ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳ್ಳೇಗಾಲ | ನಟ ಉಪೇಂದ್ರ ಬಂಧನಕ್ಕೆ ಆಗ್ರಹಿಸಿ ಬಹೃತ್‌ ಪ್ರತಿಭಟನೆ

Published 22 ಆಗಸ್ಟ್ 2023, 13:45 IST
Last Updated 22 ಆಗಸ್ಟ್ 2023, 13:45 IST
ಅಕ್ಷರ ಗಾತ್ರ

ಕೊಳ್ಳೇಗಾಲ: ನಟ ಉಪೇಂದ್ರ ಮತ್ತು ಸಚಿವ ಎಸ್‌.ಎಸ್. ಮಲ್ಲಿಕಾರ್ಜುನ ಅವರು ಪರಿಶಿಷ್ಟ ಜಾತಿಯನ್ನು ಅವಮಾನಿಸಿದ್ದು ಅವರನ್ನು ತಕ್ಷಣವೇ ಬಂಧಿಸಬೇಕು ಎಂದು ಒತ್ತಾಯಿಸಿ ಇಲ್ಲಿನ ಆದಿ ದ್ರಾವಿಡ ಮೂಲ ನಿವಾಸಿಗಳ ಹೋರಾಟ ಸಮಿತಿ ಸದಸ್ಯರು ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.

ನಗರದಲ್ಲಿ ಸಮಾವೇಶಗೊಂಡ ನೂರಾರು ಪ್ರತಿಭಟನಾಕಾರರು ಇಬ್ಬರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಅಲ್ಲಿಂದ ಪ್ರತಿಭಟನಾ ಮೆರವಣಿಗೆ ನಗರದ ಡಾ. ರಾಜಕುಮಾರ್ ರಸ್ತೆ, ಡಾ. ವಿಷ್ಣುವರ್ಧನ್ ರಸ್ತೆ, ಡಾ. ಬಿ.ಆರ್.ಅಂಬೇಡ್ಕರ್ ರಸ್ತೆ ಮೂಲಕ ಸಾಗಿ ಬಂದು ಉಪ ವಿಭಾಗಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿದರು.

ಮುಖಂಡ ಮುಳ್ಳೂರು ಕಮಲ್ ಮಾತನಾಡಿ, ‘ಯಾವುದೇ ಒಂದು ಜಾತಿಯನ್ನು ಅವಹೇಳನ ಮಾಡುವುದು ಒಳ್ಳೆಯದಲ್ಲ. ಈ ಇಬ್ಬರು ಮುಖಂಡರು ಉದ್ದೇಶಪೂರ್ವಕವಾಗಿ ಜಾತಿ ನಿಂದನೆ ಮಾಡುವ ಮೂಲಕ ಸಂವಿಧಾನ ಹಾಗೂ ಈ ನೆಲದ ಕಾನೂನುಗಳಿಗೆ ಅಪಮಾನ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಿ.ಪರಮೇಶ್ವರ ಅವರಿಗೆ ಸಂವಿಧಾನ ಮತ್ತು ಪರಿಶಿಷ್ಟ ಜಾತಿ, ಪಂಗಡಗಳ ಬಗ್ಗೆ ಕಾಳಜಿ ಇದ್ದರೆ ಕೂಡಲೇ ಕ್ರಮ ಜರುಗಿಸಲಿ. ಇಲ್ಲದಿದ್ದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸ ಬೇಕಾಗುತ್ತದೆ’ ಎಂದರು.

ಮುಖಂಡ ಸೋಮಣ್ಣ ಉಪ್ಪಾರ್ ಮಾತನಾಡಿ, ‘ನಟ ಉಪೇಂದ್ರ ಎಂಬ ಅವಿವೇಕಿ ಈ ಜನಾಂಗದ ಬಗ್ಗೆ ಬಹಳ ಕೀಳಾಗಿ ಹೇಳಿಕೆ ನೀಡಿರುವುದು ಅಕ್ಷಮ್ಯ ಅಪರಾಧ. ತಕ್ಷಣ ಕೋರ್ಟ್ ತೀರ್ಪನ್ನು ಹಿಂಪಡೆದು ಉಪೇಂದ್ರನನ್ನು ಬಂಧಿಸಬೇಕು. ಇಲ್ಲದಿದ್ದರೆ ನಿರಂತರವಾಗಿ ಪ್ರತಿಯೊಂದು ಗ್ರಾಮದಿಂದ ವಿನೂತನ ಚಳವಳಿ ನಡೆಸಬೇಕಾಗುತ್ತದೆ’ ಎಂದರು.

ಮುಖಂಡ ಅಕ್ಮಲ್ ಪಾಷ ಮಾತನಾಡಿ, ‘ನಟ ಉಪೇಂದ್ರ ದಲಿತರ ಬಗ್ಗೆ ಹಗುರವಾಗಿ ಮಾತನಾಡುತ್ತಿರುವುದು ಸರಿಯಲ್ಲ. ಇದು ಅವರಿಗೆ ಶೋಭೆ ತರುವಂತಹ ವಿಚಾರವಲ್ಲ. ನಟರಾಗಿ ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡುವುದು, ಧಕ್ಕೆ ತರುವುದು ಸರಿಯಲ್ಲ. ಕೂಡಲೇ ಬಂಧಿಸಬೇಕು, ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು. ಇಂದಿನ ಪ್ರತಿಭಟನೆಯಲ್ಲಿ ಬರುವಾಗ ಉಪೇಂದ್ರ ಇರುವ ಎಲ್ಲಾ ಫ್ಲೆಕ್ಸ್‌‌‌ಗಳು ಹಾಗೂ ಬೋರ್ಡ್‌‌‌ಗಳನ್ನು ಕಿತ್ತು ಹಾಕಿದ್ದೇವೆ. ಜೊತೆಗೆ ಇವರು ನಟಿಸಿರುವ ಚಿತ್ರವನ್ನು ನಮ್ಮ ಜಿಲ್ಲೆಯಲ್ಲಿ ಪ್ರದರ್ಶನವಾಗಲು ಬಿಡುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಆದಿ ದ್ರಾವಿಡ ಮೂಲ ನಿವಾಸಿಗಳ ಹೋರಾಟ ಸಮಿತಿಯ ಜೆ.ಲಿಂಗರಾಜು, ಚೇತನ್ ದೊರೆರಾಜ್, ದರ್ಶನ್, ಚಂದ್ರು, ಅಣಗಳ್ಳಿ ಬಸವರಾಜು, ಸುರೇಶ್, ದಿಲೀಪ್, ಸಿದ್ಧಾರ್ಥ್, ಮುಳ್ಳೂರು ಮಂಜು, ಮಲ್ಲಿಕಾರ್ಜುನ, ಇನಾಯತ್, ಸಿದ್ದಪ್ಪಾಜಿ, ಬಸ್ತೀಪುರ ರವಿ, ಅಲ್ಬರ್ಟ್, ನಟರಾಜು ಮಾಳಿಗೆ, ಶಂಕರ್ ಚೇತನ್, ಸೋಮಶೇಖರ್, ಚಿನ್ನಸ್ವಾಮಿ ಮಾಳಿಗೆ , ಜೈಶಂಕರ್ , ಶೇಖರ್ ಬುದ್ಧ, ಪ್ರಕಾಶ್ , ಪಾಪಣ್ಣ, ನಾಗರಾಜು, ಜಗದೀಶ್ ಸೇರಿದಂತೆ ನೂರಾರು ಮಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT