ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲವಾಡ | ಬಸ್ ಸಮಸ್ಯೆ: ನಿತ್ಯ 4 ಕಿ.ಮೀ ನಡೆಯುವ ವಿದ್ಯಾರ್ಥಿಗಳು

Published 29 ಫೆಬ್ರುವರಿ 2024, 5:55 IST
Last Updated 29 ಫೆಬ್ರುವರಿ 2024, 5:55 IST
ಅಕ್ಷರ ಗಾತ್ರ

ಖಟಕಚಿಂಚೋಳಿ: ಸಮೀಪದ ನೆಲವಾಡ ಗ್ರಾಮಕ್ಕೆ ಕಳೆದ ಆರು ತಿಂಗಳಿಂದ ಸಕಾಲಕ್ಕೆ ಬಸ್ ಬರುತ್ತಿಲ್ಲ. ಹೀಗಾಗಿ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸದ್ಯ ಬಸ್ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ.

ವಿದ್ಯಾರ್ಥಿಗಳು ನಿತ್ಯ 4 ಕಿ.ಮೀ ನೆಡೆದುಕೊಂಡೇ ಹೋಗುತ್ತಿದ್ದಾರೆ. ಇದರಿಂದ ಬೇಸತ್ತ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಗ್ರಾಮಕ್ಕೆ ಸಕಾಲಕ್ಕೆ ಬಸ್ ಓಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಭಾಲ್ಕಿ ತಾಲ್ಲೂಕು ಕೇಂದ್ರದಿಂದ 35 ಕಿ.ಮೀ ದೂರದಲ್ಲಿರುವ ನೆಲವಾಡ ಗ್ರಾಮ ಚಳಕಾಪುರ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುತ್ತದೆ. ಗ್ರಾಮದಲ್ಲಿ ಸುಮಾರು 100 ಮನೆಗಳಿದ್ದರೂ ಸಮರ್ಪಕ ಬಸ್‌ ವ್ಯವಸ್ಥೆ ಇಲ್ಲ.

‘ಗ್ರಾಮದಲ್ಲಿ 1 ರಿಂದ 5ನೇ ತರಗತಿವರೆಗೆ ಶಾಲೆ ಇದೆ. 6ನೇ ತರಗತಿಯಿಂದ ಎಸ್ಸೆಸ್ಸೆಲ್ಸಿ ವರೆಗೆ ಮಾಸಿಮಾಡ ಹಾಗೂ ಪಿಯು ಶಿಕ್ಷಣಕ್ಕೆ ಭಾಲ್ಕಿ ಪಟ್ಟಣಕ್ಕೆ ಹೋಗಬೇಕಾಗುತ್ತದೆ. ಹೀಗಾಗಿ ನಿತ್ಯ ನಡೆದುಕೊಂಡು ಶಾಲೆಗೆ ಹೋಗುತ್ತಿದ್ದೇವೆ‘ ಎಂದು ವಿದ್ಯಾರ್ಥಿನಿ ಸಂಗೀತಾ ತಿಳಿಸಿದರು.

‘ಬೆಳಿಗ್ಗೆ ಶಾಲೆಗೆ ನಡೆದುಕೊಂಡು ಹೋಗುವಾಗ ಆಯಾಸವಾಗುವುದಿಲ್ಲ. ಮರಳಿ ಬರುವಾಗ ಸಾಕಷ್ಟು ಕಷ್ಟವಾಗುತ್ತದೆ. ಮನೆಗೆ ಬಂದ ನಂತರ ಓದಲು, ಬರೆಯಲು ಉತ್ಸಾಹವೇ ಇರುವುದಿಲ್ಲ’ ಎಂಬುದು ವಿದ್ಯಾರ್ಥಿಗಳ ದೂರು.

‘ಮುಂದಿನ ವಾರದಲ್ಲಿ ದ್ವಿತೀಯ ಪಿಯು ಪರೀಕ್ಷೆಗಳು ಆರಂಬವಾಗಲಿವೆ. ಗ್ರಾಮಕ್ಕೆ ಬಸ್ ಬಾರದೇ ಹೋದರೆ ಮಕ್ಕಳು ಪರೀಕ್ಷೆಗೆ ಸರಿಯಾದ ಸಮಯಕ್ಕೆ ಹೋಗುವುದು ಹೇಗೆ’ ಎಂಬ ಆತಂಕ ಪಾಲಕರದ್ದು.

ಗ್ರಾಮಕ್ಕೆ ಬಸ್ ಬಾರದಿರುವ ಬಗ್ಗೆ ಸಾಕಷ್ಟು ಬಾರಿ ಕೆಕೆಆರ್‌ಟಿಸಿಯ ಭಾಲ್ಕಿ ಘಟಕದ ವ್ಯವಸ್ಥಾಪಕರಿಗೆ ಫೋನ್ ಮೂಲಕ ತಿಳಿಸಲಾಗಿದೆ. ಅಲ್ಲದೇ ಲಿಖಿತ ರೂಪದಲ್ಲಿ ಕೊಡಲಾಗಿದೆ. ಆದರೂ ಅಧಿಕಾರಿಗಳು ಕೇವಲ ಹಾರಿಕೆಯ ಉತ್ತರ ನೀಡುತ್ತಾರೆ. ಪರೀಕ್ಷೆಗಳು ಆರಂಭವಾಗುವ ಮೊದಲು ಸಮಸ್ಯೆ ಬಗೆಹರಿಯದಿದ್ದರೆ ಗ್ರಾಮಸ್ಥರೊಂದಿಗೆ ಭಾಲ್ಕಿ ಘಟಕದ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆ’ ಎಂದು ಮುಖಂಡ ರಾಜಕುಮಾರ ತೊಗರೆ ಎಚ್ಚರಿಸಿದರು.

‘ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೆಚ್ಚುವರಿ ಬಸ್ ಓಡಿಸಬೇಕು. ಒಂದು ವೇಳೆ ಬಸ್ ಬಾರದೇ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ತೊಂದರೆಯಾದರೆ ಕೆಕೆಆರ್‌ಟಿಸಿ ವ್ಯವಸ್ಥಾಪಕರೆ ನೇರ ಹೊಣೆಯಾಗುತ್ತಾರೆ’ ಎನ್ನುತ್ತಾರೆ ಎಬಿವಿಪಿ ಮುಖಂಡ ರೇವಣಸಿದ್ಧ ಜಾಡರ್.

ಶಾಲೆ ಕಾಲೇಜುಗಳ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನೆಲವಾಡ ಗ್ರಾಮಕ್ಕೆ ಸಕಾಲಕ್ಕೆ ಬಸ್ ಓಡಿಸಲು ಕ್ರಮ ಕೈಗೊಳ್ಳಲಾಗುವುದು
ಭದ್ರಪ್ಪ ಬಸ್ ಘಟಕ ವ್ಯವಸ್ಥಾಪಕ ಭಾಲ್ಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT