ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕಷ್ಟ: ಲಕ್ಷಾಂತರ ಮಂದಿಗೆ ಅನ್ನದಾಸೋಹ

ಹಸಿದವರಿಗೆ ಸಾಂತ್ವನ: ಕಂಕಣ ತೊಟ್ಟ ಕರ್ನಾಟಕ ಜೈನ ಅಸೋಷಿಯೇಷನ್‌
Last Updated 29 ಏಪ್ರಿಲ್ 2020, 22:44 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ಆಹಾರ, ಔಷಧ, ಶಾಸ್ತ್ರ ಹಾಗೂ ಅಭಯ ದಾನಗಳೆಂಬ ಚತುರ್ವಿಧ ದಾನಗಳಿಗೆ ಜೈನ ಸಮುದಾಯ ಹೆಸರುವಾಸಿ. ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಹೇರಿರುವ ಲಾಕ್‌ಡೌನ್‌ ಸಂದರ್ಭದಲ್ಲಿ ಒಪ್ಪೊತ್ತಿನ ಊಟಕ್ಕೂ ಪಡಿಪಾಟಲು ಎದುರಿಸುತ್ತಿರುವ ನಿರ್ಗತಿಕರು, ವಲಸೆ ಕಾರ್ಮಿಕರ ಹಸಿವನ್ನು ತಣಿಸಲು ಕರ್ನಾಟಕ ಜೈನ ಅಸೋಸಿಯೇಷನ್‌ಅವಿರತವಾಗಿ ಶ್ರಮಿಸುತ್ತಿದೆ. ನಿತ್ಯವೂ 12 ಸಾವಿರಕ್ಕೂ ಅಧಿಕ ಮಂದಿಗೆ ಅನ್ನದಾನ ಮಾಡುತ್ತಿದೆ.

ಸಂಸ್ಥೆಯ ನೂರಾರು ಸ್ವಯಂಸೇವಕರು ಬಡವರು ಇರುವಲ್ಲಿಗೇ ಆಹಾರ ತಲುಪಿಸುತ್ತಿದ್ದಾರೆ. ಹಸಿದವರಿಗೆ ಅಭಯ ನೀಡಿ, ಅವರ ಮುಖದಲ್ಲಿ ಮೂಡುವ ಸಂತೃಪ್ತಿಯಲ್ಲೇ ಬದುಕಿನ ಸಾರ್ಥಕತೆ ಕಾಣುತ್ತಿದ್ದಾರೆ.

ಗರಿಗೆದರಿದ ಸಂಕಲ್ಪ: ‘ಲಾಕ್‌ಡೌನ್‌ ಘೋಷಣೆಯಾದ ಬಳಿಕ ಸಂಕಷ್ಟಕ್ಕೆ ಸಿಲುಕಿದವರಿಗೆ ನೆರವಾಗಲು ಜೈನ ಅಸೋಸಿಯೇಷನ್‌ ವತಿಯಿಂದ ಸಹಾಯ ಮಾಡಬಹುದೇ ಎಂದು ಅನೇಕರು ನಮ್ಮನ್ನು ಕೇಳಿದ್ದರು. ನಮ್ಮ ಕಲ್ಯಾಣ ಮಂಟಪದಲ್ಲಿ ಏಕಕಾಲದಲ್ಲಿ ಸಾವಿರಾರು ಮಂದಿ ಊಟ ತಯಾರಿಸಲು ಬೇಕಾಗುವ ಸಕಲ ಸೌಕರ್ಯಗಳಿವೆ. ನಾವೇ ಏಕೆ ಈ ಕಾರ್ಯ ಆರಂಭಿಸಬಾರದು ಎಂದು ಚಿಂತನೆ ಮೂಡಿತು’ ಎನ್ನುತ್ತಾರೆ ಕರ್ನಾಟಕ ಜೈನ ಅಸೋಸಿಯೇಷನ್‌ ಅಧ್ಯಕ್ಷ ಬಿ.ಪ್ರಸನ್ನಯ್ಯ.

‘ಸಾವಿರಾರು ಮಂದಿಗೆ ನಿತ್ಯ ಅನ್ನದಾನ ಮಾಡುವಷ್ಟು ಶಕ್ತರಾಗಿದ್ದೇವೆಯೇ ಎಂದು ಸಂಘದ ಕೆಲವು ಪದಾಧಿಕಾರಿಗಳೇ ಸಂದೇಹ ವ್ಯಕ್ತಪಡಿಸಿದ್ದರು. ಕೆಲವರಂತೂ ಇಂತಹ ಉಸಾಬರಿ ಬೇಡವೆಂದೇ ಹೇಳಿದ್ದರು. ಇನ್ನು ಕೆಲವರು ಅನ್ನದಾನಕ್ಕೆ ಸಹಮತ ವ್ಯಕ್ತಪಡಿಸಿದ್ದರು. ಹತ್ತಿಪ್ಪತ್ತು ಲಕ್ಷ ಸಂಗ್ರಹಿಸಿ ಅನ್ನದಾನ ಆರಂಭಿಸಬಹುದು ಎಂದು ಸಂಘದ ಖಜಾಂಚಿ ವೈ.ಎಸ್‌.ರಾಜೇಂದ್ರ ಕುಮಾರ್‌ ಹುರಿದುಂಬಿಸಿದರು. ಒಂದು ದಿನ ಮುಂಜಾನೆ ಸಂಘದ ಸಹಕಾರ್ಯದರ್ಶಿ ಆಶಾ ಪ್ರಭು ಅಧ್ಯಕ್ಷತೆಯಲ್ಲಿ ಆಹಾರ ವಿತರಣೆಗಾಗಿ ಸಮಿತಿ ರಚಿಸಿ, ಮಾಡಬೇಕಾದ ಕಾರ್ಯಗಳ ವಿವರವನ್ನು ಸಂಘದ ಪದಾಧಿಕಾರಿಗಳಿಗೆ ಕಳುಹಿಸಿದೆ. ಅವರೆಲ್ಲ ಒಪ್ಪಿದರು’ ಎಂದು ಅವರು ಆಹಾರ ವಿತರಣೆ ಆರಂಭವಾದ ಪರಿಯನ್ನು ಅವರು ವಿವರಿಸಿದರು.

‘ಮೊದಲ ದಿನ ಕೇವಲ ಆರು ಬಾಣಸಿಗರನ್ನು ಇಟ್ಟುಕೊಂಡು 2 ಸಾವಿರ ಮಂದಿಗೆ ಊಟ ಸಿದ್ಧಪಡಿಸಿದೆವು. ಆಗಲೂ ಈ ಕಾರ್ಯವನ್ನು ಮುಂದುವರಿಸಲು ಸಾಧ್ಯವೇ ಎಂಬ ಅಳುಕು ಕಾಡುತ್ತಿತ್ತು. ಸಾವಿರಾರು ಮಂದಿ ಆಹಾರದ ಕೊರತೆ ಎದುರಿಸುತ್ತಿರುವುದು ಅರಿವಿಗೆ ಬಂತು. ಧೈರ್ಯ ಮಾಡಿ ಆಹಾರ ವಿತರಣೆಯನ್ನು ಹೆಚ್ಚಿಸುತ್ತಲೇ ಹೋದೆವು. ಈಗ ನಿತ್ಯ 12 ಸಾವಿರಕ್ಕೂ ಅಧಿಕ ಮಂದಿಗೆ ಊಟ ವಿತರಿಸುತ್ತಿದ್ದೇವೆ. ಏಪ್ರಿಲ್‌ 1ರಿಂದ ಇದುವರೆಗೆ 2.70 ಲಕ್ಷ ಮಂದಿಯ ಹಸಿವು ತಣಿಸಿದ್ದೇವೆ’ ಎಂದು ಸಾರ್ಥಕಭಾವದಿಂದ ಹೇಳುತ್ತಾರೆ ಸಾಂಖ್ಯಿಕ ಇಲಾಖೆಯ ಯೋಜನಾ ನಿರ್ದೇಶಕಾಗಿ ನಿವೃತ್ತರಾಗಿರುವ ಪ್ರಸನ್ನಯ್ಯ.

‘ವಾಜರಹಳ್ಳಿ, ತುರಹಳ್ಳಿ, ಗುಬ್ಬಲಾಳ, ಕೋಣನಕುಂಟೆ ಕ್ರಾಸ್‌, ಸೋಮನಹಳ್ಳಿ, ರಾಗಿಗುಡ್ಡ, ಜೆ.ಪಿ.ನಗರ, ಬಾಲಾಜಿ ಬಡಾವಣೆಗಳಿಗೆ ಹಾಗೂ ಕಿಮ್ಸ್‌, ರಂಗದೋರೈ ಆಸ್ಪತ್ರೆ, ಶಂಕರ ಕ್ಯಾನ್ಸರ್‌ ಆಸ್ಪತ್ರೆಗಳಿಗೆ ಆಹಾರ ತಲುಪಿಸಲಾಗುತ್ತಿದೆ. ಜೈನಭವನದ ಎದುರೂ ಊಟ ವಿತರಿಸಲಾಗುತ್ತಿದೆ. ಪೊಲೀಸ್‌ ಅಧಿಕಾರಿಗಳ ಮೂಲಕ, ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕಾರ್ಮಿಕ ಇಲಾಖೆ ಮೂಲಕವೂ ಬಡವರಿಗೆ ಆಹಾರದ ಪೊಟ್ಟಣ ನೀಡುತ್ತಿದ್ದೇವೆ’ ಎಂದರು.

ಧರ್ಮಸ್ಥಳದ ಅನ್ನದಾನ ಪ್ರೇರಣೆ
‘ಸಂಘದ ಪ್ರಧಾನ ಸಂರಕ್ಷಕರಾದ ಶ್ರವಣಬೆಳಗೊಳ ಕ್ಷೇತ್ರದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಈ ಕೈಂಕರ್ಯಕ್ಕೆ ಮೆಚ್ಚುಗೆ ಸೂಚಿಸಿ ಹರಿಸಿದ್ದಾರೆ. ಈ ಸ್ವಾಮೀಜಿ ಪಟ್ಟಾಭಿಷೇಕವಾಗಿ 50ವರ್ಷ ತುಂಬಿದ ಪ್ರಯುಕ್ತ ಕರ್ನಾಟಕದ ವಿವಿಧ ಭಾಗಗಳಲ್ಲಿ ನಮ್ಮ ಸಂಸ್ಥೆ ಸದಸ್ಯರು ಅನ್ನದಾನ ಹಮ್ಮಿಕೊಳ್ಳುತ್ತಿದ್ದಾರೆ. ಶ್ರೀ ಕ್ಷೇತ್ರದ ಧರ್ಮಸ್ಥಳದಲ್ಲಿ ಡಾ.ಡಿ.ವೀರೇಂದ್ರ ಹೆಗ್ಗಡೆ ನೇತೃತ್ವದಲ್ಲಿ ನಿತ್ಯ ನಡೆಯುವ ಅನ್ನದಾನವೂ ನಮಗೂ ಪ್ರೇರಣೆ. ನಮ್ಮ ಸಂಘದ ಪರಮ ಸಂರಕ್ಷಕರಾದ ಹೆಗ್ಗಡೆಯವರು ಹಾಗೂ ಅವರ ಸಹೋದರರು ಈ ಸಲಕ ರೀತಿಯಲ್ಲೂ ಈ ಕಾರ್ಯಕ್ರಮಕ್ಕೆ ಬೆಂಬಲ ನೀಡುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯ ಹೊಂಬುಜ ಕ್ಷೇತ್ರದ (ಹುಂಚ) ಡಾ.ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿಯೂ ಆಶೀರ್ವದಿಸಿದ್ದಾರೆ. ಬೆಳಗಾವಿಯ ಸಹಕಾರಿ ಧುರೀಣ ರಾವ್‌ ಸಾಹೇಬ ಪಾಟೀಲ ಅವರೂ ನೆರವು ನೀಡಿದ್ದಾರೆ’ ಎಂದು ಅವರು ತಿಳಿಸಿದರು.

ಸ್ವಯಂಸೇವಕರ ಅಮಿತೋತ್ಸಾಹ
ಅಡುಗೆಗೆ ನೆರವಾಗಲು, ಆಹಾರದ ಪೊಟ್ಟಣಗಳನ್ನು ತಯಾರಿಸಲು ಹಾಗೂ ಅದನ್ನು ಬಡಬಗ್ಗರಿರುವಲ್ಲಿಗೆ ತಲುಪಿಸಲು 80ರಿಂದ 100 ಸ್ವಯಂಸೇವಕರು ನೆರವಾಗುತ್ತಿದ್ದಾರೆ. ಕೊರೊನಾ ಸೋಂಕು ತಗಲುವ ಭಯದಿಂದ ಜನ ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕುತ್ತಿರುವ ಸಂದರ್ಭದಲ್ಲೂ ಬಡವರ ಹಸಿವು ಇಂಗಿಸುವ ಕಾಯಕದಲ್ಲಿ ಇವರು ಉತ್ಸಾಹದಿಂದ ತೊಡಗಿಕೊಳ್ಳುತ್ತಿದ್ದಾರೆ. ಈ ಸಲುವಾಗಿ ಲಾಕ್‌ಡೌನ್ ನಡುವೆಯೂ 30– 40 ಕಿ.ಮೀ ದೂರ ಪ್ರಯಾಣಿಸುತ್ತಿದ್ದಾರೆ.

‘ಆರಂಭದಲ್ಲಿ ಕೆಲವೆಡೆ ಪೊಲೀಸರು ತಡೆದಿದ್ದರು. ಈಗ ಎಲ್ಲರಿಗೂ ಪಾಸ್‌ ವ್ಯವಸ್ಥೆ ಮಾಡಿದ್ದೇವೆ’ ಎನ್ನುತ್ತಾರೆ ಆಹಾರ ವಿತರಣೆ ಸಮಿತಿಯ ಆಶಾ ಪ್ರಭು.

‘ಸಂಘದ ಉಪಾಧ್ಯಕ್ಷರಾದ ಪಿ.ವೈ.ರಾಜೇಂದ್ರ ಕುಮಾರ್‌, ಎ.ಸಿ.ಪಾಟೀಲ, ಕಾರ್ಯದರ್ಶಿ ರಾಜಕೀರ್ತಿ, ಸಹಕಾರ್ಯದರ್ಶಿ ಜಿ.ಅಜಿತ್‌ ಕುಮಾರ್‌, ಸಹಖಜಾಂಚಿ ಬ್ರಹ್ಮದೇವಯ್ಯ, ಕಾರ್ಯಕಾರಿ ಸಮಿತಿ ಸದಸ್ಯರಾದ ಪ್ರಕಾಶ್, ಶೀತಲ್‌ ಕುಮಾರ್‌, ಜಿ.ಮಂಜುನಾಥ್‌ ಅವರೆಲ್ಲರೂ ಸ್ವಯಂಸೇವಕರನ್ನು ಹುರಿದುಂಬಿಸುತ್ತಾ ಈ ಕಾರ್ಯ ಸಾಂಗವಾಗಿ ನೆರವೇರಲು ಸಹಾಯ ಮಾಡುತ್ತಿದ್ದಾರೆ’ ಎಂದು ಪ್ರಸನ್ನಯ್ಯ ತಿಳಿಸಿದರು.

‘ಶುಚಿ– ರುಚಿಗೆ ಆದ್ಯತೆ’

‘ನಿತ್ಯ 12 ಸಾವಿರಕ್ಕೂ ಅಧಿಕ ಮಂದಿಗೆ ಆಹಾರ ತಯಾರಿಸುವಾಗಲೂಶುಚಿ ಮತ್ತು ರುಚಿಗೆ ಮಹತ್ವ ನೀಡಲಾಗುತ್ತಿದೆ. ಗುಣಮಟ್ಟದಲ್ಲಿ ರಾಜಿ ಇಲ್ಲ’ ಎಂದು ಪ್ರಸನ್ನಯ್ಯ ತಿಳಿಸಿದರು.

‘1 ಸಾವಿರ ಚೀಲ ಅಕ್ಕಿಯನ್ನು ನೇರವಾಗಿ ಗಂಗಾವತಿಯಿಂದಲೇ ತರಿಸಿಕೊಂಡಿದ್ದೇವೆ. ಅಕ್ಕಿ ಮತ್ತು ಇತರ ಸಾಮಗ್ರಿಗಳನ್ನು ಸಗಟು ದರದಲ್ಲಿ ಖರೀದಿಸುವುದರಿಂದ ಖರ್ಚು ಕಡಿಮೆ ಆಗಿದೆ’ ಎಂದರು.

ಬೆಂಗಳೂರಿನ ಶಂಕರಪುರದಲ್ಲಿ ಕೆ.ಆರ್‌.ರಸ್ತೆ ಬಳಿ ಇರುವ ಕರ್ನಾಟಕ ಜೈನ ಭವನದಲ್ಲಿ ಅಡುಗೆ ತಯಾರಿಸಲಾಗುತ್ತಿದೆ. ಇದಕ್ಕೆಂದೇ 16 ಬಾಣಸಿಗರನ್ನು ನಿಯೋಜಿಸಲಾಗಿದೆ.

‘ನಮ್ಮ ಅಡುಗೆ ಮನೆಗೆ ಭೇಟಿ ನೀಡಿದ ವಕೀಲರೊಬ್ಬರು ₹8 ಸಾವಿರ ದೇಣಿಗೆ ನೀಡಿದ್ದಲ್ಲದೇ, ಆಹಾರದ ಒಂದು ಪೊಟ್ಟಣವನ್ನು ತಮ್ಮ ಮನೆಗೆ ಒಯ್ದರು. ಅದರ ರುಚಿಗೆ ಮಾರು ಹೋದ ಅವರ ತಂದೆ, ಸಂಕಷ್ಟದ ಸಮಯದಲ್ಲೂ ಇಷ್ಟು ರುಚಿಯಾದ ಊಟ ವಿತರಿಸುವುದನ್ನು ನೋಡಿ ₹ 2.5 ಲಕ್ಷ ದೇಣಿಗೆ ನೀಡಿದರು‘ ಎಂದು ಪ್ರಸನ್ನಯ್ಯ ತಿಳಿಸಿದರು.

ಬಗೆ ಬಗೆ ತಿನಿಸು
‘ಪ್ರತಿದಿನ ಒಂದೇ ವಿಧದ ಆಹಾರ ಪೂರೈಸುತ್ತಿಲ್ಲ. ಚಿತ್ರಾನ್ನ, ಪುಳಿಯೊಗರೆ, ಪುದಿನಬಾತ್‌, ಆಲೂ ಬಾತ್‌, ಮೆಂತೆ ಬಾತ್‌, ವಾಂಗಿಬಾತ್‌, ಕ್ಯಾಪ್ಸಿಕಮ್‌ ಬಾತ್‌, ಆಲೂ–ಪುದಿನ ಬಾತ್‌, ಪಾಲಕ್‌– ಮೆಂತೆ ಬಾತ್‌, ಪಾಲಕ್‌– ಕ್ಯಾಪ್ಸಿಕಮ್‌ ಬಾತ್, ಸಬ್ಬಸಿಗೆ ಸೊಪ್ಪಿನ ಬಾತ್, ಘೀ ರೈಸ್‌... ಹೀಗೆ ಬೆಳಿಗ್ಗೆ ಮತ್ತು ಸಂಜೆ ಬೇರೆ ಬೇರೆ ಆಹಾರ ತಯಾರಿಸುತ್ತೇವೆ’ ಎಂದು ಪ್ರಸನ್ನಯ್ಯ ತಿಳಿಸಿದರು.

ಸುರಕ್ಷತೆಗೆ ಆದ್ಯತೆ
ಆಹಾರ ತಯಾರಿ ವೇಳೆ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. ಪ್ರತಿಯೊಬ್ಬ ಸ್ವಯಂಸೇವಕರ ಉಷ್ಣಾಂಶವನ್ನು ಪರಿಶೀಲಿಸಿಯೇ ಜೈನಭವನದ ಒಳಗೆ ಬಿಡಲಾಗುತ್ತದೆ. ಅವರು ಸ್ಯಾನಿಟೈಸರ್‌ ಬಳಸಿ ಕೈತೊಳೆಯುವುದು, ಮಾಸ್ಕ್‌ ಧರಿಸುವುದು ಕಡ್ಡಾಯ. ಪರಸ್ಪರ ಅಂತರ ಕಾಪಾಡಲಾಗುತ್ತಿದೆ. ಕೈಗವಸು ಮತ್ತು ತಲೆಗೆ ಕವಚ ಧರಿಸುವುದು ಕಡ್ಡಾಯ.ಇವುಗಳ ಮೇಲ್ವಿಚಾರಣೆಗಾಗಿ ವೈದ್ಯರೊಬ್ಬರನ್ನು ನಿಯೋಜಿಸಲಾಗಿದೆ.

*
1918ರಲ್ಲಿ ಆರಂಭವಾದ ನಮ್ಮ ಸಂಸ್ಥೆಯು ಬಡವರಿಗೆ ವಿದ್ಯಾರ್ಥಿಗಳಿಗೆ ನೆರವಾಗುತ್ತಿದೆ. ಇಷ್ಟೊಂದು ಪ್ರಮಾಣದಲ್ಲಿ ಅನ್ನದಾನ ಮಾಡುತ್ತಿರುವುದು ಇದೇ ಮೊದಲು.
-ಬಿ.ಪ್ರಸನ್ನಯ್ಯ, ಕರ್ನಾಟಕ ಜೈನ ಅಸೋಸಿಯೇಷನ್‌ ಅಧ್ಯಕ್ಷ

ಬೆಂಗಳೂರಿನ 'ಕರ್ನಾಟಕ ಜೈನ ಅಸೋಸಿಯೇಷನ್' ಅಧ್ಯಕ್ಷ ಬಿ. ಪ್ರಸನ್ನಯ್ಯ ಅವರೊಂದಿಗೆ ಪದಾಧಿಕಾರಿಗಳು -ಪ್ರಜಾವಾಣಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT