ಶುಕ್ರವಾರ, ಮಾರ್ಚ್ 5, 2021
21 °C
ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧ ; ಆಗಸ್ಟ್ 1ರಿಂದಲೇ ಜಾರಿ: ಪಾಲಿಕೆ ಆಯುಕ್ತ

ವ್ಯಾಪಾರಿ, ಗ್ರಾಹಕ ಇಬ್ಬರಿಗೂ ದಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇನ್ನು ಮುಂದೆ ಪ್ಲಾಸ್ಟಿಕ್ ಮಾರಾಟ ಮಾಡುವವರಿಗೆ ಮಾತ್ರವಲ್ಲ, ಖರೀದಿ ಮಾಡುವವರಿಗೂ ದಂಡ ವಿಧಿಸ ಲಾಗುವುದು ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್ ತಿಳಿಸಿದರು.

‘ಆಗಸ್ಟ್‌ 1ರಿಂದ ಕಟ್ಟುನಿಟ್ಟಾಗಿ ಈ ನಿಯಮ ಜಾರಿಗೆ ಬರಲಿದೆ. ನಗರ ವ್ಯಾಪ್ತಿಯಲ್ಲಿನ ಪ್ಲಾಸ್ಟಿಕ್ ತಯಾರಿಕಾ ಘಟಕಗಳ ಮೇಲೆ ಆಗಾಗ ದಾಳಿ ನಡೆಸಲಾಗುತ್ತಿದೆ. ಆದರೂ, ಹೊರ ರಾಜ್ಯಗಳಿಂದ ಪ್ಲಾಸ್ಟಿಕ್ ಬರುತ್ತಿದ್ದು, ಅದನ್ನು ಸಾರಿಗೆ, ಪೊಲೀಸ್ ಮತ್ತು ವಾಣಿಜ್ಯ ತೆರಿಗೆ ಇಲಾಖೆ ಸಹಕಾರ ಪಡೆದು ನಿಲ್ಲಿಸಬೇಕಿದೆ’ ಎಂದು ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

‘ಬಿಬಿಎಂಪಿ ವ್ಯಾಪ್ತಿಯಲ್ಲಿ ಗ್ರಾಹಕರು ಮತ್ತು ವ್ಯಾಪಾರಿಗೆ ದಂಡ ವಿಧಿಸಲು ಅವಕಾಶ ಇದೆ. ಇದನ್ನು ಮಾಡಿದರೆ ಪ್ಲಾಸ್ಟಿಕ್‌ಗೆ ತಾನಾಗಿಯೇ ಬೇಡಿಕೆ ಕಡಿಮೆಯಾಗಲಿದೆ’ ಎಂದರು.

34 ರಸ್ತೆ ಗುಡಿಸುವ ಯಂತ್ರ ಖರೀದಿ: ನಗರದಲ್ಲಿ 1,200 ಕಿ.ಮೀ ಮುಖ್ಯ ರಸ್ತೆಗಳಿದ್ದು, ಅವುಗಳನ್ನು ಸ್ವಚ್ಛಗೊಳಿಸಲು 9 ರಸ್ತೆ ಗುಡಿಸುವ ಯಂತ್ರಗಳಿವೆ. ಹೆಚ್ಚುವರಿಯಾಗಿ 17 ಯಂತ್ರಗಳನ್ನು ಖರೀದಿ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಇದಲ್ಲದೇ ಗುತ್ತಿಗೆದಾರರ ಮೂಲಕ ಮತ್ತೆ 17 ಯಂತ್ರ ಖರೀದಿಸುವ ಆಲೋಚನೆಯೂ ಇದೆ. ಇಷ್ಟಾದರೂ ಪ್ರಮುಖ ಎಲ್ಲಾ ರಸ್ತೆಗಳನ್ನು ಸ್ವಚ್ಛಗೊಳಿಸಲು ಇನ್ನೂ 30–40 ಯಂತ್ರಗಳು ಬೇಕಾಗಬಹುದು. ಹಂತ–ಹಂತವಾಗಿ ಖರೀದಿ ಮಾಡಲಾಗುವುದು ಎಂದರು.

‘ಕರ್ನಾಟಕ ವಿದ್ಯುತ್ ನಿಗಮದಿಂದ (ಕೆಪಿಸಿಎಲ್‌) ಬಿಡದಿ ಬಳಿ 25 ಎಕರೆಯಲ್ಲಿ ಕಸದಿಂದ ವಿದ್ಯುತ್ ಉತ್ಪಾದನೆ ಮಾಡುವ ಘಟಕ ನಿರ್ಮಾಣವಾಗಲಿದೆ. ಇದಕ್ಕೆ 500 ಟನ್ ಒಣ ಕಸವನ್ನು ಬಿಬಿಎಂಪಿ ನೀಡಬೇಕಿದೆ. ಇದಕ್ಕಾಗಿ ಕಸ ವಿಂಗಡಣೆ ಮಾಡುವುದು ಅನಿವಾರ್ಯವೂ ಆಗಿದೆ’ ಎಂದು ಅಭಿಪ್ರಾಯಪಟ್ಟರು.

ಬ್ಲ್ಯಾಕ್ ಸ್ಪಾಟ್: ರಸ್ತೆ ಬದಿಯಲ್ಲಿ ಕಸ ಸುರಿಯುವ 5,000  ಬ್ಲ್ಯಾಕ್ ಸ್ಪಾಟ್‌ಗಳನ್ನು ಬಿಬಿಎಂಪಿ ಗುರುತಿಸಿದೆ ಎಂದು ಜಂಟಿ ಆಯುಕ್ತ (ಘನತಾಜ್ಯ ನಿರ್ವಹಣೆ) ಸರ್ಫರಾಜ್ ಖಾನ್ ತಿಳಿಸಿದರು.

ಕಸ ಸುರಿಯುವವರ ಚಿತ್ರಗಳನ್ನು ನಾಗರಿಕರೇ ತೆಗೆದು ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಿದ್ದರು. ಈ ರೀತಿಯ 1,500 ಬ್ಲ್ಯಾಕ್ ಸ್ಪಾಟ್‌ಗಳನ್ನು ಸ್ವಚ್ಛಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ನಗರದಲ್ಲಿ ಕಸ ಸುರಿಯುವ ತಾಣಗಳನ್ನು ಇಲ್ಲದಂತೆ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.

ಎಲ್ಲೆಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಕಸ ಸುರಿಯಲು ವಾಹನಗಳಲ್ಲಿ ಬಂದರೆ ಅದರ ನಂಬರ್‌ ಪಡೆದುಕೊಂಡು ಅವರಿಗೆ ದಂಡ ವಿಧಿಸಲಾಗುವುದು ಎಂದರು.

ಘನತಾಜ್ಯ ನಿರ್ವಹಣೆಗೆ ಎರಡು ವರ್ಷಗಳ ಹಿಂದೆ ಬಿಬಿಎಂಪಿ ₹1,000 ಕೋಟಿ ಖರ್ಚು ಮಾಡಿದೆ. ಬಯೋಮೆಟ್ರಿಕ್ ಅಳವಡಿಸಿದ ನಂತರ ‌2018–19ರಲ್ಲಿ ₹550 ಕೋಟಿ ಮಾತ್ರ ಖರ್ಚಾಗಿದೆ ಎಂದೂ ಹೇಳಿದರು.

ಮಾರ್ಷಲ್‌ಗಳಿಗೆ ದಂಡ ಹಾಕುವ ಉಪಕರಣ
233 ಮಾರ್ಷಲ್‌ಗಳ ನೇಮಕಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ. ಆಗಸ್ಟ್‌ನಲ್ಲಿ ನೇಮಕಾತಿ ಪ್ರಕ್ರಿಯೆ ಮುಗಿಯಲಿದ್ದು, ಎಲ್ಲಾ ವಾರ್ಡ್‌ಗಳಲ್ಲಿ ದಂಡ ಹಾಕುವ ಉಪಕರಣಗಳ ಸಹಿತ ಹಾಜರಾಗಲಿದ್ದಾರೆ ಎಂದು ಮಂಜುನಾಥ ಪ್ರಸಾದ್ ತಿಳಿಸಿದರು.

500 ಉಪಕರಣಗಳನ್ನು ಉಚಿತವಾಗಿ ಕೊಡಿಸಲು ಎಚ್‌ಡಿಎಫ್‌ಸಿ ಬ್ಯಾಂಕ್‌ ಮುಂದೆ ಬಂದಿದೆ. ಬಿಬಿಎಂಪಿ ಇದಕ್ಕಾಗಿ ಹಣ ನೀಡಬೇಕಿಲ್ಲ. ಈ ಉಪಕರಣದಲ್ಲಿ ಪೋಟೋ ತೆಗೆಯುವ ಸೌಲಭ್ಯ ಇದ್ದು ದಂಡ ‍ಪಡೆದು ಗ್ರಾಹಕರಿಗೆ ರಶೀದಿ ನೀಡಬಹುದಾಗಿದೆ ಎಂದರು.

ಸ್ಮಾರ್ಟ್‌ ಕಂಟ್ರೋಲ್ ರೂಂ
ಕಸ ಸಂಗ್ರಹದ ಬಗ್ಗೆ ನಿಗಾ ಇಡಲು ಮತ್ತು ಸಾರ್ವಜನಿಕರಿಂದ ದೂರು ಸ್ವೀಕರಿಸಲು ಸ್ಮಾರ್ಟ್‌ ಕಂಟ್ರೋಲ್ ರೂಂ ತೆರೆಯಲಾಗುವುದು ಎಂದು ಆಯುಕ್ತರು ಹೇಳಿದರು.

ಕಸ ಸಂಗ್ರಹಣೆಗೆ ಬರುವವರು ಯಾವುದಾದರೂ ಮನೆಯಿಂದ ಕಸ ಸ್ವೀಕರಿಸದೆ ಬಿಟ್ಟು ಹೋದರೆ ದೂರು ನೀಡಲು ದೂರವಾಣಿ ಮತ್ತು ‘ಸಹಾಯ’ ಆ್ಯಪ್ ಮೂಲಕವೂ ದೂರು ನೀಡಬಹುದು. ಎಲ್ಲಾ ದೂರುಗಳನ್ನು ಕಂಟ್ರೋಲ್ ರೂಮ್  ಸಿಬ್ಬಂದಿ ಪರಿಶೀಲಿಸಲಿದ್ದು, ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ಕಸ ಸಂಗ್ರಹಿಸುವ ವಾಹನದ ಮೇಲೆ ನಿಗಾ ಇಡಲು ಎಲ್ಲಾ ವಾಹನಗಳಿಗೂ ಜಿಪಿಎಸ್ ಅಳವಡಿಸಲಾಗುವುದು. ಚಾಲಕರು ಮತ್ತು ಸಹಾಯಕರಿಗೆ ಬಯೊಮೆಟ್ರಿಕ್ ಕಡ್ಡಾಯಗೊಳಿಸಲಾಗುವುದು ಎಂದೂ ಹೇಳಿದರು.

*

ಸ್ವಚ್ಛ ನಗರವನ್ನಾಗಿಸಲು ಬಿಬಿಎಂಪಿ ಕೈಗೊಂಡಿರುವ ಕ್ರಮಗಳ ಬಗ್ಗೆ ಆಕ್ಷೇಪ ಇಲ್ಲ. ಇವುಗಳನ್ನು ಅನುಷ್ಠಾನಗೋಳಿಸಲು ಅಧಿಕಾರಿಗಳು ಚುರುಕಾಗಬೇಕು. 
–ಪದ್ಮನಾಭ ರೆಡ್ಡಿ, ಬಿಬಿಎಂಪಿ ವಿರೋಧ ಪಕ್ಷದ ನಾಯಕ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು