ಮಂಗಳವಾರ, ಮಾರ್ಚ್ 2, 2021
31 °C
ಪತ್ರಿಕಾಗೋಷ್ಠಿಯಲ್ಲಿ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್‌.ವಿ.ಮಂಜುನಾಥ್

ಪ್ರಾಮಾಣಿಕವಾಗಿ ಜವಾಬ್ದಾರಿ ನಿರ್ವಹಿಸಿದ ತೃಪ್ತಿಯಿದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ‘ಜಿಲ್ಲಾ ಪಂಚಾಯಿತಿ ಅಧ್ಯಕ್ಷನಾಗಿ ನನಗೆ ದೊರೆತ 19 ತಿಂಗಳ ಅಧಿಕಾರಾವಧಿಯಲ್ಲಿ ಆತ್ಮಸಾಕ್ಷಿಯಿಂದ, ಪ್ರಾಮಾಣಿಕವಾಗಿ ನನ್ನ ಜವಾಬ್ದಾರಿ ನಿರ್ವಹಿಸಿರುವೆ. ಇತ್ತೀಚೆಗೆ ಪಕ್ಷದ ವರಿಷ್ಠರ ಸೂಚನೆಯಂತೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವೆ. ನನಗೆ ಸಹಕಾರ ನೀಡಿದ ಎಲ್ಲ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುವೆ’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ವಿ.ಮಂಜುನಾಥ್‌ ಹೇಳಿದರು.

ಜಿಲ್ಲಾ ಪಂಚಾಯಿತಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನನ್ನ ಅವಧಿಯಲ್ಲಿ ಜಿಲ್ಲೆಯಲ್ಲಿ ಶೈಕ್ಷಣಿಕ ಗುಣಮಟ್ಟ ವೃದ್ಧಿಸುವ ನಿಟ್ಟಿನಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಮಾನದಂಡವಾಗಿ ಇಟ್ಟುಕೊಂಡು, ಶಿಕ್ಷಕರ ಸಹಕಾರದೊಂದಿಗೆ ಪುನಶ್ಚೇತನ ಅಭಿಯಾನ ಕೈಗೊಳ್ಳಲಾಯಿತು. ಪರಿಣಾಮ, ರಾಜ್ಯಮಟ್ಟದಲ್ಲಿ 31ನೇ ಸ್ಥಾನದಲ್ಲಿದ್ದ ಜಿಲ್ಲೆ 20 ಸ್ಥಾನಕ್ಕೆ ಏರುವಂತಾಯಿತು. ಇದೇ ರೀತಿ ಮುಂದುವರಿದರೆ 5 ಅಥವಾ 6 ಸ್ಥಾನಕ್ಕೆ ಏರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ನೂರಾರು ಶಾಲೆಗಳ ಆಸ್ತಿ ಒತ್ತುವರಿ ತೆರವುಗೊಳಿಸಲಾಗಿದೆ. ಅಂಗವಿಕಲ ವಿದ್ಯಾರ್ಥಿ ಸ್ನೇಹಿ ಶೌಚಾಲಯಗಳ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗಿದೆ. ಅನೇಕ ಶಾಲೆಗಳಲ್ಲಿ ಕೈತೋಟ ನಿರ್ಮಿಸಲಾಗಿದೆ. ರಾಜ್ಯದಲ್ಲಿಯೇ ಮೊದಲಿಗರಾಗಿ ಬ್ಯಾಗ್‌ ರಹಿತ ದಿನ ಜಾರಿಗೆ ತಂದಿದ್ದೇವೆ. 100 ಸರ್ಕಾರಿ ಶಾಲೆಗಳಿಗೆ ದಾನಿಗಳ ನೆರವಿನೊಂದಿಗೆ ಪ್ರೊಜೆಕ್ಟರ್‌ಗಳನ್ನು ಕೊಡಿಸಲಾಗಿದೆ. ಇನ್ನೂ 27 ಶಾಲೆಗಳಿಗೆ ಶೀಘ್ರದಲ್ಲಿಯೇ ಪ್ರೊಜೆಕ್ಟರ್‌ ಒದಗಿಸಲಾಗುತ್ತದೆ’ ಎಂದು ತಿಳಿಸಿದರು.

‘ಜಿಲ್ಲೆ ಸತತ ಬರಗಾಲಕ್ಕೆ ತುತ್ತಾಗುತ್ತಿರುವ ಕಾರಣಕ್ಕೆ ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಅನಿರುದ್ಧ್ ಶ್ರವಣ್ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುದತ್ ಹೆಗಡೆ ಅವರು ಕೂಡ ಪರಿಸರ ಮತ್ತು ಜಲ ಸಂರಕ್ಷಣೆಗೆ ಒತ್ತು ನೀಡಿದ್ದರು. ಸರ್ಕಾರದ ಹಣ ಬಳಕೆ ಮಾಡದೆ ಜಿಲ್ಲೆಯಲ್ಲಿ 142 ಕಲ್ಯಾಣಿಗಳ ಪೈಕಿ ಸದ್ಯ 141 ಕಲ್ಯಾಣಿಗಳನ್ನು ಸ್ವಚ್ಛಗೊಳಿಸಲಾಗಿದೆ’ ಎಂದರು.

‘ಜಿಲ್ಲೆಯ 157 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಈಗಾಗಲೇ ಮಳೆ ನೀರು ಸಂಗ್ರಹ ಕಾರ್ಯ ಆರಂಭಗೊಂಡಿದೆ. ಶುದ್ಧ ಕುಡಿಯುವ ನೀರಿನ ಸಮಸ್ಯೆ ಇರುವ ಪ್ರದೇಶಗಳಲ್ಲಿ ಮಳೆ ನೀರು ಸಂಗ್ರಹಣಾ ವ್ಯವಸ್ಥೆ ಅಳವಡಿಸಿಕೊಳ್ಳುವ ಪ್ರತಿ ಮನೆಗೆ ಸ್ಥಳೀಯ ಸಂಸ್ಥೆಗಳಿಂದ ತಲಾ ₹5,000 ಪ್ರೋತ್ಸಾಹಧನ ನೀಡುವ ಯೋಜನೆ ಜಾರಿಗೆ ತರಲಾಗಿದೆ’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ 479 ಚೆಕ್‌ ಡ್ಯಾಂಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಆ ಪೈಕಿ ಈಗಾಗಲೇ 44 ಪೂರ್ಣಗೊಂಡಿದ್ದು, 97 ಕಾಮಗಾರಿಗಳು ಪ್ರಾರಂಭಗೊಂಡಿವೆ. ಶಿಡ್ಲಘಟ್ಟ ತಾಲ್ಲೂಕಿನಲ್ಲಿ ನಿರ್ಮಿಸಿದ ಬಹುಕಮಾನು ಚೆಕ್‌ ಡ್ಯಾಂಗಳು ಇತ್ತೀಚೆಗೆ ಸುರಿದ ಮಳೆಯಿಂದ ತುಂಬಿದ್ದು ಸಂತಸ ತಂದಿದೆ. ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಶೇ 5 ರಷ್ಟು ಅನುದಾನ ಹಸಿರು ನಿಧಿಗೆ ಮೀಸಲಿಟ್ಟು, ಪರಿಸರ, ಜಲ ಸಂರಕ್ಷಣೆಗೆ ಬಳಸಲಾಗುತ್ತಿದೆ’ ಎಂದು ಹೇಳಿದರು.

‘ಜಿಲ್ಲಾ ಆಸ್ಪತ್ರೆಯಲ್ಲಿರುವ ‘ಅಪೌಷ್ಟಿಕ ಮಕ್ಕಳ ಪುನಃಶ್ಚೇತನ ಮತ್ತು ತಾಯಂದಿರ ಕುಶಲ, ಕೌಶಲ ಕೇಂದ್ರ’ (ಎನ್‌ಆರ್‌ಸಿ) ಉತ್ತಮವಾಗಿ ಕಾರ್ಯ ನಿರ್ವಹಿಸಿ ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಗಳಿಸಿದೆ. ಬಾಗೇಪಲ್ಲಿ ತಾಲ್ಲೂಕು ಆಸ್ಪತ್ರೆಯಲ್ಲಿ ಇತ್ತೀಚೆಗೆ ಎನ್‌ಆರ್‌ಸಿ ಕೇಂದ್ರ ತೆರೆಯಲಾಗಿದೆ. ಶೀಘ್ರದಲ್ಲಿಯೇ ಉಳಿದೆಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲಿ ಎನ್‌ಆರ್‌ಸಿ ಕೇಂದ್ರ ತೆರೆಯಲಾಗುತ್ತಿದೆ’ ಎಂದರು.

‘ಪೋಷಣ ಅಭಿಯಾನ ಅನುಷ್ಠಾನದಲ್ಲಿ ಜಿಲ್ಲೆ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಫ್ಲೋರೋಸಿಸ್‌ ಪೀಡಿತರ ಉಪಚಾರಕ್ಕಾಗಿ ಬಾಗೇಪಲ್ಲಿಯಲ್ಲಿ ಇತ್ತೀಚೆಗೆ ಫಿಜಿಯೊಥೆರಪಿ ಚಿಕಿತ್ಸಾ ಕೇಂದ್ರ ತೆರೆಯಲಾಗಿದೆ. ಅಪೌಷ್ಟಿಕತೆ ಹೋಗಲಾಡಿಸಲು ಸತ್ಯಸಾಯಿ ಸೇವಾ ಸಂಸ್ಥೆ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಪ್ರೊಟಿನ್‌ ಪುಡಿ ವಿತರಿಸಲಾಗುತ್ತಿದೆ. ನನ್ನ ಅವಧಿಯಲ್ಲಿ ಆರಂಭಿಸಿದ ಯೋಜನೆಗಳೆಲ್ಲವೂ ಮುಂದುವರಿಯಬೇಕು ಎನ್ನುವುದು ನನ್ನ ಆಸೆ’ ಎಂದು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು