ಗುರುವಾರ , ಜನವರಿ 28, 2021
25 °C
ಅಬಕಾರಿ ಇಲಾಖೆಗೆ ಒಂದೇ ವಾರದಲ್ಲಿ ₹ 519 ಕೋಟಿ ಆದಾಯ

ವರ್ಷಾಂತ್ಯದಲ್ಲಿ ಮದ್ಯ ಮಾರಾಟ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊರೊನಾ ಕಾರಣಕ್ಕೆ ವರ್ಷಾಂತ್ಯದ ಸಂಭ್ರಮಕ್ಕೆ ಸರ್ಕಾರ ನಿರ್ಬಂಧ ವಿಧಿಸಿದ್ದರೂ ಮದ್ಯ ಮಾರಾಟದ ಮೇಲೆ ಇದು ಅಡ್ಡ ಪರಿಣಾಮ ಬೀರಿಲ್ಲ. ಮದ್ಯಪ್ರಿಯರು ಹೊಸವರ್ಷವನ್ನು ಭರ್ಜರಿಯಾಗಿಯೇ ಎದುರುಗೊಂಡಿರುವುದಕ್ಕೆ ಅಬಕಾರಿ ಇಲಾಖೆಯ ಆದಾಯವೇ ಸಾಕ್ಷಿಯಾಗಿದೆ.

ಡಿಸೆಂಬರ್‌ 24ರಿಂದ 31ರ ನಡುವಿನ ಅವಧಿಯಲ್ಲಿ ಅಬಕಾರಿ ಇಲಾಖೆಯ ಬೊಕ್ಕಸಕ್ಕೆ ₹ 519 ಕೋಟಿ ಆದಾಯ ಸಂಗ್ರಹವಾಗಿದೆ.

ಕೋವಿಡ್‌ ಕಾರಣದಿಂದ 2020ರಲ್ಲಿ ಅಬಕಾರಿ ಇಲಾಖೆಯಲ್ಲಿ ತೆರಿಗೆ ಸಂಗ್ರಹ ಕುಸಿದಿತ್ತು. ಕೊನೆಯ ವಾರ ಹಿಂದಿನ ವರ್ಷಕ್ಕೆ ಸರಿಸಮನಾಗಿ ವಹಿವಾಟು ನಡೆದಿದೆ. 2019ರ ಡಿ.24ರಿಂದ 31ರ ಅವಧಿಯಲ್ಲಿ ₹ 500 ಕೋಟಿ ಅಬಕಾರಿ ತೆರಿಗೆ ಸಂಗ್ರಹವಾಗಿತ್ತು. ಈ ಬಾರಿ ಇನ್ನೂ ಹೆಚ್ಚಾಗಿದೆ.

ಬೆಂಗಳೂರು ನಗರದಲ್ಲಿ ಜಿಲ್ಲೆಯಲ್ಲಿ 2019ರ ಕೊನೆಯ ವಾರ ₹ 285 ಕೋಟಿ ಮೌಲ್ಯದ ಮದ್ಯ ಮಾರಾಟವಾಗಿತ್ತು. 2020ರ ಕೊನೆಯ ವಾರದಲ್ಲಿ ₹ 284 ಕೋಟಿ ಮೌಲ್ಯದ ಮದ್ಯ ಬಿಕರಿಯಾಗಿದೆ. ಎಂ.ಜಿ. ರಸ್ತೆ, ಬ್ರಿಗೇಡ್‌ ರಸ್ತೆ ಸುತ್ತಮುತ್ತ ಹೊಸ ವರ್ಷಾಚರಣೆಗೆ ನಿಷೇಧ ಹೇರಲಾಗಿತ್ತು. ಪರಿಣಾಮವಾಗಿ ಇತರ ಪ್ರದೇಶಗಳ ಮದ್ಯದಂಗಡಿಗಳಲ್ಲಿ ಹೆಚ್ಚಿನ ವಹಿವಾಟು ನಡೆದಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

2020–21ನೇ ಆರ್ಥಿಕ ವರ್ಷದಲ್ಲಿ ತೆರಿಗೆಯಿಂದ ₹22,700 ಕೋಟಿ ವರಮಾನದ ಗುರಿ ಹೊಂದಲಾಗಿತ್ತು. 2020ರ ವರ್ಷಾಂತ್ಯದ ಮದ್ಯ ಮಾರಾಟದ ವಹಿವಾಟು ವರಮಾನ ಸಂಗ್ರಹದಲ್ಲಿ ಗುರಿ ತಲುಪುವ ನಿರೀಕ್ಷೆ ಮೂಡಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು