ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Asian Games | ಯಶಸ್ವಿ ಜೈಸ್ವಾಲ್ ಶತಕ; ನೇಪಾಳ ಎದುರು ಗೆದ್ದ ಭಾರತ ಸೆಮಿಫೈನಲ್‌ಗೆ

Published : 3 ಅಕ್ಟೋಬರ್ 2023, 4:35 IST
Last Updated : 3 ಅಕ್ಟೋಬರ್ 2023, 4:35 IST
ಫಾಲೋ ಮಾಡಿ
Comments

ಹಾಂಗ್‌ಝೌ: ಆರಂಭಿಕ ಬ್ಯಾಟರ್‌ ಯಶಸ್ವಿ ಜೈಸ್ವಾಲ್‌ ಸಿಡಿಸಿದ ಅಮೋಘ ಶತಕದ ಬಲದಿಂದ ಭಾರತ ತಂಡವು ಏಷ್ಯನ್ ಕ್ರೀಡಾಕೂಟದ ಟಿ20 ಕ್ರಿಕೆಟ್‌ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ನೇಪಾಳ ವಿರುದ್ಧ ಗೆಲುವು ಸಾಧಿಸಿದೆ.

ಹಾಂಗ್‌ಝೌ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 202ರನ್‌ ಕಲೆಹಾಕಿತು. ಈ ಗುರಿ ಬೆನ್ನತ್ತಿದ ನೇಪಾಳ ಉತ್ತಮ ಪೈಪೋಟಿ ನೀಡಿತಾದರೂ, ಜಯ ಸಾಧಿಸಲು ವಿಫಲವಾಯಿತು. ಉತ್ತಮ ಜೊತೆಯಾಟಗಳು ಮೂಡಿಬರದೇ ಇದ್ದದ್ದು, ಮುಳುವಾಯಿತು.

ಅರ್ಹತಾ ಗುಂಪಿನ ಪಂದ್ಯದಲ್ಲಿ ಮಂಗೋಲಿಯಾ ಎದುರು ಹಲವು ವಿಶ್ವದಾಖಲೆಗಳನ್ನು ನಿರ್ಮಿಸಿದ್ದ ನೇಪಾಳ ಬ್ಯಾಟರ್‌ಗಳನ್ನು ಭಾರತದ ಬೌಲರ್‌ಗಳು ನಿಯಂತ್ರಿಸಿದರು. ಹೀಗಾಗಿ ನೇಪಾಳ 20 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 179 ರನ್‌ ಗಳಿಸಲಷ್ಟೇ ಸಾಧ್ಯವಾಯಿತು.

ಕುಶಾಲ್‌ ಭುರ್ತೆಲ್‌ (28), ಕುಶಾಲ್‌ ಮಲ್ಲ (29), ದೀಪೇಂದ್ರ ಸಿಂಗ್‌ ಐರೀ (32) ಮತ್ತು ಸಂದೀಪ್‌ ಜೊರಾ (29) ಅಲ್ಪ ಪ್ರತಿರೋಧ ತೋರಿದರು. ಆದರೆ, ಉಳಿದವರಿಂದ ಉತ್ತಮ ಸಹಕಾರ ಸಿಗಲಿಲ್ಲ. ಹೀಗಾಗಿ 23 ರನ್ ಅಂತರದಿಂದ ಸೋಲೊಪ್ಪಿಕೊಂಡಿತು.

ಭಾರತ ಪರ ರವಿ ಬಿಷ್ಣೋಯಿ ಹಾಗೂ ಆವೇಶ್‌ ಖಾನ್ ಮೂರು ವಿಕೆಟ್‌ ಕಿತ್ತರೆ, ಅರ್ಶದೀಪ್ ಸಿಂಗ್ ಎರಡು ವಿಕೆಟ್‌ ಉರುಳಿಸಿದರು. ಇನ್ನೊಂದು ವಿಕೆಟ್‌ ಸಾಯಿ ಕಿಶೋರ್ ಪಾಲಾಯಿತು.

ಈ ಜಯದೊಂದಿಗೆ ಭಾರತ ತಂಡ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು.

ಜೈಸ್ವಾಲ್‌ ಅಮೋಘ ಶತಕ

ಇನಿಂಗ್ಸ್‌ ಆರಂಭಿಸಿದ ನಾಯಕ ಋತುರಾಜ್‌ ಗಾಯಕ್ವಾಡ್‌ ಹಾಗೂ ಯಶಸ್ವಿ ಜೈಸ್ವಾಲ್‌ ಭಾರತಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು. ಈ ಜೋಡಿ ಮೊದಲ ವಿಕೆಟ್‌ಗೆ ಕೇವಲ 9.5 ಓವರ್‌ಗಳಲ್ಲೇ 103 ರನ್ ಕಲೆಹಾಕಿತು.

ತಂಡದ ಮೊತ್ತ ನೂರರ ಗಡಿ ದಾಟುತ್ತಿದ್ದಂತೆ ಋತುರಾಜ್‌ (25) ಔಟಾದರು. ನಂತರವೂ ಬಿರುಸಿನ ಬ್ಯಾಟಿಂಗ್‌ ನಡೆಸಿದ ಜೈಸ್ವಾಲ್‌, ಏಷ್ಯನ್ ಗೇಮ್ಸ್‌ನ ಚೊಚ್ಚಲ ಪಂದ್ಯದಲ್ಲಿ ಶತಕದ ಸಂಭ್ರಮ ಆಚರಿಸಿದರು.

ನೇಪಾಳ ಬೌಲರ್‌ಗಳೆದುರು ಲೀಲಾಜಾಲವಾಗಿ ಬ್ಯಾಟ್‌ ಬೀಸಿದ ಅವರು ಕೇವಲ 49 ಎಸೆತಗಳಲ್ಲಿ 100 ರನ್ ಗಳಿಸಿದರು. ಅವರ ಬ್ಯಾಟ್‌ನಿಂದ 8 ಬೌಂಡರಿ ಹಾಗೂ 7 ಸಿಕ್ಸರ್‌ ಸಿಡಿದವು.

ಭರವಸೆಯ ಬ್ಯಾಟರ್‌ ತಿಲಕ್‌ ವರ್ಮಾ (2) ಹಾಗೂ ಜಿತೇಶ್‌ ವರ್ಮಾ (5) ವೈಫಲ್ಯ ಅನುಭವಿಸಿದರು. ಕೊನೆಯಲ್ಲಿ ಅಜೇಯ ಆಟವಾಡಿದ ಶಿವಂ ದುಬೆ (25) ಹಾಗೂ ರಿಂಕು ಸಿಂಗ್‌ (37) ರಂಜಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT