ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೃತ ನಗರೋತ್ಥಾನ ಯೋಜನೆ ಅನುದಾನದಲ್ಲೂ ಪಕ್ಷ ತಾರತಮ್ಯ

₹3,850 ಕೋಟಿಯಲ್ಲಿ ಬಿಜೆಪಿ ಶಾಸಕರಿಗೆ ₹2,718 ಕೋಟಿ
Last Updated 6 ಅಕ್ಟೋಬರ್ 2022, 12:31 IST
ಅಕ್ಷರ ಗಾತ್ರ

ಬೆಂಗಳೂರು: ಚುನಾವಣೆಗೆ 9 ತಿಂಗಳು ಬಾಕಿ ಇರುವ ಹೊತ್ತಿನೊಳಗೆ ರಾಜಧಾನಿಯಲ್ಲಿ ಕಣ್ಣಿಗೆ ಕಾಣುವಂತೆ ಅಭಿವೃದ್ಧಿ ಕಾಮಗಾರಿಗಳನ್ನು ತುರ್ತಾಗಿ ಕೈಗೊಳ್ಳಬೇಕೆಂಬ ಉದ್ದೇಶದಿಂದ ಅಮೃತ ನಗರೋತ್ಥಾನ ಯೋಜನೆಯಡಿ ನೀಡಿರುವ ಅನುದಾನದಲ್ಲಿ ಪಕ್ಷ ತಾರತಮ್ಯ ಮಾಡಲಾಗಿದೆ ಎಂಬ ಆರೋಪ ವ್ಯಕ್ತವಾಗಿದೆ.

ಮುಖ್ಯಮಂತ್ರಿ ಅಮೃತ ನಗರೋತ್ಥಾನ ಯೋಜನೆಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ₹6 ಸಾವಿರ ಕೋಟಿಗೆ ಅನುಮೋದನೆ ನೀಡಲಾಗಿದೆ. ಇದರಲ್ಲಿ ವಿಧಾನಸಭೆ ಕ್ಷೇತ್ರವಾರು 28 ಶಾಸಕರಿಗೆ ಒಟ್ಟು ₹3,850 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಈ ಪೈಕಿ ಬಿಜೆಪಿ ಶಾಸಕರಿಗೆ ಅತಿ ಹೆಚ್ಚು ಅನುದಾನ ಸಿಕ್ಕಿದೆ.

ವಿಧಾನಸಭೆ ಕ್ಷೇತ್ರವಾರು ಅನುಮೋದನೆಯನ್ನು ಹಣದ ಪ್ರಮಾಣದಲ್ಲಿ ತೋರಿಸಲಾಗಿದೆ. ಅಂದರೆ, ಇಂತಹದ್ದೇ ಕಾಮಗಾರಿಗಳಿಗೆ ಈ ಹಣ ಎಂದು ನಿರ್ದಿಷ್ಟವಾಗಿ ತೋರಿಸಿಲ್ಲ. ಶಾಸಕರು ತಮಗೆ ಬೇಕಾದ ಕಾಮಗಾರಿಗಳಿಗೆ ಈ ಹಣವನ್ನು ವೆಚ್ಚ ಮಾಡಬಹುದು. ‘ಕಾಮಗಾರಿಗಳನ್ನು ಒಂದು ತಿಂಗಳಲ್ಲಿ ಆರಂಭಿಸಲು ಕ್ರಮ ಕೈಗೊಳ್ಳಬೇಕು’ ಎಂಬ ಷರತ್ತು ವಿಧಿಸಿ ನಗರಾಭಿವೃದ್ಧಿ ಇಲಾಖೆ ಜೂನ್‌ 18ರಂದು ಆದೇಶ ಹೊರಡಿಸಿದೆ.

‘ನಗರದ ಅಭಿವೃದ್ಧಿ ಎಂದರೆ ಬಿಬಿಎಂಪಿ ವ್ಯಾಪ್ತಿಯ ಎಲ್ಲ ವಾರ್ಡ್‌ ಹಾಗೂ ವಿಧಾನಸಭೆ ಕ್ಷೇತ್ರಗಳಲ್ಲೂ ಆಗಬೇಕು. ಕೆಲವು ಭಾಗಗಳಲ್ಲಿ ಕಡಿಮೆ, ಕೆಲವು ಕಡೆಗಳಲ್ಲಿ ಹೆಚ್ಚು ಎನ್ನುವುದು ಸರಿಯಲ್ಲ. ಅದರಲ್ಲೂ ಬಿಜೆಪಿ ಶಾಸಕರಿರುವ ಕ್ಷೇತ್ರಕ್ಕೇ ಅತಿ ಹೆಚ್ಚು ಹಣ ನೀಡಿರುವುದು ತಾರತಮ್ಯವೇ ಹೌದು. ಅವರಿಗೇ ಎಲ್ಲ ಕೊಟ್ಟು, ಅಳಿದು–ಉಳಿದದ್ದನ್ನು ನಮಗೆ ನೀಡುತ್ತಿರುವುದು ಯಾವ ಕಲ್ಯಾಣ ಕಾರ್ಯ’ ಎಂದು ಕಾಂಗ್ರೆಸ್‌ ಶಾಸಕರು ಪ್ರಶ್ನಿಸುತ್ತಿದ್ದಾರೆ.

ಅಮೃತ ನಗರೋತ್ಥಾನ ಯೋಜನೆಯ ಒಟ್ಟು ಅನುದಾನದಲ್ಲಿ ಶೇ 64ರಷ್ಟು ಹಣವನ್ನು ವಿಧಾನಸಭೆ ಕ್ಷೇತ್ರಗಳಿಗೆ ಎಂಬ ಷರಾದಲ್ಲೇ ಬಿಡುಗಡೆ ಮಾಡಲಾಗಿದೆ. ₹3,850 ಕೋಟಿಯಲ್ಲಿ ಬಿಜೆಪಿಯ 15 ಶಾಸಕರಿಗೆ ಶೇ 70ರಷ್ಟು ಅಂದರೆ ₹2,718 ಕೋಟಿ ಹಂಚಲಾಗಿದೆ. ಮಹದೇವಪುರದ ಅರವಿಂದ ಲಿಂಬಾವಳಿ, ರಾಜರಾಜೇಶ್ವರಿನಗರದ ಮುನಿರತ್ನ (ತಲಾ ₹208 ಕೋಟಿ) ಅಗ್ರ ಸ್ಥಾನದಲ್ಲಿದ್ದಾರೆ. ಬಸವನಗುಡಿಯ ರವಿ ಸುಬ್ರಹ್ಮಣ್ಯ ಬಿಜೆಪಿ ಶಾಸಕರ ಹಣ(₹175 ಕೋಟಿ) ಹಂಚಿಕೆ ಪಟ್ಟಿಯಲ್ಲಿ ಕೊನೆಯಲ್ಲಿದ್ದಾರೆ.

ಜೆಡಿಎಸ್‌ ಶಾಸಕ ಆರ್‌. ಮಂಜುನಾಥ್‌ ಪ್ರತಿನಿಧಿಸುವ ದಾಸರಹಳ್ಳಿ ಕ್ಷೇತ್ರಕ್ಕೆ ₹110 ಕೋಟಿ ನೀಡಲಾಗಿದೆ. ಉಳಿದ ಹಣವನ್ನು ಕಾಂಗ್ರೆಸ್‌ನ 12 ಶಾಸಕರಿಗೆ ಹಂಚಲಾಗಿದ್ದು, ಹೆಬ್ಬಾಳ ಕ್ಷೇತ್ರಕ್ಕೆ ₹90 ಕೋಟಿ ಅನುಮೋದನೆಯಾಗಿರುವುದೇ ಗರಿಷ್ಠ. ಜಯನಗರ, ವಿಜಯನಗರ ಕ್ಷೇತ್ರಗಳಿಗೆ ತಲಾ ₹60 ಕೋಟಿ ದೊರೆತಿದೆಯಷ್ಟೆ. ಆನೇಕಲ್ ಕ್ಷೇತ್ರ ಭಾಗಶಃ ಬಿಬಿಎಂಪಿ ವ್ಯಾಪ್ತಿಯಲ್ಲಿದೆ. ಹೀಗಾಗಿ ಆ ಕ್ಷೇತ್ರಕ್ಕೆ ₹8 ಕೋಟಿ ಬಿಡುಗಡೆಯಾಗಿದೆ.

ಬೇಡವಾದ ಕಾಮಗಾರಿಗಳು!
ಬಿಬಿಎಂಪಿಯಲ್ಲಿ ಸದಸ್ಯರು ಯಾರೂ ಇಲ್ಲದ ಸಮಯದಲ್ಲಿ ವಾರ್ಡ್‌ ಕಾಮಗಾರಿ ಸೇರಿದಂತೆ ಎಲ್ಲ ರೀತಿಯ ಕೆಲಸಗಳನ್ನು ಮಾಡಲಾಗುತ್ತಿದೆ. ಕಾರ್ಪೊರೇಟರ್‌ಗಳು ಬರುವ ಮುನ್ನವೇ ತಾವೇ ಮುಗಿಸಿಬಿಡಬೇಕೆಂಬ ಆತುರದಲ್ಲಿ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗುತ್ತಿದೆ. ಇದರಲ್ಲಿ ಸಾಕಷ್ಟು ಬೇಡವಾದ ಕಾಮಗಾರಿಗಳೇ ಇವೆ ಎಂದು ಹೆಸರು ಬಹಿರಂಗಪಡಿಲು ಇಚ್ಛಿಸದ ಪಾಲಿಕೆಯ ಮಾಜಿ ಸದಸ್ಯರಿಬ್ಬರು ಆಕ್ರೋಶ ವ್ಯಕ್ತಪಡಿಸಿದರು.

**

ನಗರದ ಅಭಿವೃದ್ಧಿ ಆಗಬೇಕು ಎಂದು ನೀಡಲಾಗುವ ಹಣದಲ್ಲಿ ತಾರತಮ್ಯ ಸಲ್ಲ. ಅಭಿವೃದ್ಧಿ ಎಂದರೆ ಎಲ್ಲೆಡೆ ಆಗಬೇಕು ಅಲ್ಲವೇ? ಇದನ್ನು ಅರಿಯದಿರುವುದು ದುರಂತ.
–ಆರ್‌. ಅಖಂಡ ಶ್ರೀನಿವಾಸಮೂರ್ತಿ, ಕಾಂಗ್ರೆಸ್‌ ಶಾಸಕ, ಪುಲಿಕೇಶಿ ನಗರ

**

ಬಿಬಿಎಂಪಿ ವ್ಯಾಪ್ತಿಯಲ್ಲಿ ಮಹಿಳಾ ಪ್ರತಿನಿಧಿಯಾಗಿರುವುದು ನಾನು ಒಬ್ಬಳೇ. ನನಗೆ ಅತಿ ಕಡಿಮೆ ಅನುದಾನ ಬಿಡುಗಡೆ ಮಾಡಿರುವುದು ಮಹಿಳೆಯರಿಗೆ ಮಾಡಿದ ಅನ್ಯಾಯ.
–ಸೌಮ್ಯ ರೆಡ್ಡಿ, ಕಾಂಗ್ರೆಸ್‌ ಶಾಸಕಿ, ಜಯನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT