ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್‌ ಪ್ರತಿಭಟನೆ

ಸೌದೆಯಿಂದ ಅಡುಗೆ ತಯಾರಿಸಿ ಆಕ್ರೋಶ ಹೊರಹಾಕಿದ ಮಹಿಳಾ ಪ್ರತಿಭಟನಕಾರರು
Last Updated 2 ಮಾರ್ಚ್ 2021, 21:48 IST
ಅಕ್ಷರ ಗಾತ್ರ

ಬೆಂಗಳೂರು: ಪೆಟ್ರೋಲ್‌, ಡೀಸೆಲ್, ಅಡುಗೆ ಅನಿಲ ಹಾಗೂ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿಯ ಸದಸ್ಯರು, ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ವೃತ್ತದಬಳಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಗೆ ವಿವಿಧ ಜಿಲ್ಲೆಗಳಿಂದ ಬಂದಿದ್ದ ಕಾಂಗ್ರೆಸ್‌ ಕಾರ್ಯಕರ್ತರು ತಲೆಯ ಮೇಲೆ ಗ್ಯಾಸ್‌ ಸಿಲಿಂಡರ್‌ ಹೊತ್ತು, ಕೊರಳಿಗೆ ತರಕಾರಿ ಮಾಲೆ ಧರಿಸಿ, ಸೈಕಲ್‌ ರಿಕ್ಷಾ ತಳ್ಳುವ ಮೂಲಕ ಪ್ರತಿಭಟನೆ ನಡೆಸಿ, ಬೆಲೆ ಏರಿಕೆ ವಿರುದ್ಧ ಆಕ್ರೋಶ ಹೊರಹಾಕಿದರು.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಆನಂದರಾವ್‌ ವೃತ್ತದವರೆಗೆ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು. ಮಹಿಳಾ ಪ್ರತಿಭಟನಕಾರರು ಸೌದೆಯಿಂದ ಸ್ಥಳದಲ್ಲೇ ಅಡುಗೆ ತಯಾರಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ,‘ಇದು ಕೇವಲ ಒಂದು ಪಕ್ಷದ ಮಹಿಳೆಯರಿಗೆ ಸೀಮಿತವಾಗಿರುವ ಸಮಸ್ಯೆ ಅಲ್ಲ. ಎಲ್ಲ ಪಕ್ಷದ ಮಹಿಳೆಯರಿಗೂ ಸಿಲಿಂಡರ್‌ ದರದ ಬಿಸಿ ಮುಟ್ಟಿದೆ. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ತೈಲ ಏರಿದ ಕೂಡಲೇ ಪ್ರತಿಭಟನೆಗೆ ಬೀದಿಗಿಳಿಯುತ್ತಿದ್ದ ಬಿಜೆಪಿಯವರು ಈಗ ಏಕೆ ಸುಮ್ಮನಿದ್ದಾರೆ?’ ಎಂದು ಪ್ರಶ್ನಿಸಿದರು.

‘ತೈಲ ದರ ಹಾಗೂ ಗ್ಯಾಸ್‌ ಸಿಲಿಂಡರ್ ದರ ಏರಿಕೆಯಿಂದ ಜನಕ್ಕೆ ಸಂಕಷ್ಟ ಎದುರಾಗಿದೆ. ಜನರ ಹೊಟ್ಟೆಯ ಮೇಲೆ ಹೊಡೆಯುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಈ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ’ ಎಂದು ಕಿಡಿಕಾರಿದರು.

ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್, ‘ಅಡುಗೆ ಅನಿಲ ದರ ಇಳಿಕೆ ಮಾಡಿ ಮಹಿಳೆಯ ಪರ ಇರುವುದಾಗಿಪ್ರಧಾನಿ ಮೋದಿ ಅವರು ಚುನಾವಣಾ ಪ್ರಣಾಳಿಕೆಯಲ್ಲಿ ತಿಳಿಸಿದ್ದರು. ಆದರೆ, ತೈಲ ಬೆಲೆ ಏರುತ್ತಲೇ ಇದೆ. ಕೊಟ್ಟ ಮಾತಿನಂತೆ ದರ ಕಡಿಮೆ ಮಾಡುವ ಬದಲು ನಿರಂತರವಾಗಿ ಏರಿಕೆ ಮಾಡುತ್ತಿದ್ದಾರೆ. ಬೆಲೆ ಏರಿಕೆ ವಿರುದ್ಧ ಕೂಗಾಡುತ್ತಿದ್ದ ಬಿಜೆಪಿ ನಾಯಕಿಯರಾದ ಶೋಭಾ ಕರಂದ್ಲಾಜೆ, ಸ್ಮೃತಿ ಇರಾನಿ, ನಿರ್ಮಲಾ ಸೀತಾರಾಮನ್‌ ಈಗ ಮೌನಕ್ಕೆ ಶರಣಾಗಿದ್ದಾರೆ. ಅವರು ಮನೆಯಲ್ಲಿ ಅಡುಗೆ ಮಾಡುವುದಿಲ್ಲವೇ?’ ಎಂದು ವಾಗ್ದಾಳಿ ನಡೆಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ,‘ಯುಪಿಎ ಆಡಳಿತದಲ್ಲಿ ಪೆಟ್ರೋಲ್‌ಗೆ ₹3 ಹಾಗೂ ಡೀಸೆಲ್‌ಗೆ ₹2 ತೆರಿಗೆ ಹಾಕಲಾಗಿತ್ತು. ಈಗಿನ ಬಿಜೆಪಿ ಸರ್ಕಾರ ₹32 ತೆರಿಗೆ ಹಾಕುತ್ತಿದೆ. ಬಿಜೆಪಿ ಸರ್ಕಾರದಲ್ಲಿ ಪ್ರಧಾನಿಯಿಂದ ಕಾರ್ಯಕರ್ತರವರೆಗೂ ಎಲ್ಲರಿಗೂ ಸುಳ್ಳು ಹೇಳುವ ತರಬೇತಿ ನೀಡಲಾಗಿದೆ’ ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT