ಗುರುವಾರ , ಮೇ 26, 2022
29 °C
ಅಕ್ರಮ ಬಿಳಿಕಲ್ಲು ಗಣಿಗಾರಿಕೆ ಪತ್ತೆ ಹಚ್ಚುವ ಉದ್ದೇಶ, 2019ರ ಸರ್ವೆ ಬಗ್ಗೆ ಆಕ್ಷೇಪ

ಏಪ್ರಿಲ್‌ನಲ್ಲಿ ಡ್ರೋನ್‌ ಸರ್ವೆ: ಅಕ್ರಮ ಬಿಳಿಕಲ್ಲು ಗಣಿಗಾರಿಕೆ ಪತ್ತೆ ಉದ್ದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯಲ್ಲಿ ಬಿಳಿ ಕಲ್ಲು ಅಕ್ರಮ ಗಣಿಗಾರಿಕೆಯನ್ನು ಪತ್ತೆ ಹೆಚ್ಚಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಏಪ್ರಿಲ್‌ ಮೊದಲ ವಾರದಲ್ಲಿ ಗುತ್ತಿಗೆ ನೀಡಿರುವ ಗಣಿಗಳನ್ನು ಡ್ರೋನ್‌ ಮೂಲಕ ಸರ್ವೆ ನಡೆಸಲಿದೆ.

ಗಣಿ ಇಲಾಖೆಯು ಜಿಲ್ಲೆ ಮಾತ್ರವಲ್ಲದೇ, ರಾಜ್ಯದಾದ್ಯಂತ ಈ ಸರ್ವೆ ಕಾರ್ಯ ನಡೆಸಲಿದೆ. ಇದಕ್ಕಾಗಿ ಗಣಿ ಇಲಾಖೆ ₹8 ಕೋಟಿ ಅನುದಾನ ಮೀಸಲಿಟ್ಟಿದೆ.

ಸರ್ವೆಗಾಗಿ ಜಿಲ್ಲಾ ಮಟ್ಟದಲ್ಲಿ ಟೆಂಡರ್‌ ಕರೆಯಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಲಕ್ಷ್ಮಮ್ಮ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

₹140 ಕೋಟಿ ದಂಡಕ್ಕೆ ತಡೆ: 2019ರಲ್ಲಿ ಅಕ್ರಮ ಗಣಿಗಾರಿಕೆ ಪತ್ತೆ ಹಚ್ಚುವುದಕ್ಕಾಗಿ ಸರ್ವೆ ನಡೆಸಲಾಗಿತ್ತು. ಅಕ್ರಮ ಎಸಗಿದ್ದ ಗಣಿ ಗುತ್ತಿಗೆ ಪಡೆದಿದ್ದವರಿಗೆ ಒಟ್ಟು ₹142 ಕೋಟಿ ದಂಡ ವಿಧಿಸಲಾಗಿತ್ತು.

ರಾಜ್ಯದಾದ್ಯಂತ ಈ ಪ್ರಕ್ರಿಯೆ ನಡೆದಿತ್ತು. ಕೋಲಾರದ ಉದ್ಯಮಿಯೊಬ್ಬರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಪುನಃ ಸರ್ವೆ ಮಾಡುವಂತೆ ಕೋರ್ಟ್‌ ಸೂಚಿಸಿತ್ತು.

‘ವೈಜ್ಞಾನಿಕವಾಗಿ ಸರ್ವೆ ನಡೆಸಲಾಗಿಲ್ಲ. ನಮ್ಮ ಅನುಪಸ್ಥಿತಿಯಲ್ಲಿ ಬೇಕಾಬಿಟ್ಟಿಯಾಗಿ ಸಮೀಕ್ಷೆ ನಡೆಸಲಾಗಿದೆ. ಐದು ಪಟ್ಟು ದಂಡ ವಿಧಿಸಲಾಗಿದೆ‘ ಎಂದು ಜಿಲ್ಲೆಯ ಗಣಿ ಉದ್ಯಮಿಗಳು ಕೂಡ ದೂರಿದ್ದರು. ಜಿಲ್ಲೆಯ ಗಣಿ ಮಾಲೀಕರು ಕೂಡ ಸರ್ಕಾರದ ಮಟ್ಟದಲ್ಲಿ ದಂಡವನ್ನು ತಡೆಯುವಂತೆ ಮಾಡಲು ಪ್ರಯತ್ನ ಪಟ್ಟಿದ್ದರು.

ಸರ್ಕಾರ ಹೊಸದಾಗಿ ಸಮೀಕ್ಷೆ ನಡೆಸುವುದಾಗಿ ಘೋಷಿಸಿತ್ತು. ಹಾಗಾಗಿ, ಈ ಮೊದಲು ವಿಧಿಸಲಾಗಿದ್ದ ದಂಡವನ್ನು ತಡೆ ಹಿಡಿಯಲಾಗಿತ್ತು.

ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ್ದ ಹಿಂದಿನ ಗಣಿ ಸಚಿವ ಸಿ.ಸಿ.ಪಾಟೀಲ ಅವರು ಡ್ರೋನ್‌ ಮೂಲಕ ಶೀಘ್ರದಲ್ಲಿ ಸರ್ವೆ ನಡೆಸಲಾಗುವುದು ಎಂದು ಹೇಳಿದ್ದರು.

‘ಕರಿ ಕಲ್ಲು ಗಣಿಗಳ ಸರ್ವೆ ನಡೆಯುವುದಿಲ್ಲ. ಸದ್ಯ ಬಿಳಿಕಲ್ಲಿನ ಸರ್ವೆ ನಡೆಸಲು ಮಾತ್ರ ಸರ್ಕಾರದಿಂದ ಸೂಚನೆ ಬಂದಿದೆ’ ಎಂದು ಗಣಿ ಇಲಾಖೆ ಉಪನಿರ್ದೇಶಕಿ ಲಕ್ಷ್ಮಮ್ಮ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲೆಯಲ್ಲಿ 38 ಬಿಳಿ ಕಲ್ಲು ಗಣಿಗಳನ್ನು ಗುತ್ತಿಗೆಗೆ ನೀಡಲಾಗಿದೆ. ಏಳು ಗಣಿಗಳು ಪಟ್ಟಾ ಜಮೀನಿನಲ್ಲಿ ನಡೆಯುತ್ತಿವೆ.

ಈ ಹಿಂದೆ ನಡೆದ ಸಮೀಕ್ಷೆ ಸಮಯದಲ್ಲಿ ಹಿರಿಕಾಟಿ ಹಾಗೂ ಜ್ಯೋತಿಗೌಡನಪುರ ವ್ಯಾಪ್ತಿಯಲ್ಲಿ ಸರ್ವೆ ನಡೆದಿತ್ತು. ನಿಷ್ಕ್ರಿಯಗೊಂಡಿದ್ದ ಗಣಿಗಳಲ್ಲೂ ಸಮೀಕ್ಷೆ ನಡೆಸಲಾಗಿತ್ತು. ಐದು ಪಟ್ಟು ದಂಡ ವಿಧಿಸಲಾಗಿತ್ತು ಎಂದು ಗಣಿ ಇಲಾಖೆ ಮೂಲಗಳು ತಿಳಿಸಿವೆ.

ಸರ್ವೆ ಹೇಗೆ ನಡೆಯುತ್ತದೆ?

ಸಮೀಕ್ಷೆಗೂ ಮುನ್ನ ಗಣಿ ಇಲಾಖೆ, ಭೂ ದಾಖಲೆಗಳ ಇಲಾಖೆ ಹಾಗೂ ಕಂದಾಯದ ಇಲಾಖೆಗಳ ಅಧಿಕಾರಿಗಳು ಚರ್ಚಿಸುತ್ತಾರೆ. ಗಣಿಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಪರಿಶೀಲಿಸಲಾಗುತ್ತದೆ. ಗಣಿಗಳ ವ್ಯಾಪ್ತಿ, ದಿಕ್ಕು ಸೇರಿದಂತೆ ಗಣಿ ಇಲಾಖೆಯ ಬಳಿ ಇರುವ ಎಲ್ಲ ದತ್ತಾಂಶಗಳು ಜಿಪಿಎಸ್‌ ಸಾಧನದಲ್ಲಿ ಅಳವಡಿಸಲಾಗುತ್ತದೆ.

ಇದೇ ಮಾಹಿತಿಗಳನ್ನು ಇಟ್ಟುಕೊಂಡು ಡ್ರೋನ್‌ ಸಮೀಕ್ಷೆ ನಡೆಸುತ್ತದೆ. ಡ್ರೋನ್‌ ಸಂಗ್ರಹಿಸುವ ದತ್ತಾಂಶಗಳನ್ನು ಪರಿಶೀಲಿಸಿದ ನಂತರ ಮತ್ತೆ ಗಣಿ, ಭೂದಾಖಲೆಗಳು ಹಾಗೂ ಕಂದಾಯ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಗಣಿ ಇರುವ ಪ್ರದೇಶಕ್ಕೆ ಭೇಟಿ ನೀಡಿ ಭೌತಿಕವಾಗಿ ಸಮೀಕ್ಷೆ ನಡೆಸಿ, ಡ್ರೋನ್‌ ಮಾಡಿರುವ ಸಮೀಕ್ಷೆಯನ್ನು ಪರೀಕ್ಷಿಸುತ್ತಾರೆ. ಆ ಬಳಿಕವಷ್ಟೇ ಅಕ್ರಮ ನಡೆದಿದೆಯೇ ಇಲ್ಲವೇ ಎಂಬುದು ತಿಳಿಯಲಿದೆ.

ಗಣಿಗಳ ಪರಿಶೀಲನೆ

ಈ ಮಧ್ಯೆ, ಶಿವಮೊಗ್ಗದಲ್ಲಿ ಜಿಲೆಟಿನ್‌ ಸ್ಫೋಟ ಪ್ರಕರಣ ವರದಿಯಾದ ನಂತರ ಜಿಲ್ಲೆಯಲ್ಲೂ ಗಣಿಗಳ ಪರಿಶೀಲನೆ ಕಾರ್ಯ ಬಿರುಸಿನಿಂದ ನಡೆಯುತ್ತಿದೆ. 

‘ಜಿಲ್ಲೆಯಲ್ಲೂ ಮುನ್ನೆಚ್ಚರಿಕೆ ಕ್ರಮವಾಗಿ ಗಣಿಗಳ ಪರಿಶೀಲನೆಗಾಗಿ ಸಪ್ತಾಹ ಆಚರಣೆ ನಡೆಸಲಾಗುತ್ತಿದ್ದು, ಅಧಿಕಾರಿಗಳು ಇದುವರೆಗೆ 44 ಬಿಳಿಕಲ್ಲು ಗಣಿಗಳು ಹಾಗೂ 22 ಕ್ರಷರ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ’ ಎಂದು ಲಕ್ಷ್ಮಮ್ಮ ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು