ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆ ಶಿಬಿರ, ಮೋಜಿನ ಸಡಗರ

ಕೋವಿಡ್ ಕಾರಣದಿಂದ ಎರಡು ವರ್ಷಗಳು ನಡೆದಿರಲಿಲ್ಲ
Last Updated 7 ಏಪ್ರಿಲ್ 2022, 22:15 IST
ಅಕ್ಷರ ಗಾತ್ರ

ಬೆಳಗಾವಿ: ಕೋವಿಡ್–19 ಸಾಂಕ್ರಾಮಿಕದ ಕಾರಣದಿಂದಾಗಿ ಕಳೆದ ಎರಡು ವರ್ಷ ಮಂಕಾಗಿದ್ದ ‘ಬೇಸಿಗೆ ಶಿಬಿರ’ಗಳು ಈ ಬಾರಿ ರಂಗು ಪಡೆಯಲಿವೆ.

ನಗರ ಮತ್ತು ಜಿಲ್ಲೆಯ ವಿವಿಧೆಡೆ ಚಿಣ್ಣರನ್ನು ಹಲವು ರೀತಿಯಲ್ಲಿ ರಂಜಿಸುವ ಜೊತೆಗೆ ನಲಿಯುತ್ತಾ ಕಲಿಕೆಗೆ ಅವಕಾಶ ಕಲ್ಪಿಸುವಂತಹ ವಿಭಿನ್ನ ಕಾರ್ಯಕ್ರಮಗಳಿಗೆ ವಿವಿಧ ಸಂಘ–ಸಂಸ್ಥೆಗಳು ಸಿದ್ಧತೆ ನಡೆಸಿವೆ. ಕೆಲವೆಡೆ ಈಗಾಗಲೇ ಚಟುವಟಿಕೆಗಳು ಆರಂಭಗೊಂಡಿವೆ. ಪಠ್ಯದ ಓದು, ಪರೀಕ್ಷೆ ಮೊದಲಾದವುಗಳಲ್ಲಿ ಮುಳುಗಿದ್ದವರಿಗೆ ರಿಲ್ಯಾಕ್ಸ್‌ ಆಗುವುದಕ್ಕೆ ಶಿಬಿರಗಳು ಸಹಕಾರಿಯಾಗಿವೆ. ವೈವಿಧ್ಯಮಯ ಅನುಭವಗಳ ಪಾಕವನ್ನು ಈ ಹೊಸ ಲೋಕ ಉಣಬಡಿಸುತ್ತದೆ.

ಅಜ್ಜಿ–ತಾತ ಮೊದಲಾದವರು ಹಳ್ಳಿಗಳಲ್ಲಿ ಉಳಿಯುತ್ತಿದ್ದು, ನಗರದಲ್ಲಿನ ಕುಟುಂಬಗಳು ಚಿಕ್ಕವಾಗುತ್ತಿವೆ. ನಗರಗಳಲ್ಲಿನ ಬೆಲೆ ಏರಿಕೆಯ ಇಂದಿನ ದುಬಾರಿ ದಿನಗಳನ್ನು ಸರಿದೂಗಿಸಲು ಪತಿ–ಪತ್ನಿ ಇಬ್ಬರೂ ದುಡಿಯಬೇಕಾದ ಸ್ಥಿತಿ ಹಲವರಿಗಿದೆ. ಹೀಗಿರುವಾಗ ಮಕ್ಕಳನ್ನು ರಜೆಯಲ್ಲಿ ನೋಡಿಕೊಳ್ಳುವವರು ಯಾರು? ಕೆಲಸಕ್ಕೆ ಹೋಗದಿರಲಾದೀತೇ? ಇಂತಹ ಪ್ರಶ್ನೆ ಹಾಗೂ ಅನಿವಾರ್ಯ ಪರಿಸ್ಥಿತಿಗೆ ಪೋಷಕರು ಕಂಡುಕೊಂಡಿರುವ ಪರಿಹಾರವೇ ಬೇಸಿಗೆ ಶಿಬಿರ ಎನ್ನಬಹುದು.

ಹಲವು ಕಡೆಗಳಲ್ಲಿ:

‘ಪರೀಕ್ಷೆ ಮುಗಿತಲ್ಲಾ ಯಾವ ಶಿಬಿರಕ್ಕೆ ಸೇರಿಸ್ತಿದ್ದೀರಿ’ ಎಂಬ ಮಾತುಗಳು ಪೋಷಕರ ನಡುವೆ ಕೇಳಿಬರುತ್ತಿವೆ. ವಿವಿಧೆಡೆ ಸಂಘ-ಸಂಸ್ಥೆಗಳು ಶಿಬಿರ ಆಯೋಜಿಸಿವೆ. ಕೆಲವು ಶಾಲೆಗಳೂ ಶಿಬಿರ ನಡೆಸುತ್ತವೆ. ಇದರಿಂದಾಗಿ ಇತ್ತೀಚಿನ ವರ್ಷಗಳಲ್ಲಂತೂ ಶಿಬಿರಗಳಿಗೆ ಬೇಡಿಕೆ ಬಂದಿದೆ. ಬೆಳಿಗ್ಗೆಯಿಂದ ಮಧ್ಯಾಹ್ನ ಅಥವಾ ಸಂಜೆವರೆಗೂ ನಡೆಸಲಾಗುತ್ತದೆ.

ಕೆಲವೆಡೆ ಈಜು, ಕ್ರಿಕೆಟ್, ಟೆನ್ನಿಸ್, ಟೇಬಲ್ ಟೆನ್ನಿಸ್, ವಾಲಿಬಾಲ್, ಬ್ಯಾಸ್ಕೆಟ್‌ಬಾಲ್‌ ಮೊದಲಾದ ಆಟಗಳ ಕಲಿಕೆಗೆ ಮಾತ್ರವೆ ಒತ್ತು ನೀಡಿ, ಮಕ್ಕಳಿಗೆ ತರಬೇತಿ ನೀಡಿ ಸಜ್ಜುಗೊಳಿಸಲಾಗುತ್ತದೆ.

ಈ ಶಿಬಿರಗಳು ಲಲಿತಕಲೆಗಳನ್ನು ಕಲಿಯುವ–ಸಂಭ್ರಮಿಸುವ ದಿನಗಳ ಸಂಗಮ ಎನ್ನಬಹುದು. ನಿಗದಿತ ವಿಷಯ ಆಧರಿಸಿದ ಶಿಬಿರಗಳೂ ಇರುತ್ತವೆ. ಕೆಲವರು ನಾಟಕಕ್ಕೆ ಒತ್ತು ನೀಡಿದರೆ, ಹಲವರು ನೃತ್ಯ, ಸಂಗೀತ ಚಟುವಟಿಕೆಗಳಿಗೆ ಆದ್ಯತೆ ಕೊಡುತ್ತಾರೆ. ಹೀಗಾಗಿ, ಇದೊಂದು ರೀತಿ ವಿಭಿನ್ನ ವಿಷಯಗಳ ಕಲಿಕೆಯ ಶಾಲೆಯೇ. ಆಡುತ್ತಾ, ಕೇಳುತ್ತಾ ಹಾಗೂ ನೋಡುತ್ತಾ ಕಲಿಯುವ ಜೊತೆಗೆ, ನಾನಾ ಶಾಲೆಗಳ ಮಕ್ಕಳು ಭಾಗವಹಿಸುವುದರಿಂದ ಹೊಸ ಸ್ನೇಹದ ಬೆಸುಗೆಯೂ ಆದೀತು.

ನಾಟಕ, ನೃತ್ಯ, ಗಾಯನ, ಚಿತ್ರಕಲೆ, ಆಟಗಳು, ಕೃತಕ ಗೋಡೆ ಹತ್ತುವುದು, ಕರಾಟ ಮೊದಲಾದ ಸಾಹಸ ಕ್ರೀಡೆಗಳು. ಬೊಂಬೆಗಳ ತಯಾರಿಕೆ, ಮಣ್ಣಿನ ಕಲಾಕೃತಿಗಳ ರಚನೆ, ಕಸೂತಿ, ಪ್ರದರ್ಶನ ಕಲೆಗಳು, ಲಲಿತಕಲೆ, ಸಂಗೀತ, ಮ್ಯಾಜಿಕ್, ಪರಿಸರ ಸಂರಕ್ಷಣೆಯ ಅರಿವು... ಹೀಗೆ ಹಲವು ವಿಷಯಗಳಲ್ಲಿ ಮಕ್ಕಳನ್ನು ತೊಡಗಿಸುವ ಶಿಬಿರಗಳು ನಡೆಯುತ್ತವೆ.

ಮೋಜು- ಮಸ್ತಿಗೆ...

ನೇಸರಗಿ: ಸಮೀಪದ ಕೆ.ಎನ್. ಮಲ್ಲಾಪೂರ ಗ್ರಾಮದ ರೇವಣಸಿದ್ದೇಶ್ವರ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯಲ್ಲಿ 8ರಿಂದ 10ನೇ ತರಗತಿಯವರಿಗೆ ಇಂಗ್ಲಿಷ್ ಗ್ರಾಮರ್, ಗಣಿತ, ವಿಜ್ಞಾನ ವಿಷಯಗಳಿಗೆ ಏ.4ರಿಂದ ಮೇ 20ರವರೆಗೆ ಬೇಸಿಗೆ ತರಬೇತಿ ಶಿಬಿರ ಆಯೋಜಿಸಲಾಗಿದೆ. ಕ್ರೀಡೆ, ಕಂಪ್ಯೂಟರ್, ಮನರಂಜನಾ ಚಟುವಟಿಕೆಗಳೂ ಇರಲಿವೆ. ಸಂಪರ್ಕಕ್ಕೆ ಮೊ.ಸಂಖ್ಯೆ:7026869922.

ಮೇಕಲಮರಡಿಯ ಜ್ಞಾನ ಸಾಗರ ನವೋದಯ ಕೋಚಿಂಗ್ ಸೆಂಟರ್ ನೇಸರಗಿಯಲ್ಲಿ 2ರಿಂದ 5ನೇ ತರಗತಿಯ ವಿದ್ಯಾರ್ಥಿಗಳಿಗೆ ಏ.4ರಿಂದ ಬೇಸಿಗೆ ಶಿಬಿರ ಆಯೋಜಿಸಿದೆ. ಸಂಪರ್ಕಕ್ಕೆ ಸಂತೋಷ ಕಮ್ಮಾರ ಮೊ.ಸಂಖ್ಯೆ:7619294364.

ವಿವಿಧೆಡೆ ವೈವಿಧ್ಯಮಯ ಕಲಿಕೆಗೆ

* ಸವದತ್ತಿಯ ಎಎಸ್‍ಎಸ್ ಯುವರಾಜ ಡ್ಯಾನ್ಸ್ ಅಕಾಡೆಮಿಯ ಶರಣು ದೊಡಮನಿ ನೃತ್ಯ ಶಿಬಿರ ಆಯೋಜಿಸಿದ್ದಾರೆ. ಸಂಪರ್ಕಕ್ಕೆ ಮೊ.ಸಂಖ್ಯೆ: 9342710099.

* ಬೆಳಗಾವಿಯ ಶ್ರೀನಗರ ಜೋಡಿ ರಸ್ತೆಯಲ್ಲಿರುವ ಜಿಲ್ಲಾ ಬಾಲಭವನವು ಉಚಿತ ಬೇಸಿಗೆ ಶಿಬಿರ ನಡೆಸಲಿದೆ. ಚಿತ್ರಕಲೆ, ಜೇಡಿಮಣ್ಣಿನ ಕಲೆ, ಶಾಸ್ತ್ರೀಯ ಸಮೂಹ ನೃತ್ಯ, ಶಾಸ್ತ್ರೀಯ ಸಮೂಹ ಸಂಗೀತ, ಕರಾಟೆ, ಯೋಗ, ಕ್ರೀಡೆ (ಚೆಸ್ ಮತ್ತು ಕೇರಂ), ಆಭರಣ ತಯಾರಿಕೆ ಮೊದಲಾದ ಚಟುವಟಿಕೆ ಇರುತ್ತವೆ. ಪ್ರವಾಸವೂ ಇರುತ್ತದೆ. ಸರ್ಕಾರಿ ಶಾಲೆ ಮಕ್ಕಳು, ಅಂಗವಿಕಲರು ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದ ಮಕ್ಕಳಿಗೆ ಆದ್ಯತೆ. ಸಂಪರ್ಕಕ್ಕೆ ದೂ.ಸಂಖ್ಯೆ: 0831–2407235.

* ಕೆಎಲ್‌ಇ ಸೊಸೈಟಿಯ ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಮಧುಮೇಹ ಕೇಂದ್ರವು ‘ಮಧುಮೇಹ ನ್ಯೂನತೆಯುಳ್ಳ ಮಕ್ಕಳಿಗೆ’ ಉಚಿತವಾಗಿ ಬೇಸಿಗೆ ಶಿಬಿರ ಉದ್ಘಾಟಿಸಿ ಮಾರ್ಗದರ್ಶನ ನೀಡುವುದು ವಿಶೇಷ.

* ನಗರದ ಡಾ.ಸ.ಜ. ನಾಗಲೋಟಿಮಠ ವಿಜ್ಞಾನ ಕೇಂದ್ರವು ರಾಜ್ಯ ವಿಜ್ಞಾನ ಪರಿಷತ್ತು ಸಹಯೋಗದಲ್ಲಿ ಬೇಸಿಗೆ ವಿಜ್ಞಾನ ಶಿಬಿರ ಆಯೋಜಿಸಲಿದೆ. ಅಲ್ಲಿ ಮಕ್ಕಳಿಗೆ ವೈಜ್ಞಾನಿಕ ಮನೋಭಾವ ಬೆಳೆಸುವ ಚಟುವಟಿಕೆಗಳಿರಲಿವೆ.

* ಬೆಳಗಾವಿಯ ಚನ್ನಮ್ಮ ವೃತ್ತ ಸಮೀಪದ ಫ್ರೆಂಡ್ಸ್ ಟ್ಯುಟೋರಿಯಲ್ಸ್‌ ವಿವಿಧ ವಿಷಯಗಳ ತರಬೇತಿಗೆ ಶಿಬಿರ ಹಮ್ಮಿಕೊಂಡಿದೆ. ಸಂಪರ್ಕಕ್ಕೆ ಮೊ.ಸಂಖ್ಯೆ: 9844805058.

* ಮುನವಳ್ಳಿಯ ರೇಣುಕಾ ಪ್ರತಿಷ್ಠಾನದ ಶಾಲೆಯು ಯೋಗ, ಸ್ಪೋಕನ್ ಇಂಗ್ಲಿಷ್, ಕ್ವಿಜ್ ಮೊದಲಾದ ಚಟುವಟಿಕೆ ಒಳಗೊಂಡ ಶಿಬಿರ ಆಯೋಜಿಸಿದೆ. 9108003024.

ಕೆಲ ಟಿಪ್ಸ್

* ಮನೆಗೆ ಸಮೀಪದ ಶಿಬಿರ ಆಯ್ಕೆಯಿಂದ ಹಲವು ಪ್ರಯೋಜನವಿದೆ.

* ಮಕ್ಕಳ ಅಭಿರುಚಿಗೆ ಪೂರಕವಾದ ಶಿಬಿರಗಳಿಗೆ ಸೇರಿಸಿ.

* ಸುರಕ್ಷತೆಗೆ ಕ್ರಮ ವಹಿಸಲಾಗಿದೆಯೇ, ಅಗತ್ಯ ಸಿಬ್ಬಂದಿ ಇದ್ದಾರೆಯೇ ಎಂಬುದನ್ನು ಖಾತ್ರಿಪಡಿಸಿಕೊಕೊಳ್ಳಿ.

* ಮೇಲ್ವಿಚಾರಕರ ಸಂಪರ್ಕ ಸಂಖ್ಯೆಗಳನ್ನು ಇಟ್ಟುಕೊಂಡಿರಿ. ನಿಮ್ಮ ಸಂಪರ್ಕ ಸಂಖ್ಯೆಯನ್ನೂ ಅವರೊಂದಿಗೆ ಹಂಚಿಕೊಂಡಿರಿ. ತುರ್ತು ಸಂದರ್ಭದಲ್ಲಿ ಸಂಪರ್ಕಕ್ಕೆ ಅನುಕೂಲವಾಗುತ್ತದೆ.

ಇಲ್ಲಿ ರಜಾ–ಮಜಾ ಶಿಬಿರ

ಚನ್ನಮ್ಮನ ಕಿತ್ತೂರು: ಇಲ್ಲಿನ ಜಾನಪದ ಸಂಶೋಧನೆ ಕೇಂದ್ರವು ರಂಗಕರ್ಮಿ ಬಸವಲಿಂಗಯ್ಯ ಹಿರೇಮಠ ಅವರ ನೆನಪಲ್ಲಿ ಮಕ್ಕಳಿಗಾಗಿ ಏ.10ರಿಂದ 22ರವರೆಗೆ ಚನ್ನಮ್ಮನ ಕಿತ್ತೂರಿನ ವೀರಭದ್ರೇಶ್ವರ ದೇವಸ್ಥಾನದ ಕಲ್ಯಾಣಮಂಟಪದಲ್ಲಿ ‘ರಜಾ-ಮಜಾ’ ಮಕ್ಕಳ ಬೇಸಿಗೆ ಶಿಬಿರ ಆಯೋಜಿಸಿದೆ. 7ರಿಂದ 15 ವರ್ಷದವರಿಗೆ ಅವಕಾಶ. ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ನಡೆಯಲಿದೆ. ಸಂಪರ್ಕಕ್ಕೆ ಮೊ.ಸಂಖ್ಯೆ: 8762332429.

ಮೂಡಲಗಿಯಲ್ಲಿ ಹಲವು ರೀತಿ

ಮೂಡಲಗಿ: ಇಲ್ಲಿ ವಿವಿಧೆಡೆ ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ವಿವಿಧ ರೀತಿಯ ಶಿಬಿರಗಳನ್ನು ಆಯೋಜಿಸಲಾಗುತ್ತದೆ.

ಆರ್‌ಡಿಎಸ್ ಸಂಸ್ಥೆಯ ಸಿಬಿಎಸ್ ಶಾಲೆಯಲ್ಲಿ ಮಕ್ಕಳಿಗೆ ಮುದ ನೀಡುವಂತ ಹಲವಯ ಚಟುವಟಿಕೆಗಳನ್ನು ಆಯೋಜಿಸಿದ್ದಾರೆ. ಪಠ್ಯದೊಂದಿಗೆ ಯೋಗ, ಕ್ರೀಡೆ, ಮಣ್ಣಿನ ಕಲಾಕೃತಿಗಳ ತಯಾರಿಕೆ, ಕುದುರೆ ಸವಾರಿ ಹೀಗೆ... ಸೃಜನಶೀಲತೆ ಮತ್ತು ಮನೋವಿಕಾಸದ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದಾರೆ.

‘ಈ ಬಾರಿ ಸಂಸ್ಥೆಯಿಂದ ಕುದರೆ ಖರೀದಿಸಿದ್ದು, ಮಕ್ಕಳಿಗೆ ಕುದರೆ ಸವಾರಿಯ ಮೂಲಕ ಸಾಹಸ ಮತ್ತು ಧೈರ್ಯ ತುಂಬುವ ಕೆಲಸವನ್ನು ಶಿಬಿರದಲ್ಲಿ ಮಾಡುತ್ತದ್ದೇವೆ’ ಎಂದು ಸಂಸ್ಥೆಯ ಅಧ್ಯಕ್ಷ ಸಂತೋಷ ಪಾರ್ಶಿ ತಿಳಿಸಿದರು.

ಸರ್ಕಾರಿ ಗಂಡು ಮಕ್ಕಳ ಶಾಲೆಯ ಆವರಣದಲ್ಲಿ ಬೇಸಿಗೆಯಲ್ಲಿ ಮಕ್ಕಳಿಗೆ 12 ದಿನಗಳವರೆಗೆ ಸ್ಕೌಟ್ಸ್ ಮತ್ತು ಗೈಡ್ಸ್ ಶಿಬಿರ ಏರ್ಪಡಿಸಿದ್ದಾರೆ.

‘ಶಿಸ್ತು ಮತ್ತು ರಾಷ್ಟ್ರೀಯತೆ ಬೆಳೆಸುವ ಸ್ಕೌಟ್ಸ್ ಮತ್ತು ಗೈಡ್ಸ್ ಬಗ್ಗೆ ಮಕ್ಕಳಿಗೆ ತಿಳಿವಳಿಕೆ ನೀಡುವುದು, ಮಕ್ಕಳ ಮನೋವಿಕಾಸ ಕಾರ್ಯಕ್ರಮಗಳನ್ನು ಶಿಬಿರದಲ್ಲಿ ನಡೆಸಲಾಗುವುದು‘ ಎಂದು ಬಿಇಒ ಅಜಿತ್ ಮನ್ನಿಕೇರಿ ತಿಳಿಸಿದರು.

ಚೈತನ್ಯ ವಸತಿ ಆಶ್ರಮ ಶಾಲೆಯಲ್ಲೂ ಬೇಸಿಗೆ ರಜೆಯಲ್ಲಿ ಪಠ್ಯದೊಂದಿಗೆ ಮಕ್ಕಳಿಗೆ ಮನರಂಜನೆ ನೀಡುವಂತಹ ಚಟುವಟಿಕೆಗಳನ್ನು ನಡೆಸಲಾಗುವುದು.

ವಿವಿಧ ಚಟುವಟಿಕೆ

ನಮ್ಮ ಶಿಬಿರದಲ್ಲಿ ನಾಟಕ, ನೃತ್ಯ,ಸಂಗೀತ, ಚಿತ್ರಕಲೆ, ಮುಖವಾಡ ರಚನೆ, ಹಾಡು, ಭಾಷಣ, ದೇಸಿಆಟ, ಕ್ಲೇ ಮಾಡೆಲಿಂಗ್ ಮೊದಲಾದವುಗಳಲ್ಲಿ ಮಕ್ಕಳನ್ನು ತೊಡಗಿಸಲಾಗುವುದು.

– ವಿಶ್ವೇಶ್ವರಿ ಹಿರೇಮಠ, ಎಂದು ರಂಗ ನಿರ್ದೇಶಕಿ, ಚನ್ನಮ್ಮನ ಕಿತ್ತೂರು

ಸ್ಕೌಟ್ಸ್ ಶಿಬಿರ

ಕೋವಿಡ್‌ನಿಂದಾಗಿ 2 ವರ್ಷ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಈ ಬೇಸಿಗೆ ರಜೆಯಲ್ಲಿ ವಲಯ ವ್ಯಾಪ್ತಿಯ ಮಕ್ಕಳಿಗೆ ಸ್ಕೌಟ್ಸ್‌ ಮತ್ತು ಗೈಡ್ಸ್ ಶಿಬಿರ ಏರ್ಪಡಿಸಲಾಗಿದೆ.

– ಅಜಿತ ಮನ್ನಿಕೇರಿ, ಬಿಇಒ, ಮೂಡಲಗಿ

(ಪ್ರಜಾವಾಣಿ ತಂಡ: ಪ್ರದೀಪ ಮೇಲಿನಮನಿ, ಬಸವರಾಜ ಶಿರಸಂಗಿ, ಬಾಲಶೇಖರ ಬಂದಿ, ಬಸವರಾಜ ಶಿರಸಂಗಿ, ಚ.ಯ. ಮೆಣಶಿನಕಾಯಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT