ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಏ.26ಕ್ಕೆ ಮತದಾನ, ಜೂನ್‌ 4ಕ್ಕೆ ಫಲಿತಾಂಶ: ಚಾಮರಾಜನಗರ DC ಶಿಲ್ಪಾ ನಾಗ್‌

ಲೋಕಸಭಾ ಚುನಾವಣೆ: ಸಕಲ ಸಿದ್ಧತೆ, ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮೇಲೆ ನಿಗಾ: ಶಿಲ್ಪಾ ನಾಗ್‌
Published 17 ಮಾರ್ಚ್ 2024, 8:30 IST
Last Updated 17 ಮಾರ್ಚ್ 2024, 8:30 IST
ಅಕ್ಷರ ಗಾತ್ರ

ಚಾಮರಾಜನಗರ: ‘ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್‌ 26ರಂದು ಮತದಾನದ ನಡೆಯಲಿದ್ದು, ಶಾಂತಿಯುತ ಚುನಾವಣಾ ಪ್ರಕ್ರಿಯೆಗೆ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್‌ ಹೇಳಿದರು. 

ಭಾರತೀಯ ಚುನಾವಣಾ ಆಯೋಗವು ಚುನಾವಣಾ ವೇಳಾ ಪಟ್ಟಿ ಪ್ರಕಟಿಸುತ್ತಿದ್ದಂತೆಯೇ, ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಶನಿವಾರ ಸುದ್ದಿಗೋಷ್ಠಿ ನಡೆಸಿದ ಅವರು, ಕ್ಷೇತ್ರದಲ್ಲಿ ನಡೆಯಲಿರುವ ಚುನಾವಣೆಗೆ ಕೈಗೊಂಡಿರುವ ಸಿದ್ಧತೆಗಳ ಬಗ್ಗೆ ಮಾಹಿತಿ ನೀಡಿದರು.    

‘ತಕ್ಷಣದಿಂದಲೇ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದ್ದು, ಜೂನ್‌ 6ರಂದು ಚುನಾವಣಾ ಪ್ರಕ್ರಿಯೆ ಮುಕ್ತಾಯವಾಗಲಿದ್ದು, ಅಲ್ಲಿಯವರೆಗೂ ನೀತಿ ಸಂಹಿತೆ ಜಾರಿಯಲ್ಲಿರಲಿದೆ’ ಎಂದರು.

‘ಇದೇ 28ರಂದು ಅಧಿಸೂಚನೆ ಹೊರಡಿಸಲಾಗುತ್ತದೆ. ನಾಮಪತ್ರ ಸಲ್ಲಿಸಲು ಏಪ್ರಿಲ್ 4 ಕೊನೆಯ ದಿನ. ಏ5ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏ.8ರಂದು ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಕಡೆಯ ದಿನ. ಏಪ್ರಿಲ್ 26ರಂದು ಮತದಾನ ನಡೆಯಲಿದ್ದು, ಜೂನ್ 4ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ಚುನಾವಣಾ ಪ್ರಕ್ರಿಯೆ ಜೂನ್ 6ರಂದು ಪೂರ್ಣಗೊಳ್ಳಲಿದೆ’ ಎಂದು ಮಾಹಿತಿ ನೀಡಿದರು.

ಚುನಾವಣಾ ಪ್ರಕ್ರಿಯೆ ವಿವರ: ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರ ಸ್ವೀಕರಿಸಲಾಗುತ್ತದೆ. ಕ್ಷೇತ್ರ ವ್ಯಾಪ್ತಿಗೆ ಹನೂರು, ಕೊಳ್ಳೇಗಾಲ, ಚಾಮರಾಜನಗರ, ಗುಂಡ್ಲುಪೇಟೆ, ಎಚ್.ಡಿ. ಕೋಟೆ, ನಂಜನಗೂಡು, ವರುಣ, ತಿ.ನರಸೀಪುರ ವಿಧಾನಸಭಾ ಕ್ಷೇತ್ರಗಳು ಒಳಪಡುತ್ತವೆ.

2024ರ ಜನವರಿ 1ಕ್ಕೆ ಅರ್ಹತಾ ದಿನಾಂಕ ನಿಗದಿಪಡಿಸಿ ಜನವರಿ 22ರಂದು ಹೊರಡಿಸಿರುವ ಅಂತಿಮ ಮತದಾರರ ಪಟ್ಟಿಯ ಪ್ರಕಾರ ಒಟ್ಟು 8 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 8,69,389 ಪುರುಷರು, 8,88,113 ಮಹಿಳೆಯರು, ಇತರರು 114 ಮಂದಿ ಸೇರಿದಂತೆ 17,57,616 ಮತದಾರರು ಇದ್ದಾರೆ.

2000 ಮತಗಟ್ಟೆ: ಕ್ಷೇತ್ರದಾದ್ಯಂತ 2000 ಮತಗಟ್ಟೆ ತೆರೆಯಲಾಗುತ್ತದೆ. ಎಚ್.ಡಿ.ಕೋಟೆ ಕ್ಷೇತ್ರದಲ್ಲಿ 282, ನಂಜನಗೂಡಿನಲ್ಲಿ 246, ವರುಣಾದಲ್ಲಿ 261, ತಿ.ನರಸೀಪುರದಲ್ಲಿ 228, ಹನೂರಲ್ಲಿ 254, ಕೊಳ್ಳೇಗಾಲದಲ್ಲಿ 241, ಚಾಮರಾಜನಗರದಲ್ಲಿ 239, ಗುಂಡ್ಲುಪೇಟೆಯಲ್ಲಿ 249 ಮತಗಟ್ಟೆಗಳು ಇರಲಿವೆ. 

ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ಉಪಯೋಗಿಸಲಾಗುತ್ತಿದ್ದು, 1,177 ಬ್ಯಾಲೆಟ್ ಯೂನಿಟ್, ಅಷ್ಟೇ ಸಂಖ್ಯೆಯ ಕಂಟ್ರೋಲ್ ಯೂನಿಟ್ ಹಾಗೂ 1,276 ವಿ.ವಿ ಪ್ಯಾಟ್‌ಗಳನ್ನು ಬಳಸಲಾಗುತ್ತಿದೆ.

ಜಿಲ್ಲಾ ವ್ಯಾಪ್ತಿಯಲ್ಲಿ ಮಾದರಿ ನೀತಿ ಸಂಹಿತೆ ಪಾಲನೆಗಾಗಿ ಫ್ಲೈಯಿಂಗ್ ಸ್ಕ್ವಾಡ್ (ಎಫ್.ಎಸ್.ಟಿ) 12 ತಂಡಗಳು ಮೂರು ಪಾಳಿಗಳಲ್ಲಿ, ಸ್ಟ್ಯಾಟಿಕ್ ಸರ್ವೈಲೆನ್ಸ್ (ಎಸ್.ಎಸ್.ಟಿ) 13 ತಂಡಗಳು ಮೂರು ಪಾಳಿಗಳಲ್ಲಿ, 97 ಸೆಕ್ಟರ್ ಅಧಿಕಾರಿಗಳು ನಿಯೋಜನೆಯಾಗಿದ್ದಾರೆ. ವಿಡಿಯೊ ಸರ್ವೈಲೆನ್ಸ್ 10 ತಂಡಗಳು, ವಿಡಿಯೊ ವೀವಿಂಗ್ 4 ತಂಡಗಳನ್ನು ಹಾಗೂ ಅಭ್ಯರ್ಥಿಗಳ ಚುನಾವಣಾ ವೆಚ್ಚ ಪರಿಶೀಲನೆಗಾಗಿ ಅಧಿಕಾರಿಗಳ ತಂಡ ನೇಮಕ ಮಾಡಲಾಗಿದೆ. 8 ಅಂತರರಾಜ್ಯ ಚೆಕ್‍ಪೋಸ್ಟ್ ಮತ್ತು 5 ಅಂತರ್ ಜಿಲ್ಲಾ ಚೆಕ್‌ಪೋಸ್ಟ್‌ಗಳನ್ನು ತೆರೆಯಲು ಕ್ರಮವಹಿಸಲಾಗಿದೆ.

ದೂರು ನೀಡಲು ಅವಕಾಶ: ಮಾದರಿ ನೀತಿ ಸಂಹಿತೆ ಹಾಗೂ ಅಭ್ಯರ್ಥಿಗಳ ಚುನಾವಣಾ ವೆಚ್ಚದ ಕುರಿತು ನಿಗಾವಹಿಸಲು ಭಾರತ ಚುನಾವಣಾ ಆಯೋಗವು ಸಿ–ವಿಜಿಲ್ ಆ್ಯಪ್‌ ಪರಿಚಯಿಸಿದ್ದು, ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಈ ಆ್ಯಪ್‌ ಮೂಲಕ ದೂರು ದಾಖಲಿಸಿದಲ್ಲಿ 100 ನಿಮಿಷದೊಳಗೆ ಇತ್ಯರ್ಥಪಡಿಸಲಾಗುವುದು. ಆ್ಯಪ್‌ ಅನ್ನು ಪ್ಲೇ ಸ್ಟೋರ್ ಮೂಲಕ ಡೌನ್ ಲೋಡ್ ಮಾಡಿಕೊಂಡು ಫೋಟೊ ಮತ್ತು ವಿಡಿಯೊ ಮೂಲಕ ದೂರು ಸಲ್ಲಿಸಬಹುದು.

ವೋಟರ್ ಹೆಲ್ಪ್ ಲೈನ್ ಮೊಬೈಲ್ ಅಪ್ಲಿಕೇಶನ್ ಸಹಾಯದಿಂದ ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಪತ್ತೆ ಮಾಡುವುದರ ಜೊತೆಗೆ ನೋಂದಣಿಗಾಗಿ ಆನ್‍ಲೈನ್ ಅರ್ಜಿಗಳನ್ನು ಸಲ್ಲಿಸಬಹುದು. ಇತರೆ ಮಾಹಿತಿಗಳನ್ನು ಪಡೆಯಬಹುದು.

ಅಂಗವಿಕಲ ಮತದಾರರು ಹೊಸದಾಗಿ ನೋಂದಣಿ ಮಾಡಲು, ವಿಳಾಸ ಬದಲಾವಣೆ ಮಾಡಲು ಇತರೆ ಅಂಶಗಳಲ್ಲಿ ಬದಲಾವಣೆ ಮಾಡಲು ಮತ್ತು ತಮ್ಮನ್ನು ಅಂಗವಿಕಲ ಮತದಾರರೆಂದು ಗುರುತಿಸಿಕೊಳ್ಳಲು ಪಿಡಬ್ಲ್ಯುಡಿ ಆ್ಯಪ್‌ ಬಳಸಬಹುದಾಗಿದೆ. 

ಅನುಮತಿಗೆ ಏಕ ಗವಾಕ್ಷಿ ವ್ಯವಸ್ಥೆ: ರಾಜಕೀಯ ಪಕ್ಷಗಳು ಹಾಗೂ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಸಭೆ, ಸಮಾರಂಭ ನಡೆಸಲು ಮತ್ತು ಚುನಾವಣಾ ಪ್ರಚಾರಕ್ಕಾಗಿ ಅನುಮತಿ ನೀಡುವ ಸಂಬಂಧ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳ ಸಹಾಯಕ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಏಕ ಗವಾಕ್ಷಿ ಕೇಂದ್ರ ಸ್ಥಾಪಿಸಲಾಗಿದೆ.

‘ರಾಜಕೀಯ ಪಕ್ಷಗಳು ಮತ್ತು ಸ್ಪರ್ಧಿಸುವ ಅಭ್ಯರ್ಥಿಗಳ ಪರವಾಗಿ ಮಾಧ್ಯಮಗಳಲ್ಲಿ ಪ್ರಚಾರವಾಗುವ ಚುನಾವಣಾ ವಿಷಯಗಳಿಗೆ ಸಂಬಂಧಿಸಿದಂತೆ ನಿಗಾ ವಹಿಸಲು ಜಿಲ್ಲಾ ಮಟ್ಟದಲ್ಲಿ ಎಂ.ಸಿ.ಎಂ.ಸಿ ತಂಡ ರಚಿಸಲಾಗಿರುತ್ತದೆ. ರಾಜಕೀಯ ಪಕ್ಷಗಳು, ಸ್ಪರ್ಧಿಸುವ ಅಭ್ಯರ್ಥಿಗಳು ದೃಶ್ಯ ಮಾಧ್ಯಮದಲ್ಲಿ ಪ್ರಚಾರ ಕೈಗೊಳ್ಳಲು ಎಂ.ಸಿ.ಎಂ.ಸಿ ಸಮಿತಿಯಿಂದ ಅನುಮತಿ ಪಡೆಯಬೇಕಾಗಿರುತ್ತದೆ’ ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್‌ ಹೇಳಿದರು. 

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಭಾಗವಹಿಸಿದ್ದರು.

ಸಹಾಯವಾಣಿ ಸ್ಥಾಪನೆ

ಮತದಾರರ ಪಟ್ಟಿಗೆ ಹಾಗೂ ಚುನಾವಣಾ ವಿಷಯಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ತಿಳಿಸಲು ಜಿಲ್ಲಾಧಿಕಾರಿಗಳ ಕಚೇರಿಯ ಕೊಠಡಿ ಸಂಖ್ಯೆ 104/1 ರಲ್ಲಿ ಮತದಾರರ ಸಹಾಯವಾಣಿ 1950 (ಟೋಲ್ ಫ್ರೀ) ಸ್ಥಾಪಿಸಲಾಗಿದೆ. ಈ ಸಹಾಯವಾಣಿಯು 24x7 ಅವಧಿಯಲ್ಲಿ ಕಾರ್ಯ ನಿರ್ವಹಿಸಲಿದ್ದು ಸಾರ್ವಜನಿಕರು 950ಕ್ಕೆ ಕರೆ ಮಾಡಿ ಮತದಾರರ ಪಟ್ಟಿ ಮತದಾನ ಮತ್ತು ಚುನಾವಣಾ ವಿಷಯಗಳಿಗೆ ಸಂಬಂಧಿಸಿದಂತೆ ಎಲ್ಲ ಮಾಹಿತಿ ಪಡೆಯಬಹುದು.

ಜಾಗೃತಿಗೆ ಗಣ್ಯರು

ಜಿಲ್ಲಾ ಸ್ವೀಪ್ ಸಮಿತಿಯು ಚುನಾವಣೆ ಮತದಾನದ ಬಗ್ಗೆ ಜಾಗೃತಿ ಮೂಡಿಸಲಿದೆ. ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಸ್ವೀಪ್ ಸಮಿತಿಗಳನ್ನು ರಚಿಸಲಾಗಿದೆ. ‌ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಯುವ ರಾಯಭಾರಿಗಳನ್ನಾಗಿ ನಟ ಕಾರ್ತಿಕ್ ಮಹೇಶ್ ಹಾಗೂ ನಟ ಹಾಗೂ ನಿರ್ದೇಶಕ ನಾಗಭೂಷಣ್ ತೃತೀಯ ಲಿಂಗಿಗಳ ರಾಯಭಾರಿಯಾಗಿ ಸಮತಾ ಸೊಸೈಟಿಯ ಅಧ್ಯಕ್ಷೆ ದೀಪಾ ಬುದ್ದೆ ಅವರನ್ನು ನೇಮಕ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT