ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್– ಬಿಜೆಪಿ ಜಟಾಪಟಿ; ಲಾಠಿ ಪ್ರಹಾರ, ಠಾಣೆಗೆ ದೂರು

Published 7 ಮೇ 2023, 2:53 IST
Last Updated 7 ಮೇ 2023, 2:53 IST
ಅಕ್ಷರ ಗಾತ್ರ

ಬೆಂಗಳೂರು: ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ ಮತಯಾಚನೆ ವಿಚಾರವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಶನಿವಾರ ಸಂಜೆ ಜಟಾಪಟಿ ನಡೆದಿದ್ದು, ಪೊಲೀಸರು ಲಾಠಿ ಪ್ರಹಾರ ನಡೆಸಿ ಜನರನ್ನು ಚದುರಿಸಿದ್ದಾರೆ.

‘ಬಿಜೆಪಿ ಕಾರ್ಯಕರ್ತರು ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ. ಅದಕ್ಕೆ ಪೊಲೀಸರು ಸಹಕಾರ ನೀಡಿದ್ದಾರೆ’ ಎಂದು ಆರೋಪಿಸಿ ಕಾಂಗ್ರೆಸ್ ಅಭ್ಯರ್ಥಿ ಎಚ್‌. ಕುಸುಮಾ ಹಾಗೂ ಇತರರು, ಯಶವಂತಪುರ ಠಾಣೆಗೆ ಶನಿವಾರ ರಾತ್ರಿ ದೂರು ನೀಡಿದ್ದಾರೆ.

ಯಶವಂತಪುರ ಠಾಣೆ ವ್ಯಾಪ್ತಿಯಲ್ಲಿ ಈ ಜಟಾಪಟಿ ನಡೆದಿದ್ದು, ಸ್ಥಳದಲ್ಲಿ ಪೊಲೀಸರು ಬಿಗಿ ಭದ್ರತೆ ಹೆಚ್ಚಿಸಿದ್ದಾರೆ.

ಬಿಜೆಪಿ ಪರ ಪೊಲೀಸರ ಕೆಲಸ

‘ಪಕ್ಷದ ಪರ ಪ್ರಚಾರ ಮಾಡಲೆಂದು ಕಾಂಗ್ರೆಸ್ ಕಾರ್ಯಕರ್ತರು ಮನೆಗಳಿಗೆ ಹೋಗಿದ್ದರು. ಮಾಜಿ ಕಾರ್ಪೊರೇಟರ್ ಆಗಿರುವ ಬಿಜೆಪಿಯ ಜಿ.ಕೆ. ವೆಂಕಟೇಶ್‌ ಹಾಗೂ ಇತರರು ಪ್ರಚಾರಕ್ಕೆ ಅಡ್ಡಿಪಡಿಸಿದ್ದರು. ಅದನ್ನು ಪ್ರಶ್ನಿಸಿದ್ದಕ್ಕೆ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ’ ಎಂದು ಕಾಂಗ್ರೆಸ್ ಕಾರ್ಯಕರ್ತರು ದೂರಿದ್ದಾರೆ.

‘ಸ್ಥಳದಲ್ಲಿದ್ದ ಪೊಲೀಸರು, ಬಿಜೆಪಿ ಕಾರ್ಯಕರ್ತರ ಪರ ನಿಂತಿದ್ದರು. ಪೊಲೀಸರ ಎದುರೇ ಹಲ್ಲೆ ನಡೆದಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಕಾರ್ಯಕರ್ತರು, ‘ಸಮವಸ್ತ್ರ ಬಿಚ್ಚಿಟ್ಟು, ರಾಜಕೀಯಕ್ಕೆ ಬನ್ನಿ’ ಎಂದು ಪೊಲೀಸರ ವಿರುದ್ದ ಕಿಡಿಕಾರಿದ್ದಾರೆ.

ಕುಸುಮಾ ತಳ್ಳಾಡಿ ಲಾಠಿ ಬೀಸಿದ ಅಧಿಕಾರಿ

ಸ್ಥಳದಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಸ್ಥಳಕ್ಕೆ ಬಂದಿದ್ದ ಎಚ್‌.ಕುಸುಮಾ, ಪೊಲೀಸರ ವರ್ತನೆಯನ್ನು ಪ್ರಶ್ನಿಸಿದ್ದರು. ನಂತರ, ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು.

‘ಮಹಿಳಾ ಸಿಬ್ಬಂದಿ ಇರಲಿಲ್ಲ. ಪೊಲೀಸ್ ಅಧಿಕಾರಿಯೊಬ್ಬರು, ಕುಸುಮಾ ಅವರನ್ನು ತಳ್ಳಾಡಿ ಇತರರ ಮೇಲೆ ಲಾಠಿ ಬೀಸಿದರು. ನಂತರ, ಎಲ್ಲ ಪೊಲೀಸರು ಲಾಠಿ ಪ್ರಹಾರ ನಡೆಸಿ ಕಾರ್ಯಕರ್ತರನ್ನು ಚದುರಿಸಿದರು’ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದರು.

ಲಾಠಿ ಬೀಸಿದ ಅಧಿಕಾರಿ ವಿರುದ್ಧ ಹರಿಹಾಯ್ದು ಕಾಂಗ್ರೆಸ್ ಕಾರ್ಯಕರ್ತರು, ಯಶವಂತಪುರ ಠಾಣೆ ಎದುರು ರಾತ್ರಿ ಪ್ರತಿಭಟನೆ ನಡೆಸಿದರು. ಅಧಿಕಾರಿಯನ್ನು ಅಮಾನತು ಮಾಡುವಂತೆ ಒತ್ತಾಯಿಸಿದರು.

ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಲು ಉತ್ತರ ವಿಭಾಗದ ಡಿಸಿಪಿ ಶಿವಪ್ರಕಾಶ್ ದೇವರಾಜು ನಿರಾಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT