ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಕಲು ನಾಣ್ಯವಾದ ಭರವಸೆ: ಪ್ರತಿ ಚುನಾವಣೆಯಲ್ಲೂ ಮನವೊಲಿಸಿ ಮೌನವಾಗುವ ಅಧಿಕಾರಿಗಳು

Published 29 ಏಪ್ರಿಲ್ 2024, 4:50 IST
Last Updated 29 ಏಪ್ರಿಲ್ 2024, 4:50 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಮೂಲ ಸೌಕರ್ಯಕ್ಕಾಗಿ ಹಾಗೂ ತಮ್ಮ ಗ್ರಾಮಕ್ಕೆ ಮಾರಕವಾಗಿರುವ ಯೋಜನೆಗಳ ವಿರುದ್ಧ ಶತ ದಿನ ಪೂರೈಸಿ ಮುನ್ನಡೆಯುತ್ತಿರುವ ಧರಣಿ ಸತ್ಯಾಗ್ರಹ, ಪ್ರತಿಭಟನೆ ಹಾಗೂ ಮತದಾನ ಬಹಿಷ್ಕಾರ ಪ್ರತಿ ಚುನಾವಣೆಯಂತೆ 2024ರ ಲೋಕಸಭಾ ಚುನಾವಣೆಯಲ್ಲೂ ಸದು ಮಾಡಿತು.

ಮತದಾನ ಬಹಿಷ್ಕಾರಕ್ಕೆ ಕರೆ ನೀಡಿದ್ದ ಗ್ರಾಮಗಳಿಗೆ ಅಧಿಕಾರಿಗಳು ಭೇಟಿ ನೀಡಿ ಗ್ರಾಮಸ್ಥರ ಮನವೊಲಿಸಿ, ಭರವಸೆ ನೀಡಿ ಬಂದಿದ್ದಾರೆ. ಹಾಗಾದರೆ ಮತದಾನ ಬಹಿಷ್ಕಾರದಿಂದ ಜನ ಹಿಂದೆ ಸರಿಯಲು ರಾಜಕೀಯ ಪಕ್ಷಗಳ ಮುಖಂಡರು ಮತ್ತು ಅಧಿಕಾರಿಗಳು ನೀಡಿದ ಭರವಸೆಗಳು ಈಡೇರಿವೆಯೇ ಅಂದರೆ; ಫಲಿತಾಂಶ ಶೂನ್ಯವೆಂದೇ ಹೇಳಿಬೇಕಿದೆ.

2007ರಲ್ಲಿ ತಾಲ್ಲೂಕಿನ ದೊಡ್ಡಬೆಳವಂಗಲ ಹೋಬಳಿಯ ಗುಂಡ್ಲಹಳ್ಳಿ ಸಮೀಪ ಬಿಬಿಎಂಪಿ ಕಸ ವಿಲೇವಾರಿ ಘಟಕ ಟೆರ್ರಾಫಾರಂ ಆರಂಭವಾಗಿನಿಂದ 2013ರವರೆಗೂ ನಡೆದ ಸತತ ಹೋರಾಟದ ಫಲವಾಗಿ ಅದು ಸ್ಥಗಿತಗೊಂಡಿತು. ಆದರೆ ಸ್ಥಗಿತಗೊಂಡ ಬಿಬಿಎಂಪಿ ಕಸ ವಿಲೇವಾರಿ ಘಟಕಕ್ಕಿಂತಲೂ ಬೃಹತ್‌ ಕಸ ವಿಲೇವಾರಿ ಘಟಕ ಬೇರೆ ಹೆಸರಿನಲ್ಲಿ ಕೂಗಳತೆ ದೂರದಲ್ಲೇ 2014ರಿಂದ ಎಂಎಸ್‌ಜಿಪಿ ಘಟಕ ಕಾರ್ಯಾರಂಭ ಮಾಡಿದೆ.

ಈ ಕಸ ವಿಲೇವಾರಿ ಘಟಕದ ಸ್ಥಗಿತಗೊಳಿಸುವ, ಕಸ ವಿಲೇವಾರಿ ಘಕಟದಿಂದ ಹೊರಗೆ ಹರಿದು ಬರುತ್ತಿರುವ ಕಲುಷಿತ ನೀರು ತಡೆಯುವ ಬಗ್ಗೆ ಇಲ್ಲಿಯವರೆಗೆ ರಾಜ್ಯದಲ್ಲಿ ಆಡಳಿತ ನಡೆಸಿರುವ ಬಿಜೆಪಿ, ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮೂರು ಪಕ್ಷದ ಮುಖ್ಯಮಂತ್ರಿಗಳು, ಸಚಿವರು ನಡೆಸಿದ ಸಭೆಗಳಲ್ಲಿ ನೀಡಿರುವ ಭರವಸೆಗಳಲ್ಲಿ ಕನಿಷ್ಠ ಒಂದೂ ಸಹ ಈಡೇರಿಲ್ಲ. ಕಸ ವಿಲೇವಾರಿ ಘಟಕದ ಜನರು ಈ ಕ್ಷಣದಲ್ಲೂ ಮೂಕರೋಧನ ಅನುಭವಿಸುವ ಸ್ಥಿತಿ ಮುಂದುವರೆದೇ ಇದೆ.

ತಾಲ್ಲೂಕಿನ ಮಜರಾಹೊಸಹಳ್ಳಿ, ದೊಡ್ಡತುಮಕೂರು ಗ್ರಾಮ ವ್ಯಾಪ್ತಿಯ ಕೆರೆಗಳಿಗೆ ದೊಡ್ಡಬಳ್ಳಾಪುರ ನಗರಸಭೆ, ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಹಾಗೂ ಕೈಗಾರಿಕಾ ಪ್ರದೇಶಗಳ ಕಲುಷಿತ ನೀರು ಬಂದು ತುಂಬಿಕೊಳ್ಳುತ್ತಿವೆ. ಸೂಕ್ತ ಶುದ್ದೀಕರಣ ಇಲ್ಲದೆ ನೀರು ದುರ್ನಾತ ಬೀರುತ್ತಿದೆ. ಈ ಎರಡೂ ಗ್ರಾಮ ಪಂಚಾಯಿತಿ ವ್ಯಾಪ್ತಿಗಳ ಜನರಲ್ಲಿ ಕ್ಯಾನ್ಸರ್‌ ಸೇರಿದಂತೆ ಇತರೆ ಚರ್ಮದ ರೋಗಗಳು ಹೆಚ್ಚುತ್ತಿವೆ ಎಂದು ಹೋರಾಟ ಸಮಿತಿಯ ಅಧ್ಯಕ್ಷರು, ಸ್ಥಳೀಯ ನಿವಾಸಿಗಳು ಹಾಗೂ ಬೆಂಗಳೂರಿನ ಕಿಮ್ಸ್‌ನ ನಿವೃತ್ತ ವೈದ್ಯ ಡಾ.ಎಚ್‌.ಟಿ.ಆಂಜಿನಪ್ಪ ಅವರು ಹಲವಾರು ಸಭೆಗಳಲ್ಲಿ ಹೇಳುತ್ತಲೇ ಬರುತ್ತಿದ್ದಾರೆ.

ಈ ಎರಡು ಪಂಚಾಯಿತಿ ವ್ಯಾಪ್ತಿಗಳಲ್ಲಿ ಕಲುಷಿತ ನೀರು ಅಂತರ್ಜಲ ಸೇರಿ ಕೊಳವೆ ಬಾವಿಗಳಲ್ಲಿ ಬರುತ್ತಿರುವ ನೀರು ಕುಡಿಯಲು ಯೋಗ್ಯ ಇಲ್ಲದಷ್ಟು ಕಲುಷಿತ ಆಗಿದೆ ಎಂದು ಸರ್ಕಾರಿ ಹಾಗೂ ಖಾಸಗಿ ಪ್ರಯೋಗಾಲಯಗಳು ವರದಿ ನೀಡಿವೆ. ಕಲುಷಿತ ನೀರಿನಿಂದ ಶುದ್ಧಕುಡಿಯುವ ನೀರಿನ ಘಟಕಗಳು ಕೆಟ್ಟು ನಿಲ್ಲುತ್ತಿವೆ.

ಗ್ರಾಮಗಳಿಗೆ ಬೇರೆ ಕಡೆಗಳಿಂದ ಕುಡಿಯುವ ನೀರು ಸರಬರಾಜು ಮಾಡಬೇಕು, ಕೆರೆಗಳಿಗೆ ಹರಿದು ಬರುತ್ತಿರುವ ಕಲುಷಿತ ನೀರು ನಿಲ್ಲಬೇಕು ಎನ್ನುವ ಬೇಡಿಕೆಗಳೊಂದಿಗೆ 2023ರ ವಿಧಾನಸಭಾ ಚುನಾವಣೆಯನ್ನು ಜನರು ಬಹಿಷ್ಕರಿಸಿದ್ದರು. ಆದರೆ ಅಧಿಕಾರಿಗಳ ಭರವಸೆಯಿಂದ ಮತದಾನ ಬಹಿಷ್ಕಾರ ಹಿಂದಕ್ಕೆ ಪಡೆದರು. ಆ ಸಂದರ್ಭದಲ್ಲಿ ಅಧಿಕಾರಿಗಳು ನೀಡಿದ್ದ ಭರವಸೆಯಂತೆ ಜಕ್ಕಲಮೊಡಗು ಜಲಾಶಯದಿಂದ ಟ್ಯಾಂಕರ್‌ಗಳ ಮೂಲಕ ಅಲ್ಪ ಪ್ರಮಾಣದಲ್ಲಿ ಕುಡಿಯುವ ನೀರು ಸರಬರಾಜು ನಡೆಯುತ್ತಿದೆ.

ಗ್ರಾಮದಲ್ಲಿ ರೈತರು ಸಾಕಿರುವ ಹಸು, ಕುರಿ, ಮೇಕೆಗಳಿಗೆ ಅಂತರ್ಜಲದಿಂದ ಬರುವ ಕಲುಷಿತ ನೀರೆ ಅನಿವಾರ್ಯವಾಗಿವೆ. ಆದರೆ ಕೆರೆಗಳಿಗೆ ಹರಿದು ಬರುತ್ತಿರುವ ಕಲುಷಿತ ನೀರು ಮಾತ್ರ ಇನ್ನೂ ನಿಂತಿಲ್ಲ ಅಥವಾ ಶುದ್ಧೀಕರಣ ಪ್ರಕ್ರಿಯೆ ಪ್ರಾರಂಭವಾಗಿಲ್ಲ. ಹಾಗಾಗಿ 2024ರ ಲೋಕಸಭಾ ಚುನಾವಣೆಯನ್ನು ಈ ಎರಡು ಗ್ರಾಮ ಪಂಚಾಯಿತಿಗಳ ಜನರು ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣ ಸಮಿತಿ ನೇತೃತ್ವದಲ್ಲಿ ಬಹಿಷ್ಕರಿಸಿದ್ದರು. ಆದರೆ ಜಿಲ್ಲಾಧಿಕಾರಿಗಳ ಭರವಸೆಯಂತೆ ಮತದಾನ ಬಹಿಷ್ಕಾರವನ್ನು ಹಿಂದಕ್ಕೆ ಪಡೆದು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.

ಎತ್ತಿನಹೊಳೆ ಕುಡಿಯುವ ನೀರು ಯೋಜನೆಗಾಗಿ ಸಾಸಲು ಹೋಬಳಿಯ ಮಚ್ಚೇನಹಳ್ಳಿ, ಶ್ರೀರಾಮನಹಳ್ಳಿ ಸಮೀಪ ಜಲಾಶಯ ನಿರ್ಮಾಣಕ್ಕಾಗಿ ಕೃಷಿ ಜಮೀನು ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿ ಐದು ವರ್ಷಗಳು ಕಳೆದಿವೆ. ಈ ಐದು ವರ್ಷಗಳಲ್ಲಿ ಭೂ ನೋಂದಣಿ ಮುದ್ರಾಂಕ ಶುಲ್ಕ, ಭೂಮಿ ಬೆಲೆಯನ್ನು ಸರ್ಕಾರ ಹೆಚ್ಚಳ ಮಾಡಿದೆ. ಎತ್ತಿನಹೊಳೆ ಯೋಜನೆಗಾಗಿ ಸ್ವಾಧೀನಕ್ಕೆ ಒಳಪಡುತ್ತಿರುವ ಜಮೀನಿನ ಮಾರ್ಗಸೂಚಿ ದರ ಹಾಗೂ ಜಲಾಶಯ ನಿರ್ಮಾಣದಿಂದ ಮುಳುಗಡೆ ಆಗುವ ಗ್ರಾಮಗಳ ಜನರಿಗೆ ಕಾಮಗಾರಿ ಪ್ರಾರಂಭಕ್ಕೂ ಮುನ್ನ ಪುನರ್ವಸತಿ ಕಲ್ಪಿಸುವಂತೆ ರೈತರು ಮಾಡಿದ ಮನವಿಗಳಿಗೆ ಇಲ್ಲಿಯವರೆಗೂ ಭರವಸೆ ದೊರೆತಿವೆಯೇ ವಿನಹ ಪರಿಹಾರ ಮಾತ್ರ ದೊರೆತಿಲ್ಲ.

ಜಲಾಶಯ ನಿರ್ಮಾಣ ಕಾಮಗಾರಿಯು ಪ್ರಾರಂಭವಾಗಿಲ್ಲ. ಭೂಸ್ವಾಧೀನ ಪ್ರಕ್ರಿಯೆಯು ಮುಗಿದಿಲ್ಲ. ಈ ಎಲ್ಲಾ ಕಾರಣಗಳಿಂದ ರೈತರು ಪ್ರತಿ ದಿನವು ಗೊಂದಲ, ಆತಂಕದಲ್ಲೇ ಜೀವನ ನಡೆಸುವಂತಾಗಿದೆ.

ಕೆಐಎಡಿಬಿಯಿಂದ ಫಲವತ್ತಾದ ಕೃಷಿ ಜಮೀನು ಸ್ವಾಧೀನ ಮಾಡಿಕೊಳ್ಳುತ್ತಿರುವುದನ್ನು ವಿರೋಧಿಸಿ ಕೊನಘಟ್ಟ, ನಾಗದೇನಹಳ್ಳಿ ಗ್ರಾಮದ ರೈತರು ಹೋರಾಟ ಸಮಿತಿ ನೃತ್ವದಲ್ಲಿ 110 ದಿನಗಳಿಂದ ನಿರಂತರವಾಗಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಈ ಭಾಗದ ರೈತರು ಸಹ ಮತದಾನ ಬಹಿಷ್ಕರಿಸುವ ನಿರ್ಧಾರ ಕೈಗೊಂಡಿದ್ದರು. ಆದರೆ ಅಧಿಕಾರಿಗಳ ಭರವಸೆ ನಂತರ ಮತದಾನದಲ್ಲಿ ಭಾಗವಹಿಸಿದ್ದಾರೆ. 

ಇವೆರಲ್ಲರೂ ತಮ್ಮ ಬೇಡಿಕೆಗಳು ಈಡೇರುವ ಹಾದಿ ನೋಡುತ್ತಾ ಕುಳಿತ್ತಿದ್ದಾರೆ.

ರುದ್ರಆರಾಧ್ಯ
ರುದ್ರಆರಾಧ್ಯ

ಕನಿಷ್ಠ ಭರವಸೆ ಈಡೇರಿಲ್ಲ

100 ಹಾಸಿಗೆಗಳ ಇಎಸ್‌ಐ ಆಸ್ಪತ್ರೆ ಕಟ್ಟಡ ನಿರ್ಮಾಣವಾಗಿ ಎಂಟು ತಿಂಗಳು ಕಳೆದರೂ ಉದ್ಘಾಟನೆ ಆಗಿಲ್ಲ. ನೇಕಾರರ ಗುರುತಿನ ಚೀಟಿ ನೀಡಿದ ನಂತರ ದೊರೆಯಬೇಕಿರುವ ಅನುಕೂಲಗಳ ಭರವಸೆಯೂ ಈಡೇರಿಲ್ಲ. ನಾಗರೀಕರ ಕನಿಷ್ಠ ಭರವಸೆಗಳಾದ ರಸ್ತೆ, ಕುಡಿಯುವ ನೀರು ಇವುಗಳು ಈಡೇರಿಲ್ಲ. ಹೋರಾಟಗಳು ನಿರಂತರವಾಗಿಯೇ ಇವೆ.
ರುದ್ರಆರಾಧ್ಯ, ವಕೀಲ, ದೊಡ್ಡಬಳ್ಳಾಪುರ
ಮಹೇಶ್‌ ಹೊನ್ನಾಘಟ್ಟ
ಮಹೇಶ್‌ ಹೊನ್ನಾಘಟ್ಟ

ಕಾನೂನು ಹೋರಾಟ

ಮತದಾನ ಬಹಿಷ್ಕಾರ, ಅಧಿಕಾರಿಗಳ ಭರವಸೆಗಳು ಸವಕಲು ನಾಣ್ಯದ ರೀತಿಯಾಗುತ್ತಿವೆ. ನಮ್ಮ ಹೋರಾಟಗಳ ಸ್ವರೂಪದಲ್ಲೂ ಒಂದಿಷ್ಟು ಬದಲಾವಣೆಗಳೊಂದಿಗೆ ಕಾನೂನಾತ್ಮಕ ಹೋರಾಟಕ್ಕೆ ಮುಂದಾಗಬೇಕಿದೆ. ಆಗ ಮಾತ್ರ ನಮ್ಮ ಸಮಸ್ಯೆಗಳು ಕನಿಷ್ಠ ಮಟ್ಟದಲ್ಲಾದರೂ ನಿವಾರಣೆಯಾಗಲು ಸಾಧ್ಯವಾಗಬಹುದು ಅನ್ನಿಸುತ್ತಿದೆ.
ಮಹೇಶ್‌ ಹೊನ್ನಾಘಟ್ಟ, ಅಧ್ಯಕ್ಷ , ಕರ್ನಾಟಕ ರಾಜ್ಯ ರೈತ ಶಕ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT