ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾನಾಪುರ: ಪರಿಸರಪ್ರಿಯರ ಚಾರಣಕ್ಕೆ ಸಕಾಲ

ಖಾನಾಪುರ ಅರಣ್ಯದ ಚಾರಣ; ಮುದ ನೀಡುವ ತಾಣಗಳು
Last Updated 17 ಜುಲೈ 2022, 8:17 IST
ಅಕ್ಷರ ಗಾತ್ರ

ಖಾನಾಪುರ: ಪಶ್ಚಿಮ ಘಟ್ಟದ ಅರಣ್ಯಪ್ರದೇಶದಲ್ಲಿ ಸದ್ಯ ಸುರಿಯುತ್ತಿರುವ ಮಳೆಯಿಂದಾಗಿ ಖಾನಾಪುರ ತಾಲ್ಲೂಕಿನ ಅರಣ್ಯದಲ್ಲಿ ಚಾರಣ ಕೈಗೊಳ್ಳಲು ಪರಿಸರಪ್ರಿಯರಮುಂದಾಗಿದ್ದಾರೆ.

ತಾಲ್ಲೂಕಿನ ಕಣಕುಂಬಿ, ಚಿಗುಳೆ, ಮಾನ, ಸಡಾ, ಚಿಕಲೆ, ಅಮಟೆ, ಪಾರವಾಡ ಮತ್ತು ಸುತ್ತಲಿನ ಕಾಡಿನಲ್ಲಿ ಆಗಾಗ ಬೀಸುವ ಜೋರಾದ ತಣ್ಣನೆಯ ಗಾಳಿ, ಕೆಲವೊಮ್ಮೆ ಸಣ್ಣ, ಕೆಲವೊಮ್ಮೆ ದಪ್ಪ ಹನಿಗಳಿಂದ ಉದುರುವ ಮಳೆ, ಕಣ್ಣು ಹಾಯಿಸಿದಲ್ಲೆಲ್ಲ ಗೋಚರಿಸುವ ಹಚ್ಚ ಹಸಿರಿನ ಬೆಟ್ಟಗಳು, ಈಗ ತಾನೆ ಚಿಗುರೊಡೆಯುತ್ತಿರುವ ಹುಲ್ಲು, ಭೂದೇವಿಗೆ ಹಸಿರು ಬಣ್ಣದ ಸೀರೆಯನ್ನು ಉಡಿಸಿದಂತೆ ಕಾಣುವ ಹಚ್ಚ ಹಸಿರಿನ ಹೊಲಗದ್ದೆಗಳು ಮತ್ತು ಧುಮ್ಮಿಕ್ಕುತ್ತಿರುವ ಜಲಪಾತಗಳು ಚಾರಣಿಗರಿಗೆ ಮುದ ನೀಡುವ ತಾಣಗಳಾಗಿ ಮಾರ್ಪಟ್ಟಿವೆ.

ಗೋವಾ ರಾಜಧಾನಿ ಪಣಜಿಯಿಂದ ಅನಮೋಡ ಹಾಗೂ ಚೋರ್ಲಾ ಮತ್ತು ಮಹಾರಾಷ್ಟ್ರದ ಸಾವಂತವಾಡಿಯಿಂದ ಅಂಬೋಲಿ ಮಾರ್ಗವಾಗಿ ದಟ್ಟ ಅರಣ್ಯ ಮತ್ತು ಎತ್ತರದ ಬೆಟ್ಟಗಳನ್ನು ಸೀಳಿಕೊಂಡು ಬೆಳಗಾವಿಯತ್ತ ಸಾಗುವ ಹೆದ್ದಾರಿಯ ಇಕ್ಕೆಲಗಳಲ್ಲಿ ಕಾಣುವ ನಿಸರ್ಗದತ್ತ ಸೌಂದರ್ಯ ನೋಡುಗರ ಕಣ್ಣಿಗೆ ಅಕ್ಷರಶಃ ಹಬ್ಬವಾದಂತಾಗಿದೆ.

ವರ್ಷದ ಕೆಲವೇ ತಿಂಗಳುಗಳ ಕಾಲ ಕಾಣಸಿಗುವ ಈ ನಿಸರ್ಗದತ್ತ ಹಾಗೂ ನಯನಮನೋಹರ ದೃಶ್ಯಗಳನ್ನು ತಮ್ಮ ಕಣ್ಣುಗಳಲ್ಲಿ ತುಂಬಿಕೊಳ್ಳಲು ಚಾರಣಿಗರು ಕಾನನದ ಮೂಲಕ ಹಾದುಹೋಗುವ ರಸ್ತೆಗಳತ್ತ ದಾಪುಗಾಲು ಹಾಕುತ್ತಿದ್ದಾರೆ. ಒಟ್ಟಾರೆ ಕಳೆದ ಎರಡು ವರ್ಷಗಳ ಕಾಲ ಕೋವಿಡ್ ಕಾರಣದಿಂದ ಮಳೆಗಾಲದಲ್ಲೂ ಮನೆಯಲ್ಲಿದ್ದ ಪರಿಸರಪ್ರಿಯ ಪ್ರವಾಸಿಗರು ಈಗ ಸೃಷ್ಟಿಯ ವಿಸ್ಮಯವನ್ನು ಅನುಭವಿಸಲು ಸಜ್ಜಾಗಿದ್ದಾರೆ. ತಮ್ಮನ್ನು ಕೈಬೀಸಿ ಕರೆಯುವ ಪಶ್ಚಿಮ ಘಟ್ಟದ ತಣ್ಣನೆಯ ವಾತಾವರಣಕ್ಕೆ ತೆರಳಿ ತಮ್ಮ ದಣಿದ ಮೈಮನಗಳಿಗೆ ಮುದ ಪಡೆಯಲು ಚಾರಣಿಗರು ಮುಗಿಬಿದ್ದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT