ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಯಿಯೇ ಮೂತ್ರಪಿಂಡ ದಾನಕ್ಕೆ ಮುಂದಾದರೂ ಸಂಬಂಧದ ಮೇಲೆ ಸಂದೇಹಪಟ್ಟ ವೈದ್ಯರು!

ಅಂಗಾಂಗ ಕಸಿಗೆ ‘ಡಿಎನ್‌ಎ ಪರೀಕ್ಷೆ’ ಅಡ್ಡಿ
Last Updated 25 ನವೆಂಬರ್ 2019, 7:29 IST
ಅಕ್ಷರ ಗಾತ್ರ

ಬೆಂಗಳೂರು: ಮೂತ್ರಪಿಂಡ ಸಮಸ್ಯೆ ಯಿಂದ ಬಳಲುತ್ತಿರುವ ರೋಗಿಗಳಿಗೆ ಕುಟುಂಬದ ಸದಸ್ಯರೇ ಅಂಗಾಂಗ ದಾನಕ್ಕೆ ಮುಂದಾದರೂ ಅವರ ಸಂಬಂಧಗಳ ಬಗ್ಗೆ ಸಂದೇಹ ವ್ಯಕ್ತಪಡಿಸುತ್ತಿರುವವೈದ್ಯರು, ಡಿಎನ್‌ಎ ಪರೀಕ್ಷೆಗೆ ಸೂಚಿಸುತ್ತಿದ್ದಾರೆ. ಇದರಿಂದಾಗಿ ಅಂಗಾಂಗ ಕಸಿ ಮಾಡಿಸಿಕೊಳ್ಳಬೇಕಾದ ರೋಗಿಗಳು ಸಮಸ್ಯೆ ಎದುರಿಸುವಂತಾಗಿದೆ.

ಸರ್ಕಾರದ ‘ಜೀವಸಾರ್ಥಕತೆ’ ಯೋಜನೆಯಡಿ ಸಾವಿರಾರು ಮಂದಿ ಹೆಸರು ನೋಂದಾಯಿಸಿಕೊಂಡು ಮೂತ್ರಪಿಂಡ ಕಸಿಗೆ ಎದುರು ನೋಡುತ್ತಿ ದ್ದಾರೆ.ಮೂತ್ರಪಿಂಡ ವೈಫಲ್ಯದಂತಹ ಗಂಭೀರ ಸಮಸ್ಯೆ ಎದುರಿಸುತ್ತಿರುವ ರೋಗಿಗಳ ಜೀವ ಉಳಿಸಲು ಅಂಗಾಂಗ ಕಸಿ ಒಂದೇ ಪರಿಹಾರ.

ಖಾಸಗಿ ಆಸ್ಪತ್ರೆಗಳಲ್ಲಿ ಈ ಕಸಿ ಮಾಡಿಸಿಕೊಳ್ಳಲು ದುಬಾರಿ ವೆಚ್ಚವಾಗುತ್ತದೆ. ಈ ಕಸಿಯ ಅಗತ್ಯವಿರುವ ಬಡವರಿಗೆ ನೆರವಾಗಲು ರಾಜ್ಯ ಸರ್ಕಾರ ಈ ವರ್ಷ ದಿಂದ ಅಂಗಾಂಗ ಕಸಿ ಯೋಜನೆ ಪ್ರಾರಂಭಿಸಿತ್ತು. ಯೋಜನೆಯಡಿ ಫಲಾನುಭವಿಯ ಕಿಡ್ನಿ ಕಸಿಗೆ ₹ 3 ಲಕ್ಷ ನೀಡಲಾಗುತ್ತದೆ. ಇದಕ್ಕಾಗಿ ಬಜೆಟ್‌ನಲ್ಲಿ ₹ 7.50 ಕೋಟಿ ಮೀಸಲಿಟ್ಟಿದೆ. ಆದರೆ, ಕಸಿ ಮಾಡಿಸಿಕೊಳ್ಳುವ ಮುನ್ನ ನಡೆಸುವ ಎಚ್ಎಲ್‌ಎ, ಡಿಎನ್‌ಎ ಸೇರಿದಂತೆ ವಿವಿಧ ಪರೀಕ್ಷೆಗಳು ದುಬಾರಿಯಾಗಿವೆ. ಈ ವೆಚ್ಚವು ಸರ್ಕಾರಿ ಆರೋಗ್ಯ ಯೋಜನೆಗಳಡಿ ಬರುವುದಿಲ್ಲ. ಇದು ರೋಗಿಗಳ ಸಂಕಷ್ಟಕ್ಕೆ ಕಾರಣವಾಗಿದೆ.

ಈ ನಡುವೆ ಸಂಬಂಧದ ಬಗ್ಗೆ ಅಗತ್ಯ ದಾಖಲಾತಿಯನ್ನು ನೀಡಿದರೂ ನೆಫ್ರೊ ಯುರಾಲಜಿ ಸಂಸ್ಥೆಯ ವೈದ್ಯರು ಡಿಎನ್‌ಎ ಪರೀಕ್ಷೆಗೆ ಸೂಚಿಸುತ್ತಿದ್ದಾರೆ. ದಾನಿ ಮುಂದೆ ಬಂದರೂ ಹಲವರು ಮೂತ್ರಪಿಂಡ ಕಸಿಯನ್ನು ಮುಂದೂಡುತ್ತಿದ್ದಾರೆ. ಡಿಎನ್‌ಎ ಪರೀಕ್ಷೆಗೆ ಖಾಸಗಿ ಪ್ರಯೋಗಾಲಯಗಳು ₹ 40 ಸಾವಿರದಿಂದ ₹ 50 ಸಾವಿರ ಶುಲ್ಕ ಪಡೆಯುತ್ತವೆ.

ಮೂತ್ರಪಿಂಡ ಕಸಿ ಮಾಡುವ ಮುನ್ನ ನಾಲ್ಕು ಮಾದರಿಗಳ ಪರೀಕ್ಷೆಗಳಿಗೆ ಸೂಚಿಸಲು ಅವಕಾಶವಿದೆ.

ಕ್ರಾಸ್‌ ಮ್ಯಾಚಿಂಗ್‌, ಡಿಎಸ್‌ಎ, ಎಚ್‌ಎಲ್‌ಎ ಹಾಗೂ ಡಿಎನ್‌ಎ ಪರೀಕ್ಷೆಯನ್ನು ರೋಗಿಗಳು ಹಾಗೂ ದಾನಿಗಳಿಗೆ ಅನುಗುಣವಾಗಿ ಮಾಡಿಸಲಾಗುತ್ತದೆ. ಎಚ್‌ಎಲ್‌ಎ ಪರೀಕ್ಷೆ ಸಾಮಾನ್ಯವಾಗಿದ್ದು,ಜೀವಕೋಶಗಳು ಮತ್ತು ಅಂಗಾಂಶಗಳ ಮೇಲ್ಮೈಯಲ್ಲಿ ಪ್ರತಿಜನಕಗಳನ್ನು ಗುರುತಿಸುವ ರಕ್ತ ಪರೀಕ್ಷೆ ಇದಾಗಿದೆ. ಕಸಿ ಹೊಂದಿಸಲು ಈ ಪರೀಕ್ಷೆ ಮಾಡಲಾಗುತ್ತದೆ. ಆದರೆ, ಡಿಎನ್‌ಎ ಪರೀಕ್ಷೆ ಏಕೆ ಎನ್ನುವುದು ರೋಗಿಗಳ ಪ್ರಶ್ನೆ.

ತಾಯಿ–ಮಗನ ಸಂಬಂಧದ ಬಗ್ಗೆಯೂ ಸಂದೇಹ:ಮೈಸೂರಿನ ದಾಸನ ಕೊಪ್ಪಲು ಗ್ರಾಮದ 37 ವರ್ಷದ ಆಟೊ ಚಾಲಕರೊಬ್ಬರು ಡಿಎನ್‌ಎ ಪರೀಕ್ಷೆಗೆ ಹಣ ಸಾಲದೆ ಕಸಿಯನ್ನೇ ಮುಂದೂಡಿದ್ದಾರೆ. ಮಗನ ನೋವಿಗೆ ಮರುಗಿದ ತಾಯಿ ಸ್ವತಃ ಮೂತ್ರಪಿಂಡ ದಾನ ಮಾಡಲು ಮುಂದೆ ಬಂದಿದ್ದಾರೆ.‌ಸಂಬಂಧದ ಬಗ್ಗೆ ಜನ್ಮ ದಾಖಲಾತಿ, ಆಧಾರ್ ಸೇರಿದಂತೆ ವಿವಿಧ ದಾಖಲಾತಿ ನೀಡಿದರೂನೆಫ್ರೊ ಯುರಾಲಜಿ ಸಂಸ್ಥೆಯ ವೈದ್ಯರು ಡಿಎನ್‌ಎ ಪರೀಕ್ಷೆಗೆ ಸೂಚಿಸಿದ್ದಾರೆ. ಇದರಿಂದ ಮೂತ್ರಪಿಂಡ ಕಸಿ ಇನ್ನಷ್ಟು ವಿಳಂಬವಾಗಿದೆ.

‘ಮೂತ್ರಪಿಂಡ ಸಮಸ್ಯೆಯಿಂದಾಗಿ ಮನೆಯಲ್ಲೇ ಇರಬೇಕಾದ ಪರಿಸ್ಥಿತಿ ಬಂದೊದಗಿದೆ. ಆಟೊರಿಕ್ಷಾ ಚಲಾಯಿ ಸುವ ಆದಾಯದಿಂದಲೇ ಕುಟುಂಬ ಸಾಗುತಿತ್ತು. ಈಗಾಗಲೇ ಮೂರು ಬಾರಿ ಡಯಾಲಿಸಿಸ್ ಮಾಡಿಸಿಕೊಂಡಿದ್ದೆ. ಈ ಸಮಸ್ಯೆಗೆ ಕಿಡ್ನಿ ಕಸಿಯೊಂದೇ ಪರಿಹಾರ ಎಂದು ವೈದ್ಯರು ಸೂಚಿಸಿದರು. ಇದೀಗ ತಾಯಿಯೇ ಮೂತ್ರಪಿಂಡ ದಾನಕ್ಕೆ ಮುಂದೆ ಬಂದಿದ್ದಾರೆ. ನಮ್ಮ ಸಂಬಂಧದ ಬಗ್ಗೆ ಅಗತ್ಯ ಮಾಹಿತಿ ಒದಗಿಸಿದರೂ ಡಿಎನ್‌ಎ ಪರೀಕ್ಷೆಗೆ ಮಾಡಿಸುವಂತೆ ವೈದ್ಯರು ಸೂಚಿಸಿದ್ದಾರೆ. ಆದರೆ, ಅದಕ್ಕೆ ಹಣ ಹೊಂದಿಸಲು ಸಾಧ್ಯವಾಗುತ್ತಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ರೋಗಿ ಯೊಬ್ಬರು ‘ಪ್ರಜಾವಾಣಿ’ ಜೊತೆ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT