸುವುದೇ ಕಷ್ಟವಾಗಿದೆ. ಪರ್ಯಾಯ ಮಾರ್ಗಗಳ ಮೂಲಕ ಚಂದಾಪುರ ಆನೇಕಲ್ ಹೆಬ್ಬಗೋಡಿಗೆ ತೆರಳುತ್ತಿದ್ದೇವೆ. ಎಲ್ಲಿ ನೋಡಿದರೂ ವಾಹನಗಳ ಸಾಲೇ ಇದೆ. ಇದರಿಂದ ಪ್ರತಿನಿತ್ಯ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟ ಇಲಾಖೆಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ದಟ್ಟಣೆಯಾಗದಂತೆ ಕ್ರಮ ವಹಿಸಬೇಕು- ರಾಜಪ್ಪ ಚಂದಾಪುರ ನಿವಾಸಿ