ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಕೇಂದ್ರ ಬಸ್ ನಿಲ್ದಾಣಕ್ಕೆ ರಾಣಿ ಚನ್ನಮ್ಮ ಹೆಸರು: ಸವದಿ

ಸಾರಿಗೆ ಸಚಿವ ಲಕ್ಷ್ಮಣ ಸವದಿ ಭರವಸೆ
Last Updated 8 ಜನವರಿ 2021, 12:04 IST
ಅಕ್ಷರ ಗಾತ್ರ

ಬೆಳಗಾವಿ: ‘ನಗರದಲ್ಲಿ ನಿರ್ಮಿಸಲಾಗುತ್ತಿರುವ ಕೇಂದ್ರ ಬಸ್ ನಿಲ್ದಾಣಕ್ಕೆ ಕಿತ್ತೂರು ರಾಣಿ ಚನ್ನಮ್ಮ ಹೆಸರು ನಾಮಕರಣ ಮಾಡಿದ ನಂತರವೇ ಉದ್ಘಾಟಿಸಲಾಗುವುದು’ ಎಂದು ಸಾರಿಗೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಭರವಸೆ ನೀಡಿದರು.

ಇಲ್ಲಿನ ಎನ್‌ಡಬ್ಲ್ಯುಕೆಆರ್‌ಟಿಸಿ 3ನೇ ಡಿಪೊದಲ್ಲಿ ನೌಕರರ ವಿಶ್ರಾಂತಿ ಗೃಹ ಉದ್ಘಾಟನೆ ವೇಳೆ ಶುಕ್ರವಾರ ತಮ್ಮನ್ನು ಭೇಟಿಯಾದ ಶ್ರೀನಿವಾಸ ತಾಳೂಕರ ಮೊದಲಾದ ಕನ್ನಡಪರ ಹೋರಾಟಗಾರಿಗೆ ಸಚಿವರು ಈ ವಿಷಯ ತಿಳಿಸಿದರು.

‘ನಿಲ್ದಾಣಕ್ಕೆ ಚನ್ನಮ್ಮ ಹೆಸರಿಡಬೇಕು ಎಂಬ ಬೇಡಿಕೆ ಹಿಂದಿನಿಂದಲೂ ಇದೆ. ಇಲ್ಲಿಯವರೇ ಆದ ನಿಮ್ಮ ಅಧಿಕಾರದ ಅವಧಿಯಲ್ಲೇ ಈ ಕಾರ್ಯವಾಗಬೇಕು’ ಎಂದು ಹೋರಾಟಗಾರರು ಒತ್ತಾಯಿಸಿದರು.

ಅನುದಾನಕ್ಕೆ ತೊಂದರೆ ಇಲ್ಲ

ಇದಕ್ಕೂ ಮುನ್ನ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವರು, ‘ಜಿಲ್ಲಾ ಮಟ್ಟದಲ್ಲಿ ಸರ್ಕಾರಿ ಸಾರಿಗೆ ಬಸ್‌ಗಳ ಡಿಪೊಗಳಲ್ಲಿ ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ವಿಶ್ರಾಂತಿ ಗೃಹಗಳನ್ನು ನಿರ್ಮಿಸುತ್ತಿದ್ದೇವೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಮಾಡುತ್ತಿದ್ದೇವೆ. ಇದಕ್ಕಾಗಿ ಆರ್‌ಒ ಘಟಕಗಳನ್ನು ಅಳವಡಿಸುತ್ತಿದ್ದೇವೆ’ ಎಂದು ತಿಳಿಸಿದರು.

‘ಇಲ್ಲಿನ ಕೇಂದ್ರ ಬಸ್ ನಿಲ್ದಾಣದ ಕಾಮಗಾರಿಯು ಕೋವಿಡ್–19 ಪರಿಸ್ಥಿತಿಯ ಕಾರಣದಿಂದ ವಿಳಂಬವಾಗಿದೆ. ಏಪ್ರಿಲ್‌ನಲ್ಲಿ ಮುಗಿಸುತ್ತೇವೆ ಎಂದು ಗುತ್ತಿಗೆದಾರರು ಹೇಳಿದ್ದಾರೆ. ಅವರಿಗೆ ನೋಟಿಸ್ ಕೂಡ ನೀಡಿದ್ದೇವೆ. ಅನುದಾನ ಬಿಡುಗಡೆಯಲ್ಲಿ ನಮ್ಮಿಂದ ವಿಳಂಬವಾಗಿಲ್ಲ. ಮತ್ತೆ ವಿಳಂಬವಾದರೆ ದಂಡ ವಿಧಿಸಲಾಗುವುದು. ಇದೇ 20ರ ಒಳಗೆ ಆ ಕಂಪನಿಯವರನ್ನು ಕರೆಸಿ ತಾಕೀತು ಮಾಡಲಾಗುವುದು. ಅಂತೆಯೆ, ನಗರ ಬಸ್ ನಿಲ್ದಾಣದ ಕಾಮಗಾರಿಯನ್ನೂ ತ್ವರಿತವಾಗಿ ಮುಗಿಸಲಾಗುವುದು’ ಎಂದು ಹೇಳಿದರು.

ಘೋಷಣೆಯಾದ ಬಳಿಕ ನಿರ್ಧಾರ

‘ನಗರಪಾಲಿಕೆಯಲ್ಲಿ ಎಂಇಎಸ್ ಮತ್ತು ಕನ್ನಡ ಭಾಷಿಕರು ಎನ್ನುವ ಆಧಾರದ ಮೇಲೆ ಈವರೆಗೆ ಚುನಾವಣೆ ನಡೆದಿದೆ. ಈ ಬಾರಿ ಪಕ್ಷದ ಚಿಹ್ನೆಯ ಮೇಲೆ ಸ್ಪರ್ಧಿಸುವ ಬಗ್ಗೆ ಚುನಾವಣೆ ಘೋಷಣೆಯಾದ ಬಳಿಕ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗುವುದು’ ಎಂದರು.

‘ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಜು ಚಿಕ್ಕನಗೌಡರ ಸಾವಿನಲ್ಲಿ ಅನುಮಾನವಿದೆ ಎಂಬ ಸುದ್ದಿಗಳು ಬರುತ್ತಿವೆ. ಹಾಗೇನಾದರೂ ಇದ್ದಲ್ಲಿ ತನಿಖೆ ನಡೆಸುವ ಕೆಲಸವೂ ಆಗುತ್ತದೆ’ ಎಂದು ಪ್ರತಿಕ್ರಿಯಿಸಿದರು.

ಡಿಪೊದಲ್ಲಿ ನಿರ್ಮಿಸಿದ ಪುರುಷರ ಹಾಗೂ ಮಹಿಳೆಯರ ವಿಶ್ರಾಂತಿ ಗೃಹ ಮತ್ತು ಶುದ್ಧ ಕುಡಿಯುವ ನೀರಿನ ಘಟಕವನ್ನು ಸಚಿವರು ಉದ್ಘಾಟಿಸಿದರು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಅನಿಲ ಬೆನಕೆ, ಸಾರಿಗೆ ಸಂಸ್ಥೆಯ ಬೆಳಗಾವಿ ವಿಭಾಗೀಯ ನಿಯಂತ್ರಣಾಧಿಕಾರಿ ಮಹಾದೇವ ಮುಂಜಿ, ಆರ್‌ಟಿಒ ಶಿವಾನಂದ ಮಗದುಮ್ ಇದ್ದರು.

***

ಸಚಿವರ ಕಾರಿಗೆ ಡಿಪೊದಲ್ಲಿ ಡೀಸೆಲ್!

ಸಾರಿಗೆ ಸಚಿವರೂ ಆಗಿರುವ ಲಕ್ಷ್ಮಣ ಸವದಿ ಅವರ ಖಾಸಗಿ ಕಾರಿಗೆ ಚಾಲಕ ಬಸ್ ಡಿಪೊದಲ್ಲಿನ ಪೆಟ್ರೋಲ್‌ ಬಂಕ್‌ನಿಂದ ಡೀಸೆಲ್ ತುಂಬಿಸಿಕೊಂಡರು.

ನಗರದ 3ನೇ ಬಸ್ ಡಿಪೊದಲ್ಲಿ ಸಾರಿಗೆ ಇಲಾಖೆಯಿಂದ ನಿರ್ಮಿಸಿದ ವಿಶ್ರಾಂತಿ ಗೃಹದ ಉದ್ಘಾಟನೆಗೆಂದು ಸವದಿ ಆ ವಾಹನದಲ್ಲಿ ಬಂದಿದ್ದರು. ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರೆ, ಇತ್ತ ಅವರ ಡಿಪೊದಲ್ಲಿನ ಬಂಕ್‌ನಿಂದ ಇಂಧನ ತುಂಬಿಸಿದರು.

ಸರ್ಕಾರಿ ಸಾರಿಗೆ ಬಸ್‌ಗಳಿಗೆ ಇಂಧನಕ್ಕಾಗಿ ಈ ಬಂಕ್ ತೆರೆಯಲಾಗಿದೆ. ಆದರೆ, ಸಚಿವರು ಇಲ್ಲಿ ಪ್ರವಾಸಕ್ಕೆ ಬಳಸುವ ತಮ್ಮ ವಾಹನಕ್ಕೆ ಡೀಸೆಲ್ ಹಾಕಿಸಿಕೊಂಡಿದ್ದು ಚರ್ಚೆಗೆ ಗ್ರಾಸವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT