ಗುರುವಾರ , ಸೆಪ್ಟೆಂಬರ್ 16, 2021
29 °C
ಪ್ರತಿ ವರ್ಷ ನೂರಾರು ಟಿಎಂಸಿ ನೀರು ಹರಿದು ಹೋಗುತ್ತಿದ್ದರೂ ನೀರಾವರಿ ಯೋಜನೆಗಳಿಲ್ಲ

Pv Web Exclusive: ಒಡಲಲ್ಲಿ ಜಲಾಶಯವಿದ್ದರೂ ನೀರಿಗೆ ಬರವಿಲ್ಲಿ!

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ಪ್ರತಿ ವರ್ಷ ತುಂಗಭದ್ರಾ ಜಲಾಶಯದಿಂದ ಅಪಾರ ನೀರು ನದಿಯಲ್ಲಿ ಹರಿದು ಹೋಗುತ್ತದೆ. ಆದರೆ, ಈಗಲೂ ಮಳೆಯಾಶ್ರಿತ ಪ್ರದೇಶದವರು ನೀರಿನ ನಿರೀಕ್ಷೆಯಲ್ಲಿ ಕಾಲ ಕಳೆಯುತ್ತಿದ್ದಾರೆ.

ಒಂದು ಅಂದಾಜಿನ ಪ್ರಕಾರ, ಜಲಾಶಯ ಸಂಪೂರ್ಣ ಭರ್ತಿಯಾದಾಗಲೆಲ್ಲ ಸರಾಸರಿ 150 ಟಿಎಂಸಿ ಅಡಿ ನೀರು ನದಿಗೆ ಹರಿಸುತ್ತ ಬರಲಾಗಿದೆ. ಈ ವರ್ಷ ಮಳೆಗಾಲ ಮುಗಿಯಲು ಇನ್ನೂ ಎರಡು ತಿಂಗಳು ಬಾಕಿ ಇದೆ. ಅಷ್ಟರಲ್ಲಾಗಲೇ ಜಲಾಶಯದಿಂದ ನದಿಗೆ ಸುಮಾರು 75 ಟಿಎಂಸಿ ಅಡಿ ನೀರು ಹರಿಸಲಾಗಿದೆ.

ನದಿನ ನೀರಿನ ಸದ್ಬಳಕೆಯ ವಿಚಾರದಲ್ಲಿ ಆಂಧ್ರ ಪ್ರದೇಶದವರು ಬಹಳ ಮುಂದೆ ಇದ್ದಾರೆ. ಕಾಲುವೆ ಹಾಗೂ ನದಿ ಮೂಲಕ ಹರಿಸುವ ನೀರನ್ನು ಕೆರೆ, ಕಟ್ಟೆ ತುಂಬಿಸುತ್ತಾರೆ. ಹೀಗಾಗಿ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಹೆಚ್ಚಿನ ಸಮಸ್ಯೆ ಉದ್ಭವಿಸುವುದಿಲ್ಲ. ಅಂತರ್ಜಲ ಮಟ್ಟವೂ ಸಾಕಷ್ಟು ವೃದ್ಧಿಯಾಗಿದೆ.

ಆದರೆ, ಅವಳಿ ಜಿಲ್ಲೆಗಳಾದ ಬಳ್ಳಾರಿ–ವಿಜಯನಗರ ಈ ವಿಚಾರದಲ್ಲಿ ಬಹಳ ಹಿಂದುಳಿದಿವೆ. ಹೊಸಪೇಟೆ ತಾಲ್ಲೂಕು ಒಂದರಲ್ಲೇ 22 ಕೆರೆಗಳಿವೆ. ಈ ಪೈಕಿ ನಾಲ್ಕು ಕೆರೆಗಳು ಕಾಲುವೆ ನೀರಿನ ಮೂಲಕ ತುಂಬುತ್ತವೆ. ಉಳಿದವು ಮಳೆ ಬಿದ್ದರಷ್ಟೇ ಜೀವ ಪಡೆದುಕೊಳ್ಳುತ್ತವೆ. ಎರಡೂ ಜಿಲ್ಲೆಗಳ ಬಹುತೇಕ ತಾಲ್ಲೂಕುಗಳ ಕೆರೆ, ಕಟ್ಟೆಗಳು ಮಳೆಯನ್ನೇ ಆಶ್ರಯಿಸಿವೆ. ಮಳೆ ಆಗದಿದ್ದರೆ ಕೆರೆಗಳು ಬರಡಾಗುತ್ತವೆ.

ಬೇಸಿಗೆಯಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರು ಸಿಗದೇ ಪರದಾಟ ನಡೆಸಬೇಕಾಗುತ್ತದೆ.
ಎರಡೂ ಜಿಲ್ಲೆಯ ದೂರದ ಪ್ರದೇಶಗಳ ಕೆರೆ, ಕಟ್ಟೆ ತುಂಬಿಸುವ ವಿಚಾರ ದೂರದ ಮಾತು.

ಜಲಾಶಯದಿಂದ ಸುತ್ತಮುತ್ತಲಿರುವ ಕೆರೆಗಳನ್ನೇ ತುಂಬಿಸಲು ಸಾಧ್ಯವಾಗಿಲ್ಲ. ವಿಜಯನಗರ ಜಿಲ್ಲೆಯಲ್ಲಿ ಶೇ 60ಕ್ಕಿಂತ ಹೆಚ್ಚು ಪ್ರದೇಶ ಮಳೆಯನ್ನೇ ಅವಲಂಬಿಸಿದೆ. ಯಾವುದೇ ಜಲಮೂಲಗಳು ಇಲ್ಲದ ಕಾರಣ ಆ ಪ್ರದೇಶದ ರೈತರ ಸ್ಥಿತಿ ಇನ್ನೂ ಉತ್ತಮಗೊಂಡಿಲ್ಲ. ಇದಕ್ಕೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯೇ ಪ್ರಮುಖ ಕಾರಣ ಎನ್ನುತ್ತಾರೆ ರೈತರು.

‘ಜಿಲ್ಲೆಯ ಜನಪ್ರತಿನಿಧಿಗಳಿಗೆ ಕೆರೆ, ಕಟ್ಟೆಗಳನ್ನು ತುಂಬಿಸುವ ವಿಷಯದಲ್ಲಿ ರಾಜಕೀಯ ಇಚ್ಛಾಶಕ್ತಿಯಿಲ್ಲ. ಸಮಯ ಬಂದಾಗ ತುಂಗಭದ್ರಾ ಹೆಸರಿನಲ್ಲಿ ರಾಜಕೀಯ ಬೆಳೆ ಬೇಯಿಸಿಕೊಳ್ಳುತ್ತಾರೆ. ನೀರು ತುಂಬಿಸುವ ಯೋಜನೆ ಬಗ್ಗೆ ಅನೇಕ ಸಲ ಹೇಳಿದರೂ ಯಾವ ಪಕ್ಷದವರೂ ತಲೆಗೆ ಹಾಕಿಕೊಂಡಿಲ್ಲ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ ಜೆ. ಕಾರ್ತಿಕ್‌ ಹೇಳಿದರು.

-----

ವರ್ಷ ನದಿಗೆ ಹರಿಸಿದ ನೀರು (ಟಿಎಂಸಿ ಅಡಿಗಳಲ್ಲಿ)
2018 260
2019 180
2020 142
2021 75 (ಆ.10ರ ವರೆಗೆ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು