ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರಿ ದಂಡಕ್ಕೆ ಬೆದರಿದ ವಾಹನ ಚಾಲಕರು: ಬಿಎಂಟಿಸಿಗೆ ₹3.5 ಕೋಟಿ ವರಮಾನ ಹೆಚ್ಚಳ

Last Updated 16 ಸೆಪ್ಟೆಂಬರ್ 2019, 19:46 IST
ಅಕ್ಷರ ಗಾತ್ರ

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸುತ್ತಿರುವ ಭಾರಿ ದಂಡಕ್ಕೆ ಬೆದರಿರುವ ವಾಹನ ಚಾಲಕರು ಸಮೂಹ ಸಾರಿಗೆಯ ಮೊರೆ ಹೋಗಿದ್ದಾರೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್‌ನಲ್ಲಿ ಪ್ರಯಾಣಿಸುವವರ ಸಂಖ್ಯೆ ಕಳೆದ 15 ದಿನಗಳಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ.

ಚಾಲನಾ ಪರವಾನಗಿ, ವಿಮೆ ನವೀಕರಣ, ಮಾಲೀಕತ್ವ ವರ್ಗಾವಣೆ, ವಾಯುಮಾಲಿನ್ಯ ಪ್ರಮಾಣಪತ್ರ ಸೇರಿದಂತೆ ವಿವಿಧ ದಾಖಲಾತಿ ಪಡೆಯಲು ಸಾರಿಗೆ ಇಲಾಖೆಯ ಕಚೇರಿಗಳಿಗೆ ಸವಾರರು ಎಡತಾಕುತ್ತಿದ್ದಾರೆ. ಇನ್ನೊಂದೆಡೆ, ದಾಖಲೆಗಳಲ್ಲಿ ಒಂದಿಲ್ಲದಿದ್ದರೂ ವಾಹನಗಳನ್ನು ರಸ್ತೆಗೆ ಇಳಿಸಲು ಭಯಪಡುತ್ತಿದ್ದಾರೆ. ದಾಖಲೆಗಳಿದ್ದರೂ ರಸ್ತೆಯಲ್ಲಿ ಎದುರಾಗುವ ಸಂಚಾರ ಪೊಲೀಸರು ಒಂದಿಲ್ಲೊಂದು ಕಾರಣಕ್ಕೆ ದಂಡ ವಿಧಿಸಬಹುದು ಎಂಬ ಭಯ ಕೂಡ ವಾಹನ ಸವಾರರನ್ನು ಕಾಡುತ್ತಿದೆ.

ಹೀಗಾಗಿ ಸಮೂಹ ಸಾರಿಗೆಯತ್ತ ಜನರು ವಾಲುತ್ತಿದ್ದಾರೆ ಎಂಬುದನ್ನು ಬಿಎಂಟಿಸಿ ಅಂಕಿ–ಅಂಶಗಳು ಪುಷ್ಟೀಕರಿಸುತ್ತಿವೆ. ಪಾಸ್ ಹೊಂದಿದವರು ಸೇರಿಪ್ರತಿನಿತ್ಯ ಸರಾಸರಿ 35 ಲಕ್ಷದಿಂದ 40 ಲಕ್ಷ ಪ್ರಯಾಣಿಕರು ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಸೆಪ್ಟೆಂಬರ್ ಒಂದರಿಂದ ಈಚೆಗೆ ಹೆಚ್ಚುವರಿಯಾಗಿ ಸರಾಸರಿ 2.50 ಲಕ್ಷ ಪ್ರಯಾಣಿಕರು ಪ್ರತಿನಿತ್ಯ ಬಿಎಂಟಿಸಿ ಬಸ್‌ಗಳನ್ನು ಹತ್ತಿದ್ದಾರೆ ಎಂದು ಅಂದಾಜಿಸಲಾಗಿದೆ.

ಸೆಪ್ಟೆಂಬರ್‌ 1ರಿಂದ 15ರವರೆಗಿನ ಅವಧಿಯಲ್ಲಿ ಬಿಎಂಟಿಸಿ ವರಮಾನ ಹೆಚ್ಚಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ₹53.47 ಕೋಟಿ ಇದ್ದ ವರಮಾನ, ಈ ವರ್ಷ ₹56.88 ಕೋಟಿಗೆ ಹೆಚ್ಚಳವಾಗಿದೆ. ₹3.41 ಕೋಟಿ ಅಧಿಕ ವರಮಾನ ಸಂಸ್ಥೆಗೆ ಬಂದಿದೆ ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದರು.

‘ದಂಡಕ್ಕೆ ಹೆದರಿ ಬಿಎಂಟಿಸಿ ಬಸ್‌ನಲ್ಲಿ ಜನ ಪ್ರಯಾಣ ಮಾಡುತ್ತಿದ್ದಾರೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಪ್ರಯಾಣಿಕರ ಸಂಖ್ಯೆ ಮಾತ್ರ ಹೆಚ್ಚಾಗಿದೆ’ ಎನ್ನುತ್ತಾರೆ ಅವರು. ಆದರೆ, ನಿಯಮ ಉಲ್ಲಂಘನೆಗೆ ಇರುವ ದಂಡದ ಮೊತ್ತವನ್ನು ನೋಡಿದರೆ ಬೈಕ್ ಬದಲು ಸಮೂಹ ಸಾರಿಗೆಯನ್ನು ಬಳಸುವುದೇ ಉತ್ತಮ ಎನ್ನುತ್ತಿದ್ದಾರೆ ಪ್ರಯಾಣಿಕರು.

‘ಎಲ್ಲಾ ದಾಖಲೆಗಳಿದ್ದರೂ ಒಂದಿಲ್ಲೊಂದು ಕಾರಣ ಹುಡುಕಿ ಸಂಚಾರ ಪೊಲೀಸರು ದಂಡ ವಿಧಿಸುತ್ತಾರೆ. ಹೊಸದಾಗಿ ನಿಯಮ ಉಲ್ಲಂಘಿಸದೇ ಇದ್ದರೂ, ಹಳೇ ಪ್ರಕರಣಗಳಿಗಾದರೂ ದಂಡ ಕಟ್ಟಲೇಬೇಕು. ರಸ್ತೆಯಲ್ಲಿ ಪೊಲೀಸರ ಬಳಿ ಅಂಗಲಾಚುವ ಬದಲು ಮೆಟ್ರೊ ರೈಲು ಅಥವಾ ಬಿಎಂಟಿಸಿ ಬಸ್‌ನಲ್ಲಿ ಸಂಚರಿಸುವುದೇ ಲೇಸು’ ಎನ್ನುತ್ತಾರೆ ವಾಹನ ಸವಾರರು.‌

‘ತುರ್ತು ಸಂದರ್ಭಗಳಲ್ಲಿ ಮಾತ್ರ ಬೈಕ್ ಅಥವಾ ಕಾರು ಬಳಸಬಹುದು. ಉಳಿದಂತೆ ಬಸ್‌ನಲ್ಲಿ ಸಂಚರಿಸುವುದೇ ಒಳ್ಳೆಯದು. 10 ದಿನಗಳಿಂದ ಬಸ್‌ ಮತ್ತು ಮೆಟ್ರೊ ರೈಲಿನಲ್ಲಿ ಸಂಚರಿಸುತ್ತಿದ್ದೇನೆ. ಬಸ್‌ ಪ್ರಯಾಣಕ್ಕೆ ಹೊಂದಿಕೊಂಡಿದ್ದೇನೆ. ದಂಡ ಇಳಿಸಿದರೂ ಇನ್ನು ಮುಂದೆ ಸಮೂಹ ಸಾರಿಗೆಯನ್ನೇ ಬಳಸಬೇಕು ಎಂದುಕೊಂಡಿದ್ದೇನೆ’ ಎಂದು ಮಹಾಲಕ್ಷ್ಮಿ ಲೇಔಟ್‌ನ ಶ್ರೀನಿವಾಸಮೂರ್ತಿ ಹೇಳಿದರು.

*
ಬಸ್‌ನಲ್ಲಿ ಪ್ರಯಾಣಿಸುವವರ ಸಂಖ್ಯೆ ಸ್ವಲ್ಪಮಟ್ಟಿಗೆ ಹೆಚ್ಚಳವಾಗಿದೆ. ಇದರಿಂದಾಗಿ ಸಂಸ್ಥೆಯ ವರಮಾನವೂ ಏರಿಕೆಯಾಗಿದೆ
-ಸಿ.ಶಿಖಾ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ

ಅಂಕಿ–ಅಂಶ
11.38 ಲಕ್ಷ ಕಿ.ಮೀ - ಪ್ರತಿನಿತ್ಯ ಬಿಎಂಟಿಸಿ ಬಸ್‌ಗಳು ಸಂಚರಿಸುವ ದೂರ
40 ಲಕ್ಷ - ಪ್ರತಿನಿತ್ಯ ಬಿಎಂಟಿಸಿ ಬಸ್‌ನಲ್ಲಿ ಸಂಚರಿಸುವ ಸರಾಸರಿ ಪ್ರಯಾಣಿಕರು
ಶೇ 6.5 -ಸೆಪ್ಟೆಂಬರ್‌ನಲ್ಲಿ ಹೆಚ್ಚಳವಾಗಿರುವ ಪ್ರಯಾಣಿಕರ ಪ್ರಮಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT