ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರದಿಗಾರ್ತಿ, ಪೊಲೀಸ್ ಹೆಸರಿನಲ್ಲಿ ವಂಚನೆ; ₹ 2 ಲಕ್ಷ ಪಡೆದು ಜೀವ ಬೆದರಿಕೆ

ಜಯನಗರ ಠಾಣೆಯಲ್ಲಿ ಎಫ್‌ಐಆರ್‌
Last Updated 5 ಆಗಸ್ಟ್ 2020, 21:57 IST
ಅಕ್ಷರ ಗಾತ್ರ

ಬೆಂಗಳೂರು: ‘ಸಾಲ ಕೊಟ್ಟಿದ್ದ ಹಣವನ್ನು ವಾಪಸು ಕೊಡಿಸುವುದಾಗಿ ಹೇಳಿದ್ದ ಇಬ್ಬರು, ನನ್ನಿಂದ ₹ 2 ಲಕ್ಷ ಪಡೆದು ವಂಚಿಸಿದ್ದಾರೆ’ ಎಂದು ಆರೋಪಿಸಿ ರುಕ್ಮಿಣಿ ಎಂಬುವರು ಜಯನಗರ ಠಾಣೆಗೆ ದೂರು ನೀಡಿದ್ದಾರೆ.

‘ಬೃಂದಾವನ ನಗರದ ನಿವಾಸಿ ರುಕ್ಮಿಣಿ ದೂರು ನೀಡಿದ್ದಾರೆ. ಸುದ್ದಿ ವಾಹಿನಿಯೊಂದರ ವರದಿಗಾರ್ತಿ ಹಾಗೂ ಪೊಲೀಸ್ ಎಂದು ಹೇಳಿಕೊಂಡು ವಂಚಿಸಿರುವ ಆರೋಪಿಗಳಾದ ಭವಾನಿ ಹಾಗೂ ಶಶಿ ಎಂಬುವರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ತಮ್ಮ ಮನೆ ಮಾರಾಟದಿಂದ ಬಂದಿದ್ದ ₹ 25 ಲಕ್ಷ ಹಣವನ್ನು ರುಕ್ಮಿಣಿ, ಪರಿಚಯಸ್ಥರೊಬ್ಬರಿಗೆ ಸಾಲ ಕೊಟ್ಟಿದ್ದರು. ಅದನ್ನು ವಾಪಸು ನೀಡಲು ಪರಿಚಯಸ್ಥರು ನಿರಾಕರಿಸುತ್ತಿದ್ದರು. ಇದೇ ಸಂದರ್ಭದಲ್ಲೇ ರುಕ್ಮಿಣಿ ಅವರನ್ನು ಪರಿಚಯಿಸಿಕೊಂಡಿದ್ದ ಭವಾನಿ, ‘ನಾನು ಕ್ರೈಂವರದಿಗಾರ್ತಿ. ನನಗೆ ಪೊಲೀಸರು ಚೆನ್ನಾಗಿ ಪರಿಚಯ. 15 ದಿನದೊಳಗೆ ನಿಮ್ಮ ಹಣ ಕೊಡಿಸುತ್ತೇನೆ. ನನಗೆ ₹ 6 ಲಕ್ಷ ಕೊಡಿ. ಮುಂಗಡವಾಗಿ ₹ 2 ಲಕ್ಷ ನೀಡಿ’ ಎಂದಿದ್ದಳು. ಅದಕ್ಕೆ ರುಕ್ಮಿಣಿ ಒಪ್ಪಿದ್ದರು.’

‘ದಕ್ಷಿಣ ವಿಭಾಗದ ಡಿಸಿಪಿ ಕಚೇರಿ ಬಳಿ ರುಕ್ಮಿಣಿ ಅವರನ್ನು ಕರೆದೊಯ್ದಿದ್ದ ಭವಾನಿ, ಪೊಲೀಸ್ ಎಂದು ಹೇಳಿ ಆರೋಪಿ ಶಶಿಯನ್ನು ಪರಿಚಯಿಸಿದ್ದಳು. ಹಣ ಕೊಟ್ಟರೆ ₹ 25 ಲಕ್ಷವನ್ನೂ ವಾಪಸು ಕೊಡಿಸುವುದಾಗಿ ಆತ ಹೇಳಿದ್ದ. ಅದನ್ನು ನಂಬಿದ್ದ ರುಕ್ಮಿಣಿ, ಸೊಸೆ ಆಭರಣಗಳನ್ನು ಅಡವಿಟ್ಟು ₹ 2 ಲಕ್ಷ ಕೊಟ್ಟಿದ್ದರು’ ಎಂದೂ ಪೊಲೀಸರು ತಿಳಿಸಿದರು.

‘ಹಣ ಪಡೆದ ನಂತರ ಆರೋಪಿಗಳು, ಸಾಲವನ್ನು ವಾಪಸು ಕೊಡಿಸಿರಲಿಲ್ಲ. ಪುನಃ ಹಣ ಖರ್ಚು ಮಾಡಬೇಕೆಂದು ಹೇಳಲಾರಂಭಿಸಿದ್ದರು. ಅದರಿಂದ ಅನುಮಾನಗೊಂಡ ರುಕ್ಮಿಣಿ, ಹಣವನ್ನು ವಾಪಸು ಕೊಡುವಂತೆ ಕೇಳಿದ್ದರು. ಅವರಿಗೆ ಬೆದರಿಕೆ ಹಾಕಿದ್ದ ಆರೋಪಿ ಭವಾನಿ, ‘ನಿಮಗೆ ಹಣ ವಾಪಸ್ ಕೊಡುವುದಿಲ್ಲ. ಏನಾದರೂ‌ ಮಾಡಿಕೊಳ್ಳಿ. ಯಾರಿಗೆ ಬೇಕಾದರೂ ದೂರು ಕೊಡಿ’ ಎಂದು ಬೆದರಿಸಿದ್ದಳು. ನೊಂದ ರುಕ್ಮಿಣಿ ಠಾಣೆಗೆ ಬಂದು ದೂರು ನೀಡಿದ್ದಾರೆ’ ಎಂದೂ ಪೊಲೀಸರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT