ರಾಮಾಪುರ: 'ಕಂಪ್ಯೂಟರ್ ರಸೀದಿ ಇಲ್ಲ, ಖಾತೆಗೆ ಹಣ ಬರುವುದಿಲ್ಲ'

ಹನೂರು: ಪ್ರತಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಹೈನುಗಾರರಿಗೆ ಹಾಕಿರುವ ಹಾಲು, ಜಿಡ್ಡಿನಾಂಶದ ವಿವರಗಳನ್ನೊಳಗೊಂಡ ಕಂಪ್ಯೂಟರ್ ರಸೀದಿ ಕೊಡಬೇಕು. ಹಾಲಿನ ಹಣವನ್ನು ಹೈನುಗಾರರ ಖಾತೆಗೆ ನೇರ ವರ್ಗಾವಣೆ ಮಾಡಬೇಕು ಎಂಬ ನಿಯಮ ಇದೆ. ಜಿಲ್ಲಾ ಹಾಲು ಒಕ್ಕೂಟ (ಚಾಮುಲ್) ವ್ಯಾಪ್ತಿಯ ಬಹುತೇಕ ಎಲ್ಲ ಡೇರಿಗಳಲ್ಲೂ ಇದೇ ವ್ಯವಸ್ಥೆ ಇದೆ.
ಆದರೆ, ತಾಲ್ಲೂಕಿನ ರಾಮಾಪುರ ಹಾಲು ಉತ್ಪಾದಕರ ಸಂಘಕ್ಕೆ ಈ ನಿಯಮ ಅನ್ವಯವಾಗುವುದಿಲ್ಲ. ಇಲ್ಲಿ ಇನ್ನೂ ಹಳೆ ಪದ್ಧತಿ ಜಾರಿಯಲ್ಲಿದೆ. ಕಂಪ್ಯೂಟರ್ ರಸೀದಿ ಕೊಡುವುದಿಲ್ಲ. ಪಾಸು ಪುಸ್ತಕದಲ್ಲಿ ಹಾಲಿನ ವಿವರ ನಮೂದಿಸುತ್ತಾರೆ. ಖಾತೆಗೂ ಹಣ ಬರುವುದಿಲ್ಲ. ಸಂಘದ ಸಿಬ್ಬಂದಿ ನಗದು ರೂಪದಲ್ಲಿ ನೀಡುತ್ತಿದ್ದಾರೆ.
‘ನಿಯಮ ಪಾಲನೆ ಮಾಡದೆ ಸಹಕಾರ ಸಂಘದ ಆಡಳಿತವು ಹಾಲು ಉತ್ಪಾದಕರಿಗೆ ಅನ್ಯಾಯ ಮಾಡುತ್ತಿದೆ. ಇದನ್ನೆಲ್ಲ ಪ್ರಶ್ನಿಸಿದರೆ, ಜಿಡ್ಡಿನ ಅಂಶ (ಫ್ಯಾಟ್) ಸರಿ ಇಲ್ಲ ಎಂಬ ಕಾರಣವೊಡ್ಡಿ ಹಾಲನ್ನು ವಾಪಸ್ ಕಳುಹಿಸಲಾಗುತ್ತಿದೆ. ಅನ್ಯಾಯವಾಗುತ್ತಿದ್ದರೂ ವಿಧಿ ಇಲ್ಲದೆ ರೈತರು ವಿಧಿ ಇಲ್ಲದೇ ಸುಮ್ಮನೆ ಇದ್ದಾರೆ’ ಎಂದು ಹಲವರು ‘ಪ್ರಜಾವಾಣಿ’ ಮುಂದೆ ಅಸಹಾಯಕತೆ ತೋಡಿಕೊಂಡಿದ್ದಾರೆ.
ರಾಮಾಪುರ ಸುತ್ತಮುತ್ತಲಿನ ತೋಟದ ಮನೆ ಹಾಗೂ ಗ್ರಾಮದ ರೈತರು ಇಲ್ಲಿನ ಸಂಘಕ್ಕೆ ಹಾಲು ಹಾಕುತ್ತಿದ್ದಾರೆ.
‘ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಆದರೆ ಲಾಕ್‌ಡೌನ್‌ನಿಂದಾಗಿ ಗ್ರಾಮಕ್ಕೆ ಬಂದು ಜಾನುವಾರು ಸಾಕಾಣಿಕೆ ಮಾಡುತ್ತಿದ್ದೇನೆ. 28 ದಿನಗಳಿಂದ ಇಲ್ಲಿನ ಸಂಘಕ್ಕೆ ಹಾಲು ಹಾಕುತ್ತಿದ್ದೇನೆ. ಹಿಂದೆ ಕೊಡುತ್ತಿದ್ದ ಕಾರ್ಡ್ ಅನ್ನೇ ನೀಡುತ್ತಿದ್ದಾರೆ. ನಾವು ಕಂಪ್ಯೂಟರ್ ಬಿಲ್ ನೀಡುವಂತೆ ಕೇಳಿದೆವು. ಅದಕ್ಕೂ ಉತ್ತರಿಸಲಿಲ್ಲ. ಬಳಿಕ, ನಮ್ಮ ಹಾಲು ಎಷ್ಟು ಜಿಡ್ಡಿನಾಂಶ ಎಂಬುದರ ಬಗ್ಗೆ ಮಾಹಿತಿ ಕೇಳಿದರೆ ಅದಕ್ಕೂ ಪ್ರತಿಕ್ರಿಯಿಸುತ್ತಿಲ್ಲ’ ಎಂದು ಪ್ರಫುಲ್ಲಾ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
‘ನಾವು ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ಹಾಲು ಹಾಕುತ್ತೇವೆ. ಮಾಹಿತಿ ನೀಡಿ ಎಂದು ಕೇಳಿದರೆ, ನಮ್ಮ ಹಾಲು ಪಡೆದು ಎರಡು ದಿನ ಬಿಟ್ಟು, ನಮ್ಮ ಹಾಲು ಸರಿಇಲ್ಲ ಎಂದು ವಾಪಸ್ ನೀಡುತ್ತಿದ್ದಾರೆ. ಮೂರು ದಿನಗಳಿಂದಲೂ ಇದೇ ರೀತಿ ಮಾಡುತ್ತಿದ್ದಾರೆ. ಬಳಿಕ ವಿಚಾರಿಸಿದಾಗ ಎಲ್ಲರಿಗೂ ಇದೇ ರೀತಿ ಮಾಡುತ್ತಿದ್ದಾರೆ ಎಂದು ತಿಳಿದು ಬಂತು’ ಎಂದು ಗೆಜ್ಜಲನತ್ತ ಗ್ರಾಮದ ಮಾದೇಶ್ ಅವರು ಆರೋಪಿಸಿದರು.
‘ನಮ್ಮ ಪದಾರ್ಥಕ್ಕೆ ತಕ್ಕ ಬೆಲೆ ನೀಡುವಂತೆ ಕೇಳಿದರೆ ಇಲ್ಲಿನ ಕಾರ್ಯದರ್ಶಿ, ‘ನಿಮ್ಮನ್ನು ಯಾರು ಹಸುಗಳನ್ನು ಸಾಕಿ ಎಂದಿದ್ದು’ ಎಂದು ಉಡಾಫೆ ಉತ್ತರ ನೀಡುತ್ತಾರೆ. ನಾವು ಕೇಳಿದ್ದಕ್ಕೆ ನಮ್ಮ ಹಾಲನ್ನು ಪ್ರತ್ಯೇಕವಾಗಿ ಹಾಕಿಸಿಕೊಂಡು ಎರಡು ದಿನಗಳ ಬಳಿಕ ನಿಮ್ಮ ಹಾಲು ಸರಿಯಿಲ್ಲ ಎಂದು ಹೇಳುತ್ತಾರೆ. ಹಾಲು ಸರಿಯಿಲ್ಲದಿದ್ದರೇ ಆ ಸಮಯದಲ್ಲೇ ಹೇಳಲಿ. ಎರಡು ದಿನ ಬಿಟ್ಟು ಹೇಳುವ ಅಗತ್ಯವೇನಿದೆ’ ಎಂದು ಗ್ರಾಮದ ದೇವಿ ಅವರು ಪ್ರಶ್ನಿಸಿದರು.
ಕೂಡಲೇ ಅಧಿಕಾರಿಗಳು ಇಲ್ಲಿಗೆ ಬೇಟಿ ನೀಡಿ ಪರಿಶೀಲಿಸಿ ರೈತರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸುತ್ತಾರೆ ಇಲ್ಲಿನ ಪಶುಪಾಲಕರು.
ಲೀಟರ್‌ಗೆ ₹20 ಬೆಲೆ!
ಬೇರೆ ಸಂಘಗಳಲ್ಲಿ ನೀಡುವ ಬೆಲೆಯೂ ಇಲ್ಲಿ ಸಿಗುವುದಿಲ್ಲ. ಹಣ ಮಾಡುವ ಉದ್ದೇಶದಿಂದ ಹೈನುಗಾರರ ಖಾತೆಗೆ ನೇರವಾಗಿ ಹಾಲಿನ ಹಣವನ್ನು ಹಾಕುತ್ತಿಲ್ಲ ಎಂಬುದು ಇನ್ನೂ ಕೆಲವರ ಆರೋಪ.
‘ಐದು ವರ್ಷಗಳಿಂದ ಹಾಲು ಕೊಡುತ್ತಿದ್ದೇವೆ. ಅಂದಿನಿಂದಲೂ ಇದೇ ಗೋಳು. ಸಂಘದಲ್ಲಿ ಸಾಲ ಪಡೆದು ಹಸು ಖರೀಧಿಸಿ ಸಾಕುತ್ತಿದ್ದೇವೆ. ನಮಗೆ ಇದೇ ಜೀವನಾಧಾರವಾಗಿದೆ. ಒಂದು ಲೀಟರ್‌ಗೆ ₹20 ಕೊಡುತ್ತಾರೆ. ಸರ್ಕಾರದಿಂದ ಸಹಾಯಧನದ ಕೇಳಿದರೆ ಪ್ರತಿಕ್ರಿಯಿಸುವುದಿಲ್ಲ. ಏನಾದರೂ ಪ್ರಶ್ನಿಸಿದರೆ ಮರುದಿನ ನಿಮ್ಮ ಹಾಲಿನಲ್ಲಿ ಜಿಡ್ಡಿನಾಂಶ ಇಲ್ಲ ಎಂದು ವಾಪಸ್ ಕಳುಹಿಸುತ್ತಾರೆ’ ಎಂದು ಕಮಲಮ್ಮ ಅವಲತ್ತುಕೊಂಡರು.
ಈ ಬಗ್ಗೆ, ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ರಾಮಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಮುತ್ತಣ್ಣ, ‘ಹಾಲಿನಲ್ಲಿ ಜಿಡ್ಡಿನ ಅಂಶ ಇಲ್ಲ ಎಂದು ಅಧಿಕಾರಿ ವಾಪಸ್ ಕಳುಹಿಸಿದ್ದಾರೆ. ಕಂಪ್ಯೂಟರ್ ಬಿಲ್ ಕೊಡಲು ಮೂರು ತಿಂಗಳಿಂದ ಯಂತ್ರ ಕೆಟ್ಟು ಹೋಗಿದೆ. ಜಿಡ್ಡಿನಾಂಶ ಆಧಾರದ ಮೇಲೆ ಹಾಲಿನ ದರ ನಿಗದಿಗೊಳಿಸಿ ಹಣ ನೀಡಲಾಗುತ್ತಿದೆ’ ಎಂದರು.
***
ದೂರು ಬಂದಿದೆ. ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಗುಣಮಟ್ಟದ ಹಾಲಿಗೆ ಕಡಿಮೆ ಬೆಲೆ ಕೊಟ್ಟರೆ ಕ್ರಮ ಖಚಿತ. ಗ್ರಾಹಕರು ಕೂಡ ಕಳಪೆ ಹಾಲು ಹಾಕಬಾರದು
- ಎಂ.ರಾಜಶೇಖರ ಮೂರ್ತಿ, ಚಾಮುಲ್ ವ್ಯವಸ್ಥಾಪಕ ನಿರ್ದೇಶಕ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.