ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಷಕಾರಿ ಕಸ: ವಾಹನಗಳ ಮೇಲೆ ನಿಗಾ

ಜಿಪಿಎಸ್‌ ಅಳವಡಿಸಿದ ಕೆಎಸ್‌ಪಿಸಿಬಿ, ಕಮಾಂಡ್‌ ಕಂಟ್ರೋಲ್ ಕೇಂದ್ರದ ಮೂಲಕ ನಿರ್ವಹಣೆ
Last Updated 26 ಡಿಸೆಂಬರ್ 2020, 20:50 IST
ಅಕ್ಷರ ಗಾತ್ರ

ಬೆಂಗಳೂರು: ಕೈಗಾರಿಕೆ, ವೈದ್ಯಕೀಯ ಸೇರಿದಂತೆ ವಿವಿಧ ವಿಷಕಾರಿ ಕಸವನ್ನು ಎಲ್ಲೆಂದರೆಲ್ಲಿ ಸುರಿಯುತ್ತಿದ್ದ ವಾಹನಗಳಿಗೆ ಕಡಿವಾಣ ಹಾಕಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಮುಂದಾಗಿದ್ದು, ವಾಹನಗಳಿಗೆ ಜಿಪಿಎಸ್‌ ಅಳವಡಿಕೆ ಮಾಡುವ ಮೂಲಕ ನಿಗಾ ವ್ಯವಸ್ಥೆಯನ್ನು ರೂಪಿಸಿದೆ.

ರಾಜಕಾಲುವೆಗಳಿಗೆ ಹಾಗೂ ಕೆರೆಗಳಿಗೆ ಕೈಗಾರಿಕೆಗಳ ಕೊಳಚೆ ನೀರನ್ನು ಹರಿಯಬಿಡುತ್ತಿರುವ ಬಗ್ಗೆ ಮಂಡಳಿಗೆ ನಿರಂತರ ದೂರುಗಳು ಬರುತ್ತಿವೆ. ಕೆಲ ಕೈಗಾರಿಕೆಗಳಿಗೆ ಎಚ್ಚರಿಕೆಯ ನೋಟಿಸ್‌ ನೀಡಲಾಗಿದೆ. ತ್ಯಾಜ್ಯಗಳು ಕೆರೆಗಳನ್ನು ಸೇರುತ್ತಿರುವುದರಿಂದ ಕುಡಿಯುವ ನೀರು ಕಲುಷಿತವಾಗುತ್ತಿದೆ ಎಂಬ ದೂರುಗಳೂ ಮಂಡಳಿಗೆ ಬಂದಿವೆ. ಕೈಗಾರಿಕಾ ತ್ಯಾಜ್ಯ ಸೇರಿದಂತೆ ವಿವಿಧ ಕಸಗಳನ್ನು ಎಲ್ಲೆಂದರೆಲ್ಲಿ ಹಾಕುತ್ತಿರುವ ಪರಿಣಾಮ ಅದರಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾಂಕ್ರಾಮಿಕ ಕಾಯಿಲೆಗಳು ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎಂದು ತಜ್ಞರು ಎಚ್ಚರಿಸಿದ್ದರು.

‘ಪ್ರಮುಖ ಕೈಗಾರಿಕಾ ಪ್ರದೇಶಗಳಿಂದ ಕೈಗಾರಿಕಾ ತ್ಯಾಜ್ಯ ನೀರು ಹರಿದುಬರುತ್ತಿದೆ’ ಎಂದು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯು (ಕೆಐಎಡಿಬಿ) ಈ ಹಿಂದೆ ಲೋಕಾಯುಕ್ತಕ್ಕೆ ವರದಿ ನೀಡಿತ್ತು. ಈ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವಂತೆ ಕೆಎಸ್‌ಪಿಸಿಬಿಗೆ ಲೋಕಾಯುಕ್ತ ಆದೇಶಿಸಿತ್ತು. ಅದರ ಅನುಸಾರ ಮಂಡಳಿಯು ರಾಜಕಾಲುವೆಗಳಿಗೆ ತ್ಯಾಜ್ಯ ನೀರನ್ನು ಹರಿಯಬಿಡುವ 76 ಕೈಗಾರಿಕೆಗಳನ್ನು ಮುಚ್ಚುವಂತೆ ಕಳೆದ ಜನವರಿಯಲ್ಲಿ ನೋಟಿಸ್‌ ನೀಡಿತ್ತು. ಈಗ ತ್ಯಾಜ್ಯ ನೀರನ್ನು ಸಾಗಿಸುವ ಎಲ್ಲ 70 ವಾಹನಗಳಿಗೆ ಮಂಡಳಿಯು ಜಿ‍ಪಿಎಸ್ ಅಳವಡಿಕೆ ಮಾಡಿದೆ.

ನಿರಂತರ ನಿಗಾ: ‘ತ್ಯಾಜ್ಯ ನೀರು ಸಂಸ್ಕರಣೆಯ 10 ಘಟಕಗಳು (ಸಿಇಟಿಪಿ) ರಾಜ್ಯದಲ್ಲಿವೆ. ಅವು ಸುಮಾರು ಒಂದು ಸಾವಿರ ಕೈಗಾರಿಕೆಗಳ ತ್ಯಾಜ್ಯವನ್ನು ಸಂಸ್ಕರಣೆ ಮಾಡುತ್ತಿವೆ. ಇಷ್ಟು ದಿನ ತ್ಯಾಜ್ಯ ನೀರನ್ನು ಕೆಲ ಕೈಗಾರಿಕೆಗಳು ಸಾರ್ವಜನಿಕ ಪ್ರದೇಶಗಳಲ್ಲಿ ಹರಿಬಿಡುತ್ತಿದ್ದವು. ಕಸವನ್ನೂ ಮನಬಂದಲ್ಲಿ ಹಾಕುತ್ತಿದ್ದವು. ಈ ಬಗ್ಗೆ ದೂರುಗಳು ಬರುತ್ತಿದ್ದವು. ಇದನ್ನು ತಡೆಯಬೇಕೆಂಬ ಉದ್ದೇಶದಿಂದ ನಾವೇ ಎಲ್ಲ 70 ವಾಹನಗಳಿಗೆ ಜಿಪಿಎಸ್ ತಂತ್ರಜ್ಞಾನವನ್ನು ಅಳವಡಿಕೆ ಮಾಡಿಸಿದ್ದೇವೆ. ಇದರಿಂದ ಆ ವಾಹನಗಳ ಮೇಲೆ ವಾರದ ಎಲ್ಲ ದಿನಗಳು ನಿಗಾ ಇಡಲು ಸಾಧ್ಯವಾಗುತ್ತದೆ’ ಎಂದು ಮಂಡಳಿಯ ಸದಸ್ಯ ಕಾರ್ಯದರ್ಶಿ ಶ್ರೀನಿವಾಸಲು ತಿಳಿಸಿದರು.

‘ವೈದ್ಯಕೀಯ ತ್ಯಾಜ್ಯವೂ ಸೇರಿದಂತೆ ಅಪಾಯಕಾರಿ ಕಸ ವಿಲೇವಾರಿ ಮಾಡುವ ವಾಹನಗಳಿಗೆ ಕೂಡ ಇದೇ ರೀತಿ ಜಿಪಿಎಸ್‌ ತಂತ್ರಜ್ಞಾನ ಅಳವಡಿಸಲಾಗಿದೆ. ವಾಹನಗಳು ಸಂಸ್ಕರಣಾ ಘಟಕಕ್ಕೆ ತ್ಯಾಜ್ಯವನ್ನು ವಿಲೇವಾರಿ ಮಾಡುವ ಬದಲು ಬೇರೆ ಪ್ರದೇಶದಲ್ಲಿ ಹಾಕಿದಲ್ಲಿ ಸುಲಭವಾಗಿ ಪತ್ತೆ ಮಾಡಿ, ಕ್ರಮಕೈಗೊಳ್ಳಲು ಸಾಧ್ಯ’ ಎಂದರು.

ಪ್ರತ್ಯೇಕ ಮೊಬೈಲ್ ಆ್ಯಪ್ ಅಭಿವೃದ್ಧಿ
ಕೈಗಾರಿಕಾ ತ್ಯಾಜ್ಯ ಹಾಗೂ ಅಪಾಯಕಾರಿ ತ್ಯಾಜ್ಯವನ್ನು ಒಳಗೊಂಡ ವಾಹನಗಳ ವಿವರ ಹಾಗೂ ಅವುಗಳು ಸಾಗುವ ಮಾರ್ಗದ ಮಾಹಿತಿಯನ್ನು ಒದಗಿಸುವ ಮೊಬೈಲ್‌ ಆ್ಯಪ್‌ ಅನ್ನು ಮಂಡಳಿಯು ಅಭಿವೃದ್ಧಿಪಡಿಸಿದೆ. ಈ ಆ್ಯಪ್‌ನ ನೆರವಿನಿಂದ ವಾಹನದ ಪ್ರತಿ ಚಲನವಲನವನ್ನು ವೀಕ್ಷಿಸಲು ಸಾಧ್ಯ. ಇದನ್ನು ಮಂಡಳಿಯ ಕಮಾಂಡ್‌ ಕಂಟ್ರೋಲ್ ಕೇಂದ್ರವು ನಿರ್ವಹಣೆ ಮಾಡಲಿದೆ. ಇದಕ್ಕಾಗಿಯೇ ಇಬ್ಬರು ಸಿಬ್ಬಂದಿಯನ್ನು ಮಂಡಳಿಯು ನಿಯೋಜಿಸಲು ಮುಂದಾಗಿದೆ.

‘ಮಾಲಿನ್ಯವನ್ನು ನಿಯಂತ್ರಣ ಮಾಡಲು ಹಾಗೂ ಹೆಚ್ಚು ಕೈಗಾರಿಕಾ ತ್ಯಾಜ್ಯವನ್ನು ಹೊರಸೂಸುವ ಕೈಗಾರಿಕೆಗಳ ಮೇಲೆ ನಿಗಾ ಇಡಲು ಕಂಟ್ರೋಲ್ ಕೇಂದ್ರವನ್ನು ಸ್ಥಾಪಿಸಲಾಗಿದೆ. ಈ ಕೇಂದ್ರವು ಪ್ರತಿ 15 ನಿಮಿಷಕ್ಕೊಮ್ಮೆ ಕಾರ್ಖಾನೆಗಳ ವಾಯು, ಶಬ್ದ ಮತ್ತು ಜಲ ಮಾಲಿನ್ಯದ ಮಾಹಿತಿಯನ್ನು ಅಪ್‌ಡೇಟ್ ಮಾಡಲಿವೆ. ನಿಗದಿಗಿಂತ ಹೆಚ್ಚು ಮಾಲಿನ್ಯವಿದ್ದಲ್ಲಿ ಕಾರ್ಖಾನೆಗೆ ಸ್ವಯಂಚಾಲಿತ ಸಂದೇಶ ಹೊಗಲಿವೆ. ಅದೇ ಕೇಂದ್ರದಿಂದ ತ್ಯಾಜ್ಯ ವಿಲೇವಾರಿ ವಾಹನಗಳನ್ನೂ ನಿರ್ವಹಿಸಲಾಗುವುದು’ ಎಂದು ಶ್ರೀನಿವಾಸಲು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT