ಶುಕ್ರವಾರ, ಸೆಪ್ಟೆಂಬರ್ 25, 2020
24 °C
ನಗರದ ಹೊರವಲಯದಲ್ಲಿ 30 ವಾರ್ಡ್‌ಗಳ ಹೆಚ್ಚಳಕ್ಕೆ ಒಮ್ಮತದ ತೀರ್ಮಾನ

ವಾರ್ಡ್‌ ಸಂಖ್ಯೆ 250ರವರೆಗೆ ಹೆಚ್ಚಿಸಲು ಶಿಫಾರಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆಯನ್ನು 250ರವರೆಗೆ ಹೆಚ್ಚಿಸಲು ಸರ್ಕಾರಕ್ಕೆ ಶಿಫಾರಸು ಮಾಡಲು ವಿಧಾನಮಂಡಲ ಜಂಟಿ ಸದನ ಸಲಹಾ ಸಮಿತಿ ತೀರ್ಮಾನಿಸಿದೆ.

ಮಂಗಳವಾರ ನಡೆದ ಸಮಿತಿಯ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದ್ದು, ’ಅಂತಿಮವಾಗಿ ವಾರ್ಡ್‌ಗಳ ಸಂಖ್ಯೆ 243ಕ್ಕೆ ಸೀಮಿತಗೊಳಿಸುವ ಸಾಧ್ಯತೆ ಇದೆ. ಇದಕ್ಕೆ ಎಲ್ಲ ಪಕ್ಷಗಳ ಶಾಸಕರ ಒಪ್ಪಿಗೆ ಇದೆ‘ ಎಂದು ಸಮಿತಿಯ ಅಧ್ಯಕ್ಷ ಎಸ್‌.ರಘು ‘ಪ್ರಜಾವಾಣಿ’ಗೆ ತಿಳಿಸಿದರು.

ಬೆಂಗಳೂರು ಹೊರವಲಯದಲ್ಲಿ ಹೆಚ್ಚು ವಾರ್ಡ್‌ಗಳನ್ನು ಸೃಷ್ಟಿಸಲಾಗುವುದು. ಆದರೆ, ಹೊಸ ಪ್ರದೇಶ ಅಥವಾ ಗ್ರಾಮಗಳನ್ನು ಸೇರಿಸಿಕೊಳ್ಳುವುದಿಲ್ಲ. ಈಗಿರುವ 198 ವಾರ್ಡ್‌ಗಳನ್ನೇ ವಿಭಜಿಸಿ ಹೆಚ್ಚಿಸಲಾಗುವುದು. ಒಟ್ಟು 45 ಹೊಸ ವಾರ್ಡ್‌ಗಳನ್ನು ರಚಿಸಲಾಗುವುದು. ಇದರಲ್ಲಿ 15 ವಾರ್ಡ್‌ಗಳನ್ನು ಬೆಂಗಳೂರು ಕೇಂದ್ರ ಭಾಗದಲ್ಲೂ, ಉಳಿದ 30 ವಾರ್ಡ್‌ಗಳನ್ನು ಹೊರವಲಯದಲ್ಲಿ ರಚಿಸಲಾಗುವುದು ಎಂದು ಹೇಳಿದರು.

‘ಹೊರ ವಲಯದಲ್ಲಿ ಹೆಚ್ಚಿನ ಸದಸ್ಯರು ಇರಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ. ಹೊರ ವಲಯ ದಲ್ಲಿ ಜನಸಂಖ್ಯೆ ಹೆಚ್ಚಾಗಿದೆ. ಪ್ರದೇಶ ವಿಸ್ತರಣೆಯೂ ಹೆಚ್ಚಾಗಿದೆ. ಆದ್ದರಿಂದ ಹೆಚ್ಚು ವಾರ್ಡ್‌ಗಳು ಬೇಕು ಎಂಬುದು ಸಮಿತಿ ಸದಸ್ಯರ ಅಭಿಪ್ರಾಯವಾಗಿತ್ತು. ಹೀಗಾಗಿ ವಾರ್ಡ್‌ಗಳ ಹೆಚ್ಚಿಸುವ ಕುರಿತು ಒಮ್ಮತದ ತೀರ್ಮಾನ ತೆಗೆದುಕೊಳ್ಳಲಾಯಿತು’ ಎಂದು ರಘು ಹೇಳಿದರು.

’ಹೊಸ 45 ವಾರ್ಡ್‌ಗಳಿಗೂ ಮೀಸಲಾತಿ ನಿಗದಿ ಮಾಡಬೇಕಾಗುತ್ತದೆ. ಹೊಸ ವಾರ್ಡ್‌ ರಚನೆ ಆಗುತ್ತಿದ್ದಂತೆ ಮೀಸಲಾತಿ ನಿಗದಿ ಮಾಡಲಾಗುತ್ತದೆ. ಇದರಿಂದ ಚುನಾವಣೆಯನ್ನೂ ಬೇಗನೆ ಮಾಡಲು ಸಾಧ್ಯ’ ಎಂದರು.

22ಕ್ಕೆ ಮಂಡನೆ: ’ಬಿಬಿಎಂಪಿ ತಿದ್ದುಪಡಿ ಮಸೂದೆಯು ವಿಧಾನ ಮಂಡಲದಲ್ಲಿ ಇದೇ 22ರಂದು ಮಂಡನೆಯಾಗುವ ಸಾಧ್ಯತೆ ಇದೆ. ಅಷ್ಟ ರೊಳಗೇ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುತ್ತೇವೆ. ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರೂ ಇದೇ ಅಧಿವೇಶನದಲ್ಲಿ ಮಸೂದೆ ಮಂಡಿಸುವುದಾಗಿ ಹೇಳಿದ್ದಾರೆ‘ ಎಂದರು.

ಯಾವುದೇ ಕಾಮಗಾರಿಗಳಿಗೆ ಸಂಬಂಧಿಸಿದಂತೆ ತೀರ್ಮಾನಗಳು ವಲಯ ಮಟ್ಟದಲ್ಲೇ ಆಗಬೇಕು. ಅದು ಆಯುಕ್ತರ ಹಂತಕ್ಕೆ ಬರುವ ಅವಶ್ಯಕತೆ ಇರಬಾರದು ಎಂಬ ಚರ್ಚೆಯೂ ನಡೆಯಿತು ಎಂದರು.

ತೆರಿಗೆ ಸಂಗ್ರಹ ಹೆಚ್ಚಿಸಲು ಕ್ರಮ

‘ನಗರದಲ್ಲಿ ತೆರಿಗೆ ಸಂಗ್ರಹ ಕಡಿಮೆ ಆಗುತ್ತಿದೆ. ಸಾಕಷ್ಟು ಜನರು ಆಸ್ತಿ ತೆರಿಗೆ ಕಟ್ಟದೇ ತಪ್ಪಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವುದು ಹೇಗೆ ಎಂಬ ಚರ್ಚೆ ನಡೆಯಿತು. ಮುಂದಿನ ಸಭೆಯಲ್ಲಿ ಈ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದು ರಘು ತಿಳಿಸಿದರು. 

ತೆರಿಗೆ ಸಂಗ್ರಹದಲ್ಲಿ ಶೇ 35 ರಷ್ಟು ಸೋರಿಕೆ ಆಗುತ್ತಿದೆ. ₹10 ಸಾವಿರ ಕೋಟಿ ನಿಗದಿ ಮಾಡಿದ್ದರೂ ₹2,600 ಕೋಟಿಯಿಂದ ₹2 ,800 ಕೋಟಿಯಷ್ಟೇ ಸಂಗ್ರಹ ಆಗುತ್ತಿದೆ. ತೆರಿಗೆ ಸಂಗ್ರಹ ಹೆಚ್ಚಿಸಲು ಕಟ್ಟುನಿಟ್ಟಿನ ಕ್ರಮ ಅಗತ್ಯವಿದೆ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು