ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ತಡೆಯುವಲ್ಲಿ ವಿಫಲ: ಚುನಾವಣಾ ಆಯೋಗದ ವಿರುದ್ಧ ಪತ್ರ ಅಭಿಯಾನ

Published 11 ಮೇ 2024, 14:26 IST
Last Updated 11 ಮೇ 2024, 14:26 IST
ಅಕ್ಷರ ಗಾತ್ರ

ಬೆಂಗಳೂರು: ಚುನಾವಣಾ ನೀತಿಸಂಹಿತೆ ಉಲ್ಲಂಘನೆ, ದ್ವೇಷ ಭಾಷಣ, ಚುನಾವಣಾ ಅಕ್ರಮ ತಡೆಯುವಲ್ಲಿ ಕೇಂದ್ರ ಚುನಾವಣಾ ಆಯೋಗ (ಸಿಇಸಿ) ವಿಫಲವಾಗಿದೆ ಎಂದು ಆರೋಪಿಸಿರುವ ಹಲವು ಸಂಘಟನೆಗಳು, ‘ಗಟ್ಟಿತನ ಪ್ರದರ್ಶಿಸಿ ಇಲ್ಲವೇ ರಾಜೀನಾಮೆ ನೀಡಿ’ ಎಂದು ಚುನಾವಣಾ ಆಯುಕ್ತರನ್ನು ಒತ್ತಾಯಿಸುವ ಪತ್ರ ಅಭಿಯಾನ ಆರಂಭಿಸಿವೆ.

ಪಿಯುಸಿಎಲ್‌, ರಾಷ್ಟ್ರೀಯ ಜನಾಂದೋಲನಗಳ ಮಹಾಮೈತ್ರಿ, ಬಹುತ್ವ ಕರ್ನಾಟಕ ಸೇರಿದಂತೆ 20ಕ್ಕೂ ಹೆಚ್ಚು ಸಂಘಟನೆಗಳು ಒಗ್ಗೂಡಿ ಈ ಅಭಿಯಾನ ಆರಂಭಿಸಿವೆ. ಚುನಾವಣಾ ಆಯೋಗ ನಿರ್ಲಕ್ಷ್ಯ ವಹಿಸಿದೆ ಎನ್ನಲಾದ ಪ್ರಕರಣಗಳ ಪಟ್ಟಿಯೊಂದಿಗೆ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್‌, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳ ಮೂಲಕ ಕೇಂದ್ರ ಚುನಾವಣಾ ಆಯುಕ್ತರಿಗೆ ಪತ್ರ ರವಾನಿಸಲಾಗಿದೆ.

ಈವರೆಗೆ ಪೂರ್ಣಗೊಂಡಿರುವ ಮೂರು ಹಂತದ ಮತದಾನದ ಅಂಕಿಅಂಶಗಳನ್ನು ಪೂರ್ಣ ಪ್ರಮಾಣದಲ್ಲಿ ಬಹಿರಂಗಪಡಿಸದೇ ಇರುವುದನ್ನು ಈ ಸಂಘಟನೆಗಳು ಪ್ರಶ್ನಿಸಿವೆ. ಮತ ಚಲಾಯಿಸಿದವರ ಖಚಿತ ಸಂಖ್ಯೆಯನ್ನು ಪ್ರಕಟಿಸದೇ ಶೇಕಡಾವಾರು ಮತದಾನದ ಪ್ರಮಾಣವನ್ನು ಮಾತ್ರ ಬಹಿರಂಗಪಡಿಸಿರುವ ಆಯೋಗದ ನಡೆ ಸಂಶಯಾಸ್ಪದವಾಗಿದೆ ಎಂದು ಟೀಕಿಸಿದ್ದು, ಪೂರ್ಣ ಪ್ರಮಾಣದ ಅಂಕಿಅಂಶ ಬಹಿರಂಗಪಡಿಸುವಂತೆ ಆಗ್ರಹಿಸಿವೆ.

‘ಚುನಾವಣಾ ಪ್ರಚಾರದಲ್ಲಿ ದ್ವೇಷ ಭಾಷಣ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಮತ್ತಿತರ ಬಿಜೆಪಿ ನಾಯಕರ ವಿರುದ್ಧ ಆಯೋಗ ಯಾವುದೇ ಕ್ರಮ ಜರುಗಿಸಿಲ್ಲ. ಆದರೆ, ಅಂತಹ ದೂರಿನ ಆಧಾರದ ಮೇಲೆ ಕಾಂಗ್ರೆಸ್‌ ನಾಯಕರಾದ ರಣದೀಪ್‌ ಸಿಂಗ್‌ ಸುರ್ಜೇವಾಲಾ ವಿರುದ್ಧ ಕ್ರಮ ಜರುಗಿಸಲಾಗಿತ್ತು. ಮೋದಿ ಅವರಿಗೂ ಚುನಾವಣಾ ಪ್ರಚಾರದಲ್ಲಿ ಭಾಗವಹಿಸದಂತೆ ನಿರ್ಬಂಧ ಹೇರಬೇಕು’ ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.

ಧರ್ಮ ಮತ್ತು ನಂಬಿಕೆಗಳ ಆಧಾರದ ಮೇಲೆ ಮತ ಯಾಚಿಸುವ ಜಾಹೀರಾತುಗಳನ್ನೂ ಆಯೋಗ ನಿರ್ಬಂಧಿಸಿಲ್ಲ. ಸೂರತ್‌, ಇಂದೋರ್‌ ಸೇರಿದಂತೆ ಬಿಜೆಪಿಯ ಪ್ರತಿಸ್ಪರ್ಧಿ ಪಕ್ಷಗಳ ಅಭ್ಯರ್ಥಿಗಳು ಕಣದಿಂದ ಹಿಂದೆ ಸರಿಯಲು ಪ್ರಭಾವ ಬೀರಿರುವ ಬಗ್ಗೆಯೂ ತನಿಖೆ ನಡೆಸಿಲ್ಲ ಎಂದು ಪತ್ರದಲ್ಲಿ ದೂರಲಾಗಿದೆ. ಹೋರಾಟಗಾರರು, ವಕೀಲರು ಸೇರಿದಂತೆ 222 ಮಂದಿ ಪತ್ರಕ್ಕೆ ಸಹಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT