ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೈಂಗಿಕ ದೌರ್ಜನ್ಯ: 'ವಿಶೇಷ ನ್ಯಾಯಾಲಯ ಅಗತ್ಯ’

ಜನವಾದಿ ಮಹಿಳಾ ಸಂಘಟನೆ ಹಮ್ಮಿಕೊಂಡಿದ್ದ ಗೋಷ್ಠಿಯಲ್ಲಿ ಕಾನೂನು ತಜ್ಞರ ಅಭಿಮತ
Published 16 ಮೇ 2024, 15:56 IST
Last Updated 16 ಮೇ 2024, 15:56 IST
ಅಕ್ಷರ ಗಾತ್ರ

ಬೆಂಗಳೂರು: ‘ಹಾಸನದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಗಳು ಅತ್ಯಂತ ಪ್ರಭಾವಿಗಳಾಗಿರುವುದರಿಂದ, ತನಿಖೆ ವಿಳಂಬವಾದಷ್ಟು ಸಾಕ್ಷ್ಯನಾಶವಾಗುವ ಸಾಧ್ಯತೆಯಿದೆ. ಈ ರೀತಿ ಪ್ರಕರಣಗಳ ಶೀಘ್ರ ವಿಲೇವಾರಿಗೆ ವಿಶೇಷ ನ್ಯಾಯಾಲಯ ಸ್ಥಾಪಿಸಬೇಕಾಗದ ಅಗತ್ಯವಿದೆ’ ಎಂದು ಕಾನೂನು ತಜ್ಞರು ಅಭಿಮತ ವ್ಯಕ್ತಪಡಿಸಿದರು. 

ಅಖಿಲ‌ ಭಾರತ ಜನವಾದಿ ಮಹಿಳಾ ಸಂಘಟನೆಯು ನಗರದಲ್ಲಿ ಗುರುವಾರ ಹಮ್ಮಿಕೊಂಡ ‘ಹಾಸನದ ಲೈಂಗಿಕ ದೌರ್ಜನ್ಯ ಪೆನ್‌ಡ್ರೈವ್‌ ಹಂಚಿಕೆ: ಮಾಯವಾಗುತ್ತಿದೆ ಲಿಂಗ ಸಂವೇದನೆ, ನಮ್ಮ ಜವಾಬ್ದಾರಿಗಳೇನು?’ ಸಮಾಲೋಚನಾ ಗೋಷ್ಠಿಯಲ್ಲಿ ವಕೀಲರು ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರಮುಖರು ಅಭಿಮತ ವ್ಯಕ್ತಪಡಿಸಿದರು. 

ಹೈಕೋರ್ಟ್ ವಕೀಲ ಬಿ‌.ಟಿ.ವೆಂಕಟೇಶ್, ‘ದೇಶದಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳು ಅಷ್ಟಾಗಿ ವರದಿಯಾಗುತ್ತಿಲ್ಲ. ಇದಕ್ಕೆ ಇಲ್ಲಿನ ವ್ಯವಸ್ಥೆಯೇ ಮೂಲ ಕಾರಣ. ಪ್ರಕರಣ ದಾಖಲಿಸಿದ ಬಳಿಕ ಸಂತ್ರಸ್ತೆಯರು ಸಾಕಷ್ಟು ಹಿಂಸೆ ಅನುಭವಿಸುತ್ತಾರೆ. ಹಾಸನದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ವಿಡಿಯೊಗಳು ಹೊರ ಬಂದಿದ್ದರಿಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಯಿತು. ಇಲ್ಲವಾದಲ್ಲಿ ಈ ಪ್ರಕರಣವೂ ಬಹಿರಂಗವಾಗದೆ ಮುಚ್ಚಿಹೋಗಿ, ಇನ್ನಷ್ಟು ಮಂದಿ ದೌರ್ಜನ್ಯಕ್ಕೆ ಒಳಗಾಗುವ ಸಾಧ್ಯತೆಗಳಿದ್ದವು. ಈ ರೀತಿಯ ಪ್ರಕರಣಗಳು ನ್ಯಾಯಾಲಯದಲ್ಲಿ ಇತ್ಯರ್ಥವಾಗಲು ಕನಿಷ್ಠ ಮೂರು ವರ್ಷಗಳು ಬೇಕಾಗುತ್ತವೆ. ಕೆಲ ಪ್ರಕರಣಗಳು 10–15 ವರ್ಷಗಳು ನಡೆದ ಉದಾಹರಣೆ ಇದೆ. ಆದ್ದರಿಂದ ಸಂತ್ರಸ್ತೆಯರಿಗೆ ಮಾನಸಿಕ ಸ್ಥೈರ್ಯ ತುಂಬುವ ಹಾಗೂ ಅವರಿಗೆ ರಕ್ಷಣೆ ಒದಗಿಸುವ ಕೆಲಸವೂ ಆಗಬೇಕು’ ಎಂದು ಹೇಳಿದರು. 

‘ಹಾಸನದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ 800 ಮಂದಿ ಸಂತ್ರಸ್ತೆಯರಿದ್ದಾರೆ ಎನ್ನಲಾಗುತ್ತಿದೆ. ಅವರ ರಕ್ಷಣೆಗೆ ಸರ್ಕಾರ ಯೋಜನೆಯನ್ನು ರೂಪಿಸಬೇಕು. ಪ್ರಕರಣದಲ್ಲಿ ಗೌಪ್ಯತೆ ಕಾಯ್ದುಕೊಳ್ಳುವುದು ಕೂಡ ಮುಖ್ಯ. ಆದ್ದರಿಂದ ಈ ರೀತಿ ಪ್ರಕರಣಗಳಿಗೆ ಪ್ರತ್ಯೇಕ ವಿಶೇಷ ನ್ಯಾಯಾಲಯ ಅಗತ್ಯ’ ಎಂದರು. 

ಸಾಕ್ಷ್ಯ ನಾಶ ಸಾಧ್ಯತೆ: ವಕೀಲ ಸಿ.ಎಚ್. ಹನುಮಂತರಾಯ, ‘ಹಾಸನದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಯು ಮಾಜಿ ಪ್ರಧಾನಿ ಅವರ ಪುತ್ರ ಹಾಗೂ ಮಾಜಿ ಮುಖ್ಯಮಂತ್ರಿ ಸಹೋದರರಾಗಿದ್ದಾರೆ. ಈ ಪ್ರಕರಣದ ತನಿಖೆ ನಡೆಸುವವರು ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳಾಗಬೇಕು. ಬಿ.ಕೆ.ಸಿಂಗ್ ಹೊರತುಪಡಿಸಿದರೆ ವಿಶೇಷ ತನಿಖಾ ತಂಡದಲ್ಲಿರುವವರು ತನಿಖೆಯಲ್ಲಿ ಅಷ್ಟಾಗಿ ಹೆಸರು ಮಾಡಿಲ್ಲ. ಇದರಿಂದ ಪ್ರಕರಣ ಆರಂಭದಿಂದಲೂ ದಿಕ್ಕು ತಪ್ಪುತ್ತಾ ಇದೆ.  ಇಂತಹ ಪ್ರಕರಣಗಳು ಬಂದಾಗ ರಾಜ್ಯದ ಅಧಿಕಾರಿಗಳೇ ತನಿಖೆ ನಡೆಸಬೇಕೆಂದಿಲ್ಲ, ಹೊರಗಿನ ಅಧಿಕಾರಿಗಳನ್ನೂ ನೇಮಿಸಬಹುದಾಗಿದೆ. ಆರೋಪಿಗೆ ಜಾಮೀನು ನೀಡಿರುವುದರಿಂದ ಸಾಕ್ಷ್ಯ ನಾಶವಾಗುವ ಸಾಧ್ಯತೆಯಿದೆ’ ಎಂದು ಕಳವಳ ವ್ಯಕ್ತಪಡಿಸಿದರು. 

ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ, ‘ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೊಗಳನ್ನು ವೀಕ್ಷಿಸಿದಾಗ ಅಸಹಾಯಕ ಮಹಿಳೆಯರನ್ನು ದುರ್ಬಳಕೆ ಮಾಡಿಕೊಂಡಿರುವುದು ಸ್ಪಷ್ಟವಾಗಿ ತಿಳಿಯುತ್ತದೆ. ದೌರ್ಜನ್ಯ ಸೇರಿ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಹಿಳೆಯರು ದೂರು ನೀಡಲು ಬಂದಾಗ ಸ್ಥಳೀಯ ಪೊಲೀಸರು ಸೌಜನ್ಯದಿಂದ ನಡೆದುಕೊಳ್ಳಬೇಕು’ ಎಂದು ಹೇಳಿದರು. 

ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ, ‘ಪ್ರಕರಣದ ತನಿಖೆ ಕುಂಟುತ್ತಾ ಸಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು. 

ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದ ಪ್ರಮುಖರಾದ ಎಸ್.ಜಿ.ಸಿದ್ಧರಾಮಯ್ಯ, ವಿಜಯಾ, ಡಾ.ವಸುಂಧರಾ ಭೂಪತಿ, ಇಂದಿರಾ ಕೃಷ್ಣಪ್ಪ ಒಳಗೊಂಡಂತೆ ಪ್ರಗತಿಪರರ ಭಾಗವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT