ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಗಣತಿಗೆ ಸಿದ್ಧತೆ ಆರಂಭಿಸಿದ ಬಿಬಿಎಂಪಿ

19 ಸಾವಿರ ಸಿಬ್ಬಂದಿ * 3,265 ಮಂದಿ ಮೇಲ್ವಿಚಾರಕರು
Last Updated 27 ಡಿಸೆಂಬರ್ 2019, 4:57 IST
ಅಕ್ಷರ ಗಾತ್ರ

ಬೆಂಗಳೂರು: ‘2020–21ರ ಜನಗಣತಿಗೆ ಬಿಬಿಎಂಪಿ ಪೂರ್ವ ತಯಾರಿ ನಡೆಸಿದೆ. ಜನಗಣತಿ ಮತ್ತು ಮನೆಗಣತಿ ಕಾರ್ಯಕ್ಕೆ 19,289 ಗಣತಿ ಸಿಬ್ಬಂದಿ ಅಗತ್ಯವಿದೆ’ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್‌ಕುಮಾರ್ ತಿಳಿಸಿದರು.

ಈ ಸಂಬಂಧ ಬಿಬಿಎಂಪಿ ಕಚೇರಿಯಲ್ಲಿ ಗುರುವಾರ ಜನಗಣತಿ ನಿರ್ದೇಶನಾಲಯದ ಅಧಿಕಾರಿಗಳ ಜತೆಆಯುಕ್ತರು ಸಭೆ ನಡೆಸಿದರು.

ಜನಗಣತಿ ಕಾರ್ಯಾಚರಣೆ ನಿರ್ದೇಶಕ ಎಸ್.ಬಿ. ವಿಜಯಕುಮಾರ್ ಜತೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಆಯುಕ್ತರು, ‘ಗಣತಿ ಕಾರ್ಯಕ್ಕೆ ಸರ್ಕಾರಿ ಶಾಲೆಯ ಶಿಕ್ಷಕರನ್ನೇ ಬಹುತೇಕ ನಿಯೋಜಿಸಲಾಗುತ್ತದೆ. ಇದರೊಂದಿಗೆ 3,265 ಮಂದಿ ಮೇಲ್ವಿಚಾರಕರ ಅಗತ್ಯವೂ ಇದೆ. ಸರ್ಕಾರದ ಕೆಲಸ ಆಗಿರುವ ಕಾರಣ ನೌಕರರು ವಹಿಸಿದ ಜವಾಬ್ದಾರಿಯನ್ನು ನಿರ್ವಹಿಸಲೇ ಬೇಕಾಗುತ್ತದೆ’ ಎಂದು ತಿಳಿಸಿದರು.

‘2020ರಲ್ಲಿ ನಡೆಯಲಿರುವ ಮನೆಗಣತಿ ಜತೆಯಲ್ಲೇ ಎನ್‌ಪಿಆರ್‌ಗೆ ಸಂಬಂಧಿಸಿದ ಮಾಹಿತಿ ಸಂಗ್ರಹವಾಗಲಿದೆ. ನಂತರ 2021ರಲ್ಲಿ ಜನಗಣತಿ ನಡೆಯಲಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ವ್ಯಕ್ತಿಯ ಹೆಸರು, ಲಿಂಗ, ಜನ್ಮದಿನಾಂಕ, ವಯಸ್ಸು, ವೈವಾಹಿಕ ಮಾಹಿತಿ, ಮಕ್ಕಳು, ಧರ್ಮ, ಜಾತಿ, ಮಾತೃಭಾಷೆ, ತಿಳಿದಿರುವ ಇತರೆ ಭಾಷೆ, ವಿದ್ಯಾರ್ಹತೆ, ಪರಿಣಿತ ವಿಷಯ, ಉದ್ಯೋಗ, ವಲಸೆ ಬಂದಿದ್ದರೆ ಅದಕ್ಕೆ ಕಾರಣಗಳನ್ನು ಜನಗಣತಿ ಸಿಬ್ಬಂದಿ ಪ‍ಡೆಯುತ್ತಾರೆ’ ಎಂದು ವಿವರಿಸಿದರು.

ಮಾಹಿತಿ ಸಂಗ್ರಹಕ್ಕೆ ಆ್ಯಪ್
‘ಜನಗಣತಿಗಾಗಿ ‌ಮೊಬೈಲ್ ಆ್ಯಪ್ ಬಿಡುಗಡೆ ಮಾಡಲಾಗಿದ್ದು, ಕಾಗದದಲ್ಲಿ ಬರೆದುಕೊಳ್ಳುವ ಜತೆಗೆ ಮೊಬೈಲ್ ಆ್ಯಪ್‌ಗೂ ಅಪ್‌ಲೋಡ್ ಮಾಡಲಾಗುತ್ತದೆ. ಈ ಆ್ಯಪ್‌ನಲ್ಲಿ ಸಾರ್ವಜನಿಕರು ಸಹ ತಮ್ಮ ಮಾಹಿತಿಯನ್ನು ಸ್ವಯಂ ಅಪ್‌ಲೋಡ್ ಮಾಡಬಹುದು’ ಎಂದು ಎಸ್.ಬಿ. ವಿಜಯಕುಮಾರ್ ತಿಳಿಸಿದರು.

2011ರ ಜನಗಣತಿಗೆ ಹೋಲಿಸಿದರೆ ಈ ಬಾರಿ ಮಾಹಿತಿ ಸಂಗ್ರಹ ವ್ಯವಸ್ಥೆ ಸುಲಭಗೊಳಿಸಲಾಗಿದೆ. ಆಗ 34 ಪ್ರಶ್ನೆಗಳಿಗೆ ಉತ್ತರಿಸಬೇಕಿತ್ತು. ಈ ಬಾರಿ ಪ್ರಶ್ನೆಗಳೂ ಕಡಿಮೆ ಇದ್ದು, ಉತ್ತರಿಸುವ ವಿಧಾನವೂ ಬದಲಾಗಿದೆ ಎಂದರು.

ಸೆಪ್ಟೆಂಬರ್‌ನಲ್ಲಿ ಪೂರ್ವಭಾವಿ ಗಣತಿ ಪರೀಕ್ಷೆಯನ್ನು 147 ಬ್ಲಾಕ್‌ಗಳಲ್ಲಿ ‌ನಡೆಸಲಾಗಿದೆ. ಕಳೆದ ಬಾರಿಗೆ ಹೋಲಿಸಿದರೆ ಒಂದು ಮನೆಯ ಗಣತಿ ಕಾರ್ಯದಲ್ಲಿ ಶೇಕಡ 40ರಷ್ಟು ಸಮಯ ಉಳಿತಾಯವಾಗಿದೆ ಎಂದರು.

ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರ ಹಂತದಲ್ಲಿ ಉನ್ನತ ಮಟ್ಟದ ಸಭೆಗಳು ನಡೆದಿವೆ. ಕೆಲವು ಜಿಲ್ಲೆಗಳಲ್ಲೂ ಅಧಿಕಾರಿಗಳ ಸಭೆ ನಡೆಸಲಾಗಿದೆ. ಎಲ್ಲಾ ಜಿಲ್ಲೆಗಳಿಗೂ ಭೇಟಿ ನೀಡಿ ಜನಗಣತಿ ಮತ್ತು ಎನ್‌ಪಿಆರ್‌ಗೆ ಹೇಗೆ ಮಾಹಿತಿ ಸಂಗ್ರಹಿಸಬೇಕು ಎಂಬುದನ್ನು ತಿಳಿಸಲಾಗುವುದು ಎಂದರು.

ರಾಜ್ಯದಲ್ಲೂ ಎನ್‌ಪಿಆರ್‌
ಬೆಂಗಳೂರು:
ವಿರೋಧ ಪಕ್ಷಗಳು ಹಾಗೂ ಪ್ರಜಾತಂತ್ರವಾದಿಗಳ ಪ್ರತಿರೋಧದ ಮಧ್ಯೆಯೇ ಕೇಂದ್ರ ಸರ್ಕಾರ ಆರಂಭಿಸಲಿರುವ ರಾಷ್ಟ್ರೀಯ ಜನಸಂಖ್ಯೆ ನೋಂದಣಿ (ಎನ್‌ಪಿಆರ್‌) ಪ್ರಕ್ರಿಯೆ 2020ರ ಏಪ್ರಿಲ್ 15ರಿಂದ ಕರ್ನಾಟಕದಲ್ಲೂ ಆರಂಭವಾಗಲಿದೆ.

‘ಈ ಸಂಬಂಧ ಸಿದ್ಧತಾ ಕಾರ್ಯಗಳನ್ನು ಆರಂಭಿಸಲಾಗಿದ್ದು, 2021ರಲ್ಲಿ ನಡೆಯಲಿರುವ ಜನಗಣತಿ ಭಾಗವಾಗಿ ಮೊದಲ ಹಂತದಲ್ಲಿ ನಡೆಯುವ ಮನೆಗಣತಿ ಜತೆಯಲ್ಲೇ ಎನ್‌ಪಿಆರ್‌ಗೆ ಸಂಬಂಧಿಸಿದ ಮಾಹಿತಿ ಪಡೆಯಲಾಗುವುದು’ ಎಂದು ಜನಗಣತಿ ಕಾರ್ಯಾಚರಣೆ ನಿರ್ದೇಶಕ ಎಸ್. ಬಿ. ವಿಜಯಕುಮಾರ್ ಗುರುವಾರ ತಿಳಿಸಿದರು.

‌‘ಮನೆ ಗಣತಿ ವೇಳೆ ಮನೆಯ ಮಾಲೀಕತ್ವ, ಕುಟುಂಬದವರ ಸಂಖ್ಯೆ, ಕುಡಿಯುವ ನೀರಿನ ಸೌಕರ್ಯ ಇದೆಯೇ, ಅಡುಗೆ ಮಾಡಲು ಅನಿಲ ಬಳಸಲಾಗುತ್ತಿದೆಯೇ, ಟಿವಿ, ಲ್ಯಾಪ್‌ಟ್ಯಾಪ್, ಮೊಬೈಲ್ ದೂರವಾಣಿ, ಇಂಟರ್‌ನೆಟ್‌ ಸೌಲಭ್ಯ, ಕಾರು, ದ್ವಿಚಕ್ರ ವಾಹನ ಇದೆಯೇ, ಬಳಸುವ ಆಹಾರ ಧಾನ್ಯಗಳು ಯಾವುವು ಎಂಬೆಲ್ಲಾ ಮಾಹಿತಿಗಳನ್ನು ಪಡೆಯಲಾಗುತ್ತದೆ’ ಎಂದು ಹೇಳಿದರು.

‘ಖಾಸಗಿ ಮಾಹಿತಿಯನ್ನು ಬೇರೆ ಇಲಾಖೆಗೂ ನೀಡುವುದಿಲ್ಲ. ಸರ್ಕಾರ ಯೋಜನೆ ರೂಪಿಸಲು ಮಾತ್ರ ಈ ಅಂಕಿ–ಅಂಶ ಬಳಕೆಯಾಗಲಿದೆ’ ಎಂದರು.

ಶಿಕ್ಷಕರಿಗೆ 45 ದಿನ ಮಾತ್ರ ಜನಗಣತಿ ಕೆಲಸ
ಬೆಂಗಳೂರು:
ಎಸ್ಸೆಸ್ಸೆಲ್ಸಿ ಪರೀಕ್ಷೆಯ ಕರ್ತವ್ಯದಲ್ಲಿ ಇರುವ ಶಿಕ್ಷಕರನ್ನು ಹೊರತುಪಡಿಸಿ ಉಳಿದ ಶಿಕ್ಷಕರಿಗೆ 2020ನೇ ಸಾಲಿನ ಜನಗಣತಿ ಕೆಲಸದಲ್ಲಿ ಪಾಲ್ಗೊಳ್ಳಲು ಕೇವಲ 45 ದಿನಗಳ ಮಟ್ಟಿಗೆ ಅನುಮತಿ ನೀಡಲಾಗಿದೆ.

ಎನ್‌ಪಿಆರ್‌ ಮಾಹಿತಿ ಸಂಗ್ರಹಣೆಗಾಗಿ ಮನೆ ಮನೆಗೆ ಭೇಟಿ ನೀಡುವುದಕ್ಕಾಗಿ ಏಪ್ರಿಲ್ 15ರಿಂದ ಮೇ 29ರವರೆಗೆ ಮಾತ್ರ ಈ ಶಿಕ್ಷಕರನ್ನು ಬಳಸಿಕೊಳ್ಳಬಹುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಟಿಪ್ಪಣಿಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT