ಮಂಗಳವಾರ, ಆಗಸ್ಟ್ 3, 2021
28 °C
ಗೃಹ ಕೈಗಾರಿಕೆಗಳ ಮೇಲೆ ಕೋವಿಡ್‌–19 ಪರಿಣಾಮ * ನಿರುದ್ಯೋಗ ಸೃಷ್ಟಿ

ಬೆಂಗಳೂರು: ಕರಕುಶಲವಸ್ತು ಪ್ರೇಮಿಗಳ ನೆಚ್ಚಿನ ‘ಸಿಸಿಐಇ’ ಸ್ಥಗಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರಕುಶಲ ಉತ್ಪನ್ನ ಪ್ರೇಮಿಗಳ, ಕರಕುಶಲ ಕರ್ಮಿಗಳ ನೆಚ್ಚಿನ ತಾಣವಾಗಿದ್ದ ಕೇಂದ್ರೀಯ ಗೃಹ ಕೈಗಾರಿಕೆಗಳ ಎಂಪೋರಿಯಂನ (ಸಿಸಿಐಇ) ಎಂ.ಜಿ. ರಸ್ತೆಯ ಶಾಖೆಯು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. 

ಕರಕುಶಲ ಉತ್ಪನ್ನಗಳು ಸರ್ಕಾರದ ಮೊಹರಿನೊಂದಿಗೆ ಇಲ್ಲಿ ಮಾರಾಟವಾಗುತ್ತಿದ್ದವು. ಗುಣಮಟ್ಟಕ್ಕೆ ಖಾತ್ರಿ ಇರುತ್ತಿದ್ದ ಕಾರಣ, ನಗರದ ಇತರೆ ಕರಕುಶಲ ಉತ್ಪನ್ನಗಳ ಮಳಿಗೆಗಿಂತ ಈ ಮಳಿಗೆ ವಿಶಿಷ್ಟ ಸ್ಥಾನದಲ್ಲಿತ್ತು. ಮುಂದೆ, ಎಚ್‌ಎಸ್‌ಆರ್‌ ಲೌಟ್‌ನಲ್ಲಿ ಸಣ್ಣ ಮಳಿಗೆಯೊಂದರಲ್ಲಿ ಕಾರ್ಯಾಚರಣೆ ಪ್ರಾರಂಭ ಮಾಡಲಿದೆ. 

‘ಜವಳಿ ಮತ್ತು ಕರಕುಶಲ ಕೈಗಾರಿಕೆ ಕೂಡ ಕೃಷಿ ನಂತರ ಅತಿ ಹೆಚ್ಚು ಉದ್ಯೋಗ ಸೃಷ್ಟಿಸುವ ಕ್ಷೇತ್ರ. ಈಗ ಈ ಕ್ಷೇತ್ರದಲ್ಲಿನ ಮಳಿಗೆಗಳು ಸ್ಥಗಿತಗೊಳ್ಳುತ್ತಿರುವುದರಿಂದ ನಿರುದ್ಯೋಗ ಸಮಸ್ಯೆ ಹೆಚ್ಚಾಗಲಿದೆ’ ಎಂದು ಕರ್ನಾಟಕ ಕರಕುಶಲ ಮಂಡಳಿಯ ಅಧ್ಯಕ್ಷೆ ಎಂ. ನಿರ್ಮಲಾ ‘ಪ್ರಜಾವಾಣಿ’ಗೆ ಹೇಳಿದರು. 

‘ಚನ್ನಪಟ್ಟಣ, ಕೊಪ್ಪಳ, ಬೀದರ್‌ ಸೇರಿದಂತೆ ರಾಜ್ಯದ ವಿವಿಧ ಕಡೆಗಳಿಂದ ಕರಕುಶಲ ವಸ್ತುಗಳನ್ನು ಸಿಸಿಐಇ ತರಿಸಿಕೊಳ್ಳುತ್ತಿತ್ತು. ಈಗ ಅದೆಲ್ಲ ಸ್ಥಗಿತಗೊಳ್ಳುವುದರಿಂದ ಕರಕುಶಲ ಕರ್ಮಿಗಳು ತೊಂದರೆಗೆ ಸಿಲುಕಲಿದ್ದಾರೆ’ ಎಂದರು. 

‘ಕರಕುಶಲ ಉತ್ಪನ್ನಗಳು ಅಗತ್ಯ ವಸ್ತುಗಳ ಪಟ್ಟಿಯಲಲ್ಲಿ ಬರುವುದಿಲ್ಲ. ಹಾಗಾಗಿ, ಮುಂದೆ ನೋಡಿಕೊಂಡರಾಯಿತು ಎಂಬ ಕಾರಣಕ್ಕೆ ಇಂತಹ ಮಳಿಗೆಗಳನ್ನು ಮುಚ್ಚಲಾಗುತ್ತಿದೆ’ ಎಂದು ಅವರು ಅಭಿಪ್ರಾಯಪಟ್ಟರು. 

‘ಕೋವಿಡ್‌ ಕಾರಣದಿಂದ ಕರಕುಶಲ ವಸ್ತುಪ್ರದರ್ಶನಗಳೂ ನಡೆಯುತ್ತಿಲ್ಲ. ವಸ್ತುಪ್ರದರ್ಶನ ನಡೆದರೂ ಈ ಸಂದರ್ಭದಲ್ಲಿ ಕರಕುಶಲ ವಸ್ತುಗಳನ್ನು ಖರೀದಿಸಲು ಮುಂದೆ ಬರುವುದಿಲ್ಲ’ ಎಂದು ಅವರು ಹೇಳಿದರು. 

‘ಖಾಸಗಿ ಕರಕುಶಲ ಮಳಿಗೆಗಳು ಹೆಚ್ಚಿನ ದರವನ್ನು ನಿಗದಿ ಮಾಡಿರುತ್ತಿದ್ದವು. ಅವುಗಳಿಗೆ ಹೋಲಿಸಿದರೆ, ಸಿಸಿಐಇ ಮಳಿಗೆಗಳಲ್ಲಿ ಕಡಿಮೆ ದರಕ್ಕೆ ಗುಣಮಟ್ಟದ ಉತ್ಪನ್ನಗಳು ಸಿಗುತ್ತಿದ್ದವು. ಇಂತಹ ಮಳಿಗೆಗಳಲ್ಲಿ ಲಾಭದ ಉದ್ದೇಶವಿರುತ್ತಿರಲಿಲ್ಲ’ ಎಂದು ಗ್ರಾಹಕಿ ರಾಜಿ ನಾರಾಯಣ್ ‘ಪ್ರಜಾವಾಣಿ’ಗೆ ಹೇಳಿದರು. 

‘ಗೃಹ ಕೈಗಾರಿಕೆಗಳು ಅಥವಾ ಕರಕುಶಲ ಕರ್ಮಿಗಳ ನೆರವಿಗೆ, ಈ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕು’ ಎಂದು ಅವರು ಒತ್ತಾಯಿಸಿದರು. 

ಸಿಸಿಐಇನ ಅಧಿಕಾರಿಗಳು ಸಂಪರ್ಕಕ್ಕೆ ಸಿಗಲಿಲ್ಲ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು