ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಕಾರಿಗೂ ತಟ್ಟಿದ ‘ಕೊರೊನಾ ವೈರಸ್’ ಭೀತಿ; ಹಿಂದೆ ಸರಿದ ಗ್ರಾಹಕ

ಘಟಪ್ರಭಾ ಮಾರುಕಟ್ಟೆ: ರೈತರಿಗೆ ನಷ್ಟ
Last Updated 16 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಘಟಪ್ರಭಾ (ಬೆಳಗಾವಿ): ಕೊರೊನಾ ವೈರಾಣು ಸೋಂಕಿನ ಭೀತಿ ಇಲ್ಲಿನ ಪ್ರಸಿದ್ಧ ತರಕಾರಿ ಮಾರುಕಟ್ಟೆಗೂ ಆವರಿಸಿದ ಪರಿಣಾಮ ‌‌ತರಕಾರಿಗಳ ಬೆಲೆ ಕುಸಿದಿದ್ದು, ರೈತರು ನಷ್ಟ ಅನುಭವಿಸುವಂತಾಗಿದೆ.

ಲಕ್ಷಾಂತರ ರೂಪಾಯಿ ವಹಿವಾಟು ನಡೆಯುತ್ತಿದ್ದ ಇಲ್ಲಿನ ಮಾರುಕಟ್ಟೆಯಲ್ಲಿ ಈಗ ತರಕಾರಿ ಇದ್ದರೂ ವ್ಯಾಪಾರ ಇಲ್ಲದಂತಾಗಿದೆ. ‘ಎಷ್ಟಾದರೂ ಕೊಟ್ಟು ಖರೀದಿಸಿರಿ’ ಎಂದು ಬೆಳೆದವರು ವ್ಯಾಪಾರಿಗಳ ಮೇಲೆ ದುಂಬಾಲು ಬೀಳುವಂತಹ ಸ್ಥಿತಿ ಬಂದೊದಗಿದೆ. ಹಿಂದಿನ ವರ್ಷಗಳಲ್ಲಿ ಬೇಸಿಗೆ ಆರಂಭವಾಯಿತೆಂದರೆ ತರಕಾರಿಗಳಿಗೆ ಬೇಡಿಕೆ ಹೆಚ್ಚಾಗಿ ರೈತರು ಅಲ್ಪಸ್ವಲ್ಪ ಲಾಭ ಕಂಡುಕೊಳ್ಳುತ್ತಿದ್ದರು. ಆದರೆ, ಈ ಬಾರಿ ಕೈಗೆ ಬಂತ ತುತ್ತು ಬಾಯಿಗೆ ಬಾರದಂತಾಗಿದೆ.

ಕೆಲವು ತಿಂಗಳ ಹಿಂದೆ ಅತಿವೃಷ್ಟಿಯಿಂದಾಗಿ ಈರುಳ್ಳಿ ಬೆಲೆ ಗಗನಕ್ಕೇರಿ ಇತಿಹಾಸ ಸೃಷ್ಟಿಸಿತ್ತು. ಆದರೆ, ಈಗ ಅದರ ಬೆಲೆ ಕೆ.ಜಿ.ಗೆ ₹ 25ರಿಂದ ₹30ಕ್ಕೆ ಇಳಿದಿದೆ. ಈರುಳ್ಳಿ ₹ 25, ಟೊಮೆಟೊ ₹ 10, ಬೆಳ್ಳುಳ್ಳಿ ₹ 30, ಸೌತೆಕಾಯಿ ₹ 20, ಕ್ಯಾರೆಟ್‌ ₹ 30, ಹೀರೇಕಾಯಿ ₹ 20, ಹಸಿರುಮಣಸಿನಕಾಯಿ ₹ 25, ಎಲೆಕೋಸು ₹ 20 ಇದೆ. ಕೊತ್ತಂಬರಿ, ಪುದಿನಾ, ಮೆಂತ್ಯೆ, ರಾಜಗಿರಿ, ಸಬ್ಬಸಿಗೆ, ಪಾಲಕ್, ರಾಜಗಿರಿ, ಪುಂಡಿ, ಈರುಳ್ಳಿ ಮೊದಲಾದ ಸೊಪ್ಪುಗಳ ಬೆಲೆಯೂ ₹ 10 (ಮೂರು ಸಣ್ಣ ಕಂತೆಗಳಿಗೆ) ಇದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಬಹಳ ಬೆಲೆ ಕುಸಿದಿದೆ ಎಂದು ರೈತರು ತಿಳಿಸಿದರು.

ಘಟಪ್ರಭಾ ನದಿ ಎಡದಂಡೆ ಕಾಲುವೆಯಿಂದಾಗಿ, ಇಲ್ಲಿನ ಬಹುತೇಕ ಗ್ರಾಮಗಳಲ್ಲಿ ರೈತರು ಉತ್ತಮ ತರಕಾರಿ ಮೊದಲಿನಿಂದಲೂ ಬೆಳೆಯುತ್ತಾ ಬಂದಿದ್ದಾರೆ. ಹಣ್ಣುಗಳ ಬೆಲೆ ಕುಸಿತದಿಂದಾಗಿಯೂ ಬೆಳೆಗಾರರು ಕಂಗಾಲಾಗಿದ್ದಾರೆ. ಕಲ್ಲಂಗಡಿ, ಬಾಳೆಹಣ್ಣು, ಆನಾನಸ್, ದ್ರಾಕ್ಷಿ, ಸೀಬೆ, ಸೇಬು, ದಾಳಿಂಬೆ ಮೊದಲಾದ ಹಣ್ಣುಗಳ ಬೆಲೆಯೂ ಕುಸಿದಿದೆ. ಪಟ್ಟಣದ ಮಾರುಕಟ್ಟೆಯಲ್ಲೀಗ ಅಧಿಕ ಪ್ರಮಾಣದಲ್ಲಿ ತರಕಾರಿ ಸಂಗ್ರಹವಾಗಿದೆ. ಆದರೆ, ವ್ಯಾಪಾರಸ್ಥರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ, ಕೆಲವು ರೈತರು ತಾವಾಗಿಯೇ ಸುತ್ತಲಿನ ಊರುಗಳಿಗೆ ತೆರಳಿ ಅಲ್ಲಲ್ಲಿ ತರಕಾರಿಗಳನ್ನಿಟ್ಟುಕೊಂಡು ಮಾರುವುದು ಕಂಡುಬರುತ್ತಿದೆ. ಸಂಪೂರ್ಣವಾಗಿ ನಷ್ಟ ಅನುಭವಿಸುವುದಕ್ಕಿಂತ ಸಿಕ್ಕಷ್ಟು ಸಿಗಲಿ ಎನ್ನುವುದು ಅವರ ಉದ್ದೇಶವಾಗಿದೆ.

ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಅರಭಾವಿ, ಶಿಂದಿಕುರಬೇಟ ಗ್ರಾಮಗಳಲ್ಲಿ ನೂರಾರು ನರ್ಸರಿಗಳಲ್ಲೂ ಹಣ್ಣು, ತರಕಾರಿಗಳ ಸಸಿಗಳ ಖರೀದಿಯಲ್ಲೂ ಕುಸಿತ ಕಂಡುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT