ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರ ಬಹಿರಂಗ ಪಡಿಸಿದವರಿಂದಲೇ ಭ್ರಷ್ಟಾಚಾರ: ಸಂತೋಷ್ ಹೆಗ್ಡೆ ಬೇಸರ

Published 23 ಮಾರ್ಚ್ 2024, 14:15 IST
Last Updated 23 ಮಾರ್ಚ್ 2024, 14:15 IST
ಅಕ್ಷರ ಗಾತ್ರ

ಬೆಂಗಳೂರು: ‘ಭ್ರಷ್ಟಾಚಾರದ ವಿರುದ್ಧ ಹೋರಾಡಿದವರು, ಆಡಳಿತದಲ್ಲಿನ ಭ್ರಷ್ಟಾಚಾರವನ್ನು ಸಮಾಜಕ್ಕೆ ತೋರಿಸಿದವರು ಅಧಿಕಾರಕ್ಕೇರಿದಾಗ ಏನು ಮಾಡುತ್ತಾರೆ ಎನ್ನುವುದು ಈಗ ‌ಬಹಿರಂಗವಾಗುತ್ತಿದೆ’ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದರು. 

ಕರ್ನಾಟಕ ಹಿರಿಯ ನಾಗರಿಕರ ವೇದಿಕೆಗಳ ಒಕ್ಕೂಟ ನಗರದಲ್ಲಿ ಶನಿವಾರ ಹಮ್ಮಿಕೊಂಡ ‘ಹಿರಿಯ ನಾಗರಿಕರ ಸಂರಕ್ಷಣೆ ಹಾಗೂ ಪಾಲನೆ’ ವಿಚಾರ ಸಂಕಿರಣ ಉದ್ಘಾಟಿಸಿದ ಅವರು, ಹಿರಿಯ ನಾಗರಿಕರ ಹಕ್ಕುಗಳ ಬಗ್ಗೆ ತಿಳಿಸಿದರು.

ಸಭಿಕರೊಬ್ಬರು ‘ಡಾ.ಸಿ.ಎನ್.ಮಂಜುನಾಥ್ ಅವರ ರೀತಿ ನೀವೂ ಚುನಾವಣೆಗೆ ನಿಲ್ಲಬೇಕು’ ಎಂದು ಕೋರಿದರು ಅದಕ್ಕೆ ಪ್ರತಿಕ್ರಿಯಿಸಿದ ಸಂತೋಷ್ ಹೆಗ್ಡೆ, ‘ರಾಜಕೀಯ ವೃತ್ತಿಯಾಗಿದೆಯೆ ಹೊರತು, ಸೇವೆಯಲ್ಲ. ಸಮಾಜದಲ್ಲಿ ಭ್ರಷ್ಟಾಚಾರ ಭದ್ರವಾಗಿ ಬೇರೂರಿದೆ. ಮೊದಲು ಸಮಾಜ ಬದಲಾಯಿಸಿ, ಆಮೇಲೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸುಧಾರಿಸಬೇಕು’ ಎಂದು ಹೇಳಿದರು. 

‘ಮತದಾರರು ಜಾಗೃತರಾಗಬೇಕು. ಧರ್ಮ, ಭಾಷೆ ಆಧಾರದಲ್ಲಿ ಮತ ಹಾಕಬಾರದು. ವ್ಯಕ್ತಿಯಿಂದ ಏನು ಸಾಧ್ಯವಿದೆ ಅನ್ನುವುದನ್ನು ತಿಳಿದು ಮತ ಹಾಕಬೇಕು. ಶ್ರೀಮಂತಿಕೆ ಮತ್ತು ಅಧಿಕಾರವನ್ನು ಪೂಜಿಸುವ ಸಮಾಜದಲ್ಲಿ ನಾವಿದ್ದೇವೆ. ಜೈಲಿನಿಂದ ಮರಳಿದ ವ್ಯಕ್ತಿಯನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೇ ಹೋಗಲಾಗುತ್ತಿದೆ’ ಎಂದು ತಿಳಿಸಿದರು. 

ಅಂಗವಿಕಲರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಂಟಿ ನಿರ್ದೇಶಕ ನಟರಾಜ್, ‘ಇಲಾಖೆಯು 1090 ಹಾಗೂ 1456 ಸಹಾಯವಾಣಿಯನ್ನು ಹಿರಿಯ ನಾಗರಿಕರಿಗೆ ಪ್ರಾರಂಭಿಸಲಾಗಿದೆ. ರಾಜ್ಯದಲ್ಲಿ 267 ವೃದ್ಧಾಶ್ರಮಗಳಿವೆ. ಸೇವಾಸಿಂಧು ಪೋರ್ಟಲ್‌ ಮೂಲಕ ನೇರವಾಗಿ ಹಿರಿಯ ನಾಗರಿಕರಿಗೆ ಗುರುತಿನ ಚೀಟಿ ಒದಗಿಸಲಾಗುತ್ತಿದೆ’ ಎಂದು ಹೇಳಿದರು. 

‘ಹಿರಿಯ ನಾಗರಿಕರು ಆರೋಗ್ಯ ಕಾಪಾಡಿಕೊಳ್ಳಲು ವ್ಯಾಯಾಮ, ಯೋಗವನ್ನು ರೂಢಿಸಿಕೊಳ್ಳಬೇಕು. ಏಕಾಂಗಿತನ ಹೋಗಲಾಡಿಸಲು ಸಂಘ–ಸಂಸ್ಥೆಗಳ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು’ ಎಂದರು. 

‘ಹಿರಿಯರ ಹಕ್ಕಿನ ಪ್ರಕರಣ ಪರಿಹರಿಸಿ’

‘ಈಗಿನ ಸ್ಥಿತಿಯಲ್ಲಿ ಹಿರಿಯ ನಾಗರಿಕರು ತಮ್ಮ ಹಕ್ಕು ಹಾಗೂ ಸೌಲಭ್ಯ ಪಡೆಯುವುದು ಕಷ್ಟವಾಗಿದೆ. ಹಕ್ಕುಗಳಿಗಾಗಿ ಕೋರ್ಟ್‌ಗಳಿಗೆ ಹೋದರೆ ಅಲ್ಲಿ 15–16 ವರ್ಷ ಪ್ರಕರಣ ನಡೆಯುತ್ತವೆ. ತೀರ್ಪು ಬರುವ ವೇಳೆ ಅರ್ಜಿದಾರ ಇರುತ್ತಾನೋ ಇಲ್ಲವೋ ಎಂಬ ಖಾತರಿ ಇರುವುದಿಲ್ಲ. ಹಿರಿಯರ ಹಕ್ಕಿಗೆ ಸಂಬಂಧಿಸಿದ ಪ್ರಕರಣಗಳು ವಿಶೇಷ ನ್ಯಾಯಾಲಯಕ್ಕೆ ಹೋಗಬೇಕೆಂಬ ಅಭಿಯಾನವನ್ನು ಪ್ರಾರಂಭಿಸಬೇಕಿದೆ. ಅಲ್ಲಿ ನಿರ್ದಿಷ್ಟ ಅವಧಿಯಲ್ಲಿ ಪ್ರಕರಣಗಳನ್ನು ಪರಿಹರಿಸಬೇಕಿದೆ’ ಎಂದು ಎನ್.ಸಂತೋಷ್ ಹೆಗ್ಡೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT